ವಿಶಾಲವಾದ ತಿಳಿಗೊಳ
ಅದರೊಳಗೆ ಇಣುಕಿ ನೋಡಿದರೆ
ಕಾಣುವುದು ಮಿರಿಮಿರಿ ಮಿಂಚುವ ತಳ
ಪ್ರತಿಬಿಂಬ ಕಾಣಲು ಸಾಕು
ಈ ಕನ್ನಡಿ ಜಲ ..!
ಅಪಾಯವೇನೂ ಇಲ್ಲವಾದರೂ
ಇದರಲ್ಲಿ ಯಾರೂ
ಸ್ನಾನ ಮಾಡಬೇಡಿ ; ಈಸಬೇಡಿ....
ಅತ್ತಿತ್ತ ಚಲಿಸುತ್ತಾ
ಮನಕ್ಕೆ ಮುದ ನೀಡುವ
ಬಣ್ಣ ಬಣ್ಣದ ಮೀನುಗಳ
ಹಿಡಿದು ಕೊಲ್ಲಬೇಡಿ
ಕಸಕಡ್ಡಿ , ಕಲ್ಲೆಸೆಯಬೇಡಿ
ಕಾಲು , ಕೋಲು ಹಾಕಿ ಕಲಕಿ
ತಿಳಿ ನೀರ ಕೆಡಿಸುವುದು ತಪ್ಪು
ಕೊಳಕ ತೊಳೆಯಲು
ಇದು ಜಾಗವೇ ಅಲ್ಲ
ಶುದ್ದ ಜಲ...!
ಬಾಯಾರಿದ್ದರೆ ಕುಡಿದುಬಿಡಿ ಒಂದಿಷ್ಟು
ದಡದಲ್ಲಿ ಕುಳಿತು
ಸವಿದುಬಿಡಿ ಸೌಂದರ್ಯ
ಇದಕ್ಕಿಂತ ಸುಖ ಬೇರೇನಿದೆ..?
ಒಂದು ಕೊಳ ನಿರ್ಮಲವಾಗಿಡುವುದು
ಸುಲಭ ಎಂದುಕೊಂಡಿರಾ...?
ಕಣ್ಣಲ್ಲಿ ಕಣ್ಣಿಟ್ಟು
ಬಹಳ ಕಾಲದಿಂದ ಕಾಯುತ್ತಿದ್ದೇನೆ
ಧಾರಾಳ ಕಷ್ಟ-ನಷ್ಟ ಅನುಭವಿಸಿದ್ದೇನೆ
ಕೊನೇತನಕ ಹೀಗೇ ಇರಿಸಿಕೊಳ್ಳಬೇಕೆಂಬ
ಛಲ ನನಗೆ
ಅದಕ್ಕೇ ಹೇಳುತ್ತಿದ್ದೇನೆ
ಸಹಕರಿಸದೇ ಹೋದರೂ
ಕೊನೆಪಕ್ಷ ಕದಡುವ ಕೆಲಸಕ್ಕೆ ಮಾತ್ರ
ಕೈ ಹಾಕಬೇಡಿ.....
-ಪ್ರಭಾಕರ ತಾಮ್ರಗೌರಿ
ಉತ್ಸಾಹ ಮತ್ತು ಸೃಜನಶೀಲತೆಯನ್ನು ಕಾಪಿಟ್ಟುಕೊಂಡು ಬಂದಿರುವ ಪ್ರಭಾಕರ ತಾಮ್ರಗೌರಿ ಅವರು ಶ್ರೀಕ್ಷೇತ್ರ ಗೋಕರ್ಣದ ಪಾರ್ವತಿ ದೇವಸ್ಥಾನದ ಆವರಣದಲ್ಲಿ ನೆಲೆಸಿರುವ ಕವಿ,ಕತೆಗಾರ,ಕಾದಂಬರಿಕಾರ ಹಾಗು ಸ್ನೇಹ ಜೀವಿ.ಬಿ.ಕಾಂ.ಪದವೀಧರರಾಗಿರುವ ಇವರಿಗೆ ಪುಸ್ತಕ ಪ್ರಾಧಿಕಾರದ ಬಹುಮಾನಸಂಚಯ ಕಥಾ ಸ್ಪರ್ಧೆಯ ಬಹುಮಾನ,ಬೆಂಗಳೂರು ಟಿ.ಎಂ.ಪಿ.ಕೇಂದ್ರದ ಟಿಎಂ.ಪಿ.ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ಕಥಾ ಸ್ಪರ್ಧೆ ಬಹುಮಾನ,ಮಾಸ್ತಿ ಕಥಾ ಸ್ಪರ್ಧೆ ಬಹುಮಾನಗಳು ದೊರೆತಿವೆ.
ಕನಸು ಕರೆಯುತಿದೆ,ಕಾರ್ತಿಕದ ಬೆಳಕು ಅವರ ಕವನ ಸಂಕಲನಗಳು.
ಮತ್ತೆ ಬಂದ ವಸಂತ,ಅನುರಾಗ ಬಂಧನ,ಕರಗಿದ ಕಾರ್ಮೋಡ, ಅವರ ಕಾದಂಬರಿಗಳು.
ಬದಲಾದ ದಿಕ್ಕುಗಳು, ಬಾಳ ಸಂಜೆಯ ನೆರಳು, ಮುಸ್ಸಂಜೆಯ ಹೊಂಬಿಸಿಲು ಮತ್ತು ಇತರ ಕಥೆಗಳು ,ಔದಾರ್ಯದ ನೆರಳಲ್ಲಿ ಪ್ರಭಾಕರ ಅವರ ಕಥಾ ಸಂಕಲನಗಳು.ಪ್ರಚಾರದಿಂದ ದೂರ ಉಳಿದಿರುವ ಸಜ್ಜನ ಪ್ರಭಾಕರ ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.
ಥ್ಯಾಂಕ್ಯೂ ಮೇಡಂ , ಪ್ರಾಮಾಣಿಕವಾಗಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ಕೊಳವನ್ನು ಕಲಕುವ ಕೆಲಸವನ್ನು ಅನಾಯಾಸ ನಡೆಸಿಕೊಂಡು ಬರುತ್ತಿರುವ ಸುತ್ತಣ ಲೋಕವನ್ನು ಅಷ್ಟೇ ಸವಿನಯದಿಂದ ಕೇಳಿಕೊಳ್ಳುವ ಕವಿತೆ ಇದ್ದಕ್ಕಿದ್ದಂತೆ ಮನುಷ್ಯನ ಮಾನಸದ ಕೊಳವಾಗಿ ಮಾರ್ಪಡುವ ರೀತಿ ಸೋಜಿಗ ಉಂಟುಮಾಡುವ0ಥದ್ದು..
ಥ್ಯಾಂಕ್ಯೂ ಸರ್ ನಿಮ್ಮ ಅಭಿಮಾನ ಅನಿಸಿಕೆಗೆ
ಕನ್ನಡಿ ಜಲ ಹೊಸ ಆಶಯದೊಂದಿಗೆ ಬದುಕುವ ಛಲವನ್ನಿ ಪ್ರೇರೆಪಿಸುವ ಆಪ್ತವಾದ ಕವಿತೆ.ಅಭಿನಂದನೆಗು ಕವಿ,ಕತೆಗಾರ,ಲೇಖಕ,ದಣಿವರಿಯದ ದುಡಿಮೆಯ ಪ್ರಭಾಕರ ತಾಮ್ರಗೌರಿ ಅವರ ಕನ್ನಡಿಯಂತಹ ಜಲವನ್ನು ಕಾಪಾಡುವ ಆಶಯ ಅನನ್ಯವಾದುದು. ಡಾ.ಶ್ರೀಪಾದ ಶೆಟ್ಟಿ.