ಬುರಾ ಜೋ ದೇಖನ ಮೈ ಚಲಾ, ಬುರಾನ ಮಿಲಿಯಾ ಕೋಯ್/
ಜೋ ದಿಲ್ ಖೋಜೊ ಅಪನಾ, ಮುಝಸಾ ಬುರಾ ನ ಕೋಯ್ //
ಜಗತ್ತಿನಲ್ಲಿ ನಾನು ಮಾತ್ರ ಒಳ್ಳೆಯವನು, ಇತರರೆಲ್ಲರೂ ಕೆಟ್ಟವರು ಎಂಬ ಅಹಂಕಾರದಿಂದ ನಡೆಯುವವರಿಗೆ ತಮ್ಮ ಬೆನ್ನು ಕಾಣುವದೇ ಇಲ್ಲ. ಯಾರೂ ಪರಿಪೂರ್ಣರಲ್ಲ. ಹಾಗಾಗಿ ಎಲ್ಲರಲ್ಲಿಯೂ ಒಂದಿಲ್ಲೊಂದು ದೋಷಗಳು ಇದ್ದೇ ಇರುತ್ತವೆ. ಅವುಗಳ ಪ್ರಮಾಣ ಮಾತ್ರ ಹೆಚ್ಚು ಕಡಿಮೆ ಆಗಿರುತ್ತವೆಯೇ ಹೊರತು ದೋಷವಿಲ್ಲದ ಜೀವಿಗಳು ದೊರೆಯುವದು ಅಪರೂಪ. ಇದರ ಜೊತೆಗೆ, ತನ್ನ ತಪ್ಪುಗಳನ್ನು ಅರಿತು ಅದರ ಬಗ್ಗೆ ಪಶ್ಚಾತ್ತಾಪ ಪಟ್ಟು, ತಪ್ಪನ್ನು ಸರಿಪಡಿಸಿ ಕೊಳ್ಳುವ ವಿನಮ್ರ ಬುದ್ಧಿ ಕೆಲವರಿಗೆ ಇದ್ದರೆ, ತಮ್ಮದೇ ಸರಿ ಎಂದು ವಾದಿಸುವ ಮೂರ್ಖರ ಸಂಖ್ಯೆ ಈ ಜಗತ್ತಿನಲ್ಲಿ ಕಡಿಮೆಯಿಲ್ಲ. ತಮ್ಮ ಎಡೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೆಯವರ ಎಲೆಯಲ್ಲಿ ನೊಣ ಕಾಣುವ ಪ್ರವೃತ್ತಿ ಸರ್ವೇಸಾಮಾನ್ಯ. ರಂಧ್ರಾನ್ವೇಷಿಗಳಿಗೆ ಇತರರ ತಪ್ಪುಗಳೇ ಗೋಚರಿಸುತ್ತವೆಯೇ ಹೊರತು ತಮ್ಮ ತಪ್ಪುಗಳು ಕಾಣುವದೇ ಇಲ್ಲ!
ಈ ಹಿನ್ನೆಲೆಯಲ್ಲಿ ಸಂತ ಕಬೀರರ ಮೇಲಿನ ದೋಹೆ ಮನ ಮುಟ್ಟುವಂತಿದೆ...
"ಕೆಟ್ಟವರನ್ನು ಹುಡುಕಲು ಹೊರಟೆ, ಕೆಟ್ಟವರಾರೂ ಸಿಗಲಿಲ್ಲ/
ಹೃದಯ ಶೋಧಿಸೆ ನಾನರಿತೆ, ಎನಗಿಂತ ಕೆಟ್ಟವರಿಲ್ಲ //
ಪ್ರಪಂಚದಲ್ಲಿ ಗುಣ, ದೋಷಗಳು ಎಲ್ಲ ಕಾಲದಲ್ಲಿ, ಎಲ್ಲರಲ್ಲಿಯೂ ಕಂಡುಬರುತ್ತವೆ. ಆದರೆ ಇತರರ ತಪ್ಪುಗಳನ್ನು ಹುಡುಕುವದರಲ್ಲಿ ಮಗ್ನರಾದ ಜನರು ತಮ್ಮ ದೋಷಗಳ ಬಗ್ಗೆ ಅಕ್ಷರಶಃ ಕುರುಡಾಗಿರುತ್ತಾರೆ. ಇವರಲ್ಲಿನ ಅಹಂಕಾರ ತಪ್ಪುಗಳನ್ನು ಒಪ್ಪಿಕೊಳ್ಳಲು ಬಿಡುವದಿಲ್ಲ. ವಿನಮ್ರ ಭಾವದಿಂದ ವ್ಯಕ್ತಿ, ಆತ್ಮ ಶೋಧನೆಗೆ ತೊಡಗಿದರೆ ಅದುವೇ ದೈವ ಸಾಕ್ಷಾತ್ಕಾರಕ್ಕೆ ಮುನ್ನುಡಿಯಾದೀತು! ನಮ್ಮನ್ನು ನಾವು ನೋಡಿಕೊಳ್ಳುವ ನಮ್ರ ಭಾವದಿಂದ ಮಾತ್ರ ಆತ್ಮಶುದ್ಧಿ ಸಾಧ್ಯವಾದೀತು.
ನಮ್ಮ ಕಿಟಕಿಯಿಂದ ನೋಡಿದಾಗ ಪಕ್ಕದ ಮನೆಯವರು ಒಣ ಹಾಕಿದ ಬಟ್ಟೆ ಹೊಲಸಾಗಿ ಕಂಡೀತು. ಆದರೆ ಕಿಟಕಿಯ ಬಾಗಿಲು ತೆರೆದು ನೋಡಿದಾಗ ಆ ಬಟ್ಟೆ ಸ್ವಚ್ಛವಾಗಿಯೇ ಇರುತ್ತದೆ. ಹಾಗಾದರೆ ಹೊಲಸಿರುವದು ನಮ್ಮ ಕಿಟಕಿಯ ಗಾಜಿನಲ್ಲಿ! ನಮ್ಮ ಮನಸ್ಸಿನ ಕಿಟಕಿಯನ್ನು ಸ್ವಚ್ಛ ಮಾಡಿದಾಗ ಜಗತ್ತೆಲ್ಲ ಸ್ವಚ್ಛ, ಸುಂದರವಾಗಿ ಕಂಡೀತು. 'ಕಾಮಾಲೆಯದವರ ಕಣ್ಣಿಗೆ ಜಗತ್ತೆಲ್ಲ ಹಳದಿ" ಎಂಬ ಗಾದೆಯಂತೆ ಆಗಬಾರದು ನಮ್ಮ ನಡುವಳಿಕೆ. ಮೊದಲು ನಮ್ಮ ಕಣ್ಣಿನ ರೋಗವನ್ನು ಸರಿಪಡಿಸಿಕೊಂಡರೆ ಜಗತ್ತು ಆರೋಗ್ಯಕರವಾಗಿ ಕಂಡೀತು!
ಮಹಾಭಾರತ ಕಾಲದಲ್ಲಿ ಹುಡುಕುತ್ತ ಹೊರಟ ಧರ್ಮಜನಿಗೆ ಕೆಟ್ಟವರಾರೂ ಸಿಗಲಿಲ್ಲ. ಆದರೆ ಕೌರವನಿಗೆ ಎಷ್ಟು ಪ್ರಯತ್ನಿಸಿದರೂ ಒಳ್ಳೆಯವರ ದರ್ಶನವಾಗಲಿಲ್ಲ! "ನೋಡುವ ದೃಷ್ಟಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ" ಎಂಬ ಮಾತುಗಳು ಅದೆಷ್ಟು ಸತ್ಯ..!! " ನಾನು, ನನ್ನದು ಎಂಬ ಭಾವ ಕರಗಿದೊಡೆ, ಬಾನೆಂಬ ಆಡುಂಬೋಲ ತೆರೆದು ಕೊಳ್ವುದು ನೋಡ; ಚರ್ಮದ ಕಣ್ಣಿಗೆ ಜಗತ್ತು ಬೆತ್ತಲೆ, ಮನದರ್ಪಣ ತೋರ್ಪುದು ನಿಜರೂಪ.!" ಎಂಬ ಮಾತುಗಳು ಅತ್ಯಂತ ಮಾರ್ಮಿಕ. ಒಳಗಣ್ಣು ತೆರೆದಾಗ ಅರಿವಿನ ಜ್ಯೋತಿ ಕಂಡೀತು.!
ತಪ್ಪೆಣಿಸದಿರು ಅನ್ಯರಲಿ, ನೀನೆಷ್ಟು ಸಂಭಾವಿತನೊ?
ತಪ್ಪುಗಳನರಿತು ನಡೆವವ ಈ ಜಗದಿ ಹಿರಿಯ/
ಒಪ್ಪಿಕೊಳುತಲಿ ತಪ್ಪುಗಳ ಮುಂದೆ ಸಾಗಿದೊಡೆ
ಅಪ್ಪಿಕೊಂಡೀತು ಜಗ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ.
Comments