top of page

ಕಬೀರ ಕಂಡಂತೆ.. ೨೬

ಭವರೋಗಕೆ ಸಂಜೀವಿನಿಯದು ಭಕುತಿ..!


ಕ್ಯಾ ಭರೋಸಾ ದೇಹಕಾ, ಬಿನಸಿ ಜಾಯ ಛಿನ ಮಾಹಿ/

ಸಾಂಸ-ಸಾಂಸ ಸುಮಿರನ ಕರೊ, ಔರ ಯತನ

ಕುಛ ನಾಹಿ//

ಏನು ಭರವಸೆ ದೇಹದ್ದು, ನಷ್ಟವಾದೀತು ಕ್ಷಣದಲ್ಲಿ/

ಪ್ರತಿಯುಸಿರು ದೇವನ ಸ್ಮರಿಸಿ, ಬೇರೆ ಉಪಾಯ ವೆಲ್ಲಿ?//


ಪಂಚಭೂತಗಳಿಂದ ರಚಿತವಾದ ನಮ್ಮ ಶರೀರ, ಕೊನೆಗೊಮ್ಮೆ ಮಣ್ಣಿನಲ್ಲಿ ಮಣ್ಣಾಗಿ ಹೋಗುವದು ಚಿರಂತನ ಸತ್ಯ. ಹುಟ್ಟಿನಿಂದ ಮರಣದವರೆಗೂ ದೇಹಕ್ಕೆ ಎಲ್ಲಿಲ್ಲದ ಮಹತ್ವ ನೀಡುತ್ತ ಪ್ರಕೃತಿಯ ನಿಜ ತತ್ವವನ್ನು ಮರೆಯಬಾರದು ಎಂದು ಕಾಲಕಾಲಕ್ಕೆ ಅನೇಕ ದಾರ್ಶನಿಕರು ಉಪದೇಶಿಸುತ್ತ ಬಂದಿದ್ದಾರೆ. ಆದರೂ ಸಹ ಲೌಕಿಕ ತತ್ವಗಳಿಗೆ ಮಾರುಹೋಗಿ ನಶ್ವರ ದೇಹದ ಆಕರ್ಷಣೆ, ಆರಾಧನೆಯತ್ತ ಮನಸ್ಸನ್ನು ಹರಿಬಿಡುತ್ತೇವೆ. ನಾವು ಮಾಡುವ ಸತ್ಕರ್ಮ, ಕುಕರ್ಮಗಳು ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತ, ಅವುಗಳಿಗೆ ಅನುಸಾರವಾಗಿ ತಕ್ಕ ಪ್ರತಿಫಲ ನೀಡುತ್ತವೆ. ಹಾಗಾಗಿ ನೀರ ಮೇಲಣ ಗುಳ್ಳೆಯಂತಿಪ್ಪ ಬದುಕು ಮತ್ತು ಶರೀರದ ಮೇಲಿನ ಮೋಹ ಮಾಯೆಯನ್ನು ಕಿತ್ತೆಸೆದು ಶಾಶ್ವತ ಸತ್ಯದತ್ತ ಗಮನ ಹರಿಸುವದು ಅತ್ಯಗತ್ಯ.


ಈ ಹಿನ್ನೆಲೆಯಲ್ಲಿ ಸಂತ ಕಬೀರರು, ನಾವು ತೆಗೆದು ಕೊಳ್ಳುವ ಪ್ರತಿ ಉಸಿರಿನಲ್ಲಿ ಅಂದರೆ ಆಯುಷ್ಯದ ಪ್ರತಿ ಕ್ಷಣದಲ್ಲಿಯೂ ದೇವರನ್ನು ಸ್ಮರಿಸುತ್ತ ಜನ್ಮ ಸಾರ್ಥಕ ಮಾಡಿಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ. ಭಕ್ತಿಗೆ ಸೀಮೆ ಎಂಬುದಿಲ್ಲ. ಸೀಮಾತೀತ ಭಗವಂತ -ನನ್ನು ಆರಾಧಿಸಿ ಆತನ ಅನುಗ್ರಹ ಗಳಿಸಲು ಸೀಮಾತೀತ ಭಕ್ತಿ ಮುಖ್ಯವಾದದ್ದು. ಫಲಾಫಲದ ಅಪೇಕ್ಷೆಯಿಲ್ಲದೇ ಭಗವಂತನ ನಾಮಸ್ಮರಣೆ, ಆತನ ಆರಾಧನೆಯನ್ನೇ ಉಸಿರಾಗಿಸಿಕೊಳ್ಳುವದೇ ನಿಜ ಭಕ್ತಿ. ಈ ಹಿನ್ನೆಲೆಯಲ್ಲಿ, ಉರ್ದು ಕವಿಯೊಬ್ಬರು, "ಉಸಿರು ಉಸಿರಲ್ಲೂ ನಿನ್ನ ಪ್ರಾರ್ಥನೆಯೇ ತುಂಬಿರುವಾಗ ಮುಂಜಾನೆ, ಸಂಜೆಯಲ್ಲಿ ಮಾತ್ರ ನಿನ್ನನ್ನು ಒದರಿ ಕರೆಯುವದೇತಕ್ಕೆ!?" ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ದಿನದ ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ದೇವರ ಪ್ರಾರ್ಥನೆ ಮಾಡುವದರ ಬದಲು ಪ್ರತಿ ಕ್ಷಣ ಆತನ ನಾಮಸ್ಮರಣೆ ಜೀವನ್ಮುಕ್ತಿಗೆ ಸಾಧನವಾದೀತು.


ಇಂದು ಭಕ್ತಿ ಎನ್ನುವದು ವ್ಯಾಪಾರವಾದಂತಾಗಿದೆ. ನಾಲ್ಕಾಣೆ ದೇವರೆದುರು ಚೆಲ್ಲಿ, ಹರಕೆ ಬೇಡಿಕೊಂಡು ಇದಕ್ಕೆ ಪ್ರತಿಯಾಗಿ ತಮ್ಮ ಬೇಡಿಕೆ ಮುಂದಿಡುತ್ತಾರೆ! ಇಂಥ ಕರಾರುಬದ್ಧ ವ್ಯಾಪಾರ ಭಕ್ತಿಯಾಗಲು ಸಾಧ್ಯವೆ? ಶಾಶ್ವತ ಸತ್ಯವನ್ನು ನಂಬಿ ನೈಜ ಭಕ್ತಿ ಯಿಂದ ಸಲ್ಲಿಸುತ್ತ ಸಾಯುಜ್ಯವನ್ನು ಪಡೆಯುವದೇ ನಮ್ಮ ಗುರಿಯಾಗಬೇಕು.

ಇನ್ನೊಂದು ದೋಹೆಯಲ್ಲಿ ಕಬೀರರು,

"ಮಾನವ ಜನ್ಮ ದುರ್ಲಭ ಕಬೀರ, ಈ ದೇಹ ದೊರಕದು ಮತ್ತೆ ಮತ್ತೆ/

ಉದುರಿ ಬಿದ್ದ ಎಲೆ ಮರಳಿ ಕೂಡುವವೆ ರೆಂಬೆಗೆ

ಮತ್ತೆ ಮತ್ತೆ?"// ಎಂದು ಪ್ರಶ್ನಿಸಿದ್ದಾರೆ.

ಶುದ್ಧ ಭಕ್ತಿ ಭಾವದಿಂದ ಭಗವಂತನನ್ನು ಅರ್ಚಿಸಿದರೆ ಉತ್ತಮ ಫಲ ಕಟ್ಟಿಟ್ಟ ಬುತ್ತಿ ಎಂಬ ಅನುಭವದ ನುಡಿಗಳು ನಮಗೆ ದಾರಿದೀಪವಾಗಬೇಕು.


ಎಂಜಲದ ಹಣ್ಣಿಗೆ ರಾಮನೊಲಿದ ಶಬರಿಗೆ

ಪ್ರಾಂಜಲದ ಕರೆಗೆ ಕೃಷ್ಣನಾಸರೆ ದ್ರೌಪದಿಗೆ ‌/

ನೈಜ ಶೃದ್ಧೆಗೆ ದೈವಾನುಗ್ರಹ ಕನಕದಾಸನಿಗೆ

ಸಂಜೀವಿನಿಯದು ಭಕುತಿ - ಶ್ರೀವೆಂಕಟ //


- ಶ್ರೀರಂಗ ಕಟ್ಟಿ ಯಲ್ಲಾಪುರ.

9 views0 comments

Commentaires


bottom of page