top of page

ಕಬೀರ ಕಂಡಂತೆ...೫೫

ಗುರು-ಹಿರಿಯರ ಧಿಕ್ಕರಿಸಿ ಪರಿತಪಿಸದಿರು..


ಗುರು ಆಜ್ಞಾ ಮಾನೆ ನಹಿ, ಚಲೆ ಉಟಪಟಿ ಚಾಲ|

ಲೋಕ ವೇದ ದೋನೊ ಗಯೆ, ಆಯೆ ಸಿರಪರ ಕಾಲ||


ಸನಾದಿ ಕಾಲದಿಂದ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ತಂದೆ-ತಾಯಿ, ಹಿತ ಚಿಂತಕರು, ಶಿಕ್ಷಕರು, ಬಂಧು-ಮಿತ್ರರು ಬೇರೆ ಬೇರೆ ರೂಪಗಳಲ್ಲಿ ಮಾರ್ಗದರ್ಶನ ಮಾಡುತ್ತಲೇ ಇರುತ್ತಾರೆ

ಆದರೆ ಇವರೆಲ್ಲರಲ್ಲಿ ಅತ್ಯಂತ ಅನುಭವಿ, ಜ್ಞಾನಿ, ಚಿಂತಕ, ಮಾರ್ಗದರ್ಶಕನಾದ ಗುರುವಿನ ಮಾತು ಪಾಲಿಸುವದರಲ್ಲಿ ಎಲ್ಲ ಹಿತ ಅಡಗಿದೆ. ಗುರುವಿನ ಹಿತನುಡಿಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡು ಶಿಷ್ಯರು ಸಾಧನೆಯ ಔನ್ನತ್ಯಕ್ಕೆ ತಲುಪಿದ್ದಾರೆ. 'ಗುರು'' ಅಂದರೆ ಶ್ರೇಷ್ಠ, ಲಘು ಅಲ್ಲದವನು ಎಂದು ಅರ್ಥ. ಅದಕ್ಕಾಗಿಯೇ ಅನುಭಾವಿಗಳು "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಹೇಳಿದ್ದಾರೆ. ಗುರುವಿನಲ್ಲಿನ ಶ್ರೇಷ್ಠತ್ವವನ್ನು ಒಪ್ಪಿಕೊಂಡು ಅವನು ತೋರಿಸಿದ ಮಾರ್ಗದಲ್ಲಿ ಮುನ್ನಡೆಯುವದೇ ಆದರ್ಶ ಶಿಷ್ಯನ ಮುಖ್ಯ ಲಕ್ಷಣ.


ಆದರೆ ಕೆಲವರು ಗುರುವಿನ ಮಾತು, ಆಜ್ಞೆಯನ್ನು ಧಿಕ್ಕರಿಸಿ ನಡೆಯುವವರೂ ಇದ್ದಾರೆ. ಇದಕ್ಕೆ ಶಿಷ್ಯನ ಅಹಂಕಾರ, ಗುರುವಿನ ಬಗೆಗಿನ ತಾತ್ಸಾರವೇ ಕಾರಣ. ಈ ಸಂದರ್ಭದಲ್ಲಿ ಕಬೀರರು,

"ಗುರು ಆಜ್ಞೆ ಪಾಲಿಸದೆ, ಅಡ್ಡ ದಾರಿ ಹಿಡಿವರು|

ಲೋಕ ಪರಲೋಕದಲಿ, ದುಃಖದಿ ಬಳಲುವರು||

ಎಂಬ ಮಾತುಗಳ ಮೂಲಕ ಸಮಾಜವನ್ನು ಎಚ್ಚರಿಸಿದ್ದಾರೆ. ಗುರುವಾಜ್ಞೆ ಧಿಕ್ಕರಿಸಿ ಮನ ಬಂದಂತೆ ನಡೆಯುವವರು, ಈ ಲೋಕದಲ್ಲಷ್ಟೇ ಅಲ್ಲ ಪರಲೋಕ ದಲ್ಲೂ ಕಷ್ಟ, ನಷ್ಟ ಅನುಭವಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಗುರುವಿನ ಮಾತು ಕೇಳದವ ಪತಿತನಾದಾನು ಎಂದು ಹೇಳುವ ಕಬೀರರು ಕಷ್ಟಕಾಲದಲ್ಲಿ ಅಂಥವರನ್ನು ರಕ್ಷಿಸುವದು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.


ಮಹಾ ಪರಾಕ್ರಮಿಗಳಾದ ರಾವಣ, ದುರ್ಯೋಧನ ಮುಂತಾದವರು ಗುರು-ಹಿರಿಯರ ಮಾತುಗಳನ್ನು ಧಿಕ್ಕರಿಸಿ ನಡೆದು ಅವಸಾನ ಹೊಂದಿರುವ ಉದಾಹರಣೆಯಿದೆ. ನಕಾರಾತ್ಮಕ ಭಾವನೆಗಳಿಂದ ಸೊಕ್ಕಿ ಗುರು, ಹಿರಿಯರನ್ನು ಕಡೆಗಣಿಸಿದವರಿಗೆ ಅವಸಾನ ಕಟ್ಟಿಟ್ಟ ಬುತ್ತಿ. ಸ್ವತಃ ಬುದ್ಧಿವಂತ, ಶಕ್ತಿವಂತ ಎಂದು ಬೀಗದೇ ಗುರು-ಹಿರಿಯರನ್ನು ಗೌರವಾದರ -ಗಳಿಂದ ಕಾಣುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಬಲ್ಲ.

ದುರ್ಯೋಧನ-ರಾವಣರು ಮೆರೆದು ಲೋಕದಲಿ

ಗುರು-ಹಿರಿಯರ ಧಿಕ್ಕರಿಸಿ ಮಣ್ಣು ಮುಕ್ಕಿದರಲ್ಲ|

ಪರಿತಾಪ ತಪ್ಪದೆಂದಿಗೂ ಬದುಕ ಯಾತ್ರೆಯಲಿ

ಹಿರಿತನವ ಗೌರವಿಸು - ಶ್ರೀವೆಂಕಟ||


ಶ್ರೀರಂಗ ಕಟ್ಟಿ ಯಲ್ಲಾಪುರ.

5 views0 comments

Comments


bottom of page