top of page

ಕಬೀರ ಕಂಡಂತೆ...೫೬

ಧರ್ಮದ ದಾರಿಯಲಿ ಬದುಕು ದಕ್ಕೀತು..!


ಕರ್ಮ ಫಂದ ಜಗ ಫಾಂದಿಯಾ, ಜಬತಬ ಪೂಜಾ ಧ್ಯಾನ|

ಜಾಹಿ ಶಬ್ದತೆ ಮುಕ್ತಿ ಹೋಯ, ಸೊ ನ ಪರಾ ಪಹಿಚಾನ||


ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮನುಷ್ಯನ ಸ್ವಭಾವ, ಜಗತ್ತಿನ ಮೂಲಭೂತ ತತ್ವ, ಮತ್ತು ಭಾವನೆಗಳಲ್ಲಿ ಅಷ್ಟೇನೂ ಬದಲಾವಣೆ ಆಗಲಾರದು. ಕಾಲ ಮತ್ತು ಪರಿಸ್ಥಿತಿ ಬದಲಾದರೂ ಕೆಲವೊಂದು ವಿಷಯಗಳು ನಿರೀಕ್ಷಿತ ಬದಲಾವಣೆ ಕಾಣದಿರುವದು ವಿಶೇಷ. ಆಹಾರ, ಭಯ, ನಿದ್ರಾ, ಮೈಥುನ ಮುಂತಾದವುಗಳು ಜೀವನಕ್ಕೆ ಅವಶ್ಯ. ಆದರೆ ಕೇವಲ ಇವುಗಳ ಜಾಲದಲ್ಲಿ ಮುಳುಗಿದ ಮನುಷ್ಯನಿಗೆ ನೈಜ ಬದುಕಿನ ದರ್ಶನ ಆಗುವದೇ ಇಲ್ಲ. ಈ ಕರ್ಮ ಬಂಧನದಿಂದ ಹೊರಬಂದು ಶಾಂತವಾಗಿ ಆಲೋಚನೆ ಮಾಡಿದರೆ ಮಾತ್ರ ಅಧ್ಯಾತ್ಮದ ದಾರಿ ತೆರೆದುಕೊಳ್ಳಲು ಸಾಧ್ಯ.


ಮೇಲಿನ ದೋಹೆಯಲ್ಲಿ ಸಂತ ಕಬೀರರು,

"ಕರ್ಮಜಾಲದಿ ಸಿಲುಕಿದ ಜಗ, ಜಪತಪ, ಪೂಜೆ, ಧ್ಯಾನ ಮಾಡುತಿದೆ|

ಮುಕ್ತಿ ಪಥದೆಡೆಗೆ ಒಯ್ಯುವ, ನಿಜ ಶಬ್ದವ ಅದು ಮರೆತಿದೆ||

ಎಂದು ಹೇಳುತ್ತ ಭೋಗ, ವಿಲಾಸಗಳಲ್ಲಿ ಮುಳುಗಿದ ಜನರು ಭಗವಂತನನ್ನೇ ಮರೆಯುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ‌. ಇದರಿಂದ ಅವರು ಸತ್ಯ ಸ್ವರೂಪದಿಂದ ದೂರ ಹೋಗುತ್ತಾರೆ. ಜನ್ಮ-ಮರಣದ ರಹಸ್ಯವನ್ನು ತಿಳಿಯಲು ದೇವರ ಮೊರೆ ಹೋಗುವದು ಅತ್ಯಂತ ಅವಶ್ಯ. ಜನರ ಜೊತೆಗಿನ ಸಹಕಾರ, ಸ್ನೇಹ, ಪ್ರೀತಿ ಭಾವದಿಂದ ವರ್ತಿಸುವ ವ್ಯಕ್ತಿ ಜೀವನದ ನಿಜಾರ್ಥವನ್ನು ಕಂಡುಕೊಂಡು ಮೋಕ್ಷ ಪಡೆಯುವಲ್ಲಿ ಸಫಲನಾಗುತ್ತಾನೆ. ಸಕಲ ಜಗತ್ತು ತೋರಿಕೆಯ ಜಪ, ತಪ, ಪೂಜೆ, ಧ್ಯಾನ ಮತ್ತು ಅನ್ಯ ಕರ್ಮದ ಜಾಲದಲ್ಲಿ ಸಿಕ್ಕು ಬಿದ್ದಿದೆ. ಆದರೆ ಇದರ ಹೊರತಾಗಿ ಯಾವ ಶಬ್ದದಿಂದ ಮುಕ್ತಿ ಸಂಭವ ಇದೆಯೊ ಅದನ್ನೇ ಅರಿಯದಿರುವದು ವಿಪರ್ಯಾಸದ ಸಂಗತಿ ಎಂದು ಕಬೀರರು ಖೇದ ವ್ಯಕ್ತಪಡಿಸಿದ್ದಾರೆ. ಕೇವಲ ಬಾಹ್ಯ ಆಡಂಬರದಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂಬ ಭ್ರಮೆಯನ್ನು ತೊರೆದು ಭಗವಂತನ ನಾದದಲ್ಲಿ ಲೀನವಾಗುವದರಲ್ಲಿಯೇ ಮಾನವ ಜನ್ಮದ ಸಾರ್ಥಕತೆ ಅಡಗಿದೆ. ಬಾಹ್ಯಾಡಂಬರ ತೊರೆದು ನಿಜ ಬ್ರಹ್ಮನ ಅರಿವಿನತ್ತ ಹೆಜ್ಜೆ ಹಾಕುವದು ಎಲ್ಲರ ಆದ್ಯತೆಯಾಗಬೇಕಾಗಿದೆ.

ಕರ್ಮಜಾಲಕೆ ಸಿಲುಕಿ ಪರಿತಪಿಸದಿರು ಮರುಳೆ

ಧರ್ಮದ ದಾರಿಯಲಿ ನಡೆ ಬದುಕು ದಕ್ಕುವದು|

ಭೋಗ ಜೀವನದಿ ಮುಕ್ತಿಗಮ್ಯ ಮರೆಯದಿರು

ಭಗವಂತನೊಲಿದಾನು - ಶ್ರೀವೆಂಕಟ||


ಶ್ರೀರಂಗ ಕಟ್ಟಿ ಯಲ್ಲಾಪುರ.

4 views0 comments

Commentaires


bottom of page