top of page

ಕನ್ನಡಾಭಿಮಾನದ ಜಾಗೃತಿಗಾಗಿ ದುಡಿದ ಎಂ. ರಾಮಮೂರ್ತಿ

ಇಂದು ಕರ್ನಾಟಕದಾದ್ಯಂತ ಕನ್ನಡಾಭಿಮಾನಿಗಳ ಕೈಯಲ್ಲಿ ಕೆಂಪು ಹಳದಿ ಬಣ್ಣದ ಕನ್ನಡ ಧ್ವಜ ಹಾರಾಡುತ್ತಿರುತ್ತದೆ. ಆದರೆ ಆ ಧ್ವಜವನ್ನು ರೂಪಿಸಿದ ವ್ಯಕ್ತಿ ಯಾರೆಂದೇ ಹೆಚ್ಚಿನವರಿಗೆ ಗೊತ್ತಿಲ್ಲ. ಅಥವಾ ಗೊತ್ತಿದ್ದರೂ ಮರೆತಿದ್ದಾರೆ.

೧೯೫೦-೬೦ ರ ದಶಕ. ನಮ್ಮ ರಾಜಧಾನಿ ಬೆಂಗಳೂರಲ್ಲೇ ಕನ್ನಡ ಅನಾಥವಾಗಿಬಿಟ್ಟಿತ್ತು. ಪರಭಾಷೆಯ ಹಾವಳಿ ಜೋರಾಗಿತ್ತು. ಕನ್ನಡೇತರ ಸಿನಿಮಾಗಳ ಪ್ರದರ್ಶನ, ಕನ್ನಡೇತರ ಕಲಾವಿದರಿಗೆ ಮನ್ನಣೆ , ಕನ್ನಡದ ಕುರಿತಾಗಿಯೇ ತಾತ್ಸಾರ ಭಾವನೆ ಕನ್ನಡ ನೆಲದಲ್ಲೇ ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಾಗಿ ಬಾಳುವಂತಹ ಪರಿಸ್ಥಿತಿ.

ಇದನ್ನೆಲ್ಲ ನೋಡುತ್ತಲಿದ್ದ ಕೆಲವು ಕನ್ನಡ ಯುವಕರ‌ ಮೈ ಬಿಸಿಯೇರುತ್ತಿತ್ತು. ಅಸಮಾಧಾನದಿಂದ ಮನಸ್ಸು ಕುದಿಯುತ್ತಿತ್ತು. ಹೌದು, ಇದಕ್ಕೆ ಏನಾದರೂ ಮಾಡಲೇಬೇಕು. ನಮ್ಮ ಕನ್ನಡ ಜನರಲ್ಲಿ ತಮ್ಮ ನಾಡುನುಡಿ ನೆಲಜಲಗಳ ಪ್ರೇಮ, ಅಭಿಮಾನ ಜಾಗೃತಗೊಳ್ಳುವಂತಾಗಬೇಕು ಎಂದು ಅಂದುಕೊಂಡ ಆ ಯುವಕರಲ್ಲಿ ಎಂ. ರಾಮಮೂರ್ತಿ ಎನ್ನುವವರು ಕಾದಂಬರಿಕಾರ ಅ. ನ. ಕೃಷ್ಣರಾಯರೊಡನೆ ಸಮಾಲೋಚಿಸುತ್ತಾರೆ. ಅಷ್ಟೇ ಅಲ್ಲ, ೧೯೬೨ ರಲ್ಲಿ ಅನಕೃ ಅಧ್ಯಕ್ಷರಾದ ಕರ್ನಾಟಕ ಸಂಯುಕ್ತ ರಂಗ ಎಂಬ ಕನ್ನಡ ವೇದಿಕೆ ರೂಪುಗೊಳ್ಳುತ್ತದೆ. ಎಂ. ರಾಮಮೂರ್ತಿಯವರೇ ಅದರ ಕಾರ್ಯದರ್ಶಿಗಳು. ಇಬ್ಬರೂ ಸೇರಿ ಸಮಾನ ವಿಚಾರ ಧಾರೆಯ ಇತರ ಕೆಲವರೊಡನೆ ಕನ್ನಡದ ಕೆಲಸಕ್ಕಾಗಿ ಬೀದಿಗಿಳಿಯುತ್ತಾರೆ. ಕನ್ನಡೇತರರ ಪ್ರಾಬಲ್ಯ ಕಡಿಮೆ ಮಾಡಲು ಪ್ರತಿಭಟನೆಗೆ ತೊಡಗುತ್ತಾರೆ. ರಾಮೋತ್ಸವಗಳಂತಹ ಸಂದರ್ಭದಲ್ಲಿ ಪರರಾಜ್ಯದವರನ್ನೇ ಹಾಡಲು ಕರೆಸುವದರ ವಿರುದ್ಧ ದನಿಯೆತ್ತುತ್ತಾರೆ. ಒಮ್ಮೆ ಖ್ಯಾತ ಗಾಯಕಿ ಸುಬ್ಬುಲಕ್ಷ್ಮಿಯವರ ಹಾಡುಗಾರಿಕೆ ಇಡಲಾಗಿತ್ತು. ಆಗ ಸ್ವತಃ ಅನಕೃ ಅವರು ಅಲ್ಲಿ ಪ್ರತಿಭಟನೆ ನಡೆಸುತ್ತಾರಷ್ಟೇ ಅಲ್ಲ , ಆ ಗಾಯಕಿಯ ಬಗ್ಗೆ ಅಪಾರ ಗೌರವವಿದ್ದ ಅನಕೃ ಅವರ ಬಳಿ ಹೋಗಿ ತಮ್ಮ ಪ್ರತಿಭಟನೆಯ ಉದ್ದೇಶವನ್ನು ಅವರಿಗೆ ತಿಳಿಸಿ ಹೇಳಿದಾಗ ಆ ಮಹಾನ್ ಗಾಯಕಿ ಸಿಟ್ಟಾಗದೇ ಅವರ ವಿಚಾರಕ್ಕೆ ಒಪ್ಪಿಗೆ ಸೂಚಿಸಿ ತಮ್ಮ ಕಾರ್ಯಕ್ರಮ ರದ್ದುಪಡಿಸುತ್ತಾರೆ.

ಬೆಂಗಳೂರಿನ ಕೆಲ ಪ್ರಮುಖ ಸಿನಿಮಾ ಮಂದಿರಗಳು ಸದಾಕಾಲ ತಮಿಳು ತೆಲುಗು ಹಿಂದಿ ಮೊದಲಾದ ಬೇರೆ ಭಾಷೆಗಳ ಸಿನಿಮಾಗಳನ್ನೇ ಪ್ರದರ್ಶಿಸುತ್ತಿದ್ದರು. ಆಗ ಈ ಕನ್ನಡ ವೇದಿಕೆ ಮಂದಿರಗಳೆದುರು ಪ್ರತಿಭಟನೆ ಕೈಕೊಂಡು ಕನ್ನಡ ಸಿನಿಮಾಗಳೂ ಪ್ರದರ್ಶನಗೊಳ್ಳುವಂತೆ ಮಾಡುತ್ತದೆ.

ತಮ್ಮ ಚಟುವಟಿಕೆಗಳಿಗೆ ಪೂರಕವಾಗಿ ರಾಮಮೂರ್ತಿಯವರು " ಕನ್ನಡ ಯುವಜನ" ಎಂಬ ಪತ್ರಿಕೆಯನ್ನೂ ಪ್ರಾರಂಭಿಸುತ್ತಾರೆ. ಕನ್ನಡ ರಾಜ್ಯೋತ್ಸವಗಳ ಆಚರಣೆಗೆ ಪ್ರೇರಣೆ ಒದಗಿಸಿ ಮೊದಲು ಬೆಂಗಳೂರಲ್ಲಿ ರಾಜ್ಯೋತ್ಸವ ಆಚರಿಸಿದ್ದು ಅನಕೃ ಮತ್ತು ರಾಮಮೂರ್ತಿಯವರೇ.

ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಲು ರಾಮಮೂರ್ತಿಯವರು ಹಳದಿ ಕೆಂಪು ಬಣ್ಣದ ಕನ್ನಡ ಧ್ವಜವನ್ನು ರೂಪಿಸುತ್ತಾರೆ. ಸಂಗಡ ೧೯೬೬ ರಲ್ಲಿ ಕನ್ನಡ ಪಕ್ಷ ಸ್ಥಾಪಿಸುತ್ತಾರೆ. ಚುನಾವಣೆಗಳಲ್ಲೂ ಸ್ಪರ್ಧಿಸುತ್ತಾರೆ. ಆದರೆ ಗೆಲುವು ಸಿಗುವದಿಲ್ಲ.

‌ ಹೀಗೆ ಹಲವು ಬಗೆಯಲ್ಲಿ ಕನ್ನಡದ ಅಭಿಮಾನ ಜಾಗೃತಗೊಳಿಸಿ ಕನ್ನಡದ ಪ್ರೀತಿ ಬೆಳೆಸಲು ಪ್ರಯತ್ನಿಸಿದ ಮೊದಲಿಗರು ಇವರೇ ಆಗಿದ್ದಾರೆ. ( ಬಹಳ ಹಿಂದೆ ಶಾಂತಕವಿಗಳು ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಾಬಲ್ಯದ ವಿರುದ್ಧ ಹೋರಾಡಿದ್ದನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ).

ಹಾಗಿದ್ದರೆ ಈ ರಾಮಮೂರ್ತಿ ಯಾರು? ಎಲ್ಲಿ ಯವರು? ಅದನ್ನೂ ತಿಳಿದುಕೊಳ್ಳಬೇಕಾಗಿದೆ.

*

ಅಂದಿನ ಹೆಸರಾಂತ ಕಾದಂಬರಿಕಾರರೂ, ಪತ್ರಕರ್ತರೂ ಆಗಿದ್ದ ವೀರಕೇಸರಿ ಸೀತಾರಾಮ ಶಾಸ್ತ್ರಿಯವರ ಮಗನೇ ಈ ರಾಮಮೂರ್ತಿ. ೧೯೧೮ ರ ಮಾರ್ಚ ೧೧ ರಂದು ನಂಜನಗೂಡಿನಲ್ಲಿ ಜನಿಸಿದ ರಾಮಮೂರ್ತಿಯವರು ತಮ್ಮ ತಂದೆಯ ಪ್ರಭಾವಕ್ಕೊಳಗಾಗಿ ತಾವೂ ಪತ್ರಕರ್ತರಾದರು, ಬರೆಹಗಾರರಾದರು. ಕನ್ನಡಿಗರಲ್ಲಿ ಓದುವ ಅಭಿರುಚಿ ಹುಟ್ಟಿಸಲೋಸುಗ ಸುಲಭ ಶೈಲಿಯ ಮನೋರಂಜನಾತ್ಮಕ ಪತ್ತೇದಾರಿ ಕಾದಂಬರಿಗಳನ್ನು, ಐತಿಹಾಸಿಕ ಸಾಮಾಜಿಕ ಕಾದಂಬರಿಗಳನ್ನು ಬರೆದರು. ಅವರು ಹಾಗೆ ಸುಮಾರು ೧೫೦ ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ವಿನೋದಿನಿ, ಕಥಾವಳಿ ಎಂಬ ಪತ್ರಿಕೆಗಳನ್ನು ನಡೆಸಿದ್ದಾರೆ. ಯಾರವನು, ವಿಷಕನ್ಯೆ, ರಾಜದಂಡ, ಅಪರಾಧಿಯ ಆತ್ಮಕಥೆ, ಮರೆಯಾದ ವಜ್ರಗಳು, ವೈಯಾಲಿಕಾವಲ್ ಮೊದಲಾದ ಅವರ ಕಾದಂಬರಿಗಳು ಅಂದು ಓದುಗರನ್ನು ಆಕರ್ಷಿಸಿದ್ದವು. ಇನ್ನೊಬ್ಬ ಖ್ಯಾತ ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯನವರು‌ ರಾಮಮೂರ್ತಿಯವರಿಂದ ಪ್ರೇರಣೆ ಪಡೆದೇ ತಾವೂ ಬರೆಯಲಾರಂಭಿಸಿದ್ದು.


ದುರಂತದೆಡೆಗೆ

******

ಆದರೆ ಈ ಕನ್ನಡಪರ ಹೋರಾಟಗಳ ಕಾರಣವಾಗಿ ಅವರಿಗೆ ಪೋಲೀಸರ ಕಿರುಕುಳಗಳೂ ಪ್ರಾರಂಭವಾದವು. ಅವರ ವಿರುದ್ಧ ಹಲವು ಕೇಸುಗಳು ದಾಖಲಾಗಿ ಪೋಲೀಸ ಸ್ಟೇಶನ್ನಿಗೆ ಓಡಾಡುವಂತಾಯಿತು. ಆದಾಯವೂ ಇಲ್ಲದೆ ಸಂಸಾರ ನಡೆಸುವದು ಕಷ್ಟವಾಯಿತು. ಕೊನೆಗೆ ಅನಿವಾರ್ಯವಾಗಿ ತಮ್ಮ ಊರು ಕಗ್ಗಲೀಪುರಕ್ಕೆ ತೆರಳಿ ಅಲ್ಲಿ ಕೃಷಿ ವ್ಯವಸಾಯ ನಡೆಸಲು ತೊಡಗುತ್ತಾರೆ. ಅದೇ ಅವರನ್ನು ಆಹುತಿ ತೆಗೆದುಕೊಂಡಿದ್ದೊಂದು ದುರಂತ.

‌ ವ್ಯವಸಾಯಕ್ಕಾಗಿ ತಮ್ಮ ಇಬ್ಬರು ಗಂಡು ಮಕ್ಕಳೊಡನೆ ರಾಮಮೂರ್ತಿಯವರು ಭೂಮಿಯನ್ನು ಅಗೆಯುತ್ತಿದ್ದಾಗ ಅದು ಕುಸಿದು ಮೂವರೂ ಜೀವಂತ ಸಮಾಧಿಯಾಗುತ್ತಾರೆ. ಇದೊಂದು ಹೃದಯವಿದ್ರಾವಕ ಘಟನೆ. ೧೯೬೭ ಡಿಸೆಂಬರ್ ೨೫ ರಂದು‌ ಈ ಅಪ್ಪಟ ಕನ್ನಡಾಭಿಮಾನಿ ಈ ರೀತಿ ಕಣ್ಮರೆಯಾಗುತ್ತಾರೆ. ಅವರಿಗೆ ಆಗ‌ ಕನ್ನಡಿಗರಿಂದ ಸರಿಯಾದ ಬೆಂಬಲ ದೊರಕಿದ್ದರೆ ಬಹುಶಃ ಅವರು ಕನ್ನಡದ ಕೆಲಸ ಮುಂದುವರಿಸುತ್ತಿದ್ದರೇನೊ.

ನಾವಿಂದು ಕನ್ನಡಕ್ಕಾಗಿ ಈ ರೀತಿ‌ ಪ್ರಾಮಾಣಿಕವಾಗಿ ದುಡಿದು ಮಡಿದವರನ್ನು ಮರೆಯುತ್ತಿದ್ದೇವೆಂಬುದು ಬೇಸರದ ಸಂಗತಿ. ಮರೆಯಬಾರದ ಮಹಾನುಭಾವರು ಎಂ. ರಾಮಮೂರ್ತಿ ಎನ್ನುವದರಲ್ಲಿ ಸಂದೇಹವಿಲ್ಲ.

- ಎಲ್. ಎಸ್. ಶಾಸ್ತ್ರಿ

11 views0 comments

Kommentare


bottom of page