top of page

ಕಲ್ಲರಳಿ ಹೂವಾಗಿ


ಕಲ್ಲು ಅರಳಿ ಹೂವಾಗುವುದು

ಕಲ್ಪಿಸಿದಷ್ಟು ಸುಲಭವಲ್ಲ ನೋಡಿ

ಕಲ್ಲು ಹೃದಯ ಕಲ್ಲು ಮನಸು

ಶುಭ ನುಡಿವ ಸೊಲ್ಲಿಗು ಕಲ್ಲು

ಕಲ್ಲು ಗುದ್ದಿ ನೀರು ತಂದವರ ಕತೆ

ಕಲ್ಲ ಕೋಳಿ ಜೀವ ತಾಳಿ ಸೆರೆಗೈದ ಸುದ್ದಿ

ಕಲ್ಲಿನೊಳಗಿರುವ ಬೆಣ್ಣೆಯ ರಹಸ್ಯ

ಕಲ್ಲೆ ನವ ರತ್ನವಾದ ಸತ್ಯ

ಕಲ್ಲು ಅರಳಿ ಹೂವಾಗುವ

ಶಂಕರನ ಶಿಖರಕ್ಕೆ ಬೆಳಕಾಗುವ ಒಗಟು

ಅರ್ಥಕ್ಕೆ ದಕ್ಕದ ಕಣ್ಣ ಮುಂದಣ ಸತ್ಯ

ಪ್ರೀತಿ ತುಳುಕುವ ಕೊಪ್ಪರಿಗೆ ಮನಸ್ಸು

ಅದರ ಕುದಿ ತಣಿದು ಬೇಗುದಿ ಕಳೆದರೆ

ಎಲ್ಲವನು ಕರಗಿಸುವ ಅಪಾರ ಶಕ್ತಿ

ಆದರೆ ನಾವು ಕಲ್ಲು ಮಾಡಿಕೊಂಡಿದ್ದೇವೆರಿಹೃದಯ ಮನಸ್ಸು ಭಾವಗಳಿಗೆ

ನೀರುಣಿಸಿ ಸ್ನೇಹ ಭಾವದಲಿ ಮಿದುಗೊಳಿಸಿ

ಕಲ್ಲು ಅರಳಿ ಹೂವಾಗುವುದ ನೋಡ ಬೇಕು

ಹೂವುಗಳು ಕಲ್ಲಾಗಿ ಹೂವಿನೊಳಸೊಲ್ಲಿನಲಿ

ಕಲ್ಲು ಸೇರಿ ಆ ಕಲ್ಲು ಪುಡಿಯಾಗಿ ಅದಿರಾಗಿ

ಅದು ಚಿನ್ನವಾಗಿ ಆ ಚಿನ್ನವೆ ಮೈದಾಸ

ಮುಟ್ಟಿದ ಮಗುವಾಗಿ

ತಿನ್ನಲು ಅನ್ನವಿಲ್ಲದೆ

ಚಿನ್ನವನೆ ಉಂಡು ಉಟ್ಟು ಹೊದೆದು

ಚಿನ್ನದಮಲಿನಲಿ ಲೋಹವಾಗಿ ಮಲಗಿದವರ

ಎಚ್ಚರಿಸಲು ಯಾರು ಬರುವರಯ್ಯಾ

ಕಲ್ಲು ಕೋಳಿ ಕೂಗಿ ಕಡಲುಕ್ಕಿ ಪ್ರಳಯವಾಗಿ

ಊರು ಕೇರಿಗಳಲ್ಲಿ ಹೆಣ ಹರಿದಾಡುವಾಗ

ಹಣದ ಕಂತೆಯ ಎಣಿಸುವವರೆಲ್ಲಿ!

ಕಲ್ಲು ಅರಳಿ ಹೂವಾಗುವುದು ಎಂದು

ಎದೆಯ ಪ್ರೀತಿಯರಳಿ ಹಾಲಾಗಿ ಬರಲಿ

ಅದುವೆ ಮಗು ಮನದ ಮೆಲ್ಲುಲಿಯಾಗಲಿ

ಮಮತೆಯ ಸೊಲ್ಲರಳಿ ಕವನ ಪಲ್ಲವಿಸಿ

ಮಳೆಬಿಲ್ಲು ಮೂಡಿದರೆ ಅದೆಂಥ ಚೆಂದ.

ಶ್ರೀಪಾದ ಶೆಟ್ಟಿ.

71 views1 comment

1 Comment


ಸುಂದರ ಕವನ. ಕಲ್ಲನ್ನು ಕೆತ್ತಿ ಹೂವಾಗಿಸುವುದು ಕಲೆಯಾದರೆ ಕಲ್ಲೇ ತಾನರಳಿ ಹೂವಾಗುವ ಪರಿ ಬದುಕಿನ ನಿಜವಾದ ನೆಲೆ, ಬದುಕಿನ ಸೆಲೆ. ಧನ್ಯವಾದಗಳು, ಮಿತ್ರಾ

Like
bottom of page