top of page

ಕಬೀರ ಕಂಡಂತೆ

ಸಮನ್ವಯತೆ ಮನುಕುಲಕೆ ಸಹಕಾರಿ..!


ಕುಂಭೆ ಬಾಂಧಾ ಅಲ ರಹೆ, ಜಲಬಿನ ಕುಂಭ ನ ಹೋಯ/

ಜ್ಞಾನೆ ಬಾಂಧಾ ಮನ ರಹೆ, ಮನ ಬಿನು ಜ್ಞಾನ ನ ಹೋಯ//

ಜೀವನದಲ್ಲಿ ಯಾವುದೇ ಕಾರ್ಯ ನಡೆಯಲು ಪರಸ್ಪರ ಸಹಾಯ- ಸಹಕಾರಗಳು ಅತ್ಯಗತ್ಯ. ನಾಣ್ಯದ ಎರಡೂ ಮುಖಗಳು ಪರಸ್ಪರ ಪೂರಕವಾಗಿದ್ದರೆ ಮಾತ್ರ ನಾಣ್ಯಕ್ಕೆ ಬೆಲೆ. ಯಾವುದಾದರೂ ಒಂದು ಮುಖ ಮುಕ್ಕಾದರೂ ನಾಣ್ಯಕ್ಕೆ ಬೆಲೆಯೆಲ್ಲಿ?

ಮಾನವ ಸಂಘಜೀವಿ. ಅಲ್ಲದೇ ಪ್ರಪಂಚದಲ್ಲಿ ಯಾರೂ ಪರಿಪೂರ್ಣರಲ್ಲ. ಹೀಗಿರುವಾಗ ತಮ್ಮ ತಮ್ಮ ಕೊರತೆಗಳನ್ನು ತುಂಬಿಕೊಳ್ಳಲು ಇನ್ನೊಬ್ಬರ ಸಹಕಾರ ಅತ್ಯಂತ ಅಗತ್ಯ.


ಸಂತ ಕಬೀರರು ಮೇಲಿನ ದೋಹೆಯಲ್ಲಿ, ನೀರು ತುಂಬುವ ಮಡಿಕೆ ತಯಾರಿಸಲು ನೀರಿನ ಅವಶ್ಯಕತೆ ಇದೆ. ಕೇವಲ ಒಣ ಮಣ್ಣಿನಿಂದ ಮಡಿಕೆ ಸಿದ್ಧ -ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಹರಿಯುವ ಗುಣ ಹೊಂದಿದ ನೀರನ್ನು ಒಂದೆಡೆ ಶೇಖರಿಸಿಡಲು ಮಣ್ಣಿನ ಮಡಿಕೆ ಅವಶ್ಯ. ಅದೇ ರೀತಿ, ಚಂಚಲ ಮನಸ್ಸನ್ನು ಹಿಡಿದಿಡಲು ಜ್ಞಾನರೂಪಿ ಪಾತ್ರೆಯ ಅವಶ್ಯಕತೆ ಇದ್ದೇ ಇದೆ. ಮಾನಸಿಕ ಏಕಾಗ್ರತೆಯಿಲ್ಲದೆ

ಜ್ಞಾನ ಸಂಪಾದನೆ ಸುಲಭದಇಲ್ಲವಾದರೆ ಏಕೆಂದರೆ ಜ್ಞಾನ, ಅಧಿಕಾರ, ಧನ ಎಲ್ಲ ಇದ್ದರೂ ಇವುಗಳ ಸದುಪಯೋಗಕ್ಕಾಗಿ ಮನಸ್ಸು ಮತ್ತು ಬುದ್ಧಿಯ ಸಾಂಗತ್ಯ ಬಹಳ ಮುಖ್ಯ. ಹಾಗಾಗಿ ಕಬೀರರು,

"ಜಲ ತುಂಬಲು ಕುಂಭ ಬೇಕು, ಜಲವಿಲ್ಲದೆ ಕುಂಭವಿಲ್ಲ/

ಜ್ಞಾನ ತುಂಬಲು ಮನ ಬೇಕು, ಮನವಿಲ್ಲದೆ ಜ್ಞಾನವಿಲ್ಲ//"

ಎಂದು ಮಾರ್ಮಿಕವಾಗಿ ಹೇಳಿದ್ದಾರೆ.


ಈ ಹಿನ್ನೆಲೆಯಲ್ಲಿ ಮನುಷ್ಯ, ತಾನು ಸರ್ವ ಸ್ವತಂತ್ರ, ಪ್ರಬಲ ಎಂದು ದುರಭಿಮಾನ ಪಡದೇ ತನ್ನ ವ್ಯಕ್ತಿತ್ವ ರೂಪಿಸಲು ಸಹಕಾರಿಯಾದ ಸಂಸ್ಕಾರ, ಶಿಕ್ಷಣ, ಪರಿಸರ, ಸಮಾಜ ಮುಂತಾದವುಗಳನ್ನು ಕೃತಜ್ಞತಾ -ಪೂರ್ವಕ ಸ್ಮರಿಸುವದು ಅಗತ್ಯ. ಜೀವಜಾಲದ ಕೊಂಡಿ ಪರಸ್ಪರ ಸಹಕಾರ ಮನೊಭಾವನೆಯಲ್ಲಿ ಇರುವ ಕಾರಣ, ನಿಸರ್ಗದ ಚಕ್ರ ಅಬಾಧಿತವಾಗಿ ನಡೆಯುತ್ತಿದೆ. ಇಲ್ಲವಾದರೆ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಚಂಡಮಾರುತಗಳಂಥ ಪೀಡೆಗಳಿಗೆ ಮನುಕುಲ ಬಲಿಯಾಗಬೇಕಾದೀತು! ಹಾಗಾಗಿ ಸಮಾಜಜೀವಿಯಾದ ಮನುಷ್ಯ ಸಮಾಜ ಮತ್ತು ನಿಸರ್ಗದೊಂದಿಗೆ ಸಮನ್ವಯತೆಯಿಂದ ನಡೆದಾಗ ಮಾತ್ರ ಬದುಕು ನಿರಾಳವಾದೀತು.


ಹಣ್ಣು ಕೊಡುವ ಮರಕೆ ಮಣ್ಣು, ನೀರಿನಾಸರೆ

ಮಣ್ಣಿನ ಮಡಿಕೆಗೆ ನೀರು-ಬೆಂಕಿಯ ಸಹಕಾರ /

ಜಾಣತನದ ಜಂಬ ಸಹಬಾಳ್ವೆಯ ಮರೆಸೀತು

ಸಣ್ಣಾದೀಯೆ ಜಗದಲಿ - ಶ್ರೀವೆಂಕಟ //


ಶ್ರೀರಂಗ ಕಟ್ಟಿ ಯಲ್ಲಾಪುರ.

4 views0 comments

Comentarios


©Alochane.com 

bottom of page