top of page

ಕಬೀರ ಕಂಡಂತೆ..

ಮೃದು ವಚನವದು ಶೀತಲ ಧಾರೆಯಂತೆ..!


ಕುಟಿಲ ವಚನ ಸಬಸೆ ಬುರಾ, ಜಾರಿ ಕರೆ ತನ ಝಾರ/

ಸಾಧು ವಚನ ಜಲರೂಪ, ಬರಸೇ ಅಮೃತಧಾರ//


ಕುಟಿಲ ಮಾತು ಬಲು ಕಠಿಣ, ಗಾಸಿಗೊಳಿಸುವದು ತನು- ಮನವನ್ನು /

ಮೃದು ವಚನ ಶೀತಲ ಜಲ, ಸುರಿಸುವದು ಅಮೃತ ಧಾರೆಯನ್ನು //


" ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು", "ನುಡಿದರೆ ಮುತ್ತಿನ ಹಾರದಂತಿರಬೇಕು" ಮುಂತಾದ ಅನೇಕ ನುಡಿಗಟ್ಟುಗಳು ಮಾತಿನ ಮಹತ್ವವನ್ನು ಸಾರುತ್ತವೆ. ಕೆಲವರು ಅನಗತ್ಯವಾಗಿ ಚುಚ್ಚು ಮಾತು -ಗಳನ್ನಾಡಿ ಇತರರ ಮನಸ್ಸನ್ನು ಗಾಸಿಗೊಳಿಸುತ್ತ ವಿಕೃತ ಆನಂದ ಪಡುತ್ತಾರೆ. ತಾನು ಮಾತ್ರ ಶ್ರೇಷ್ಠ ಎಂಬ ಅಹಮಿಕೆ ಯಿಂದ ಇತರರನ್ನು ನಿಕೃಷ್ಟವಾಗಿ ಕಾಣುವ ಮನೋಭಾವವನ್ನು ಕೆಲವರು ಹೊಂದಿರುತ್ತಾರೆ. ಬದುಕಿನಲ್ಲಿ ತಾನು ಗೆದ್ದವ, ಅಧಿಕಾರದ ಸಿಂಹಾಸನ ಏರಿದವ ಎಂಬ ಭ್ರಮೆಯಲ್ಲಿ ಕೆಟ್ಟ ಮಾತುಗಳಿಂದ ತಮ್ಮ ಹೆಗ್ಗಳಿಕೆ ತೋರಿಸುವ ಜನರಿದ್ದಾರೆ. ಆದರೆ ಇತರರನ್ನು ತಮ್ಮ ಮಾತುಗಳಿಂದ ಇತರರ ತೇಜೋವಧೆ ಮಾಡುವ ಜನರ ವ್ಯಕ್ತಿತ್ವವನ್ನು ಸಮಾಜ ಅಳೆದು ನೋಡದೇ ಇರುವದೆ?


ಮನುಷ್ಯರ ಇಂಥ ನಕಾರಾತ್ಮಕ ಪ್ರವೃತ್ತಿಯನ್ನು ಖಂಡಿಸುವ ಕಬೀರರು, ಒಳ್ಳೆಯ ಮಾತುಗಳ ಸಕಾರಾತ್ಮಕ ಪರಿಣಾಮವನ್ನು ಬಿಡಿಸಿಡುತ್ತಾರೆ. "ಕುಟಿಲ, ಕಠೋರ ಮಾತುಗಳು ಇತರರನ್ನು ಗಾಸಿಗೊಳಿಸುತ್ತವೆ, ರಕ್ತದ ಧಾರೆಯನ್ನೇ ಹರಿಸುತ್ತವೆ, ಈರ್ಷೆಯ ಬೆಂಕಿ ಹೊತ್ತುರಿಯುತ್ತದೆ. ಈ ಕಾರಣ -ದಿಂದ ಇಂಥ ಶಬ್ದ ಪ್ರಯೋಗ ಮಾಡುವದರ ಬದಲು ಮೃದು ವಚನದಿಂದ ಶೀತಲ ಅಮೃತ ಧಾರೆ ಹರಿಸಿ" ಎಂದು ಕರೆ ನೀಡಿದ್ದಾರೆ‌


ಕಠಿಣ ಮಾತುಗಳು ಹರಿತ ಖಡ್ಗದ ಅಲಗಿನಂತೆ ಎದುರಾಳಿಯ ಮೈ-ಮನಗಳನ್ನು ಗಾಸಿಗೊಳಿಸಿದರೆ, ಮೃದು, ಮಧುರ ಮಾತುಗಳು ಗಾಸಿಗೊಂಡ ಮನಸ್ಸಿಗೆ ಸಾಂತ್ವನ ಹೇಳುತ್ತವೆ! ಮೃದು ವಾಣಿ ಯಿಂದ ನಾಲಿಗೆ ನಾಗಮಣಿಯಂತಾದೀತು, ಕೆಡಕು ಮಾತುಗಳಿಂದ ನಾಲಿಗೆ ಹರಿದ ಚಪ್ಪಲಿ ಎನಿಸೀತು!

"ನಾಲಿಗೆ ಕುಲವ ಹೇಳಿತು" ಎನ್ನುವಂತೆ ನಾವಾಡುವ ಮಾತುಗಳೇ ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ.

ಹಿಂದು, ಮುಂದಿನ ವಿಚಾರವಿಲ್ಲದೇ ಮಾತನಾಡುವ ಚಟದಿಂದಾಗಿ ರಾಧ್ಧಾಂತವೇ ನಡೆದುಹೋದೀತು. ಮಹಾಭಾರತದಲ್ಲಿ ದುರ್ಯೋಧನನ ಕುರಿತಾಗಿ ದ್ರೌಪದಿ ಆಡಿದ ಹೀಯಾಳಿಕೆಯ ಮಾತುಗಳು ಕುರುಕ್ಷೇತ್ರ ಯುದ್ಧಕ್ಕೆ ಕಾರಣಯಾಯಿತು ಎಂಬ ಸತ್ಯವನ್ನು ಮರೆಯುವಂತಿಲ್ಲ! ದ್ವೇಷ, ತಿರಸ್ಕಾರ ಹುಟ್ಟಿಸುವ ಮಾತುಗಳಿಗಿಂತ ನೊಂದ ಮನದ ಗಾಯಕ್ಕೆ ಮುಲಾಮು ಹಚ್ಚುವ ಮಾತುಗಳು ನಮ್ಮ ವ್ಯಕ್ತಿತ್ವವನ್ನು ಎತ್ತರಕ್ಕೇರಿಸುವದರಲ್ಲಿ ಸಂದೇಹವಿಲ್ಲ.


ನೇರ ನಡೆ-ನುಡಿ ನೆರವಾದೀತು ಬದುಕಿಗೆ

ನೇರ ದಾರಿ ಹಿಡಿದೊಡೆ ಪಯಣ ಸುಲಭ /

ಕಪಟವಿಲ್ಲದ ಗುಣ, ಗೌರವ ತಂದೀತು

ಕಂಪು ಹರಡೀತು ಬಾಳಿಗೆ - ಶ್ರೀವೆಂಕಟ //


ಶ್ರೀರಂಗ ಕಟ್ಟಿ ಯಲ್ಲಾಪುರ

14 views0 comments

Comments


bottom of page