ಸುಗಮ ಜೀವನ ಕಾದು
ಚಡಪಡಿಸುತಿಹುದು ಜಗ
ಅಂಟು ವ್ಯಾಧಿಯ ಸುತ್ತ
ಭಯದ ಕಡಿವಾಣ.
ಮುಷ್ಟಿಯೊಳಗೆ ಜೀವ
ಅನುಮಾನ ಕೆಮ್ಮು ಜ್ವರ
ಬೆರೆಯದಾತಂಕ
ಅಂತರ ನಿರಂತರ.
ಧುತ್ತೆಂದು ಬಂದಿಳಿವ
ಹೊಸ ಹೊಸ ಅವತಾರ
ದಿನ ಕಳೆದರೂ ಮತ್ತೆ
ದಿನವೂ ಮರು ಚಿಂತೆ.
ಹಸೆಮಣೆಗೆ ವರ ಬಂದು
ಚಿತೆಯೇರಿ ಮಸಣಕ್ಕೆ!
ಬಿಡಲಿಲ್ಲ ನೀ ಕ್ರೂರಿ
ಹಸುಳೆ, ಹೆತ್ತವರ ಕೂಡ!
ಸಾಲು ಸಾಲಲಿ ಸಾವು
ದುಃಖ ದುಗುಡ ನೋವು
ಎಂದೋ ಬಿಡುಗಡೆ
ಕಬಂಧ ಬಾಹು?
✍ಹೊನ್ನಮ್ಮ ನಾಯಕ, ಅಂಕೋಲಾ.
ನಿವೃತ್ತ ಉಪನ್ಯಾಸಕಿ
Comments