ಪ್ತೀತಿಯೆಂಬ ಹಣತೆ ಬೆಳಗುವದು ಎಲ್ಲೆಡೆ...!
ಪ್ರೇಮ ನ ಬಾಡಿ ಉಪಜೈ, ಪ್ರೇಮ ನ ಹಾಟ ಬಿಕಾಯ|
ರಾಜಾ ಪರಜಾ ಜೋಹಿ ರೂಚೈ, ಸಿಸ ದೇಯ ಲೈ ಜಾಯ||
ಅನಾದಿ ಕಾಲದಿಂದಲೂ "ಪ್ರೀತಿ", "ಪ್ರೇಮ" ಈ ಶಬ್ದಗಳು ಸಮಾಜದಲ್ಲಿ ಚಲಾವಣೆಯಲ್ಲಿವೆ. ನಿಜವಾದ ಪ್ರೀತಿ, ಶುದ್ಧ ಮನಸ್ಸಿನ ಅಂತರಾಳ -ದಲ್ಲಿ ಜನ್ಮ ತಾಳುತ್ತದೆ. ಇದಕ್ಕೆ ಜಾತಿ, ಮತಗಳ ಭೇದವಿಲ್ಲ, ಭಾಷೆ ಗಡಿಗಳ ಹಂಗಿಲ್ಲ. ಯಾರಿಗೆ, ಯಾರಮೇಲೆ, ಯಾವಾಗ ಪ್ರೇಮ ಹುಟ್ಟುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ. ಆದರೆ ಶುದ್ಧಾಂತಃಕರಣದ ಪ್ರತಿ, ಬದುಕಿನ ದಾರಿಯಲ್ಲಿ ಸದಾ ಹರಿಯುವ ಝರಿ ಇದ್ದಂತೆ! ಏಕೆಂದರೆ, ಪ್ರೇಮಭಾವ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯ ಮೇಲೆ, ತಂದೆ-ತಾಯಿಯರ ಮೇಲೆ, ದೇಶಭಾಷೆಯ ಮೇಲೆ, ನಿರ್ದಿಷ್ಟ ವಿಚಾರ, ಕಲೆ ಸಂಸ್ಕೃತಿ, ನಿಸರ್ಗ ಮುಂತಾದವುಗಳ ಮೇಲೆ ಪ್ರೇಮವಿದ್ದರೆ, ಅದರಿಂದ ದೊರಕುವ ಸಮಾಧಾನ, ಹಿತ ವರ್ಣನಾತೀತ..! ಸಂವೇದನಾಶಿಲತೆ, ವಿಶ್ವಾಸ, ಶೃದ್ದೆ ಮುಂತಾದವುಗಳ ಆಧಾರದ ಮೇಲೆ ಪ್ರೇಮಸೌಧ ನಿಂತಿರುತ್ತದೆ.ಸದ್ಭಾವನೆ, ಕರುಣೆ, ಅಂತಃಕರಣ, ಸ್ನೇಹಭಾವ ಇವೆಲ್ಲ ಸ್ನೇಹ ವೃಕ್ಷದಿಂದದೊರೆಯುವ ಮಧುರ ಫಲಗಳು! ಅಲ್ಲದೆ ಈ ಭಾವನೆಗಳನ್ನು ಹೊಂದಿರುವ ವ್ಯಕ್ತಿಯ ಹೃದಯದಲ್ಲಿ ಪ್ರೇಮದ ಝರಿ ತನ್ನಿಂದ ತಾನೆ ಉಕ್ಕಿ ಹರಿಯುತ್ತದೆ!
"ಪ್ರೇಮ ಹೊಲದಲ್ಲಿ ಬೆಳೆಯದು, ಪೇಟೆಯಲ್ಲಿ ಮಾರಲು ಸಿಕ್ಕದು |
ರಾಜಾ-ಪ್ರಜಾ ಯಾರೆ ಇರಲಿ, ತ್ಯಾಗಕ್ಕೆ ಮಾತ್ರ ದಕ್ಕುವದು ||
ಎಂಬ ದೋಹೆಯ ಮೂಲಕ ಸಂತ ಕಬೀರರು ತಮ್ಮ ಅನುಭವದ ನುಡಿಗಳನ್ನು ತೆರೆದಿರಿಸಿದ್ದಾರೆ. ಅವರ ಪ್ರಕಾರ, ಪ್ರೇಮವನ್ನು ಹೊಲದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅದನ್ನು ಕೊಂಡುಕೊಳ್ಳಬೇಕೆಂದರೆ ಅದು ಪೇಟೆಯಲ್ಲೂ ಸಿಗಲಾರದು. ಬಡವ, ಶ್ತೀಮಂತ ಎಲ್ಲರಿಗೂ ಕೂಡ ಪ್ರೀತಿ ದಕ್ಕಬಹುದು. ಆದರೆ ತ್ಯಾಗದ ತಳಹದಿಯಿದ್ದರೆ ಮಾತ್ರ ಪ್ರೇಮದ ಸುಂದರ ಸೌಧ ಕಟ್ಟಬಹುದು ಎಂಬ ಸಂಗತಿಯನ್ನು ಕಬೀರರು ಇಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ.
ಮನುಷ್ಯ ಮೊದಲು ತನ್ನನ್ನಾಳುವ ಅಹಂಕಾರವನ್ನು ತ್ಯಾಗ ಮಾಡಿದಾಗ ಮಾತ್ರ ಪ್ರೇಮ ಒಲಿದು ಬಂದೀತು ಎಂಬುದು ಕಬೀರರ ವಾದ.'ನಾನು'ಎಂಬ ಅಹಂಭಾವ 'ನನ್ನದು' ಎಂಬ ಸ್ವಾರ್ಥ ಬಿಟ್ಟಾಗ ಮಾತ್ರ ಪ್ರೇಮಕ್ಕೆ ನಿಜವಾದ ಅರ್ಥ ಬಂದಂತಾದೀತು! ಬೇರೆಯವರಿಗೆ ಕಷ್ಟಕಾಲದಲ್ಲಿ ನೀಡುವ ಸಹಾಯ ಹಸ್ತ, ಮಾನವೀಯತೆ ಎನಿಸಿಕೊಂಡೀತು, ಇದರ ಜೊತೆಗೆ ಸುಖ, ಶಾಂತಿಯೂ ಲಭಿಸೀತು.ಆದರೆ ಪ್ರೇಮಭಾವದ
ಬೀಜ ಅಂಕುರಿಸಿ, ಅದು ಬೆಳೆದು ಹೆಮ್ಮರವಾಗಲು, ಹೃದಯದ ಅಂಗಳದಲ್ಲಿ ಶುದ್ಧಾಂತಃಕರಣದ ಝರಿ ಸದಾ ಹರಿಯುತ್ತಿರಬೇಕು, ಅಷ್ಟೆ.
ಪ್ರೀತಿಯೆಂಬ ಹಣತೆ ಬೆಳಗುವದು ಎಲ್ಲೆಡೆಗೆ
ಪ್ರೀತಿಭಾವ ಹುಟ್ಟುವದು ಶುದ್ಧ ಮನಸಿನಲಿ|
ಇತಿಮಿತಿಯ ಮೀರಿ ಪ್ರೀತಿ ಝರಿ ಉಕ್ಕೀತು
ಸ್ವಾರ್ಥ ಬದಿಗಿರಿಸು - ಶ್ರೀವೆಂಕಟ ||
ಶ್ರೀರಂಗ ಕಟ್ಟಿ ಯಲ್ಲಾಪುರ.
Comments