top of page

ಕಬೀರ ಕಂಡಂತೆ

ಅತಿಯಾದ ಆತ್ಮವಿಶ್ವಾಸ ಮುಳುವಾದೀತು..!



ಪಕಿ, ಖೇತಿ ದೇಖಿಕೆ, ಗರಬ ಕಿಯಾ ಕಿಸಾನ /

ಅಜ ಹೂಂ ಝೋಲಾ ಬಹುತ ಹೈ, ಘರ ಆವೆ ತಬ ಜಾನ//


ಯಾವುದೇ ವಿಷಯ ಪೂರ್ಣಗೊಳ್ಳುವವರೆಗೆ ಅಂತಿಮ ಫಲಿತಾಂಶವೇನು ಎಂದು ಹೇಳಲು ಸಾಧ್ಯವಿಲ್ಲ. ಕಣ್ಣ ಮುಂದೆ ಜಯಲಕ್ಷ್ಮಿ ಕುಣಿಯುವ ದನ್ನು ಕಂಡು ಮೈಮರೆತರೆ ಕೊನೆಯಲ್ಲಿ ಅಪಯಶ ಬಾಗಿಲು ತಟ್ಟಬಹುದು. ಆಟದಲ್ಲಿ ಒಂದು ಗುಂಪು ಸೋಲಿನ ದವಡೆಯಲ್ಲಿದೆ ಎಂದು ಭಾವಿಸಿದಾಗಲೂ ಕೊನೆ ಕ್ಷಣದಲ್ಲಿ ಕೆಲವು ಆಟಗಾರರ ಚಾಕಚಕ್ಯತೆ ಯಿಂದ ಆ ಗುಂಪು ಗೆಲುವು ಕಾಣಬಹುದು.! ಕ್ರಿಕೆಟ್ ಆಟದಲ್ಲಂತೂ ಘಟಾನುಘಟಿಗಳ ಭವಿಷ್ಯ ಸುಳ್ಳಾದ

ಉದಾಹರಣೆ ಬಹಳ‌ಇವೆ. ಅದೇ ರೀತಿ ನಿಜ ಜೀವನ ದಲ್ಲಿ ಸಹ ಸೋಲು, ಗೆಲುವನ್ನು ಕೊನೆಯವರೆಗೂ ನಿಖರವಾಗಿ ಹೇಳುವದು ಕಷ್ಟ. ಹಾಗಾಗಿ ಯಶ ಅಥವಾ ಅಪಯಶಗಳು ಕೊನೆಯ ಕ್ಷಣದಲ್ಲಿ ತಮ್ಮ ದಿಕ್ಕು ಬದಲಿಸಬಹುದು. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಆಕಾಂಕ್ಷೆಯಾಗಲೀ ನಿರಾಸೆಯಾಗಲೀ ಖಂಡಿತ ತರವಲ್ಲ.

ಸಂತ ಕಬೀರರು ಮೇಲಿನ ದೋಹೆಯಲ್ಲಿ.. "ಧಾನ್ಯರಾಶಿ ನೋಡುತ, ಬೀಗಿದ ಕೃಷಿಕ ಹೆಮ್ಮೆಯಿಂದ/

ಇನ್ನೂ ಅಡೆ-ತಡೆಯಿದೆ, ಬೆಳೆ ಮನೆ ಮುಟ್ಟಿದರೆ ಸಾಕೆಂದ //

ಎಂದು ಉದಾಹರಣೆ ಸಹಿತ ವಿವರಿಸಿದ್ದಾರೆ. ರೈತ ತನ್ನ ಹೊಲದಲ್ಲಿ ಒಳ್ಳೆಯ ಫಸಲನ್ನು ಕಂಡು ಹೆಮ್ಮೆ ಪಡುತ್ತಾನೆ. ಆದರೆ ಇದೇ ಫಸಲು ಮನೆ ತಲುಪುವ ವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬ ಸತ್ಯ ಮನಗಾಣಬೇಕು ಎಂದು ಕಬೀರರು ಕಾಲನ ಅನಿಶ್ಚಿತತೆಯ ಬಗ್ಗೆ ವಿವರಿಸಿದ್ದಾರೆ. ಬೆಳೆದು ನಿಂತ ಫಸಲು ಮಳೆ-ಗಾಳಿಯಿಂದ, ಪ್ರಾಣಿ ಪಕ್ಷಿಗಳಿಂದ ಅಥವಾ ಇನ್ನಾವುದೇ ಅನಿರೀಕ್ಷಿತ ಕಾರಣದಿಂದ ಮಣ್ಣು ಪಾಲಾಗಬಹುದು! ಬೆಳೆ ಕೈ ಸೇರುವವರೆಗೂ ರೈತ ಮೈಮರೆಯಬಾರದು ಎಂದು ಕಬೀರರು ಎಚ್ಚರಿಸಿದ್ದಾರೆ‌.

ಅದೇ ರೀತಿ ನಿತ್ಯ ಜೀವನದಲ್ಲಿ ಆರಂಭ ಮಾಡಿದ ಕಾರ್ಯ ಪೂರ್ಣಗೊಳ್ಳುವವರೆಗೆ ಎಲ್ಲಿಯೂ ಆಲಸ್ಯ ತೋರದೇ ತಾಳ್ಮೆಯಿಂದ ಇರುವದು ಅಗತ್ಯ.

ಮೊದಲ ಮತ್ತು ಆಮೆಯ ನಡುವೆ ಓಟದ ಸ್ಪರ್ಧೆಯ ಕಥೆಯಲ್ಲಿ ತಾನೇ ಗೆಲ್ಲುತ್ತೇನೆ ಎಂಬ

ಅತಿಯಾದ ಆತ್ಮವಿಶ್ವಾಸ ಮೊಲಕ್ಕೆಮುಳುವಾಗಿದ್ದು ಕಾಣಬಹುದು. ಹಾಗಾಗಿ ಗೆಲುವು ನಮ್ಮದೇ ಎಂದು ಹಗಲು ಕನಸು ಕಾಣುತ್ತ ಕುಳಿತರೆ ಸೋಲಿಗೆ ಶರಣಾಗಬಹುದು! ಆಸೆ, ಆತ್ಮವಿಶ್ವಾಸಗಳು ಬದುಕಿ ನಲ್ಲಿ ಅತ್ಯವಶ್ಯವಾದರೂ ಅತ್ಯಾಸೆ ಮತ್ತು ಅತಿ ವಿಶ್ವಾಸ ಕೆಡುಕು ಉಂಟುಮಾಡುವದರಲ್ಲಿ ಸಂದೇಹ ವಿಲ್ಲ. " ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ" ಎಂಬ ನಾಣ್ಣುಡಿಯನ್ನು ಲಕ್ಷದಲ್ಲಿಟ್ಟುಕೊಂಡು ಸದಾ ಕಾಲ ಜಾಗೃತರಾಗಿರುವದೇ ಬುದ್ಧಿವಂತರ ಲಕ್ಷಣ ಅಲ್ಲವೆ..?


ಗೆಲುವು ತನದೆಂಬ ಹಮ್ಮು ಉರುಳಾದೀತು

ಸೋಲಿನಿಂದಾದ ನಿರಾಸೆ ಬದುಕ ಕೆಡಿಸೀತು /

ಜಯಾಪಜಯಗಳು ಕ್ಷಣಿಕ ಎಂಬುದ ಸತ್ಯ

ಆಯ ತಪ್ಪದಿರು - ಶ್ರೀವೆಂಕಟ //


ಶ್ರೀರಂಗ ಕಟ್ಟಿ ಯಲ್ಲಾಪುರ.

5 views0 comments

Comments


bottom of page