ರಾಮನಾಮ ಹೇಳದ ದೇಹ, ಎಲುಬಿನ ಹಂದರ..!
ಕಬೀರ ಮುಖ ಸೋಯಿ ಭಲಾ, ಜಾಮುಖ ನಿಕಸೈ ರಾಮ|
ಜಾ ಮುಖ ರಾಮನಾ ನಿಕಸೈ, ತಾ ಮುಖ ಹೈ ಕಿಸ ಕಾಮ ||
ಇತನೋೆ ಜೀವಜಂತುಗಳಿಗಿಂತ ಮನುಷ್ಯ ಶ್ರೇಷ್ಠನೆನಿಸಲು ಕಾರಣ ಅವನಲ್ಲಿರುವ ಬುದ್ಧಿಶಕ್ತಿ, ವಾಕ್ ಸಾಮರ್ಥ್ಯ, ವಿವೇಚನಾ ಗುಣ ಮುಂತಾದವುಗಳು.ಹಾಗಾಗಿ ದೇವರು ಕೊಟ್ಟ ಬಾಯಿಯಿಂದ ನಾಮಸ್ಮರಣೆ, ಒಳ್ಳೆಯ ಮಾತುಗಳು ಅಪೇಕ್ಷಣೀಯ. ಅದಕ್ಕಾಗಿ "ಹರಿನಾಮ ಹೇಳದ ನಾಲಿಗೆ ಇದ್ದರೇನು? ಬಿದ್ದು ಹೋದರೇನು?" ಎಂದು ಸಂತರು ಪ್ರಶ್ನಿಸಿದ್ದಾರೆ. ಕೆಲವರ ಮಾತುಗಳಲ್ಲಿ ಮೃದುತ್ವ ಕಂಡರೆ, ಇನ್ನು ಕೆಲವರ ಮಾತಿನಲ್ಲಿ ಕಾಠಿಣ್ಯ ಕಾಣಬಹುದು. ಆದರೆ ಈ ಮಾತುಗಳ ಹಿಂದಿರುವ ಭಾವನೆ ಮತ್ತು ಉದ್ದೇಶಗಳನ್ನು ಅರ್ಥಮಾಡಿಕೊಂಡಾಗ ಯಾವುದೇ ಗೊಂದಲಕ್ಕೂ ಆಸ್ಪದ ಇರಲಾರದು. ಕೆಲವರ ಗಡಸು ಧ್ವನಿ, ಮಾತನಾಡುವ ರೀತಿ, ಉಚ್ಚರಿಸುವ ಪದ್ಧತಿ, ಮುಖದ ಹಾವ-ಭಾವ ಮುಂತಾದವು -ಗಳು ಟೀಕೆಗೆ ಕಾರಣವಾದರೂ ಆ ವ್ಯಕ್ತಿಯನಿಜವಾದ ಕಳಕಳಿಯನ್ನು ಅರ್ಥಮಾಡಿಕೊಂಡಾಗ ಮಾತಿನ ಹಿಂದಿರುವ ಸಕಾರಾತ್ಮಕ ಧೋರಣೆ ಅರ್ಥವಾದೀತು!
ಮೇಲಿನ ದೋಹೆಯಲ್ಲಿ ಸಂತ ಕಬೀರರು,
ಮುಖವದು ಸುಂದರ, ರಾಮನಾಮ ಹೇಳುವದು|
ರಾಮ ಹೇಳದ ಮುಖ, ಯಾವ ಕೆಲಸಕ್ಕೂ ಬಾರದು||
ಎಂದು ಹೇಳಿದ್ದಾರೆ. ಭಗವನ್ನಾಮ ಸ್ಮರಣೆ ಮಾಡುವ ಮುಖ ಅದೆಷ್ಟು ಸಂದರ, ರಾಮನಾಮ ಹೇಳದ ಮುಖ ಬರಿ ಎಲುಬಿನ ಹಂದರ! ಎಂಬುದನ್ನು ತಿಳಿದು ನಡೆದಾಗ ಸಂಸ್ಕೃತಿ, ಸಂಸ್ಕಾರಗಳು ಬದುಕನ್ನು ಶ್ರೀಮಂತ -ಗೊಳಿಸುತ್ತವೆ. ಈ ಕಾರಣಕ್ಕಾಗಿಯೇ ಹಿರಿಯರು, ಮಕ್ಕಳಿಗೆ ದೇವರ ಹೆಸರನ್ನಿಟ್ಟು ಆ ಮೂಲಕ ಎಲ್ಲರ ಬಾಯಲ್ಲಿ ದೇವರ ನಾಮ ಕೇಳಿ ಬರುವಂತೆ ನೋಡಿಕೊಳ್ಳುತ್ತಿದ್ದರು. ಒಳ್ಳೆಯ ವಿಚಾರ, ಸದ್ಭಾವನೆಗಳನ್ನು ವ್ಯಕ್ತಮಾಡುವ ವ್ಯಕ್ತಿಗಳನ್ನು ಮೆಚ್ಚದವರಾರು? ನಾವಾಡುವ ವಾಣಿ ನಮ್ಮ ವ್ಯಕ್ತಿತ್ವ ಪರಿಚಯ ಮಾಡಿಕೊಡುವ ಕಾರಣ 'ನಾಲಿಗೆ ಕುಲ ಹೇಳಿತು' ಎಂಬ ಗಾದೆ ಪ್ರಚಲಿತದಲ್ಲಿದೆ.
ನೋಡಲು ಕುರೂಪವಿರುವ ವ್ಯಕ್ತಿ, ತನ್ನ ವಾಕ್ ಚಾತುರ್ಯ ಅಥವಾ ರಾಗಾಲಾಪನೆಯಿಂದ ಖಂಡಿತವಾಗಿ ಶೋತೃಗಳನ್ನು ಮಂತ್ರಮುಗ್ಧಗೊಳಿಸಬಲ್ಲ. ಆದರೆ ಸುಂದರ ರೂಪದ ವ್ಯಕ್ತಿಯ ಬಾಯಲ್ಲಿ ಅವಹೇಳನ, ಅವಾಚ್ಯ ಶಬ್ದಗಳು ಕೇಳಿಬಂದರೆ ಸಹಿಸುವವರಾತರು? ಮೂರಂಗುಲದ ನಾಲಿಗೆ ಆರಡಿ ದೇಹಕ್ಕೆ ಸಂಚಕಾರ ತರುವದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ಬದುಕು ಸುಂದರವಾಗಿರಲು ನಮ್ಮ ವಾಣಿ ಶುದ್ಧವಿರಬೇಕು, ಅಲ್ಲವೆ?
ದೇವ ಕೊಟ್ಟ ಬಾಡಿಗೆ ಮನೆಯಿದು ದೇಹ
ಜೀವ ಸವೆಸಬಹುದೆ ಬಾಹ್ಯ ಶೃಂಗಾರಕೆ?|
ಸಿಂಗರಿಸು ದಿವ್ಯಾತ್ಮ ಅದುವೆ ಸ್ವಂತ ಮನೆ
ಅಂಗ ಮೋಹವು ಸಲ್ಲ - ಶ್ರೀವೆಂಕಟ ||
ಶ್ರೀರಂಗ ಕಟ್ಟಿ ಯಲ್ಲಾಪುರ.
Comments