ಕಬೀರ ಕಂಡಂತೆ..೩೦
- ಆಲೋಚನೆ
- Jun 26, 2021
- 1 min read
ಸತ್ಯವೇ ದೇವರು..!
ಸಾಯಿ ಆಗೆ ಸಾಂಚ ಹೈ, ಸಾಯಿ ಸಾಂಚ್ ಸುಹಾಯ/
ಚಾಹೆ ಬೋಲೆ ಕೇಸ ರಖ, ಚಾಹೆ ಘೊಂಟ ಮುಂಡಾಯ//
"ದೇವನೆಂದಿಗೂ ಸತ್ಯಪ್ರಿಯ, ಸತ್ಯವೇ ದೇವರು/
ಜಟೆ ಇಲ್ಲವೆ ಮುಂಡನ, ಆತ ಮಣಿಯಲಾರ//
ಕನ್ನಡಿಗರ ಮನೆ ಮಾತಾಗಿರುವ ಪುಣ್ಯಕೋಟಿ ಕಥೆಯಲ್ಲಿ, ಗೋವು " ಸತ್ಯವೇ ನಮ್ಮ ತಾಯಿ, ತಂದೆ ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು" ಎಂದು ಹೇಳುತ್ತದೆ. ಅಲ್ಲದೇ ಕೊಟ್ಟ ಮಾತಿನಂತೆ ತನ್ನನ್ನು ಹುಲಿಗೆ ಅರ್ಪಿಸಿಕೊಳ್ಳಲು ಸಿದ್ಧವಾಗುತ್ತದೆ. ಕೊನೆಗೆ ಸತ್ಯಕ್ಕೇ ಜಯ ಎಂಬ ಕಥೆ ಎಂದಿಗೂ ಜೀವಂತ!
ಅದೇ ರೀತಿ ಹರಿಶ್ಚಂದ್ರ ಮಹಾರಾಜ, ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಕೊನೆಗೆ ಸತ್ಯಕ್ಕೆ ಜಯ ಎಂದು ದೇವತೆಗಳು ಪುಷ್ಪವೃಷ್ಟಿ ಮಾಡಿದ ಪುರಾಣದ ಕಥೆ ಅದೆಷ್ಟು ರೋಚಕ!
ಎಷ್ಟೇ ಕಷ್ಟವಾದರೂ ಸರಿ, ಸತ್ಯಮಾರ್ಗದಲ್ಲಿ ನಡೆಯಿರಿ ಎಂದು ನಮ್ಮ ಹಿರಿಯರು ನೀಡುವ ಸಂಸ್ಕಾರ ಭಾರತೀಯ ಸಂಸ್ಕೃತಿಯ ಹಿರಿಮೆ ಎಂದರೂ ತಪ್ಪಿಲ್ಲ. "ವಜ್ರ ಮಣ್ಣಲ್ಲಿ ಬಿದ್ದರೂ ಅದರ ಪ್ರಕಾಶಕ್ಕೆ ಏನೂ ಕೊರತೆಯಿಲ್ಲ" ಎಂಬಂತೆ ಸತ್ಯದ ಮೇಲೆ ಬಿದ್ದ ಸುಳ್ಳಿನ ಧೂಳು ತಾತ್ಕಾಲಿಕ ಎಂಬ ಮಾತನ್ನು ಅಲ್ಲಗಳೆಯಲಾಗದು.
ಮೇಲಿನ ದೋಹೆಯಲ್ಲಿ ಸಂತ ಕಬೀರರು, "ದೇವರು ಸದಾ ಸತ್ಯಪ್ರಿಯ. ನೀವು ಜಟೆ ಬೆಳೆಸಿದರೂ, ಕೇಶ ಮುಂಡನ ಮಾಡಿಕೊಂಡರೂ ನಿಮ್ಮಬಾಹ್ಯ ವೇಷಕ್ಕೆ ಆತ ಮಣಿಯಲಾರ. ದೇವರ ದರ್ಬಾರಿನಲ್ಲಿ ಸತ್ಯಕ್ಕೆ ಮಾತ್ರ ಬೆಲೆಯಿದೆ" ಎಂದು ಹೇಳಿದ್ದಾರೆ.
ಅನೇಕರು ವೇಷ, ಭೂಷಣ, ಮಾತಿನ ಚಾಕಚಕ್ಯತೆ ಮುಂತಾದವುಗಳಿಂದ ಸತ್ಯ ಬದಲಿಸಬಹುದು ಎಂಬ ಭ್ರಮೆಯಲ್ಲಿ ಇರುತ್ತಾರೆ. ಆದರೆ ದೇವರು ಸುಳ್ಳಿನಿಂದ ಬಲು ದೂರ. ಸತ್ಯವಂತರ ಹೃದಯದಲ್ಲಿ ದೇವರು ಸದಾ ನೆಲೆಸಿರುತ್ತಾನೆ. ಹಾಗಾಗಿ ದಾಸ ವರೇಣ್ಯರು "ಸತ್ಯವಂತರ ಸಂಗವಿರಲು ದೈವವ್ಯಾತಕೆ?" ಎಂದು ಮಾರ್ಮಿಕವಾಗಿ ಕೇಳಿದ್ದಾರೆ.
ಸತ್ಯಮಾರ್ಗದಿಂದ ಮಾತ್ರ ಭಗವಂತನ ಸಾಕ್ಷಾತ್ಕಾರ ಎಂಬುದು ಸೂರ್ಯಪ್ರಕಾಶದಷ್ಟೇ ಸತ್ಯ.
ಸತ್ಯ ವೆಂಬುದು ರತ್ನ, ಬೇರೆಲ್ಲ ಬರಿ ಧೂಳು
ಮಿಥ್ಯದ ಆರ್ಭಟಕೆ ಸದಾಚಾರ ಮಣಿಯದು/
ಸತ್ಯಮಾರ್ಗದಿ ನಡೆದರೆ ಮೆಚ್ಚುವ ಪರಮಾತ್ಮ
ಸತ್ಯವೇ ಶಿವ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ.
Comments