ಕವಿತೆಯ ಹುಟ್ಟು,ಗುಟ್ಟು.

ಉದಯಾಸ್ತಮಾನದ

ರಂಗಿನೋಕುಳಿಯಲ್ಲಿ,

ಮಿಂದೆದ್ದು ಬಂದರೂ,,,,,

ಪಾರವಿಲ್ಲದ ಸಾರ ಸಾಗರದ

ಆಳದಲಿ,ನಾಳೆಗಳ ಲೆಕ್ಕಿಸದೆ,

ಮುಳುಮುಳುಗಿ ಎದ್ದರೂ,,,,,,

ಹೂವ ಪರಿಮಳ ಹೊತ್ತ,

ತಂಬೆಲರ ತಂಪಲ್ಲಿ,

ಮೈಮನವು ಮುದಗೊಂಡು

ಮದವೇರಿ ಕುಣಿದರೂ,,,,,,

ಗಂಡು ಹೆಣ್ಣಿನ ಮೋಹ

ಅಪ್ಪುಗೆಯ ಬಿಸಿಯಲ್ಲಿ,

ಉನ್ಮಾದದುತ್ತುಂಗಕ್ಕೇರಿದರೂ,,,,,

ರಾತ್ರಿಯಾಗಸದಲ್ಲಿ

ಮೋಡಗಳ ಹೆಗಲೇರಿ

ಚುಕ್ಕಿ,ಚಂದ್ರಮರೊಡನೆ

ಆಟ ಆಡಿದರೂ,,,,,,,,

ಮೂಡುವದಿಲ್ಲ,ಸಂತಸದ ಭಾವ,

ಹುಟ್ಟುವದಿಲ್ಲ.ಸುಂದರ ಕವಿತೆ.

ಒಡಲಿನಾಳದಿ 'ನಿಗಿ,ನಿಗಿ'

ಬೂದಿ ಮುಚ್ಚಿದ ಕೆಂಡ--

ಹಾಲು ಕಾಣದ ಹಸುಳೆ,

ಹೊಟ್ಟೆಗಿಲ್ಲದ ತಾಯಿ,

ನೋವಲ್ಲು ನಗುವ ತಂದೆ,

ಹೊರಗೂ ಯಾತನಾ ಶಿಬಿರ.

ನವಮಾಸ ಕಳೆದರೂ

ಪ್ರಸವಿಸಲಾಗದೇ ಒದ್ದಾಡುವ

ಹೆಣ್ಣಿನಂತಾದೆ ನಾನು.


--ಅಬ್ಳಿ,ಹೆಗಡೆ.*

33 views0 comments