ಕವಿತೆ ನೀನೆಲ್ಲಿ ಅವಿತೆ
ಶಬ್ದದಲ್ಲಿಲ್ಲ ಕವಿತೆ ಶಬ್ದಾತೀತದಲ್ಲಿ
ನಾದದಲ್ಲಿಲ್ಲ ಕವಿತೆ ನಾದಾತೀತದಲ್ಲಿ
ಭಾವದಲ್ಲಿಲ್ಲ ಕವಿತೆ ಭಾವಾತೀತದಲ್ಲಿ
ರೂಪದಲ್ಲಿಲ್ಲ ಕವಿತೆ ರೂಪಾತೀತದಲ್ಲಿ
ನ್ಯಾಸದಲ್ಲಿಲ್ಲ ಕವಿತೆ ವಿನ್ಯಾಸದಲ್ಲಿ ಕವಿತೆ
ಶೈಲಿಯಲ್ಲಿಲ್ಲ ಕವಿತೆ ಶೈಲೇಶನಲ್ಲಿ ಕವಿತೆ
ಅರ್ಥದಲ್ಲಿ ಕವಿತೆ ಅರ್ಥಾಂತರದಲ್ಲಿ ಕವಿತೆ
ಲಯದಲ್ಲಿ ಕವಿತೆ ಕುವಲಯದಲ್ಲಿ ಕವಿತೆ
ಮೈತ್ರಿಯಲ್ಲಿ ಕವಿತೆ ಮೈತ್ರೇಯಿಯಲ್ಲಿ ಕವಿತೆ...
ಎಲ್ಲಿರುವೆ ಕವಿತೆ
ನೀನೆಲ್ಲಿ ಅವಿತೆ
ಗೀತದಲ್ಲಿ ಕವಿತೆ
ಸಂಗೀತದಲ್ಲಿ ಕವಿತೆ
ಮಾತಿನಲ್ಲಿ ಕವಿತೆ ಮಾತಿನಾಚೆಗೆ ಕವಿತೆ
ಆಂಗಿಕದಲ್ಲಿ ಕವಿತೆ ಅಭಿನಯದಲ್ಲಿ ಕವಿತೆ
ಮನೆಯೊಳಗೆ ಕವಿತೆ ಮನದಾಚೆ ಕವಿತೆ
ನಡೆಯಲ್ಲಿಲ್ಲ ಕವಿತೆ ನುಡಿಯಲ್ಲಿ
ಇಲ್ಲ ಗುಡಿಯಲ್ಲಿ ಗುಡಾರದಲ್ಲಿ
ಇಲ್ಲ ಕಟ್ಟಿನಲ್ಲಿ ಇಲ್ಲ ಕಟ್ಟೋಣದಲ್ಲಿ
ಎಲ್ಲೂ ಇಲ್ಲ ಕವಿತೆ
ಎಲ್ಲಿ ಅವಿತಳು ಕವಿತೆ..
ಸ್ಫುರಣದಲ್ಲಿ ಕವಿತೆ ಭಾವಸ್ಫುರಣದಲ್ಲಿ ಕವಿತೆ
ಲಿಂಗದಲ್ಲಿ ಕವಿತೆ ಭವಲಿಂಗದಲ್ಲಿ ಕವಿತೆ
ಎದೆಯಲ್ಲಿ ಕವಿತೆ
ಎದೆಎದೆಯಲ್ಲಿ ಕವಿತೆ
ಕುದಿಯಲ್ಲಿ ಕವಿತೆ
ಕಣ್ಣಲ್ಲಿ ಕವಿತೆ ಮಣ್ಣಲ್ಲಿ ಕವಿತೆ
ಬಣ್ಣದಲ್ಲಿ ಕವಿತೆ
ಹೊಂಬಣ್ಣದಲ್ಲಿ ಕವಿತೆ..
ಎಲ್ಲಿ ಅವಿತೆ ಕವಿತೆ
-ಡಾ. ವಸಂತಕುಮಾರ ಪೆರ್ಲ
Comments