ಕಲ್ಲಾದರೇನು?
- ಆಲೋಚನೆ
- Jul 14, 2021
- 1 min read
ಕಲ್ಲಾದರೇನು?
ಕೋಪ ,ನೋವಿಗೆ ಆಗಾಗ
ಮರುಗುವುದು ತಪ್ಪುತ್ತದೆ
ಬಣ್ಣದ ಮಾತಿಗೆ ಕರಗಬೇಕಂತಿಲ್ಲ
ಗಟ್ಟಿಯಾಗಿ ಇನ್ನಷ್ಟು ಬಿಗುವಿನಲ್ಲಿ
ಒಂದೇ ಚಿತ್ತದಲ್ಲಿರಬಹುದು
ಕಲ್ಲಾದರೇನು
ಅಷ್ಟು ಸುಲಭದಲ್ಲಿ ಪುಡಿ ಮಾಡಲು ಸಾಧ್ಯವಿಲ್ಲ
ಕಣಕಣವೂ ದೃಡ ಸಂಕಲ್ಪ ಇರುತ್ತದೆ
ಎತ್ತಿ ಬದಿಗಿರಿಸುವುದಂತೂ ಕಷ್ಟ
ನೀವೆ ದಾಟಿ ಹೋಗಬೇಕು
ಇಲ್ಲ ನನ್ನಂತೆ ಕಲ್ಲಾಗಬೇಕು
ಕಲ್ಲಾದರೇನು?
ಮುಂದೆ ಸಾಗುವವರು ಮೆಟ್ಟಬಹುದು
ಎತ್ತರ ತಲುಪಿದವರಿಗೆ
ಅಡಿಪಾಯ ಆಗಿದಕ್ಕೆ
ಸಂತೃಪ್ತಿ ಹೆಚ್ಚಲ್ಲವೇ
ಕಲ್ಲಾದರೇನು?
ಸುಂದರ ಶಿಲ್ಪವಾಗಹುದು
ಅನಂತ ಕಂಗಳ ಖುಷಿಗೆ
ಕಾರಣವಾಗಬಹುದು
ಪೂಜಿಸುವರ ಮನದ
ಗರ್ಭಗುಡಿ ಸೇರಬಹುದು
ಕಲ್ಲಾದರೇನು?
ಮೆದುವಾಗಿ ಬಾಗಿ
ಗುಲಾಮನಂತೆ
ಬಾಳುವುದಕ್ಕಿಂತ
ಕಲ್ಲದೆಯಂತೆ ಎದೆಗಾರಿಕೆ ಒಳಿತಲ್ಲವೇ
ಕಲ್ಲಾದರೇನು?
ಜೈಕಾರ ,ಗುಂಪು, ಅವಿವೇಕಿಯ
ಬಿಟ್ಟು ಒಂಟಿಯಾಗಿ ನಡೆಯಬಹುದು
ಬೆಳಕಿನಲ್ಲಿ ಇರಬಹುದು
ಸತ್ಯದ ಸಂಗಮಾಡಬಹುದು
ಕಲ್ಲಾದರೇನು?
ಆಗಾಗ ಅಬ್ಬರಿಸುವ
ಬಿರುಗಾಳಿ, ಅಲೆಗೆ ಹೆದರಬೇಕಿಲ್ಲ
ಹರಿಯುವ ದಿಕ್ಕನ್ನೇ ಬದಲಾಯಿಸುವ
ನದಿಯ ಮಧ್ಯದ ಬಂಡೆಯಂತೆ
ಶಾಂತವಾಗಿಯೇ ಇರಬಹುದು
ಕಲ್ಲಾದರೇನು?
ಇತಿಹಾಸ ಪುಟದಲ್ಲಿ
ಅವರೇ ಸಿಗುತ್ತಾರೆ
ತುಳಿಯವರ ಮಧ್ಯ
ಎದ್ದು ನಿಂತವರು
ಬೆಳಕಿನ ನಗು ಬೀರಿದವರು
ಕಲ್ಲಾದರೇ ತೊಂದರೇನು ಇಲ್ಲ
ಎಂ.ಜಿ.ತಿಲೋತ್ತಮೆ
ಭಟ್ಕಳ
Comments