" ಹಿರಿಯನೋ ಗುರು, ಗೋವಿಂದನ ತೋರ್ಪನು"
ಗುರು- ಗೋವಿಂದ ದೋನೋ ಖಡೆ, ಕಾಕೆ ಲಾಗೂ ಪಾಯ/
ಬಲಹಾರಿ ಗುರು ಅಪನೊ, ಗೋವಿಂದ ದಿಯೋ ಬತಾಯ//
ನಮ್ಮನ್ನು ಭವಸಾಗರ ದಾಟಿಸುವ ಸರ್ವಶಕ್ತ ಭಗವಂತ ಮತ್ತು ಬದುಕಿನ ದಾರಿಯಲ್ಲಿ ಯೋಗ್ಯ ಸಂಸ್ಕಾರಗಳನ್ನು ನೀಡಿ ಮುನ್ನಡೆಸುವ ಗುರು, ಇವರಿಬ್ಬರಲ್ಲಿ ಯಾರಿಗೆ ಪ್ರಥಮ ವಂದನೆ? ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. 'ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು..' ಎಂಬ ಉಕ್ತಿ ಮನುಷ್ಯನ ಆದಿಗುರು ಆತನ ತಾಯಿ ಎಂದು ಹೇಳುತ್ತದೆ. ಬದುಕಿನಲ್ಲಿ ಕಾಲಕಾಲಕ್ಕೆ ನಮಗೆ ಸೂಕ್ತ ಮಾರ್ಗದರ್ಶನ ನೀಡುವ ತಂದೆ, ತಾಯಿ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಹಿರಿದು. ಆದರೆ ಸರ್ವಜ್ಞ ಕವಿಯ ಪ್ರಕಾರ ತಂದೆಗೂ ಗುರುವಿಗೂ ಅಂತರವುಂಟು. ತಂದೆ ತೋರುವನು ಸದ್ಗುರುವ, ಗುರುರಾಯ ಬಂಧನವ ಕಳೆವ ಸರ್ವಜ್ಞ ಎಂದಿದ್ದಾನೆ. ವಿದ್ಯಾದಾನ ಮತ್ತು ಮಾರ್ಗದರ್ಶನ ಗಳಿಂದ ಗುರು, ಭವ ಬಂಧನ ಕಳೆದು ನಮ್ಮ ಆತ್ಮೋನ್ನತಿಗೆ ಕಾರಣವಾಗುತ್ತಾನೆ ಎಂಬುದು ಸರ್ವಜ್ಞನ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ, ಸಮಸ್ತ ಜೀವರಾಶಿಗಳನ್ನು ನಿಯಂತ್ರಿಸುವ ದೇವಾನುದೇವತೆಗಳಿಗೂ ಸಹ ಗುರುವಿನ ಅಗತ್ಯವಿದೆ ಎಂಬ ಮಾತನ್ನು ನಮ್ಮ ಭಾರತೀಯ ಸಂಸ್ಕೃತಿ ಪುಷ್ಠೀಕರಿಸುತ್ತದೆ. " ಹರ ಮುನಿದರೆ ಗುರು ಕಾಯ್ವ" ಎಂಬ ನಾಣ್ನುಡಿಯಂತೆ ಒಂದು ವೇಳೆ ಭಗವಂತ ನಮ್ಮ ನೆರವಿಗೆ ಬರದಿದ್ದರೆ, ಸಮಸ್ಯೆ ಪರಿಹಾರಕ್ಕೆ ಗುರು ಎಂಬ ಶಕ್ತಿ ನಮ್ಮನ್ನು ಕಾಯುತ್ತದೆ. ಆದರೆ ಯಾವ ಗುರುವಿಗೆ ನಾವು ಶರಣು ಎನ್ನಬೇಕು? ಎಂಬ ಪ್ರಶ್ನೆ ಕಾಡುವದು ಸಹಜ. ತನ್ನ ಜ್ಞಾನವೆಂಬ ಬೆಳಕಿನ ಚಕ್ಷುವಿನಿಂದ ಶಿಷ್ಯರ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುವದರ ಜೊತೆಗೆ ಪರಮಾತ್ಮನಸಾಕ್ಷಾತ್ಕಾರ ಮಾಡಿಸುವ ಅಧ್ಯಾತ್ಮಿಕ ಗುರು ಸರ್ವಶ್ರೇಷ್ಠ ನಾಗಿದ್ದು ನಮ್ಮ ಜೀವನದಲ್ಲಿ ಇಂಥ ಗುರುವಿಗೆ ಮಹತ್ವದ ಸ್ಥಾನವಿದೆ ಎನ್ನುವದರಲ್ಲಿ ಯಾವದೇ ಸಂಶಯವಿಲ್ಲ.
" ಗುರುವೂ ಗೋವಿಂದನೂ ನಿಂತಿಹರು ಮುಂದೆ;
ಯಾರಿಗೆ ಮೊದಲ ಪ್ರಣಾಮ?
ಗುರುವಿನ ಕಾಲಿಗೆರಗುವೆ! ಅವನಲ್ಲವೆ ತೋರಿದ್ದು ಗೋವಿಂದನ ಧಾಮ!!" ಎಂಬ ಸಂತ ಕಬೀರನ ಉಕ್ತಿ ನಮ್ಮ ಎಲ್ಲ ಸಂಶಯಗಳಿಗೂ ಸ್ಪಷ್ಟ ಉತ್ತರ ನೀಡುತ್ತದೆ. ಜಗತ್ತಿನಲ್ಲಿ ಒಳ್ಳೆಯದು- ಕೆಟ್ಟದ್ದು, ಸರಿ-ತಪ್ಪುಗಳ ಬಗ್ಗೆ ನಿರ್ಣಯಿಸಲು ಬೇಕಾದ ಅಗತ್ಯ ವಿವೇಚನಾ ಶಕ್ತಿಯನ್ನು ನೀಡುವ ಗುರು ನಿಜವಾದ ಜೀವನದರ್ಶನ ಮಾಡಿಸುತ್ತಾನೆ. ಭವದ ಕಷ್ಟಗಳನ್ನು ನೀಗಿಸುವ ಪರಿಯನ್ನು ವಿವರಿಸುತ್ತ ನಮ್ಮಲ್ಲಿ ಸಂಕಲ್ಪದ ಅಗ್ನಿಯನ್ನು ಜಾಗೃತಗೊಳಿಸುತ್ತ ಕೈಹಿಡಿದು ಮುಕ್ತಿಮಾರ್ಗಕ್ಕೆ ಕೊಂಡೊಯ್ಯುವ ಗುರು ಖಂಡಿತವಾಗಿಯೂ ನಮ್ಮ ಪಾಲಿನ ದೇವರು ಎಂದರೆ ತಪ್ಪಲ್ಲ. ದಾಸ ವರೇಣ್ಯರಾದ ಪುರಂದರ ದಾಸರು, " ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಹಾಡಿ ಗುರುವಿನ ಮಹತಿಯನ್ನು ಕೊಂಡಾಡಿದ್ದಾರೆ. ಸಂತ ಕಬೀರನ ಪ್ರಕಾರ,ತನ್ನ ಅನುಭವ ಮತ್ತು ಬೌದ್ಧಿಕ ಸಂಪತ್ತನ್ನು ಧಾರೆ ಎರೆಯುವದರ ಮೂಲಕ ಶಿಷ್ಯನಿಗೆ ಭಗವಂತನ ಧಾಮದತ್ತ ಕೊಂಡೊಯ್ಯುವ ಗುರು ಪ್ರಥಮ ವಂದನೀಯ.
ಗುರು- ಗೋವಿಂದರೀರ್ವರೂ ಎದುರಿಗಿರುವಾಗ
ಯಾರಿಗೆ ಅಗ್ರಪೂಜೆಯೆಂಬ ದ್ವಂದ್ವವೇತಕೆ!?/
ಹಿರಿಯನೋ ಗುರು, ಗೋವಿಂದನ ತೋರ್ಪನು
ಗುರುವಿಂಗೆ ತಲೆಬಾಗು - ಶ್ರೀವೆಂಕಟ //
Comments