top of page

ಕಬೀರ ಕಂಡಂತೆ...೬೯

ರಂಧ್ರಾನ್ವೇಷಿಗಳಾದರೆ ಆಯುಷ್ಯ ವ್ಯರ್ಥ..!


ಸಾಧು ಶಬ್ದ ಸಮುದ್ರ ಹೈ, ಜಾಮೆಂ ರತನ ಸಮಾಯ|

ಮಂದ ಭಾಗ ಮುಠ್ಠಿ ಭರೈ, ಕಂಕರ ಹಾಥ ಲಗಾಯ ||


ವಿಚಾರಗಳು ವ್ಯಕ್ತಿ, ವ್ಯಕ್ತಿಗಳಲ್ಲಿ ಭಿನ್ನವಾಗಿರುತ್ತವೆ ಎಂಬುದು ಅನುಭವವೇದ್ಯವಾದ ಸಂಗತಿ. ಒಂದೇ ವಿಷಯದ ಕುರಿತಂತೆ ವೈಚಾರಿಕ ಮತಭೇದಗಳಿರುವದು ಸಹಜ. ಆದರೆ ಕೆಲವರು ಒಳ್ಳೆಯ ವಿಚಾರ ಮಾಡುತ್ತ ಸವಿಮಾತುಗಳನ್ನಾಡಿ -ದರೆ, ಇನ್ನು ಕೆಲವರ ದುಷ್ಟತನದ ಮಾತುಗಳು ಬೇಸರ ತರಿಸುತ್ತವೆ. ಹಂಸಕ್ಷೀರ ನ್ಯಾಯದಂತೆ ವಿವೇಚನಾ ದೃಷ್ಟಿಯಿಂದ ಇಂಥ ವಿಷಯಗಳನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕಾದುದು ಅಗತ್ಯ. ಕೆಲವು ಸಲ ಸಜ್ಜನರ ಮಾತುಗಳು ಮೌಲ್ಯಯುತವಾಗಿದ್ದರೂ ಅವರು ಅದನ್ನು ಹೇಳುವ ಶೈಲಿ ಕಠಿಣವಾಗಿರಬಹುದು. ಹಾಗಾಗಿ ಒಳ್ಳೆಯದನ್ನು ಸ್ವೀಕರಿಸುವ ತಾಳ್ಮೆ, ಜಾಣ್ಮೆ ಎರಡೂ ನಮ್ಮಲ್ಲಿರಬೇಕಾದುದು ಅಗತ್ಯ. ಕೆಲವರ ಮಾತುಗಳು ಕಟುವಾಗಿದ್ದರೂ ಅವುಗಳ ಹಿಂದಿರುವ ಸತ್ಯವನ್ನು ತಿಳಿದು ಅದನ್ನು ಅರಗಿಸಿಕೊಳ್ಳುವ ವ್ಯವಧಾನ ನಮಗಿರಬೇಕು. ಯಾವುದೇ ವಿಚಾರಗಳು ನಮಗೆ ಹಿಡಿಸುವದಿಲ್ಲ ಎಂಬ ಕಾರಣಕ್ಕೆ ಅದರಲ್ಲಿ ತಪ್ಪು ಕಂಡುಹಿಡಿಯಬಾರದು. ಇದರಿಂದ ನಮಗೇ ಹಾನಿ ಎನ್ನುವದನ್ನು ಮರೆಯುವಂತಿಲ್ಲ.


ಸಾಧು, ಸಂತರ ಮಾತುಗಳಲ್ಲಿನ ಉತ್ಕೃಷ್ಟ ವಿಚಾರಗಳು ನಮ್ಮ ಬದುಕು ರೂಪಿಸಲು ಸಹಾಯಕಾರಿಯಾಗುತ್ತವೆ. ಅದಕ್ಕಾಗಿ ಸಂತ ಕಬೀರರು ಹೇಳುತ್ತಾರೆ,

ಸಂತರ ವಾಣಿ ಸಮುದ್ರದಂತೆ, ರತ್ನದಿಂದ ತುಂಬಿಹುದಲ್ಲ|

ಅಜ್ಞಾನಿಗೆ ಮುಷ್ಟಿತುಂಬ, ಬರಿ ಕಲ್ಲುಗಳೇ ದಕ್ಕುವವಲ್ಲ||

ಸಾಧು, ಸಜ್ಜನರ ವಾಣಿ ಕೇವಲ ಶಬ್ದಗಳ ಆಡಂಬರವಲ್ಲ. ಬದಲಿಗೆ ಅವು ಜ್ಞಾನಾನುಭವದ ಮಹಾಸಾಗರ. ಅದರಲ್ಲಿ ಸದ್ಗುಣಗಳೆಂಬ ಜ್ಞಾನ ರತ್ನಗಳು ತುಂಬಿರುತ್ತವೆ. ಆದರೆ ಕೆಲವು ಅಜ್ಞಾನಿಗಳು ಮಾತ್ರ ಸಜ್ಜನರ ಮಾತುಗಳಲ್ಲಿ ದೋಷಗಳನ್ನೇ ಹುಡುಕುತ್ತ ಜ್ಞಾನಸಾಗರದಿಂದ ರತ್ನಗಳ ಬದಲು ಮುಷ್ಠಿತುಂಬ ಕಲ್ಲಗಳನ್ನು ತರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸಂತರು, ಸಜ್ಜನರಲ್ಲಿ ದೋಷಗಳನ್ನು ಹುಡುಕುತ್ತ ಆಯುಷ್ಯ ವ್ಯರ್ಥಗೊಳಿಸುವದು ಸಲ್ಲ. ಅವರ ವಿಚಾರಗಳ ಹಿಂದೆ ಅಡಗಿರುವ ಜೀವನದ ನಿಜ ಮರ್ಮವನ್ನು ಅರಿತುಕೊಳ್ಳಿ. ಅವರ ಜೀವನ ಸಂದೇಶಗಳನ್ನು ಅರ್ಥಮಾಡಿಕೊಂಡು ನಿಮ್ಮ ಜೀವನ ಪಾವನವಾಗಿಸಿಕೊಳ್ಳಿ ಎಂಬುದು ಕಬೀರರ ಸದಾಶಯ. ಅದರಂತೆ ಕೆಲವು ಸಂಗತಿಗಳು ನಮಗೆ ಕಹಿ ಅನ್ನಿಸಿದರೂ ಅವುಗಳನ್ನು ಅಮೃತವೆಂದು ತಿಳಿದುಕೊಂಡು ಸ್ವೀಕರಿಸಿದರೆ ಭವರೋಗಕ್ಕೆ ಅದೇ ದಿವ್ಯೌಷಧಿಯಾದೀತು!


ನಿನ್ನೆಗಳ ಮಡಿಚಿಟ್ಟು ನಾಳೆಗಳ ಬಿಡಿಸಿಟ್ಟು

ಅನ್ಯರಲಿ ದೋಷಗಳ ಹುಡುಕುವದ ಬಿಟ್ಟು|

ನಿನ್ನೆಗಳಿಂ ಕಲಿಯುತ ಗಟ್ಟಿ ಹೆಜ್ಜೆಗಳನಿಡುತ

ಅನುದಿನವು ಬೆಳಕಾಗು - ಶ್ರೀವೆಂಕಟ||


ಶ್ರೀರಂಗ ಕಟ್ಟಿ ಯಲ್ಲಾಪುರ.

9 views1 comment

1 Comment


SHREYAS PARICHARAN
Jun 26, 2022

🙏🏻🙏🏻🙏🏻🙏🏻🙏🏻🙏🏻🌺🌺🌺🌺🌺

Like
bottom of page