top of page

ಕಣ್ಣು ಕೊಡಿ

ನಾನು ನನ್ನನ್ನೇ ನೋಡಬಲ್ಲೆ

ನನ್ನೊಳಗೆ

ಈಗಲೂ

ಓದಬಲ್ಲೆ ಅರಿಯಲೂ ಬಲ್ಲೆ

ಆದರೆ ಹುಟ್ಟು ಕುರುಡ!


ನಾನೂ ನೋಡಬೇಕಿದೆ ಹೊರಗೆ

ಸದ್ಯ ನಿಮ್ಮಂತೆ

ಜಗದ ಎಲ್ಲರಂತೆ

ನನಗೆ ಕಣ್ಣು ಕೊಡಿ


ನನ್ನ ಬಗ್ಗೆ ನಾನೆಷ್ಟೇ ಅರಿತರು

ಕಣ್ಣೊಳಗೆ ಬೆಳಕೇ ಇಲ್ಲದೆ

ಶಾಶ್ವತ ಶೂನ್ಯತೆ ಕತ್ತಲು


ಎಲ್ಲವನೂ ಕಾಣುವವರಿಗೆ

ಏನೇನೂ ಕಾಣದವರ

ಎಂದೆಂದೂ ಕಂಡೇ ಇರದವರ

ನಿರಂತರ ಯಾತನೆಯ ಆಳ

ಅದರ ಸಂವೇದನೆ

ಎಷ್ಟೋ ನಾನರಿಯೆ!


ಹಾಗೆಯೇ ಎಲ್ಲ ಕಾಣುವವರ

ನಿತ್ಯ ಕಾಣುತ್ತಿರುವವರ

ವಿಹಂಗಮ ನೋಟದ

ಯಕಃಶ್ಚಿತ್ ಅರಿವೂ ಇರದ

ಹುಟ್ಟಿಂದ ಸಾವಿನ ದಾರಿಯುದ್ದಕ್ಕು

ಹುಟ್ಟಾ ಕುರುಡ ನಾನು!


ಇತ್ತೀಚಿನ ಘಳಿಗೆ ತನಕ

ಜಗದ ಎಲ್ಲರ ಬದುಕೆ ಹೀಗೆ

ಅಗಾಧ ಕತ್ತಲೆಯ ಬೆತ್ತಲೆ ಕೋಣೆ

ನಿರಂತರ ತಡಕಿನ ಬಾಳು

ಎಂಬ ವಿಶ್ವಾಸದಲಿದ್ದ ನನಗೆ

ಈಗಷ್ಟೇ ಅರಿವಾಗಿದೆ

ನನಗೂ ನನ್ನಂಥವರಿಗೂ

ಬೆಳಕು ಕೊಡಲು ಸಾಧ್ಯ

ಎಂಬ ಅನನ್ಯ ಸತ್ಯ


ನಾನೂ ನಿಮ್ಮ ಹಾಗೆ

ಇನ್ನಾದರೂ ಕಾಣಬೇಕಿದೆ

ಬೆಳಕಿನ ಚಿಮ್ಮು ಕಾರಂಜಿಯಲ್ಲಿ

ಪ್ರಕೃತಿಯ ಅನಂತಾನಂತ ಬಣ್ಣ

ಪ್ರತಿ ಮೂಲೆ ಮೂಲೆಯಲ್ಲಿ

ಆದ್ದರಿಂದ ನನಗೆ

ನನ್ನಂತಹ ಹುಟ್ಟು ಕುರುಡರಿಗೆ

ಕಣ್ಣು ಕೊಡಿ


ನಿಮ್ಮ ಈ ಇಹದ ಬದುಕಿನಲಿ

ಎಂದೂ ಕಣ್ಣು ಕೇಳದ ನಾವು

ನಿಮ್ಮ ಅಳಿದ ದೇಹದೊಡನೆ

ವೃಥಾ ಹೂತು ಕೊಳೆತು ಹೋಗುವ

ಅಥವ ಬೆಂದು ಭಸ್ಮವಾಗುವ

ನಿಮ್ಮ ಸತ್ತ ದೇಹದ ಕಣ್ಣು ಕೊಡಿ

ನನಗೆ ನನ್ನಂಥವರಿಗೆ

ಮತ್ತು ಸತ್ತ ನಂತರವೂ ನಮ್ಮ ಮೂಲಕ

ಮತ್ತೆ ನೋಡಿ ಬಿಟ್ಟು ಹೋದ ಈ ಲೋಕ


ಸತ್ತ ಮೇಲೆ ಎಲ್ಲರೂ ಕಣ್ಣು ಕೊಡಿ

ಹಾಗೆ ಬರೆದಿಟ್ಟು ಹೊರಡಿ

ಮತ್ತು ಜಗದ ಕರಾಳ ಕುರುಡು

ಎಂದೆಂದೂ ಇಲ್ಲದ ಹಾಗೆ

ನೀಡಿ ನಿರಂತರ ಮೂಡಣ ಬೆಳಗು!


ಡಾ. ಅರಕಲಗೂಡು ನೀಲಕಂಠ ಮೂರ್ತಿ

ಮೊ.ನಂ.98446 45459

42 views2 comments

2 Comments


Jagadish Kumar
Jagadish Kumar
Mar 18, 2022

ನೇತ್ರ ದಾನಕ್ಕೆ ಸ್ಪೂರ್ತಿ

ಹರಡಲಿ ಎತ್ತರಕ್ಕೆ ಇದರ ಕೀರ್ತಿ

Like

Chandrakala K.C
Chandrakala K.C
Mar 17, 2022

ಚೆನ್ನಾಗಿದೆ ಸರ್ ಈ ಕವನ ನೇತ್ರಧಾನಕ್ಕೆ ಸ್ಫೂರ್ತಿಯಾಗಿದೆ

Like
bottom of page