top of page

ಕಬೀರ ಕಂಡಂತೆ...೩೩

ಬದುಕ ಯಾತ್ರೆಯಿದು ತೂಗುಯ್ಯಾಲೆಯಂತೆ..!


ಮಾಟಿ ಕಹೆ ಕುಮ್ಹಾರಸೆ, ತೂ ಕ್ಯಾ ರೌಂದೆ ಮೋಗಿ/

ಏಕ ದಿನ ಐಸಾ ಹೋಯೆಗಾ, ಮೈ ರೌದೂಂಗಿ ತೋಹಿ//

ಬದುಕು ನಿರಂತರ ತಿರುಗುವ ಕಾಲಚಕ್ರ. ಇದರ ಗತಿ ಹೀಗೆಯೇ ಎಂದು ಬಲ್ಲವರಾರು? ಈಗ ಇದ್ದವ ಮುಂದೊಂದು ಗಳಿಗೆಯಲ್ಲಿ ಇಲ್ಲವಾಗಬಹುದು. ಇಂದು ಶ್ರೀಮಂತನಾಗಿ ಮೆರೆದವ ನಾಳೆ ದಾರಿಯ ಭಿಕಾರಿಯಾಗಬಹುದು! ಇದು ಕಾಲ ಮಹಿಮೆ ಯಲ್ಲದೇ ಬೇರೇನೂ ಅಲ್ಲ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳದ ಜನರು ವರ್ತಮಾನದ ಅಧಿಕಾರ, ಅಂತಸ್ತುಗಳಿಂದ ಮೆರೆಯುತ್ತ ಕಾಲರಾಯನ ಭವಿಷ್ಯದ ಗತಿಯನ್ನು ಮರೆತು ದುಃಖ

ಅನುಭವಿಸುತ್ತಾರೆ.

'ಪರಿವರ್ತನೆ ಜಗದ ನಿಯಮ' ಎಂಬ ಭಗವದ್ಗೀತೆ ಯ ನುಡಿಯಂತೆ ಕಾಲ ಬದಲಾಗುತ್ತಲೇ ಇರುತ್ತದೆ. ತೂಗು ತೊಟ್ಟಿಲಿನಂತೆ ಇಂದು ಮೇಲಿದ್ದವ ನಾಳೆ ಕೆಳಗೆ, ಕೆಳಗಿದ್ದವ ಮೇಲೆ ಹೋಗಲೇಬೇಕು. "ಕಾಲನ ನಡೆ ಬಲ್ಲವರಾರು ಮಾನವ? ಇದರ ಮಹತಿಯನು ಅರಿತು ನಡೆದರೆ ನಿನಗಿಲ್ಲ ನೋವ" ಎಂಬಂತೆ ಸಂತ ಕಬೀರರು ಮೇಲಿನ ದೋಹೆಯಲ್ಲಿ ಸುಂದರ ಉಪಮೆಯೊಂದಿಗೆ ಬದುಕಿನ ಸತ್ಯವನ್ನು ತೆರೆದು ನಮ್ಮೆದುರು ಇರಿಸಿದ್ದಾರೆ.

" ಮಣ್ಣು ಹೇಳಿತು ಕುಂಬಾರನಿಗೆ, ನೀ ಎನ್ನ ಮುರಿಯದಿರು/

ಒಂದು ದಿನ ನಾ ನಿನ್ನ ಮುರಿಯುವೆ, ನೀನಿದ ಮರೆಯದಿರು//

ನೀನು ನನ್ನನ್ನೇನು ತುಳಿದು ಮುರಿಯುವೆ? 'ಮುಂದೊಂದು ದಿನ ನಾನೇ ನಿನ್ನನ್ನು ಮುರಿದು ಮಣ್ಣಾಗಿಸುವೆ' ಎಂದು ಮಣ್ಣು ಕುಂಬಾರನಿಗೆ ಹೇಳುವ ಮಾತು, ಜೀವನದ ಏರಿಳಿತಕ್ಕೆ ಸ್ಪಷ್ಟ ನಿದರ್ಶನ. ಮನುಷ್ಯ ಮತ್ತು ಪ್ರಕೃತಿಯ ಮಧ್ಯದ ಸಂಬಂಧಕ್ಕೂ ಈ ಮಾತುಗಳು ಬಹಳ ಚೆನ್ನಾಗಿ ಅನ್ವಯಿಸುತ್ತವೆ. ಮನುಷ್ಯ ಬದುಕಿರುವಾಗ, ಅಹಂಕಾರ ಮತ್ತು ಸ್ವಾರ್ಥದಿಂದ ಪ್ರಕೃತಿಯ ಮೇಲೆ ಅನ್ಯಾಯ ಎಸಗಿದರೆ, ಆತ ಕಷ್ಟಕ್ಕೆ ಗುರಿ ಯಾಗುವದು ಶತಸ್ಸಿದ್ಧ. ಈ ಕಟುಸತ್ಯವನ್ನು ಅರಿತು

ಬದುಕಿರುವಾಗ ನಯ - ವಿನಯ ತುಂಬಿದ ನಡೆ, ನುಡಿಗಳಿಂದ ಬದುಕಬೇಕಾಗಿದೆ.


ಬಡವ - ಬಲ್ಲಿದ, ಸಣ್ಣವ - ದೊಡ್ಡವ ಮುಂತಾದ ಭೇದಗಳನ್ನೆಣಿಸದೇ ಸಮನ್ವಯ ದೃಷ್ಟಿಯಿಂದ ಬದುಕು ನಡೆಸಿದರೆ ಸಮಾಜ ಸುಂದರವಾದೀತು.


ಮೆಲು ಕೀಳೆಂಬ ಭಾವದಿ ಬೀಗದಿರು,ಬಾಗದಿರು

ಸಮತೆ ತತ್ವವ ಮರೆತು ಈ ಜಗದಿ ನಡೆಯದಿರು /

ಚದುರಂಗದಲಿ ರಾಜ, ಪದಾತಿಗೆ ಪ್ರತ್ಯೇಕ ಮಾನ

ಆಟ ಮುಗಿದಾಗ ಒಂದೆ ಡಬ್ಬದಿ ಎಲ್ಲರಿಗೂ ಸ್ಥಾನ //


ಶ್ರೀರಂಗ ಕಟ್ಟಿ ಯಲ್ಲಾಪುರ.

 
 
 

Comments


©Alochane.com 

bottom of page