top of page

ಕಬೀರ ಕಂಡಂತೆ... ೬೫

ಶೃದ್ಧಾ-ಭಕ್ತಿಗಳು ಮೋಕ್ಷಕ್ಕೆ ಸಾಧನ...


ಭಕ್ತಿ-ಬೀಜ ಫಲ ಹೈ ನಹಿ, ಜೊ ಜುಗ ಜಾಯೆ ಅನಂತ|

ಊಚ ನೀಚ ಘರ ಅವತರೆ, ಹೋಯ ಸಂತ ಕಾ ಸಂತ||

ಜೀವನದಲ್ಲಿ ನಮ್ಮಿಂದಾಗುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳು, ತಕ್ಷಣ ಅಲ್ಲದಿದ್ದರೂ ಕಾಲಾಂತರದಲ್ಲಿ -ಯಾದರೂ ಫಲ ಕೊಡುವದು ನಿಶ್ಚಿತ. ಯಾವುದೇ ಬೀಜ ಬಿತ್ತಿದಾಗ ಅದು ಚಿಗುರಿ ಕುಡಿಯೊಡೆದು ಗಿಡ, ಮರವಾಗಿ ಫಲ‌ ನೀಡುವವರೆಗೆ ಅದರದ್ದೇ ಆದ ಸಮಯ ಬೇಕು. ಅದೇ ರೀತಿ ನಾವು ಮಾಡುವ ಪ್ರತಿಯೊಂದು ಕರ್ಮಕ್ಕೂ ಕರ್ಮಫಲ ನಮ್ಮ‌ ಬೆನ್ನಿಗೆ ಅಂಟಿಕೊಂಡೇ ಇರುತ್ತದೆ. ಕೆಲವು ಸಲ ತಕ್ಷಣ ಕರ್ಮದ ಪರಿಣಾಮ ಕಂಡರೆ, ಇನ್ನು ಕೆಲವು ಸಲ ಫಲ ದೊರಕಲು ಸಮಯ ಹಿಡಿಯುತ್ತದೆ. ಅದೇ ರೀತಿ ಕೆಲವೊಂದು ಪ್ರತ್ಯಕ್ಷವಾಗಿ ಫಲ‌ ನೀಡಿದರೆ, ಇನ್ನು ಕೆಲವು ಸಲ ಅಪ್ರತ್ಯಕ್ಷವಾಗಿಯಾಗಿಯಾದರೂ ಕರ್ಮಫಲ ನಮ್ಮ ಪಾಲಿಗಿರುತ್ತದೆ ಎಂಬುದು ನಿಶ್ಚಿತ. "ಬೇವಿನ ಬೀಜ ಬಿತ್ತಿದರೆ ಮಾವಿನ ಫಲ ದೊರಕೀತೆ!?" "ಬಿತ್ತಿದ್ದನ್ನು ಬೆಳೆ" ಎಂಬ ಗಾದೆಯಂತೆ ಕಹಿ ಕರ್ಮದ ಫಲವೂ ಕಹಿಯಾಗಿಯೇ ಇರುತ್ತದೆ. ಸತ್ಕರ್ಮದ ಪರಿಣಾಮ ಸಹ ಒಳ್ಳೆಯದೇ ಆಗಿರುತ್ತದೆ ಎಂಬುದಕ್ಕೆ ಎರಡು ಮಾತಿಲ್ಲ. ಅನೇಕ ಬಾರಿ ನಾವು ಮಾಡುವ ಸತ್ಕಾರ್ಯ -ಗಳ ಪುಣ್ಯಫಲ ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ದೊರಕುತ್ತದೆ ಎಂಬ ಭಾವನಾತ್ಮಕ ನಂಬಿಕೆ ನಮ್ಮ ಭಾರತೀಯರಲ್ಲಿದೆ. ದೇವರ ಮೇಲಿನ ಭಕ್ತಿ, ಶೃದ್ಧೆ, ಸಮರ್ಪಣೆ, ಪ್ರಾಮಾಣಿಕತೆ ಮುಂತಾದವುಗಳು ಒಳ್ಳೆಯ ಫಲಗಳನ್ನೇ ನೀಡುವದರಲ್ಲಿ ಸಂದೇಹವಿಲ್ಲ.


ಸಂತ ಕಬೀರರು, ಈ ದೋಹೆಯಲ್ಲಿ,

ಭಕ್ತಿಯ ಬೀಜ ನಿಷ್ಫಲವಲ್ಲ, ಕಳೆದರೂ ಯುಗ ಅನಂತ|

ಮೇಲು-ಕೀಳೆನ್ನದೆ ಭಕ್ತಿಯೊಂದಿರೆ, ಜನರಾಗುವರು ಸಂತ||

ಎಂದು ಹೇಳುವದರ ಮೂಲಕ ಕರ್ಮದ ಮೇಲಿನ ಭಕ್ತಿ, ಶೃದ್ಧೆಗಳು ಖಂಡಿತ ಫಲ‌ ನೀಡುತ್ತವೆ ಎಂದು ಸಾರಿ ಹೇಳಿದ್ದಾರೆ. ಯಾವುದೇ ತರತಮವಿಲ್ಲದೆ ಮಾಡಿದ ನಿಷ್ಕಾಮ ಕರ್ಮ ಮತ್ತು ಭಕ್ತಿ ಇಚ್ಚಿತ ಫಲ ನೀಡುತ್ತದೆ ಎಂಬುದಕ್ಕೆ ಸಂತರ, ಅನುಭಾವಿಗಳ ಜೀವನವೇ ಸ್ಪಷ್ಟ ಉದಾಹರಣೆಯಾಗಿದೆ.


ಕನಕದಾಸರ ಅವ್ಯಾಜ ಪ್ರೀತಿಗೆ ಒಲಿದ ಶ್ರೀಕೃಷ್ಣ, ಭಕ್ತ ಪ್ರಲ್ಹಾದನಿಗಾಗಿ ಅವತರಿಸಿದ ನರಸಿಂಹ, ಸಂತ ತುಕಾರಾಮರಿಗೆ ದರ್ಶನ ನೀಡಿದ ಪಾಂಡುರಂಗ, ಸಂತ ಮೀರಾಬಾಯಿಯ ಕರೆಗೆ ಓಗೊಟ್ಟ ಗಿರಿಧರ ಮುಂತಾದ ಅನೇಕ ಕಥೆಗಳು ಭಕ್ತಿಯ ಪ್ರಾಮುಖ್ಯತೆ -ಯನ್ನು ಬಣ್ಣಿಸುತ್ತವೆ. ಮೇಲು-ಕೀಳೆಂಬ ಭಾವವನ್ನು ತೊಡೆದು ಭಕ್ತಿಮಾರ್ಗದಲ್ಲಿ‌ ಮುನ್ನಡೆದರೆ ಜನರು ಆಗುವರು ಸಂತ ಎಂಬ ನಂಬಿಗೆಯನ್ನು ಜೀವನದಲ್ಲಿ ಗಟ್ಟಿಗೊಳಿಸುತ್ತ ಕೃತಾರ್ಥರಾಗೋಣ.


ಭಕ್ತಿಯೆಂಬುದು ಪ್ರೀತಿ, ಭಕ್ತಿಯೇ ಉಸಿರು

ಶಕ್ತನಾಗಲು ಜೀವನದಿ ಭಕ್ತಿಯೇ ಮಿಗಿಲು|

ಮುಕ್ತಿಮಾರ್ಗದಿ ಸಾಗಲು ಶೃದ್ಧಾ-ಭಕ್ತಿಗಳು

ಯುಕ್ತ ಸಾಧನ - ಶ್ರೀವೆಂಕಟ ||


ಶ್ರೀರಂಗ ಕಟ್ಟಿ ಯಲ್ಲಾಪುರ.

8 views1 comment

1 Comment


SHREYAS PARICHARAN
Jun 26, 2022

......ಭಕ್ತನಿಗೆ ಬೇರೇ ಕೆಲಸವಿಲ್ಲ... ಭಜಿಸೋದು ಬಿಟ್ಟು... he ought not ask questions... till 'realisations' happen...👌👌👌🌺🌺🌺

Like
bottom of page