ಡಾ. ಶ್ರೀಪಾದ ಶೆಟ್ಟಿ

ಸಮದೂರದಲಿ ಕಣ್ಣಳತೆಯಲಿ
ನಿದಾನ ಗತಿಯಲಿ ಹಾರುವ ಗಾಳಿಪಟ
ಬೀಸುವ ಗಾಳಿಗೆ ತೂಗಿ ತೊನೆವ ಚಂದ
ಹಾವೆ ಹೆಡೆಯಾಡಿದರೂ ಅಭಯ ಆನಂದ
ಬಣ್ಣಗಳು ಗೊಂಡೆಗಳು ರೆಕ್ಕೆ ಬಾಲಗಳು
ಆಗಸಕೆ ಸಿರಿ ಗಂಧದ ತಿಲಕವಿಟ್ಟಂತೆ
ನೀಲಿಮದೊಡಲೊಳು ಪುಟ್ಟ ಪೊಂಗೈ
ಕಂಡಷ್ಟು ಸುಖ ಕಣ್ಮನಕೆ ನಾಟ್ಯ ನೋಟದ ವಿಸ್ಮಯ
ಆಹಾ ಎಂಥ ಸುಖದ ಮಧು ಮಧುರ ಸಮಯ
ಎಲ್ಲಿಂದ ಬಂತು ಈ ಸುಂಟರ ಗಾಳಿ
ಅಲ್ಲೋಲ ಕಲ್ಲೋಲ ಗಾಳಿಪಟಕಿಲ್ಲ ಗಾಲಿ
ಹಾರುತೇರುತ ನಲಿವ ಮುಡಿಸಿದ ಗಾಳಿ ಪಟ
ತೋಲ ತಪ್ಪಿ ಹೊಯ್ದಾಡುತಿರೆ ಜೀವ ತಳ ಮಳ
ತಲೆ ಸುತ್ತು ವಾಂತಿ ಕೆಮ್ಮು ಜ್ವರ ಅನಾಸಕ್ತಿ
ಯಾರೊ ಬಂದು ಏಳು ಹೊರಡು ತಡ ಬೇಡ
ದಬ ದಬ ಬಾಗಿಲು ತಟ್ಟುವ ಭಯಾನಕ ಸದ್ದು
ಗಾಳಿ ಪಟ ತಲೆ ಕೆಳಗಾಗಿ ಹಾರುತಿದೆ ಹದ್ದು
ನೋಡುತಿದೆ ಪಟದ ಪತನವ ತನ್ನ ಹದ್ದಿನಲಿ
ಮೋಡಗಟ್ಟಿದ ಆಕಾಶದಲಿ ಕಣ್ಣೀರ ಮಳೆ

ಸುರಿಯುತಿದೆ ಜಗದ ಕೊಳೆ ಮಳೆಯಾಗಿ
ತೊಯ್ದು ತೊಪ್ಪೆಯಾದ ಗಾಳಿಪಟವು
ಜೀವ ತಾಳುವ ಪರಿಯೆಂತು ಜೀವ ಕಾವವನೆ
ಮಿಂಚೊಂದು ಬಂದು ಗುಡುಗೊಂದು ನುಡಿದು
ಬಿಡು ಭಯವ ತಾಳು ಧೈರ್ಯವ ಆಕಾಶವಾಣಿ
ಎಲ್ಲಿಂದಲೊ ಬಂದ ಕೋವಿಡ್ ಕಲಿಗಳು
ಕರೆದು ಒಯ್ದರು ಗಾಳಿ ಪಟವ ಸರಿ ಮಾಡಲು
ಸೇನೆ ಸಜ್ಜಾಗಿ ಗಾಳಿ ಪಟವು ಒಣಗಿ ಹಾಯಾಗಿ
ಮತ್ತೆ ಆಗಸದಿ ಮೇಲೆ ಮೇಲೆ ಗಮನ
ಅದೊ ಅಲ್ಲಿ ನಗುತಿಹನು ಕಾಲ ಕಾರಣ

ಮತ್ತೆ ಹಾರ ತೊಡಗಿತು ಗರಿಗೆದರಿ ಬಾಲ ನಿಗುರಿ
ಏರುತಿಹುದು ಹಾರುತಿಹುದು ನೋಡು ಗಾಳಿಪಟ
ಮುಗಿಲ ಮನೆಯೊಳು ರೆಕ್ಕೆ ಮಿಡಿದು ಪಟ ಪಟ
