top of page

*ಕವಿತೆಯಲ್ಲದ ಕವಿತೆಗಳಲ್ಲಿ*

ನನ್ನೊಳಗೊಬ್ಬ ಚಿಣ್ಣ-

ಕುಳಿತಿರುವ,ಬಣ್ಣತುಂಬುತ್ತ

ನನ್ನೆಲ್ಲ ಖಾಲಿಗಳಲ್ಲಿ.


ಅರಳುವ ಬಣ್ಣ,ಬಣ್ಣದ

ಹೂಗಳೊಟ್ಟಿಗೆ ತಾನೂ

ಅರಳಿ,ಪರಿಮಳ ಸೂಸುತ್ತ,

ಹಕ್ಕಿಗಳ ಚಿಲಿ,ಪಿಲಿಗೆ

ತಾನೂ ದನಿಗೂಡಿಸುತ್ತ,

ಸಂತಸಪಡುತ್ತಿರುವ-

ಪ್ರಶಾಂತ,ಸುಂದರ

ನನ್ನೆಲ್ಲ ಮುಂಜಾವುಗಳಲ್ಲಿ.


ಕಣ್ ಸೆಳೆವ ಪ್ರಕರ ಬಣ್ಣಗಳ,

ಸವಿಯಾದ,ರಸಭರಿತ

ಹಣ್ಣುಗಳ,ಆಸೆಪಟ್ಟು

ಸವಿದಂತೆ ಕನಸು ಕಂಡು

ಬಾಯಿ ಚಪ್ಪರಿಸುತ್ತಿರುವ

ತುಡುಗ ಹುಡುಗ,ನನ್ನೆಲ್ಲ

ಹಗಲ ದಿಗಿಲುಗಳಲ್ಲಿ.


ಕಣ್ಣ ಮಿಟುಕಿಸುವ ಚುಕ್ಕಿ,

ಹಾಲ್ದಿಂಗಳ ಚೆಲ್ಲುವ

ಚಂದ್ರಮರೊಡನೆ ತಾನೂ

ಒಂದುಗೂಡಿ,ಪುಟ,ಪುಟ

ಪುಟಿವ ಬಾಲ, ತುಂಟ-

ನಗು,ನಗುತ್ತ,ನೆಗೆದಾಡುತ್ತ,

ನಲಿದಾಡುತ್ತಿರುವ ನನ್ನಸಂಖ್ಯ

ಸಂಜೆ,ರಾತ್ರಿಗಳಲ್ಲಿ.


ನನ್ನೆಲ್ಲ 'ಇಂದು'ಗಳಲ್ಲಿ

ನನ್ನೊಡನಿದ್ದು ನಾಳೆಗಳ

ಕದ ತಟ್ಟುತ್ತ,ನಿತ್ಯ-

ನನ್ನಂತರಂಗದಲ್ಲಿ

ಹರಿವ ಅಂತರ್ಗಂಗೆಯ

ಹರಿವಿಗುಂಟ,ಪುಟ್ಟ

ಕಾಗದದ ದೋಣಿಯೊಂದ

ತೇಲಿ ಬಿಟ್ಟು,ಮೋಜು

ಮಾಡುತ್ತಿರುವ,ಆಟ-

ಆಡುತ್ತಿರುವ ಮುಗ್ಧ,

ಪುಟ್ಟ ಹುಡುಗ,,,,ನನ್ನ

ಕವಿತೆಯಲ್ಲದ ಕವಿತೆಗಳಲ್ಲಿ.

ನನ್ನಿರವನ್ನೂ ಲೆಕ್ಕಿಸದೆ.


--ಅಬ್ಳಿ,ಹೆಗಡ

3 views0 comments

Comments


©Alochane.com 

bottom of page