ಮುಳ್ಳು ಬಿತ್ತಿದವರ ಅಂಗಳದಲಿ ಹೂ ಬೆಳೆಸು..!!
ಜೋ ತೋಕು ಕಾಟಾ ಬುವೆ, ತಾಕೊ ಬೊತೋ ಫೂಲ/
ತೋಹಿ ಫುಲ ಕೆ ಫೂಲ ಹೈ, ಬಾಕೊ ಹೈ ತ್ರಿಶೂಲ್//
ನಿನಗಾಗಿ ಮುಳ್ಳು ಬಿತ್ತಿದವರ ಮನೆಯಲ್ಲಿ ಬೆಳೆಸು ಹೂವು/
ನಿನಗಾಗಿ ಅರಳುವದು ಹೂವು, ಅವನಿಗದೇ ತಿಶೂಲದ ನೋವು//
"ಬಿತ್ತಿದ್ದನ್ನು ಬೆಳೆದುಕೊ" ಎಂಬ ಗಾದೆ ನಾವು ಮಾಡುವ ಕರ್ಮಗಳ ಬಗ್ಗೆ ಎಚ್ಚರಿಕೆ ನೀಡುತ್ತದೆ. ಒಳ್ಳೆಯ ವಿಚಾರ, ಸತ್ಕರ್ಮಗಳು ಒಳ್ಳೆಯ ಪರಿಣಾಮವನ್ನೇ ಸೃಷ್ಟಿಸಿದರೆ, ಕೆಟ್ಟ ವಿಚಾರ, ಕುಕರ್ಮಗಳು ಹಿಂದಿರುಗಿ ನಮ್ಮನ್ನೇ ಹಿಂಸಿಸುವದರಲ್ಲಿ ಎರಡು ಮಾತಿಲ್ಲ. ಭಾರತೀಯ ಸಂಸ್ಕ್ರತಿಯಲ್ಲಿ, ಜನ್ಮಾಂತರ ಕರ್ಮದ ಛಾಯೆಯ ಉಲ್ಲೇಖವಿದ್ದು, ಈ ಜನ್ಮದಲ್ಲಿ ಮಾಡಿದ ಕರ್ಮ, ಮುಂದಿನ ಜನ್ಮಗಳಲ್ಲಿಯೂ ಪರಿಣಾಮ ಬೀರುತ್ತದೆ ಎಂಬ ಮಾತುಗಳನ್ನು ಪ್ರಾಜ್ಞರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಇತರರು ನಿನಗೆ ಕೆಟ್ಟದ್ದನ್ನು ಮಾಡಿದರೂ ನೀನು ಮಾತ್ರ ಸದಾಶಯಗಳನ್ನು ಮರೆಯದಿರು ಎಂಬ ಮಾತನ್ನು ಸಾಧು, ಸಂತರು ಬೋಧಿಸುತ್ತಲೇ ಬಂದಿದ್ದಾರೆ. "ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು" ಎಂದು ಪುರಂದರ ದಾಸರು ಹಾಡಿದರೆ, ಸಂತ ಕಬೀರರು, "ನಿನಗೆ ಮುಳ್ಳು ಕೊಟ್ಟವರಿಗೆ ಹೂವನ್ನು ಕೊಡು, ನಿನ್ನ ಪಾಲಿಗೆ ಹೂವೇ ಅರಳುವದಲ್ಲದೇ ಮುಳ್ಳು ನೀಡಿದವಗೆ ಅದೇ ತ್ರಿಶೂಲದಂತೆ ಚುಚ್ಚೀತು!" ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದ್ದಾರೆ.
ಹೂವಿನ ಪರಿಣಾಮ ಹೂವಿನಂತೆ ಕೋಮಲ ವಾದರೆ, ಮುಳ್ಳಿನ ಪರಿಣಾಮ ತ್ರಿಶೂಲದಂತೆ ಕಠಿಣ. ಹಾಗಾಗಿ ನಾವೆಲ್ಲ ಸಮಾಜಕ್ಕೆ ಒಳ್ಳೆಯದು ಮಾಡುವ ಪಣ ತೊಡಬೇಕಿದೆ. ಪ್ರೀತಿ-ದ್ವೇಷಗಳು boomerang ಆಗಿ ತಿರುಗಿ ನಮಗೆ ಪ್ರತಿಫಲ ನೀಡುತ್ತವೆ. ನಾವು ಏನನ್ನು ಇತರರಿಗೆ ಕೊಡುತ್ತೇವೆಯೋ ಅವೇ ನಮ್ಮತ್ತ ಮರಳಿ ಬರುವದರಲ್ಲಿ ಸಂದೇಹವೇ ಇಲ್ಲ! ಧೂಳು, ಬೂದಿ ಅನ್ಯರಿಗೆ ಎರಚಿದರೆ ಗಾಳಿಯಲ್ಲಿ ಅವು ಮರಳಿ ಎರಚಿದವನ ಮುಖಕ್ಕೇ ರಾಚುತ್ತವೆ ! ಅನ್ಯರೆದುರು ನಾವಾಡುವ ಕಟು ನುಡಿಗಳು ಬಡ್ಡಿ ಸಮೇತ ನಮ್ಮ ಬಳಿ ತಿರುಗಿ ಬರಲಾರವೆ..?
ನುಡಿಯಲೆಚ್ಚರವಿರಲಿ, ನಡೆಯಲೆಚ್ಚರವಿರಲಿ
ನಡೆ - ನುಡಿಗಳೆರಡರಲೂ ಸಾಂಗತ್ಯ ವಿರಲಿ /
ನುಡಿ ಮಧುವ ಹಂಚಿದರೆ ಜಗವೆಲ್ಲ ಮಧುರ
ನುಡಿ ಕೀಟ ಕಾಡದಿರಲಿ - ಶ್ರೀವೆಂಕಟ //
ನಮ್ಮ ನಡೆ, ನುಡಿಗಳಲ್ಲಿ ಸಂಯಮವಿದ್ದಾಗ, ನುಡಿ ಜೇನು ಜಗತ್ತನ್ನೇ ಮಧುರವಾಗಿಸೀತು. ಇಲ್ಲದಿರೆ ನುಡಿಕೀಟ ಕಚ್ಚುವದರಲ್ಲಿ ಸಂದೇಹವೇ ಇಲ್ಲ. ದ್ವೇಷ ಅಸೂಯೆ, ದುಃಖಗಳ ಮುಳ್ಳನ್ನು ಚುಚ್ಚಿ ನಮ್ಮನ್ನು ಗಾಸಿಗೊಳಿಸುವವರ ಮನ-ಮನೆಗಳಲ್ಲಿ ಹೂವನ್ನು ಬಿತ್ತಿ. ನಿಮಗೆ ಖಂಡಿತ ಒಳ್ಳೆಯದಾದೀತು ಎಂದು ಕಬೀರರು ಹೇಳಿದ್ದಾರೆ.
ಬೇವಿನ ಬೀಜ ಬಿತ್ತಿದರೆ ನಮಗೆ ಮಾವಿನ ಫಲ ದೊರೆತೀತೆ? ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. "ನಮ್ಮೆದೆಯ ಅಮೃತಬಳ್ಳಿ ಎಂದಿಗೂ ವಿಷ ಕಕ್ಕದಿರಲಿ..!! ಎಂಬ ಸದಾಶಯ ಸದಾ ನಮ್ಮದಾಗಿರಲಿ.
ಶ್ರೀರಂಗ ಕಟ್ಟಿ ಯಲ್ಲಾಪುರ.
Comments