‘ಓಡಿಹೋದ ಹುಡುಗ’

ಡಾ. ಬಸು ಬೇವಿನಗಿಡದ ಅವರ ಮಕ್ಕಳ ಕಾದಂಬರಿ : ‘ಓಡಿಹೋದ ಹುಡುಗ’ ಕುರಿತು

- ಸುನಂದಾ ಕಡಮೆಕಿತ್ತು ಹೋಗಿರುವ ಪಾಠದ ಒಂದು ವಿಶೇಷ ಪುಟ- ಗಜ್ಯಾ


ಕನ್ನಡದ ಸೂಕ್ಷ್ಮ ಕಥೆಗಾರ, ಕವಿ, ಅನುವಾದಕ ಮತ್ತು ಮಕ್ಕಳ ಬರಹಗಾರರೂ ಆಗಿರುವ ಬಸು ಬೇವಿನಗಿಡದ ಅವರು ಸುಮಾರು ಹತ್ತು ವರ್ಷಗಳ ಹಿಂದೆ ಬರೆದ ಮೊದಲ ಮಕ್ಕಳ ಕಾದಂಬರಿ ‘ನಾಳೆಯ ಸೂರ್ಯ’ದ ಬಿಡುಗಡೆಯ ಸಂದರ್ಭದಲ್ಲಿ ನಾನೇ ಆ ಕೃತಿಯ ಕುರಿತು ಮಾತನಾಡಿದ್ದೆ. ಮಕ್ಕಳ ಬರಹವೆಂದರೆ ನನಗೆ ಮೊದಲಿನಿಂದಲೂ ಏನೋ ಒಂದು ರೀತಿಯ ಮಮಕಾರ ಮತ್ತು ಗೌರವ. ಪುಟಾಣಿಗಳ ಮನಸ್ಸನ್ನು ಅಕ್ಷರಲೋಕದತ್ತ ಸೆಳೆದು ಕಲ್ಪನಾತೀತ ಮಾಯಾ ಜಗತ್ತನ್ನು ಅವರಲ್ಲಿ ತುಂಬುತ್ತ, ಅವರ ಕಾಲುದಾರಿಗಳನ್ನು ತಿದ್ದುತ್ತ, ಅವರ ಮಾನಸ ಲೋಕಕ್ಕೆ ಬೆಳಕನ್ನು ನೀಡುವ ಶಿಶು ಸಾಹಿತ್ಯವು ಇಂದಿನ ಆಧುನಿಕ ಮಕ್ಕಳ ಬೌದ್ಧಿಕ ವಲಯಕ್ಕೆ ಅಗತ್ಯವಾದ ಒಂದು ಔಷಧಿಯಾಗಿದೆ. ವಿಭಿನ್ನವಾದ ವಸ್ತು ಹಂದರವಿರುವ ಮತ್ತು ಕುತೂಹಲದಿಂದ ಓದಿಸಿಕೊಂಡು ಹೋಗುವ ಬಸು ಅವರ ಈ ‘ಓಡಿಹೋದ ಹುಡುಗ’ ಮಕ್ಕಳ ಕಾದಂಬರಿಯು ಅಂಥದೊಂದು ನೈಸರ್ಗಿಕ ಮದ್ದನ್ನು ಮಕ್ಕಳಿಗೆ ಉಣಬಡಿಸುವಂಥದ್ದು. ಇಲ್ಲಿಯ ಭಾಷೆ ಸರಳ, ಸುಲಲಿತ ಅಷ್ಟೇ ಅಲ್ಲ ಪಾರದರ್ಶಕವೂ ಆಗಿದ್ದು, ಈ ಕೃತಿ ಮಕ್ಕಳ ಓದು ಹಾಗೂ ಗ್ರಹಿಕೆಯ ನೆಲೆಯಲ್ಲಿ ಸಹಕಾರಿಯಾಗುವಂತೆ ಮೂಡಿಬಂದಿದೆ. ಇಡೀ ಕಾದಂಬರಿಯಲ್ಲಿ ಪ್ರವಹಿಸುತ್ತಿರುವ ಗ್ರಾಮೀಣ ಸೊಗಡಿನ ಪರಿಸರ, ದೇಸಿ ಸಂಸ್ಕೃತಿಯ ನುಡಿಗಟ್ಟುಗಳು ಇವೆಲ್ಲ ಓದುವ ಹಂತದಲ್ಲೇ ಮಕ್ಕಳ ಮನಸ್ಸನ್ನು ಅರಳಿಸುವಂತಿವೆ. ಲವಲವಿಕೆಯ ನಿರೂಪಣಾ ಶೈಲಿ ಮಗುವಿನ ಓದಿಗೆ ಹತ್ತಿರವಾಗುವಂತಿದೆ.


ಕಾದಂಬರಿಯ ಮುಖ್ಯ ಪಾತ್ರವಾಗಿ ಬರುವ ಗಜ್ಯಾ, ಸಹೃದಯ ಮಕ್ಕಳಿಗೆಲ್ಲ ಒಟ್ಟಂದದಲ್ಲಿ ಸ್ಪೂರ್ತಿಯಾಗುವ ಸ್ವಭಾವವುಳ್ಳವ. ಇಡೀ ಊರಿನ ಮಕ್ಕಳನ್ನು ನಸುಕಿನ ತನ್ನ ಸೈಕಲ್ ಗಂಟೆ ನಾದದಲ್ಲೇ ನಿದ್ದೆಯಿಂದ ಎಚ್ಚರಗೊಳಿಸುವ ಶಕ್ತಿಯುಳ್ಳವ. ಗಾಳಿಯ ವೇಗದಲ್ಲಿ ಅವನು ಸಂಚರಿಸುತ್ತಿದ್ದುದರಿಂದ ಅವನನ್ನು ಕೆಲವರು ‘ಗಾಳ್ಯಾ’ ಅಂತಲೂ ಕರೆಯುತ್ತಿದ್ದರು. ಬೆಳ್ಳಂಬೆಳಗ್ಗೆ ಗಜ್ಯಾನ ಮುಖ ನೋಡುವುದೇ ಒಂದು ಶುಭ ಸೂಚಕ, ಮುಂದಿನ ಕೆಲಸಗಳು ಸಲೀಸಾಗುತ್ತವೆ ಅಂತಲೂ ಕೆಲವರು ನಂಬಿಕೊಂಡಿದ್ದರು. ಹಾಗಾಗಿ ಅಂಥವರಿಗೆ ಆತ ನರಿ. ಅವನ ಸೈಕಲ್ ಹಾದು ಹೋದರೆ ಸಾಕು ‘ನರಿ ಹೋಯಿತು’ ಅಂತಲೂ ಅನ್ನುತ್ತಿದ್ದರು. ಇಂಥ ವಿಡಂಬನೆಗಳು ಮುಕ್ತಲೋಕವೊಂದನ್ನು ಈ ಕಾದಂಬರಿಯಲ್ಲಿ ಅಲ್ಲಲ್ಲಿ ಸೃಷ್ಟಿಸಿವೆ. ಒಂದು ದಿನ ಗಜ್ಯಾ ಊರಲ್ಲಿ ಕಾಣಿಸಿಕೊಳ್ಳಲಿಲ್ಲವೆಂದರೆ, ಇಡೀ ಊರಿಗೆ ಊರೇ ಅವನನ್ನು ನೆನೆಯುತ್ತಿತ್ತು. ಯಾರ ಕೈಗೂ ಸಿಗದಷ್ಟು ಕ್ರಿಯಾಶೀಲನಾಗಿರುತ್ತಿದ್ದ ಗಜ್ಯಾನನ್ನು ಊರಿನಲ್ಲಿ ಹೊಗಳುವವರು ಇದ್ದ ಹಾಗೆ ಸಾಕಷ್ಟು ಜನ ‘ಬಣ್ಣ ಬದಲಿಸುವ ಊಸರವಳ್ಳಿ’ ಅಂತ ಕರೆದು ತೆಗಳುವವರೂ ಇದ್ದರು. ಗಜ್ಯಾ ಮಾಡೋದು ಗೇಣುದ್ದ, ಆದರೆ ಕೊಚ್ಚಿಕೊಳ್ಳೋದು ಮಾತ್ರ ಮಾರುದ್ದ ಎಂಬ ಗಾದೆಮಾತು ಅವನನ್ನೊಳಗೊಂಡು ಹುಟ್ಟಿಕೊಂಡಿತ್ತು. ಇಂತೆಲ್ಲ ಲೇವಡಿಗಳನ್ನು ನಿರ್ಲಕ್ಷಿಸಿ ಹುಡುಗನೊಬ್ಬ ಊರಿಗೇ ಬೆಳಕಾಗಿ ಬೆಳೆಯುವುದರ ನೆಲೆಯಲ್ಲಿಯೇ ಕಾದಂಬರಿಯ ಧೀಶಕ್ತಿ ಅಡಗಿದೆ ಎಂದರೆ ಅತಿಶಯೋಕ್ತಿಯಲ್ಲ. ಇಲ್ಲಿಯ ಗಜ್ಯಾ ಪಾತ್ರವು ತನ್ನೊಳಗಿರುವ ಸಲಹುವ ಸ್ವಭಾವದಿಂದಲೇ ಮಾನವೀಯತೆಯನ್ನು ಮತ್ತು ಶಿಸ್ತನ್ನು ರೂಢಿಸಿಕೊಂಡಿದ್ದಕ್ಕೆ ಸಾಕ್ಷಿಯೆಂಬಂತೆ, ಅವರಿವರ ಮನೆಯ ಹಾಲು ತುಂಬಿಸಿ ಅದನ್ನು ಡೇರಿಗೆ ಹಾಕಿ, ಹಾಲು ಹಾಕುವ ಆ ಹೈನುಗಾರರ ಮನೆಗಳಿಗೆ ಡೇರಿಯವರು ಕೊಡಮಾಡಿದ ಪಾಸ್‌ಬುಕ್‌ನಲ್ಲಿ ಅವನು ಸರಿಯಾದ ಎಂಟ್ರಿ ಹಾಕಿಸಿ ಅವರಿಗೆ ತೋರಿಸುತ್ತಿದ್ದುದರ ಸನ್ನಿವೇಶಗಳಿವೆ. ಅವು ಬಾಲ್ಯದಲ್ಲೇ ಆ ಹುಡುಗ ಮೈಗೂಡಿಸಿಕೊಂಡ ನಿಷ್ಠೆ ಹಾಗೂ ಪ್ರಾಮಾಣಿಕತೆಗಳಿಗೆ ಉದಾಹರಣೆಯಾಗಿವೆ.


ಗಜ್ಯಾನ ಅಪ್ಪನ ಹೊಟೇಲ್ ಬರೀ ಉದ್ರಿ ಸಾಲದಿಂದ ನಡೆಯುತ್ತಿದ್ದುದರಿಂದ ಕುಟುಂಬಕ್ಕೆ ಅದು ಸಂಪೂರ್ಣ ಆಧಾರವಾಗಿರಲಿಲ್ಲ. ಹಾಲಿನ ಡೇರಿಯ ಕಮೀಷನ್ ನಲವತ್ತೋ ಐವತ್ತೋ ಗಳಿಸುವುದರ ಜೊತೆಗೆ ತಮ್ಮ ಮನೆಎಮ್ಮೆಯ ಹಾಲು ಮಾರಿದ ಹಣವನ್ನು ಸೇರಿಸಿದಾಗಲೂ ಆತನ ಬಡತನವನ್ನು ಮುಚ್ಚಲಿಕ್ಕಾಗುತ್ತಿರಲಿಲ್ಲ. ಗಜಾ ಸೈಕಲ್ ರಿಪೇರಿಯನ್ನೂ ಕಲಿತಿದ್ದ. ‘ಶಾಲೆಗೆ ಹೋಗುತ್ತಲೇ ದುಡಿದು ಹಾಕುವ ಮಗ’ ಅಂತ ಅವನ ಅಪ್ಪ-ಅವ್ವನಿಗೂ ಎಲ್ಲಿಲ್ಲದ ಹೆಮ್ಮೆ ಇತ್ತು. ಇವಿಷ್ಟು ಕಥಾನಾಯಕ ಗಜ್ಯಾನ ಕುಟುಂಬದ ಸಂಗತಿಗಳು.


ಸುವಿಶಾಲ ಆಲದ ಮರದಡಿಯ ತಣ್ಣೆಳಲಿನಲ್ಲಿ ಊರಿನ ಸುಮಾರು ನಲವತ್ತಯವತ್ತು ಮನೆಗಳು ಆಶ್ರಯವನ್ನೂ ನೆರಳನ್ನೂ ಪಡೆದುಕೊಂಡಿದ್ದವು. ಅಲ್ಲಿರುವ ಒಬ್ಬ ಋಷಿಯಂಥ ಅಜ್ಜನ ಕುರಿತು ತುಂಬಾ ಪರಿಣಾಮಕಾರಿಯಾದ ವಿವರಗಳನ್ನು ಲೇಖಕರು ಕೊಡುತ್ತಾರೆ. ಊರಲ್ಲಿ ಯಾರಾದರೂ ಗಿಡ ಕಡಿಯುವದನ್ನು ಕಂಡರೆ ಕೋಲು ತೊಗೊಂಡು ಬೆನ್ನುಹತ್ತುತ್ತಿದ್ದ. ಆ ಅಜ್ಜನ ಸನ್ಮಾನದ ಫೊಟೋದಲ್ಲಿ ಹುಡುಗರು ಸಣ್ಣ ಸಸಿಗಳನ್ನು ಹಿಡಿದುಕೊಂಡು ಸಾಲಾಗಿ ಮುಂದುಗಡೆ ಕುಳಿತಿದ್ದರು ಎಂಬೆಲ್ಲ ಚಿತ್ರಗಳಲ್ಲಿ ಜೀವಪರ ಸಂವೇದನೆಯ ಅಜ್ಜನ ಪಾತ್ರ ಪ್ರಪಂಚವು ಮಕ್ಕಳನ್ನು ಒಂದು ವಿಶಾಲ ಆವರಣದಲ್ಲಿ ಹಿಡಿದಿಡುತ್ತಲೇ ಪ್ರಕೃತಿ ಪ್ರೀತಿಯನ್ನು ಅವರಲ್ಲಿ ಜಾಗ್ರತಗೊಳಿಸುವಂತಿದೆ. ಗಜ್ಯಾ ನಸುಕಿನಲ್ಲಿ ಏಳುವುದಕ್ಕೆ ಮೊದಲು ಯಾರಾದರೂ ಎದ್ದಿದ್ದರೆ ಅದು ಆಲದ ಮರದ ಅಜ್ಜ ಮಾತ್ರ. ಹಾಗೆ ನೋಡಿದರೆ ಅಜ್ಜ ಯಾವಾಗಲೂ ಎದ್ದಿರುತ್ತಿದ್ದ. ಧ್ರುವ ನಕ್ಷತ್ರದ ಜೊತೆ ಮಾತಾಡಿದೆ ಅನ್ನುತ್ತಿದ್ದ. ಚಂದ್ರನನ್ನು ಮಜ್ಜಿಗೆಯಲ್ಲಿ ತೇಲಾಡುವ ಬೆಣ್ಣೆಯ ತುಂಡಿಗೆ ಹೋಲಿಸುತ್ತಿದ್ದ. ಅವನಿಗೆ ಎಲ್ಲ ಉತ್ತರಗಳೂ ಗೊತ್ತಿರುತ್ತಿದ್ದವು. ಅಜ್ಜ ಮಾತಾಡಲು ತೊಡಗಿದರೆ ಅದೇ ಒಂದು ಕತೆ. ಎಲ್ಲ ಮಕ್ಕಳೂ ಒಟ್ಟಾಗಿ ಆಸಕ್ತಿಯಿಂದ ಕೇಳುವರು. ಅಜ್ಜ ಭೂಮಿ ಮೇಲಿನ ಸಂಗತಿಗಳಿಗಿAತ ಹೆಚ್ಚಾಗಿ ಆಕಾಶದ ಮೇಲಿನ ಸಂಗತಿಗಳನ್ನೆ ಮಾತಾಡುತ್ತಿದ್ದ. ಇಂತೆಲ್ಲ ಬರುವ ಅಜ್ಜನ ಚಿತ್ರಗಳು ಸೋಜಿಗವೊಂದನ್ನು ಒಡಲಲ್ಲಿಟ್ಟುಕೊಂಡೇ ಮಕ್ಕಳಿಗೆ ಆಪ್ತವಾಗುವಂತಿವೆ. ಅದಕ್ಕೂ ಮುಂದುವರೆದು, ಆಲದ ಮರದ ಮುಂದೆ ನಿಂತ ಗಜ್ಯಾ ಮತ್ತು ಅಜ್ಜ ನಿಂತಿದ್ದ ಫೋಟೋ ಕೂಡ ಒಮ್ಮೆ ಪತ್ರಿಕೆಯಲ್ಲಿ ಬಂದು ಹೊಸ ಬಾಗಿಲ ದಾರಿಯೊಂದು ಕತೆಗೆ ಒದಗಿ ಬರುತ್ತದೆ.


ಗುಡ್ಡ ಹತ್ತಿ ಹೋದರೆ ಅಲ್ಲೊಂದು ಗುಹೆ ಇತ್ತು, ಅಲ್ಲಿ ಒಂದು ಸಿನೆಮಾ ಶೂಟಿಂಗ್ ಕೂಡ ಆಗಿದ್ದು ಅದನ್ನು ಅಜ್ಜನೊಬ್ಬನೇ ಕಂಡಿದ್ದ. ಹಾಗೆ ಮಕ್ಕಳಿಗೆ ಸಿನೆಮಾದಲ್ಲಿ ಪಾತ್ರ ಮಾಡುವ ಆಸೆ ಚಿಗುರೊಡೆಯಲು ಕಾರಣನಾಗಿದ್ದು ಕೂಡ ಅಜ್ಜನೇ. ಅಜ್ಜನ ಬಳಿ ಒಗಟು ಕೇಳುವ ಆಟವೂ ನಡೀತಿತ್ತು. ಮಕ್ಕಳು ತಂತಮ್ಮ ತೀರಿ ಹೋದ ಅಜ್ಜಿಯಂದಿರು ಚೆಂದಪ್ಪನನ್ನು ಭೇಟಿ ಮಾಡುವರು ಅಂದುಕೊಳ್ಳುವರು. ಸೂರ್ಯ, ಚಂದ್ರ, ನಕ್ಷತ್ರ, ಆಕಾಶಕಾಯ ಪರಸ್ಪರ ಸಂಬಂಧಿಕರೇ ಆಗಬೇಕು. ಅವರೆಲ್ಲ ಅಪ್ಪ, ದೊಡ್ಡಪ್ಪ, ಕಾಕಾ, ಚಿಗವ್ವ, ಸ್ವಾದರಮಾವನಂತೆ ಅಂತ ಅಜ್ಜ ಹೇಳುತ್ತಿದ್ದ. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಎಷ್ಟು ದಪ್ಪ ಸೂಜಿ ಚುಚ್ಚಿದರೂ ಅಜ್ಜನಿಗೆ ನೋವಾಗುತ್ತಿರಲಿಲ್ಲ. ‘ಯಾರು ಯಾವಾಗಲೂ ಕೆಲಸದಲ್ಲಿ ತೊಡಗಿರತಾರೋ ಅವರ ಮನಸ್ಸು ನೀರಿನಾಂಗ ತಿಳೀ ಇರತೇತಿ’ ಅನ್ನುತ್ತಿದ್ದ ಅಜ್ಜ ಕಾಯಕವೇ ಕೈಲಾಸ ಬಸವಣ್ಣನ ತತ್ವಕ್ಕೆ ಬದ್ಧನಾದಂತಿದ್ದ.


ಬೇರೆಯವರ ಹೊಲದ ಬೆಳೆಗಳನ್ನು ಕದಿಯುವ ಚಟ ಗಜ್ಯಾನ ಗ್ಯಾಂಗಿಗೆ ಇತ್ತು. ಗಜ್ಯಾ ತನ್ನ ಗುಂಪಿನೊಂದಿಗೆ ಆಡದ ಆಟಗಳೇ ಇಲ್ಲ. ಒಮ್ಮೆ ಮಲ್ಲನಗೌಡನ ಹೊಲದಲ್ಲಿಯ ಶೇಂಗಾ ಕಿತ್ತು ತಿಂದಿದ್ದರು. ಬೇರೆ ಯಾರು ಈ ಕೆಲಸ ಮಾಡಿದರೂ ಅದು ಗಜ್ಯಾನ ಮೇಲೆಯೇ ಬರುತ್ತಿತ್ತು. ಶೇಂಗಾಕ್ಕೆ ಚುರಮರಿ, ದಾನಿ, ಬೆಲ್ಲ, ಖಾರಾದಾನಿ ಎಲ್ಲ ತಂದು ರುಚಿಕಟ್ಟಾಗಿ ಬೇಯಿಸಿ ತಿನ್ನುವುದೂ ಇತ್ತು. ಇವೆಲ್ಲ ಗಜ್ಯಾನ ತುಂಟಾಟಗಳನ್ನು ಹಿಡಿದಿಡುವ ಕ್ರಮ. ಇಂತಿರುವಾಲೇ ಒಮ್ಮೆ ಮಲ್ಲನಗೌಡನ ಬಳಿ ಸಿಕ್ಕುಬಿದ್ದಾಗ ಆಲದ ಮರದಜ್ಜನೇ ‘ಮಕ್ಕಳು ತಿಂದ್ರ ದೇವರು ತಿಂದಂಗ’ ಅಂತ ಹೇಳಿ ಅವರನ್ನು ಕಾಪಾಡಿದ್ದ. ಊರ ಮಕ್ಕಳ ಬಡತನವನ್ನು ಹೇಳುವಾಗ ‘ಕೆಲ ಮಕ್ಕಳು ಮನೆಯಲ್ಲಿ ಅಣ್ಣಂದಿರು ತೊಟ್ಟುಬಿಟ್ಟ ಬಟ್ಟೆಗಳನ್ನೇ ತೊಡುತ್ತಿದ್ದರು’ ಎಂಬಂತಹ ಗಾಢವಾದ ವಿವರಗಳನ್ನು ಕೊಡುವಲ್ಲಿ ಲೇಖಕ ಕತೆಯ ಬಂಧವನ್ನು ಗಟ್ಟಿಗೊಳಿಸುತ್ತ ಯೋಚನೆಗೆ ಹಚ್ಚುತ್ತಾರೆ.


ಗಜ್ಯಾನನ್ನು ಮಾದರಿಯಾಗಿಟ್ಟುಕೊಂಡು ಬೆಳೆಯುವಂತೆ ಊರಿನ ಹಿರಿಯರು ತಮ್ಮ ಮಕ್ಕಳಿಗೆ ಹೇಳುತ್ತಿದ್ದರು. ಈ ಕಾರಣದಿಂದ ಅಸೂಯೆಯಿಂದ ಕೋಪಗೊಂಡಿದ್ದ ಕೆಲ ಮಕ್ಕಳು ಗೆಳೆಯ ಗಜ್ಯಾನನ್ನು ಅವಮಾನಪಡಿಸಲು ಕೂಡ ಕಾಯುತ್ತಿದ್ದರು. ಗಜ್ಯಾನನ್ನು ತಪಾಸಿಸಲು ಕೆಲ ಸ್ನೇಹಿತರು ಬೇಗ ಏಳತೊಡಗಿದ್ದರು. ಪರಮ ಆಲಸಿಯಾಗಿರುವ ಸೋಮು ಎಂಬ ಹುಡುಗ ವಿಚಾರಿಸುವುದೇನೆಂದರೆ ತಮ್ಮ ಅಪ್ಪ-ಅಮ್ಮರಿಂದ ಹೀಯಾಳಿಸಲೆಂದು ಗಜ್ಯಾ ಈ ರೀತಿ ತಮ್ಮನ್ನು ಮುಂಜಾನೆ ಬೇಗನೆ ಬಂದು ಎಬ್ಬಿಸುವ ನಾಟಕ ಮಾಡುತ್ತಿದ್ದಾನೆ ಎನ್ನುವುದು. ಅವನು ಹಾಗೆಯೇ ದೂರಿದ್ದ ಕೂಡ. ಆದರೆ ಗಜ್ಯಾನ ನಡವಳಿಕೆ ಮಾತ್ರ ಸಹಜವಾಗೇ ಇರುತ್ತಿತ್ತು. ಅವನೆಂದೂ ಹಿರಿಯರಿಗೆ ಎದುರು ಮಾತಾಡುತ್ತಿರಲಿಲ್ಲ. ಒಮ್ಮೆ ತಂದೆಗೆ ಎದುರುತ್ತರ ಕೊಟ್ಟು ತನ್ನೊಳಗೇ ತಾನು ಸಣ್ಣವನಾಗಿದ್ದ. ಹೀಗೆ ಕಡಿದು ಕಟ್ಟಿದ ಅವನ ವ್ಯಕ್ತಿತ್ವವೊಂದು ಈ ಕೃತಿಯನ್ನು ಓದುವ ಮಕ್ಕಳ ಮನಸ್ಸನ್ನು ಶುದ್ಧಗೊಳಿಸುವಂತಿದೆ.


ಕರಿಕಟ್ಟಿ ಮಾಸ್ತರರ ಮಗ ದೀಪಕ್ ಮತ್ತು ಕಂದಾಯ ಇಲಾಖೆಯಲ್ಲಿ ತಲಾಠಿಯಾಗಿರುವ ಮಹಾಜನ ಅವರ ಮಗ ಮುಕುಂದ ಎಂಬ ಇಬ್ಬರು ಹುಡುಗರು ಊರಿಗೆ ಹೊಸದಾಗಿ ಬರುತ್ತಾರೆ. ಏಳನೆಯ ತರಗತಿಗೆ ಅವರು ಗಜ್ಯಾನಿಗೆ ಸ್ನೇಹಿತರಾಗುತ್ತಾರೆ. ದೀಪಕ್ ಪ್ರಾಣಿಗಳ ಚಿತ್ರ ಬರೆಯುತ್ತಿದ್ದ. ಇಬ್ಬರೂ ಚದುರಂಗ ಆಡುತ್ತಿದ್ದರು. ತಲಾಠಿಯ ಮಗ ಮುಕುಂದನ ಮನೆ ಸ್ಥಿತಿವಂತ ಸ್ಥಿತಿಯಲ್ಲಿತ್ತು. ದೀಪಕ್ ಮತ್ತು ಮುಕುಂದ ಇಬ್ಬರೂ ತಮ್ಮಲ್ಲಿರುವ ಹೊಸ ಪುಸ್ತಕ ಮತ್ತು ನೋಟುಬುಕ್ಕುಗಳನ್ನು ಪರಿಚಯಿಸಿದ ನಂತರ ಮಲ್ಲೂರಿನ ಮಕ್ಕಳಿಗೆ ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಅಷ್ಟರತನಕ ಅವರಿಗೆ ಹಣವಂತರ ವೈಭವಗಳು ಅಪರಿಚಿತವೇ ಆಗಿರುತ್ತವೆ. ತಲಾಠಿ ಮನೆಯಲ್ಲಿ ಹರಿದ ಫೈಲುಗಳನ್ನು ಸೇರಿಸುವ, ಜೋಡಿಸುವ ಮತ್ತು ಶಾಲೆಯಲ್ಲಿ ಹೆಡ್ ಮಾಸ್ತರರು ಸಿಟ್ಟಿನಲ್ಲಿ ಒಗೆದ ಅಟೆಂಡನ್ಸ್ ರಜಿಸ್ಟರ್‌ನ್ನು ಬರೆದು ಕೊಡುವ ಗಜ್ಯಾನ ಗುಂಪಿನ ವಿವರಗಳು ತುಂಬ ಸ್ವಾರಸ್ಯಕರವಾಗಿ ಮೂಡಿ ಬಂದಿವೆ. ಕೆಲವು ಸಂಗತಿಗಳು ಆ ಮಕ್ಕಳ ಉಡಾಳತನವನ್ನು ಮನೋಹರವಾಗಿ ತೆರೆದಿಡುತ್ತವೆ. ಹಾದಿಬದಿಯ ಹೊಲಹೊಕ್ಕು ಕಡಲೆಗಿಡ ಕಿತ್ತು ತಿನ್ನುವ ತುಂಟರಾಗಿಯೂ ತಮ್ಮ ಕೈಚಳಕ ತೋರಿಸುತ್ತಾರೆ. ಇವೆಲ್ಲಕ್ಕೂ ಕಾರಣವೆಂದರೆ ಆಲದ ಮರದಜ್ಜನೇ ಅಂತ ಊರಲ್ಲೆಲ್ಲ ಗುಲ್ಲು. ಹಿರಿಯರು ಆ ಅಜ್ಜನ ಮಾತು ಕೇಳಿದರೆ ಕೆಟ್ಟುಹೋಗುತ್ತೀರಿ, ನಪಾಸಾಗುತ್ತೀರಿ ಎಂದು ಬೆದರಿಸುತ್ತಾರೆ. ಒಮ್ಮೆ ಅಜ್ಜನ ಬಾಯಲ್ಲಿ ಬಂದ ಭವಿಷ್ಯ ನಿಜವಾಗಿ ಪರಿಣಮಿಸಿದ ನಂತರ ಅವನ ಕುರಿತು ದೈವತ್ವದ ಭಾವ ತಳೆಯಲು ದಾರಿ ಮಾಡಿಕೊಡುತ್ತದೆ. ಅಜ್ಜ ಇವೆಲ್ಲಕ್ಕೂ ಸುಮ್ಮನೆ ನಕ್ಕು ಬಿಡುತ್ತಿದ್ದ. ಅದನ್ನೇ ಕತೆ ಮಾಡಿ ಮಕ್ಕಳಿಗೆ ಹೇಳುತ್ತಿದ್ದ.


ಕಿತ್ತುಹೋಗಿರುವ ಪುಸ್ತಕದ ಪಾಠಗಳ ಬಗ್ಗೆ ಮಾಸ್ರ‍್ರು ಹೇಳುವ ಕತೆಗಳ ಮೇಲಿಂದ ಹುಡುಗರು ಅದನ್ನು ಊಹಿಸಿಕೊಳ್ಳುತ್ತಿದ್ದರು. ಅದರ ಬಗ್ಗೆ ಅವರು ಬರೆಯುವ ಉತ್ತರಗಳು ಕೂಡ ಅನೇಕ ರೀತಿಗಳಿಂದ ಕುತೂಹಲಕಾರಿಯಾಗಿರುತ್ತಿದ್ದವು. ಪ್ರತಿಯೊಬ್ಬರೂ ಆ ಕತೆಯನ್ನು ಅಥವಾ ಆ ಪಾಠದ ಕೊನೆಯನ್ನು ತನಗೆ ತಿಳಿದಂತೆ ಬರೆದಿರುತ್ತಿದ್ದರು. ಇಲ್ಲಿಯ ಕಲ್ಪನೆಯ ಸಮೃದ್ಧತೆ ಅಪೂರ್ವವಾದದ್ದು. ಹಲವು ಆಯಾಮಗಳನ್ನು ಹೊಂದಿ ಸಂಕೀರ್ಣಗೊಳ್ಳುವಂಥದ್ದು. ಇದು ಕಾದಂಬರಿಯ ಅತ್ಯುತ್ತಮವಾದ ಹಾಗೂ ನನಗಿಷ್ಟವಾದ ಭಾಗ.


ಮುಕುಂದನ ಅವ್ವ ಮಂಜವ್ವ ಚಿಗವ್ವ ದೀಪಾವಳಿಯನ್ನು ಊರಿನ ಎಲ್ಲ ಗೆಳೆಯರನ್ನೂ ಸೇರಿಸಿ ತಮ್ಮ ಮನೆಯಲ್ಲಿ ಆಚರಿಸಿಲು ಇಷ್ಟಪಟ್ಟಾಗ ಎಲ್ಲ ಮಕ್ಕಳೂ ದಿಗಿಲುಗೊಳ್ಳುತ್ತಾರೆ. ಅದು ಝಗಮಗಿಸುವ ದೀಪಾವಳಿ. ಅಂಥ ಹಬ್ಬದ ಆಚರಣೆ ಮಲ್ಲೂರಿನ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಮುಕುಂದನ ತಂದೆ ತಾಯಿ ಮಗನ ಗೆಳೆಯರಿಗೆಲ್ಲ ಕವರಿನಲ್ಲಿ ಪ್ಯಾಕ್ ಮಾಡಿದ ಪುಸ್ತಕ ಕೊಡುವ ಜೊತೆಗೆ ಸಿಹಿ ತಿಂಡಿಯನ್ನೂ ಅಲ್ಲಿ ಹಂಚಲಾಯಿತು. ಅದನ್ನು ಸ್ವೀಕರಿಸುವಾಗ ಮಕ್ಕಳಿಗೆಲ್ಲ ಅದೊಂದು ರೋಮಾಂಚನದ ಗಳಿಗೆ. ಮುಖಪುಟದಲ್ಲಿ ತರಾವರಿ ಚಿತ್ರಗಳನ್ನು ಹೊಂದಿದ ಎರಡುನೂರು ಪೇಜಿನ ಎರಡೆರಡು ನೋಟುಬುಕ್ಕುಗಳನ್ನು ಮಂಜವ್ವ ಕೊಡುತ್ತಾಳೆ. ಆಕೆ ತನ್ನ ಮಗ ಮುಕುಂದ ಮುಂದೆ ಡಿ.ಸಿ ಆಗುವವ ಅಂತಲೇ ನಂಬಿರುವಂಥವಳು. ಮುಕುಂದನ ಮನೆಯಲ್ಲಿದ್ದ ಎರಡು ಹುಲಿಯಂತಿರುವ ಬೆಕ್ಕುಗಳು ರಾಜನಂತೆ ಅಡ್ಡಾಡುತ್ತಿದ್ದ ಶೈಲಿಗೆ ಎಲ್ಲ ಮಕ್ಕಳು ಮಾರುಹೋಗಿದ್ದರು. ಬೆಕ್ಕುಗಳು ಮಂಜವ್ವ ಚಿಗವ್ವನ ಮಾತು ಕೇಳುತ್ತಿದ್ದುದು ಎಲ್ಲ ಹುಡುಗರಿಗೆ ಬೆರಗೆನ್ನಿಸುತ್ತಿತ್ತು. ಇಂತೆಲ್ಲ ಬಹು ಸೂಕ್ಷ್ಮನೋಟಗಳು ಓದುಗರ ಮನಸ್ಸಿನಲ್ಲಿ ನಿಂತುಬಿಡುತ್ತವೆ.


ಮುಕುಂದ ತಾನು ಮಧ್ಯರಾತ್ರಿಯೆಲ್ಲ ಕೂತು ಓದುತ್ತಿದ್ದ. ಆದರೆ ತನ್ನ ಗೆಳೆಯರಿಗೆಲ್ಲ ‘ಯಾಂವ ಓದಿ ಉದ್ದಾರ ಆಗ್ಯಾನ’ ಅಂತ ಹೇಳುತ್ತಿದ್ದ. ಗಜ್ಯಾ ಒಂದು ದಿನ ಅವನ ಪಾಟಿಚೀಲದಲ್ಲಿ ಇಲಿ ಹಾಕಿಟ್ಟು ಅವನು ಕದ್ದು ಓದುವ ಸಂಗತಿಯನ್ನು ಬಯಲಿಗೆಳೆಯಲು ಯತ್ನಿಸಿದ ಎಂಬುದೆಲ್ಲ ಸ್ನೇಹಿತರ ನಡುವಿನ ಸಹಜ ಅಸೂಯೆಯ ಸ್ಪಂದನೆಗಳನ್ನು ತೋರಿಸುವಂಥದ್ದು. ಆ ಮಧ್ಯೆ ಅಪ್ಪನ ಆರೋಗ್ಯ ಕೆಟ್ಟು ಗಜಾ ಶಾಲೆ ಬಿಡುವ ಪರಿಸ್ಥಿತಿ ಎದುರಾಗುತ್ತದೆ. ಸ್ನೇಹಿತರೆಲ್ಲ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಮುಕುಂದ ಜಿಲ್ಲೆಗೆ ಫಸ್ಟ್ ರ‍್ಯಾಂಕ್ ಬಂದಿದ್ದರೂ ಗಜ್ಯಾ ಪರೀಕ್ಷೆಗೆ ಕಟ್ಟಿದ್ದರೆ ಅವನೇ ಫಸ್ಟ್ ಬರುತ್ತಿದ್ದ ಎಂದು ಎಲ್ಲ ಮಾತಾಡಿಕೊಳ್ಳುತ್ತಾರೆ. ಅಂತೂ ಮುಕುಂದ ಮತ್ತು ದೀಪಕ ಕಾಲೇಜಿಗೆಂದು ಊರು ಬಿಡುತ್ತಾರೆ. ಆದರೆ ಸ್ನೇಹಿತರೆಲ್ಲ ಸೇರಿ, ಊರೆಲ್ಲ ಹೊಗಳುವ ಗಜ್ಯಾನ ಗರ್ವಭಂಗದ ಪ್ರತಿಜ್ಞೆ ಅವರು ಹಿಂದೆ ಮಾಡಿದ್ದು ಹಾಗೆಯೇ ಉಳಿದುಬಿಡುತ್ತದೆ.


ಶಾಲೆ ಬಿಟ್ಟ ಗಜ್ಯಾ ಎಷ್ಟು ಕ್ರಿಯಾಶೀಲನಾದನೆಂದರೆ ಸುಮ್ಮನೇ ಕೂಡದೇ ಸೈಕಲ್ ಹಾಗೂ ಚಕ್ಕಡಿ ಹೊಡೆಯುವ ತರಬೇತಿ ನೀಡುವ ಯೋಜನೆಯನ್ನು ಆರಂಭಿಸಿದ. ಊರ ಬಯಲಿನಲ್ಲಿ ಸೈಕಲ್ ಸ್ಪರ್ಧೆ ಆರಂಭಗೊಂಡಿತು. ಬಯಲಿನಲ್ಲಿ ಬೋರ್ಡು ಹಾಕಿ ಕೂತುಕೊಂಡು ಸೈಕಲ್ ಕಲಿಸುವುದು, ನೀರಲ್ಲಿ ಈಜು ಕಲಿಸುವುದು, ಚಕ್ಕಡಿ ಹೂಡಿರುವ ಎತ್ತುಗಳ ಸಂಭಾಳಿಸಲು ಕಲಿಸುವುದು, ಮಾರುಕಟ್ಟೆಗೆ ಹೋಗಿ ಉತ್ಪನ್ನಗಳನ್ನು ಮಾರಿಬರುವುದನ್ನು ಕಲಿಸತೊಡಗಿದ ಗಜ್ಯಾನ ಯೋಜನೆಗಳು ಅವನ ಸೃಷ್ಟಿಶೀಲತೆಯನ್ನು ತೋರಿಸುತ್ತವೆ. ಉಡಾಳರಂತೆ ಅಡ್ಡಾಡುವ ಹುಡುಗರೇ ನೋಡನೋಡ್ತಾ ಒಳ್ಳೆಯವರಾದಂತೆ ತೋರತೊಡಗಿದ್ದರು. ಗಜ್ಯಾ ಈಗ ದೊಡ್ಡವನಾಗಿದ್ದ. ತಾನು ಶಾಲೆ ಬಿಟ್ಟರೂ ತಂಗಿಯನ್ನು ಓದಿಸುವೆನೆಂದು ಪಣ ತೊಟ್ಟ. ಗಜ್ಯಾನ ನೇತೃತ್ವದಲ್ಲಿ ಅಂತಹ ನವೀನ ಬದುಕಿನ ಆಟಗಳು ಆರಂಭಗೊಂಡಾಗ ಮಲ್ಲೂರಿಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಿತು. ಗಜ್ಯಾನ ಹತ್ತಿರ ಹಲವರು ಬಂದು ಒಂದು ಅವಕಾಶಕ್ಕಾಗಿ ಬೇಡುವ ಸ್ಥಿತಿ ಆರಂಭವಾಗುವುದು ಕಾಲಪಲ್ಲಟಗಳನ್ನು ತೋರಿಸುತ್ತದೆ.


ಹೀಗಿರುವಾಗಲೇ ಒಂದಿನ ಸೈಕಲ್ ಗಂಟೆಯ ಸದ್ದು ಇದ್ದಕ್ಕಿದ್ದಂತೆ ನಿಂತು ಹೋಗುವುದು ಕತೆಗೆ ನಿಲುಕುವ ಒಂದು ಮಹತ್ವದ ತಿರುವು. ಗಜ್ಯಾನ ಪತ್ತೆಯೇ ಇಲ್ಲದೆ ಎಲ್ಲರೂ ಕಂಗಾಲಾಗುವ ಪರಿಸ್ಥಿತಿ ಬಂದುಬಿಡುತ್ತದೆ. ಎಲ್ಲೆಡೆ ಹುಡುಕಾಟ ಆರಂಭಿಸುತ್ತಾರೆ. ಗಜ್ಯಾನ ಸೈಕಲ್ ಸದ್ದು ಇಲ್ಲದೆ ಸೂರ್ಯ ಉದಯಿಸಿದರೂ ಹುಡುಗರಿನ್ನೂ ಕಟ್ಟೆಯ ಮೇಲೆಯೇ ಮಲಗಿರುವ ಬಿಂಬಗಳು ಕಾಣಸಿಗುತ್ತವೆ. ಅವರನ್ನು ಎಬ್ಬಿಸುವ ಗಜ್ಯಾನ ಸೈಕಲ್ ಬೆಲ್ ಮೌನವಾಗಿರುತ್ತದೆ. ಗಜ್ಯಾನನ್ನು ಕಾಣದೇ ಅವನ ನಾಯಿಯೂ ಮೂಕವಾಗಿ ಕುಳಿತುಕೊಳ್ಳುತ್ತದೆ. ಎಲ್ಲ ಕಡೆ ಹುಡುಕಲು ಆರಂಭಿಸುತ್ತಾರೆ. ಬೆಳಗಾದರೂ ನೊರೆಹಾಲಿನ ಸುಗಂಧ ಇದ್ದರೂ ಗಜ್ಯಾ ಮಾತ್ರ ಬರಲಿಲ್ಲ ಅಂತ ಊರಿಗೆ ಊರೇ ಅವನಿಗಾಗಿ ಕಾಯುತ್ತದೆ.


ಆ ಅವಸರದಲ್ಲಿ ಅಜ್ಜನ ಹತ್ತಿರ ಗಜ್ಯಾನನ್ನು ಹುಡುಕಬೇಕೆಂಬ, ಬೆಟ್ಟಕ್ಕೆ ಓಡಿಹೋಗಿ ಅಲ್ಲಿ ಪತ್ತೆ ಮಾಡಬೇಕೆಂಬ ಯೋಚನೆ ಯಾವ ಮಕ್ಕಳಿಗೂ ಹೊಳೆದಿರುವುದಿಲ್ಲ. ಥಟ್ಟನೆ ಅದು ಹೇಗೋ ನೆನಪಾಗಿ ಗಜ್ಯಾ ಅಲ್ಲೇ ಉಳಿದುಕೊಂಡಿರುವುದು ಖಂಡಿತಾ ಎಂದುಕೊಂಡು ಅಜ್ಜ ಇರುವಲ್ಲಿಗೆ ಓಡುತ್ತಾರೆ. ಆದರೆ ಅಲ್ಲಿಯ ಅಜ್ಜನೂ ನಾಪತ್ತೆಯಾಗಿರುತ್ತಾನೆ. ಆಗ ಎಲ್ಲರಿಗೂ ಅಜ್ಜ ಮತ್ತು ಗಜ್ಯಾ ಕೂಡಿಯೇ ಊರು ಬಿಟ್ಟಿದ್ದಾರೆ ಎಂಬುದು ಮನವರಿಕೆಯಾಗುತ್ತದೆ. ಗಜ್ಯಾನ ತಂದೆ ತಾಯಿಗಳು ಅಜ್ಜನನ್ನು ಶಪಿಸುವಂತಾಗುತ್ತದೆ. ಹುಡುಗರು ಮೂರು ತಂಡ ಮಾಡಿಕೊಂಡು ಗುಡ್ಡದ ಇಂಚಿಂಚನ್ನೂ ಹುಡುಕುತ್ತಾರೆ. ಆಗ ಒಡಮೂಡುವ ಗುಡ್ಡೆಯ ಮೇಲಿರುವ ಗವಿಯ ವಿವರಗಳಲ್ಲಿ ಹಳ್ಳಿಯ ಜೀವನದ ನಿಗೂಢಗಳನ್ನು ಕಥನವು ತನ್ನೊಳಗೇ ಕಟ್ಟಿಕೊಳ್ಳುತ್ತ ಹೊಸ ಚಿಂತನೆಗೆ ಹಚ್ಚುತ್ತವೆ.


ಅದೇ ಹೊತ್ತಿಗೆ ಬಿಳೀ ಅಂಬಾಸಿಡರ್ ಕಾರೊಂದು ಹೊಟೇಲಿನ ಎದುರಲ್ಲಿ ಬಂದು ನಿಲ್ಲುತ್ತದೆ. ಇನ್ನೊಂದು ಕಾರು ಊರಿನ ಕಡೆ ಹಾದುಹೋಗಿದ್ದನ್ನು ಹುಡುಗರು ಕಾಣುತ್ತಾರೆ. ಕಾರಿನಲ್ಲಿ ಅಜ್ಜ ಮಾತ್ರ ಇರುತ್ತಾನೆ. ಹುಡುಗರೆಲ್ಲ ಊರಿಗೆ ಹಿಂದಿರುಗುವ ಹೊತ್ತಿಗೆ ಗಜ್ಯಾನ ಆಗಮನದಿಂದ ಊರೆಲ್ಲ ಸಂಭ್ರಮದಲ್ಲಿ ಮೀಯುತ್ತಿರುತ್ತದೆ. ಎಲ್ಲರೂ ಗಜ್ಯಾ ಅಂತೂ ಹಿಂದಿರುಗಿದನಲ್ಲ ಎಂದು ಸಮಾಧಾನಪಡುತ್ತಿದ್ದರೆ, ‘ಒಂದು ಮಾತು ತನಗೆ ಹೇಳಿಯಾದರೂ ಹೋಗಬೇಕಿತ್ತು’ ಅಂತ ಅಮ್ಮ ಮಾತ್ರ ತನ್ನ ಕಾಳಜಿಗೆ ಕೋಪವನ್ನು ಲೇಪಿಸಿ ಗದರುತ್ತಾಳೆ. ಕೃತಿಯುದ್ದಕ್ಕೂ ಇಂಥ ಕಕ್ಕುಲಾತಿಯ ಬಿಂಬಗಳಿವೆ.


ಅಜ್ಜನೇ ಗಜ್ಯಾನನ್ನು ಮಕ್ಕಳ ಸಿನೆಮಾವೊಂದರಲ್ಲಿ ಪಾತ್ರ ಮಾಡಲು ಕರೆದೊಯ್ದಿರುತ್ತಾನೆ. ಕರೀಕಟ್ಟಿ ಮಾಸ್ರ‍್ರೇ ಕಾರು ಕೊಟ್ಟು ಕರೆಸಿ ಅವರ ಪಯಣಕ್ಕೆ ಮಾರ್ಗದರ್ಶಕರಾಗಿರುತ್ತಾರೆ. ಸಿನೆಮಾದಲ್ಲಿ ಪಾತ್ರ ಮಾಡುವ ತನ್ನ ಬಾಲ್ಯದ ಕನಸಿನ ನನಸಿಗಾಗಿ ಗಜ್ಯಾ ಊರು ಬಿಟ್ಟಿರುತ್ತಾನೆ ಅಂತ ತಿಳಿದಾಗ ಎಲ್ಲರಿಗೂ ಹೆಮ್ಮೆಯೆನಿಸುತ್ತದೆ. ಬೆಳಗಾವಿ, ಗೋವಾ ಅಂತೆಲ್ಲ ಅಜ್ಜನ ಜೊತೆಗೆ ಗಜ್ಯಾನೂ ಸುತ್ತಿ ಹೊಸ ಹೊಸ ಅನುಭವಗಳನ್ನು ಹೊತ್ತು ತಂದಿರುತ್ತಾನೆ. ತನ್ನ ಭಾಗದ ಶೂಟಿಂಗ್ ಮುಗಿಸಿ ಬಂದ ಗಜ್ಯಾ ಊರಿನ ಎಲ್ಲ ಸಂಗಾತಿ ಮಕ್ಕಳಿಂದಲೂ ಪಾತ್ರ ಮಾಡಿಸಲು ಉತ್ಸುಕನಾಗಿರುತ್ತಾನೆ. ಹೀಗೆ ಹೇಳದೇ ಓಡಿಹೋದ ಗಜ್ಯಾ ಒಬ್ಬ ಸಿನೆಮಾ ಪಾತ್ರಧಾರಿಯಾಗಿ ಊರಿಗೆ ಹಿಂದಿರುಗುವುದು ಊರಿನ ಮುಗ್ಧ ಮನಸ್ಸುಗಳಲ್ಲಿ ಬೇರೆಯದೇ ಆದ ರೋಮಾಂಚನ ಹುಟ್ಟಿಸುತ್ತದೆ.


ಒಂದು ರೀತಿಯಲ್ಲಿ ಗಜ್ಯಾ ಎಂಬ ಗ್ರಾಮೀಣ ಭಾಗದ ಹುಡುಗನೊಬ್ಬನ ಹೋರಾಟದ, ಸಾಹಸದ ಹಾಗೂ ಯಶಸ್ಸಿನ ಪಯಣವಿದು. ಅದರ ಜೊತೆ ಜೊತೆಯಲ್ಲೇ ಉತ್ತರ ಕರ್ನಾಟಕದ ಪ್ರಾದೇಶಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಗತಿಗಳ ಬಗ್ಗೆ ಈ ಕಾದಂಬರಿ ಮಾತಾಡುತ್ತದೆ. ಮಕ್ಕಳ ಮನಸ್ಸುಗಳಲ್ಲಿ ನಡೆಯುವ ಪ್ರೀತಿ, ಅಸೂಯೆ, ಸಿಟ್ಟು, ಉದಾಸೀನತೆ, ಕಾಳಜಿ ಹಾಗೂ ತಮಾಷೆಗಳ ನಡುವೆ ನಡೆಯುವ ಸಂಘರ್ಷವನ್ನು ಕಾದಂಬರಿಕಾರ ಬಸೂ ಬೇವಿನಗಿಡದ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸೂಕ್ಷ್ಮವಾಗಿ ನಮ್ಮ ಮಕ್ಕಳಿಗೆ ನೀಡಿದ್ದಾರೆ. ವಸ್ತುವಿನ ದೃಷ್ಟಿಯಿಂದ ಈ ಕಾದಂಬರಿ ಇಡೀ ಸಮುದಾಯವನ್ನು ಒಂದಾಗಿಸುವ ಆಶಯವನ್ನು ಮಕ್ಕಳಲ್ಲಿ ಬಿತ್ತುವಂತಿದೆ. ಆ ನಿಟ್ಟಿನಲ್ಲಿ ತೀವ್ರ ಸಾಮಾಜಿಕ ಕಾಳಜಿಯನ್ನೂ ಈ ಕಾದಂಬರಿ ಹೊಂದಿದೆ. ಬಸು ಬೇವಿನಗಿಡದ ಅವರ ಬರವಣಿಗೆಯ ದಾರಿಯುದ್ದಕ್ಕೂ ಮಕ್ಕಳ ಮೇಲಿನ ಮೋಹ ಹೀಗೆಯೇ ಮುಂದುವರೆಯಲಿ ಎಂದು ಮಮತೆಯಿಂದ ಆಶಿಸುವೆ.

-ಸುನಂದಾ ಕಡಮೆ

43 views0 comments