top of page

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು....

‘ಉತ್ತರಕನ್ನಡ’ ಎಂಬ ಶಬ್ದ ಬಹುಶಃ ಜಿಲ್ಲೆಯ ಜನರನ್ನು ಹೊರತುಪಡಿಸಿ ಉಳಿದವರಿಗೆ ಅಪರಿಚಿತವೆಂಬುದು ಅಪ್ರಿಯವಾದರೂ ಸತ್ಯ. ಯಾಕೆಂದರೆ ಉತ್ತರಕನ್ನಡ ಎಂದಾಕ್ಷಣ ಉತ್ತರಕರ್ನಾಟಕ ಎಂದುಕೊಳ್ಳುವವರೇ ಬಹಳಷ್ಟು ಮಂದಿ. ಇಡೀ ಕರ್ನಾಟಕದಲ್ಲಿ ಒಂದು ವಿಶಿಷ್ಟವಾದ ಜಿಲ್ಲೆಯೆಂದರೆ ಅದು ಉತ್ತರಕನ್ನಡ ಜಿಲ್ಲೆ. ಏಕೆಂದರೆ ಉತ್ತರಕನ್ನಡ ತನ್ನ ಮಗ್ಗಲಲ್ಲಿ ಸುಂದರ ಕರಾವಳಿಯನ್ನೂ, ಚುಮುಚುಮು ಚಳಿಯ ಮಲೆನಾಡನ್ನೂ, ಖಡಕ್ ಮಾತಿನ ಬಯಲುಸೀಮೆಯನ್ನೂ ಹೊಂದಿರುವ ಏಕೈಕ ಜಿಲ್ಲೆ. ಇನ್ನು ಹಸಿರು ಸೀರೆಯನ್ನೇ ಹೊದ್ದು ಮಲಗಿರುವ ಈ ಜಿಲ್ಲೆಗೆ ತನ್ನದೇ ಆದ ಭೌಗೋಲಿಕ ಪರಿಸರ ಪರಂಪರೆಯೆ ಇದೆ. ಈ ಎಲ್ಲ ಪೀಠಿಕೆಯೊಂದಿಗೆ ಜಿಲ್ಲೆಯ ಚಿಕ್ಕ ಪರಿಚಯದ ಐಡಿಕಾರ್ಡ್ ಇಲ್ಲಿದೆ.

‌ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು. ನಡುಮಧ್ಯದಲಿ ಅಡಿಕೆ ತೆಂಗುಗಳ ಮಡಿಲು ಎಂಬ ಕವಿ ದಿನಕರರವಾಣಿ ಉತ್ತರಕನ್ನಡದ ಭೌಗೋಳಿಕ ಚಿತ್ತಾರವನ್ನು ಸುಂದರವಾಗಿ ಕೆತ್ತಿನಿಲ್ಲಿಸಿದೆ. ಭೌಗೋಳಿಕವಾಗಿ ಜಿಲ್ಲೆಯ ಸುಮಾರು 70 ಪ್ರತಿಶತ ಭಾಗ ಕಾಡುಗಳಿಂದಲೇ ತುಂಬಿಕೊಂಡಿದ್ದು, ಕರ್ನಾಟಕದಲ್ಲೇ ಅತೀ ಹೆಚ್ಚು ಅರಣ್ಯಪ್ರದೇಶವನ್ನು ಹೊಂದಿದೆ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಉತ್ತರಕನ್ನಡದ ಪಾದವಿರುವುದು ಸಮುದ್ರರಾಜನ ತಟದಲ್ಲಿ. ಸುಮಾರು 140 ಕಿಮೀ ಗಳ ಸುದೀರ್ಘ ಕರಾವಳಿ ನಮ್ಮ ಜಿಲ್ಲೆಯ ಮನಮೋಹಕ ಆಸ್ತಿ. ಒಂದು ಬದಿಯಲ್ಲಿ ಘನತೆಯಿಂದ ಎದ್ದು ನಿಂತ ಗಂಭೀರ ಸಹ್ಯಾದ್ರಿ ಪರ್ವತ ಶ್ರೇಣಿಗಳು. ಅದರ ಪದತಲದಲ್ಲಿ ಅಂದಾಜು 8 ರಿಂದ 24 ಕಿಮೀ ವರೆಗೂ ವ್ಯಾಪಿಸಿದ ವಿಶಾಲ ಕರಾವಳಿ ಮೈದಾನ. ಕರಾವಳಿಯೆಂದರೆ ಕೇವಲ ಮರಳಿನರಾಶಿಯಲ್ಲ, ಅಲ್ಲಿಂದ ಇಲ್ಲಿಯವರೆಗೂ ಹರಡಿರುವ ಸಮತಟ್ಟಾದ ಶಿಖರವನ್ನು ಪಡೆದ ಅರಣ್ಯ, ಗುಡ್ಡಗಾಡುಗಳ ಸಾಲು. ಇವು 60 ರಿಂದ 100 ಮೀ. ಎತ್ತರದವರೆಗೆ ಬೆಳೆದು ನಿಂತು ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾರುವಂತಿದೆ. ಅದರ ಹಿಂದಿನ ಸಾಲೇ ಮಲೆ. ಪಶ್ಚಿಮ ಘಟ್ಟಗಳೆಂಬ ಅನೂಹ್ಯ ರತ್ನಗಳ ಪರ್ವತ ಶ್ರೇಣಿ. ಕರಾವಳಿಯ ಅರಬ್ಬೀ ಸಮುದ್ರದಿಂದ ಬೀಸುವ ನೈರುತ್ಯ ಮಾನ್ಸೂನ್ ಮಲಯ ಮಾರುತಗಳನ್ನು ಬರಸೆಳೆದಪ್ಪಿ, ವರ್ಷಾಧಾರೆಯನ್ನು ಸುರಿಸುವ ರೋಚಕ, ಮನಮೋಹಕ ಕಾಡುಗಳು. ಉತ್ತರಕನ್ನಡದ ಕರಾವಳಿ ಭಾಗದಲ್ಲಿ ವಾರ್ಷಿಕ ಸರಾಸರಿ 3000 ಮಿಲಿ ಮೀಟರ್ ಮಳೆಯಾಗುತ್ತದೆ. ಮಳೆಯ ಪ್ರಮಾಣ ಬಯಲು ನಾಡಿನಲ್ಲಿ 1000 ಮಿಲಿಮೀಟರ್ ನಷ್ಟಾದರೆ , ಮಳೆಗಾಲದ ಮಹಾಮಳೆ ಬೀಳುವುದು ಸುಂದರ ಪರಿಸರದ ಮಲೆನಾಡಿನಲ್ಲಿ. ಅದೂ ಬರೋಬ್ಬರಿ 5000 ಮಿಲಿಮೀಟರ್ ನಷ್ಟು. ಖಂಡಿತ ಅಬ್ಬಬಾ ಎನಿಸದೆ ಇರಲಾರದು. ವರ್ಷದ ನಾಲ್ಕರಿಂದ ಐದು ತಿಂಗಳು ಎಡೆಬಿಡದೆ ಸುರಿಯುವ ವರುಣ ಜೂನ್ ನಿಂದ ಸಪ್ಟೆಂಬರ್/ಆಕ್ಟೊಬರ್ ವರೆಗೆ ಬೊಬ್ಬಿರಿಯುತ್ತಾನೆ. ಕರಾವಳಿಯ ಜೀವನಾಡಿ ನದಿಗಳಿಗೆ ಗಂಗಾಪುಷ್ಠಿ ನೀಡಿ ಮರಳುತ್ತಾನೆ. ಜಿಲ್ಲೆಯ ಸಾಗರ ತಟದ ಐದೂ ತಾಲೂಕುಗಳೂ ತಲಾ ಒಂದು ಜೀವನಾಡಿಯನ್ನು ಪಡೆದಿವೆ. ಪಂಚನದಿಗಳು ಪಂಚಾಂಗದ ಪೂರ್ತಿ ತಿಂಗಳುಗಳಲ್ಲಿ ಮನದುಂಬಿ ಹರಿಯುತ್ತದೆ. ಮಳೆಗಾಲದ ಮಹಾತಾಂಡವದಲ್ಲಿ ಭೋರ್ಗರೆದು ಹರಿಯುವ ನದಿಗಳು ಸಾಗರರಾಜನ ಕಡಲಾರ್ಭಟವನ್ನು ನೂರ್ಮಡಿಗೊಳಿಸುತ್ತದೆ. ಕಾಳಿನದಿಯಿಂದ ಕಂಗೊಳಿಸುವ ಕಾರವಾರ, ಗಂಗಾವಳಿಯಿಂದ ಘಮಘಮಿಸುವ ಅಂಕೋಲಾ, ಕುಮಟಿಗರ ಪಾಪಕಳೆಯುತ್ತ ಅಘನಾಶಿನಿ, ಹೊನ್ನಾವರದ ಹೊನ್ನಿನ ಸೆಲೆ ಶರಾವತಿ, ಭಟ್ಕಳದ ಭಾವನದಿ ವೆಂಕಟಾಪುರ ನದಿಗಳು ತಮ್ಮ ಪಾತ್ರದುದ್ದಕ್ಕೂ ಪಾಲಿಸಿ ಪೋಷಿಸಿ ಬಂದ ಜೀವಗಳದೆಷ್ಟೊ, ಜೊತೆಜೊತೆಗೆ ಮುಕ್ತಿಯನ್ನು ಕರುಣಿಸಿದ ಉಪನದಿಗಳಿಗಂತೂ ಲೆಕ್ಕವೇ ಇರಲಾರದು. ಈ ಎಲ್ಲ ನದಿಗಳ ಹೊರತಾಗಿ ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯದ ಮಾತು. ಸಾಗರರಾಜನನ್ನು ಸೇರುವ ತವಕ, ತನ್ನೂರಿಗೆ ಮರಳಬೇಕೆಂಬ ಬಯಕೆ ಜಿಲ್ಲೆಯನ್ನು ಜಲಪಾತಗಳ ನಾಡನ್ನಾಗಿ ಪ್ರಮೋದಿಸಿದೆ. ಗೊತ್ತಿದ್ದೋ ಗೊತ್ತಿಲ್ಲದಯೋ ಆಳದ ಕಮರಿಗೆ ಧುಮುಕುವ ಈ ನದಿತೊರೆಗಳು ಭುವಿಯ ಮೇಲಿನ ಸ್ವರ್ಗವನ್ನೇ ಸೃಷ್ಟಿಸಿವೆ. ಮಾರು ಮಾರಿಗೂ ಜಲಪಾತಗಳ ಜಲಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜಗದ್ವಿಖ್ಯಾತ ಜೋಗ ಜಲಪಾತ ಕಣ್ಮುಚ್ಚಿ ನಿಂತರೂ ಕಣ್ಣೆದುರಿಗೆ ಬರುತ್ತದೆ. ಇದು ಶರಾವತಿ 253 ಮೀ ಆಳದ ಪ್ರಪಾತಕ್ಕೆ ಧುಮುಕಿದ ಪರಿಣಾಮ. ಶಿರಸಿ ಬಳಿಯ ಉಂಚಳ್ಳಿಯಲ್ಲಿ ಅಘನಾಶಿನಿ 116 ಮೀ ಕಂದಕಕ್ಕೆ ಬಿದ್ದು ಉಂಚಳ್ಳಿ ಜಲಧಾರೆಯನ್ನು ನಿರ್ಮಿಸಿದ್ದಾಳೆ. 180 ಮೀ ಎತ್ತರದ ಮಾಗೋಡು ಜಲಪಾತ ಉತ್ತರಕನ್ನಡ ಪ್ರಮುಖ ಜಲಪಾತಗಳಲ್ಲೊಂದು. ಶಾಲ್ಮಲಾ ನದಿ ಹಾಲ್ನೊರೆಗೈಯುತ್ತಾ 74 ಮೀ ಎತ್ತರದ ಶಿವಗಂಗ ಪಾಲ್ಸ್ ಅನ್ನು ತನ್ನದಾಗಿಸಿಕೊಂಡಿದ್ದಾಳೆ. ಅತ್ತ ಕಾರವಾರದ ಕಾಳಿಯೂ ಸಹ ಲಾಲ್ಗುಳಿ ಹಾಗೂ ಮೇಲ್ಮನೆ ಜಲಧಾರೆಗಳ ಸೃಷ್ಟಿಗೆ ಕಾರಣಳಾಗಿದ್ದಾಳೆ.


‌ಇನ್ನು ಉತ್ತರಕನ್ನಡ ಸಸ್ಯಸಂಕುಲಗಳ ನೆಲೆವೀಡು. ಜೆಲ್ಲೆಯ ಬಹುಪಾಲುಭಾಗ ಕಾಡುಗಳೇ ಆವರಿಸಿಕೊಂಡಿರುವುದರಿಂದ ಸಮೃದ್ಧವಾದ ವೃಕ್ಷಸಂತತಿಗೆ ಕಡಿಮೆಯೇನಿಲ್ಲ. ಕರಾವಳಿಯ ಹಿಂದುಗಡೆಯ ಪಾತ್ರದಲ್ಲಿ ಮಲಬಾರ್ ತೀರದ ಜೌಗು ಅರಣ್ಯಗಳು, ಅದರ ಬೆನ್ನೆಲುಬಾಗಿ ಸರಿಸುಮಾರು 250 ರಿಂದ 1000 ಮೀ ಎತ್ತರಕ್ಕೆ ಅಮೋಘವಾಗಿ ಬೆಳೆದುನಿಂತ ಪಶ್ಚಿಮ ಘಟ್ಟಗಳ ಕಾನನಗಳು. ದಟ್ಟ ಕಾನನದ ‘ಗುಂಯ್ಯ್’ ಎನ್ನುವ ಶಬ್ದ ಒಮ್ಮೆ ರಕ್ತವನ್ನೆಲ್ಲ ಬಿಸಿಗೊಳಿಸಿಬಿಡುತ್ತವೆ. ಅಣಶಿಯ ನ್ಯಾಷನಲ್ ಪಾರ್ಕ್ ಹತ್ತಿರ ಹತ್ತಿರ 250 ಚದರ್ ಕಿಮೀ ವಿಸ್ತೀರ್ಣವಾಗಿದ್ದು, ಹುಲಿ ,ಚಿರತೆ, ಕಪ್ಪುಚಿರತೆ, ಭಾರತೀಯ ಆನೆ,ಸಂಬಾರ ಮತ್ತು ಹಲವು ಜಾತಿಯ ಪಕ್ಷಿ ಸಂಕುಲಗಳಿಗೆ ಆಶ್ರಯತಾಣವಾಗಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯವು ಅಳಿವಿನಂಚಿನಲ್ಲಿರುವ ಖಗ ಮೃಗಗಳಿಗೆ ಜೀವದಾಸರೆಯನ್ನು ನೀಡಿದೆ. ಇದು ವಿಶೇಷವಾಗಿ ಬಿದಿರಿನ ಕಾಡಾಗಿದ್ದು 834 ಚದರ್ ಕಿಮೀ ನಷ್ಟು ಸುವಿಸ್ತಾರವಾಗಿ ಹರಡಿಕೊಂಡಿದೆ. ಶರಾವತಿ ವನ್ಯಜೀವಿ ಅಭಯಾರಣ್ಯವು 1972ರಿಂದಲೂ ತನ್ನ ಮಡಿಲಿನಲ್ಲಿ ಅದ್ಭುತ ಪ್ರಾಣಿ ಸಂಕುಲವನ್ನು ಸಲಹುತ್ತಾ ಬಂದಿದ್ದು 431.23 ಚದರ್ ಕಿಮೀ ವಿಸ್ತೀರ್ಣವಾಗಿದೆ. ಅಳಿವಿನಂಚಿನಲ್ಲಿರುವ ಸಿಂಗಳೀಕ, ದೊಡ್ಡಬೆಕ್ಕು, ಪೈಥಾನ್, ಕಿಂಗ್ ಕೋಬ್ರಾ,ಕಾಡುಮೊಸಳೆ,ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ನರಿ, ಕಾಡುನಾಯಿ, ಕೃಷ್ಣಮೃಗ, ಸಂಬಾರ, ಜಿಂಕೆ,ಕಾಡುಹಂದಿ ಸೇರಿ ಸುಮಾರು 400 ವಿವಿಧ ಜಾತಿಯ ಅತ್ಯಮೂಲ್ಯ ಜೀವಸಂಕುಲ ಗಳಿಗೆ ಆವಾಸಸ್ಥಾನವಾಗಿಯೂ ಶರಾವತಿ ಪೊರೆಯುತ್ತಿದ್ದಾಳೆ. ಇದಲ್ಲದೆ ಅಘನಾಶಿನಿಯ ಆವರ್ತದ ಕಾನನಗಳಲ್ಲಿ ಕೋಟ್ಯಂತರ ಬೆಲೆಬಾಳುವ ಔಷಧೀಯ ಸಸ್ಯಗಳ ದೊಡ್ಡ ಖಜಾನೆಯೆ ಇದೆ. ಮುಂಡಗೋದ ಬಳಿಯ ಅತ್ತಿವೆರಿ ಪಕ್ಷಿಧಾಮವಂತೂ ಇಪ್ಪತ್ತೆರಡು ರಾಷ್ಟ್ರಗಳ 79 ಜಾತಿಯ ಅಪರೂಪದ ಪಕ್ಷಿಸಂತತಿಗೆ ತಂಗುದಾಣವಾಗಿದೆ. ಒಂದೆಡೆ ಸೂರ್ಯನ ಬಿಸಿಲು ಭೂಮಿಗೆ ತಾಗದಷ್ಟು ದಟ್ಟವಾದ ಅರಣ್ಯ ಇನ್ನೊಂದೆಡೆ ಸವನ್ನಾ ರೀತಿಯ ಹುಲ್ಲುಗಾವಲು , ಮಾಂಗ್ರೂವ್(ಕಾಂಡ್ಲಾ) ಸಸ್ಯವರ್ಗವನ್ನು ತನ್ನೊಡಲಿನಲ್ಲಿ ತುಂಬಿಕೊಂಡ ಉತ್ತರಕನ್ನಡ ಪ್ರಾಕೃತಿಕವಾಗಿ ರಾಜ್ಯಕ್ಕೆ, ದೇಶಕ್ಕೆ ಅಮೋಘ ಕೊಡುಗೆ ನೀಡುತ್ತಿದೆ.


ಜಿಲ್ಲೆಯ ಕಾಣಿವೆಗಳಲ್ಲಿ ತೆಂಗು, ಅಡಿಕೆ,ಭತ್ತ, ಬಾಳೆ, ಗೋಧಿ,ನೆಲಗಡಲೆ, ಗೋಡಂಬಿ, ಕಲ್ಲಂಗಡಿ,ತರಕಾರಿಗಳನ್ನು ಬೆಳೆದರೆ ಅತ್ತ ಬಯಲುನಾಡಿನಲ್ಲಿ ಜೋಳ, ಮೆಕ್ಕೆಜೋಳ, ನವಣೆಗಳನ್ನು ಉತ್ಪಾದಿಸುತ್ತಾರೆ. ಹೈನುಗಾರಿಕೆ,ಕುಕ್ಕಟೋದ್ಯಮ(ಕೋಳಿ ಸಾಕಾಣಿಕೆ),ಹಾಗೂ ಸಂಪದ್ಭರಿತ ಮತ್ಸ್ಯ ಉದ್ಯಮ ಜಿಲ್ಲೆಯ ಪ್ರಮುಖ ಕೃಷಿಯೇತರ ಚಟುವಟಿಕೆಗಳು. ಬಂಡೆಗಲಿನಿಂದ ರೂಪುಗೊಂಡ ಕಡಲತಡಿಗಳು ತನ್ನ ಮಗ್ಗುಲಲ್ಲಿ ಅಪಾರ ಸಂಖ್ಯೆಯ ಮತ್ಸ್ಯ ರಾಶಿಯನ್ನು ಹೊಂದಿದೆ. ಬಿನಗಾ,ಅರಗಾ,ಬೇಲೆಕೇರಿ,ತದಡಿ,ಅಂಕೋಲಾ,ಗೋಕರ್ಣ,ಕುಮಟಾ,ಧಾರೇಶ್ವರ,ಕಾಸರಕೋಡು,ಮುರ್ಡೇಶ್ವರ, ಭಟ್ಕಳ,ಬೆಲ್ಕೆ ಬಂದರುಗಳು ಶ್ರೀಮಂತ ಮತ್ಸ್ಯ ಸಾಮ್ರಾಜ್ಯಗಳಾಗಿವೆ. ಕವಲೆಯ 5 ಅಡಿ ಎತ್ತರದ ನೈಸರ್ಗಿಕ ಶಿವಲಿಂಗ, ಸಿಂಥೆರಿ ರಾಕ್ಸ್ ನ 500 ಅಡಿ ಎತ್ತರದ ಕಲ್ಲುಬಂಡೆಗಳು , ಅದರೊಳಗಿನ ಗುಹೆಗಳು, ಯಾನದ ಕಲ್ಲಿನಗುಹೆಗಳ ಸೌಂದರ್ಯ, ಮುರುಡೇಶ್ವರದ ನೇತ್ರಾಣಿಯ ಸೊಬಗು ಉತ್ತರಕನ್ನಡದ ಎತ್ತರವನ್ನು ಇಮ್ಮಡಿಗೊಳಿಸಿದೆ.


‌ಸ್ನೇಹಿತರೆ ಇಂತಹ ಅಮೂಲ್ಯವಾದ ಪ್ರಾಕೃತಿಕ ಸಂಪತ್ತು ಹೊಂದಿದ್ದ ಅಥವಾ ದೈವೀದತ್ತವಾಗಿ ಪಡೆದಿದ್ದ ಜಿಲ್ಲೆಗಿಂದು ಅಭಿವೃದ್ಧಿಯ ಕೆಂಗಣ್ಣು ಬಿದ್ದಿದೆ. ಕೈಗಾದಲ್ಲಿ ಎರಡನೇ ಹಂತದ ಅಣುವಿದ್ಯುತ್ ಯೋಜನೆಗಾಗಿ ಅಂಕಿತ ಬಿದ್ದಿದೆ. ದಾಂಡೇಲಿ, ಜೋಯಿಡಾ ಭಾಗದಲ್ಲಿ ಪ್ರವಾಸೋದ್ಯಮದ ನೆಪದಲ್ಲಿ ಜೀವಸಂಕುಲಗಳ ಮೇಲೆ ನಡೆದ ಶೋಷಣೆ ಅಷ್ಟಿಷ್ಟಲ್ಲ. ಅತ್ತ ಬೆಂಗಳೂರಿಗರ ದಾಹ ತೀರಿಸಲು ಶರಾವತಿ ಗುರಿಯಾಗಿದ್ದಾಳೆ. ಪೃಕೃತಿ ಮಾತೆ ನಮಗಿಟ್ಟ ವರಗಳಿವು. ಪಶ್ಚಿಮ ಘಟ್ಟಗಳಿಗೆ 6 ಲಕ್ಷ ವರ್ಷಕ್ಕೂ ಮೀರಿದ ಇತಿಹಾಸವಿದೆ. ಇಂತಹ ಅತ್ಯಮೂಲ್ಯ ಸಂಪದವನ್ನು ಕಳೆದುಕೊಂಡೆವು ಅಂತಾದರೆ ಮತ್ತೆ ಹರಿಹರರೇ ಉದಿಸಿ ಬಂದರೂ ನಾವು ಮಾಡಿದ ತಪ್ಪನ್ನು ಸರಿಪಡಿಸಲಾರರು. ಅದಕ್ಕಾಗಿಯೇ ಕವಿ ದಿನಕರರ ಕವಿತೆಯ ಸಾಲುಗಳಲ್ಲಿ ಸಿರಿಗನ್ನಡದ ಚಪ್ಪರವೆಂದೇ ವರ್ಣಿತವಾದ ಉತ್ತರಕನ್ನಡ ತನ್ನ ವಾಸ್ತವಿಕ ನೆಲೆಯಲ್ಲಿಯೂ ಹಾಗೆಯೇ ಉಳಿಯ ಬೇಕಾದರೆ ಜಿಲ್ಲೆಯ ಜನರ ಎಚ್ಚರದ ಪ್ರಜ್ಞಾವಂತಿಕೆ ಅ ನಿಟ್ಟಿನಲ್ಲಿ ಅತಿ ಜರೂರು ಎಂಬುದನ್ನು ಬೇರೆ ಹೇಳಬೇಕಿಲ್ಲ ತಾನೆ!


- ಹರ್ಷ ಹೆಗಡೆ ಕೊಂಡದಕುಳಿ


ಹೊನ್ನಾವರದ ಕೊಂಡದಕುಳಿಯ ಹರ್ಷ ಬೆಂಗಳೂರಿನ ಕೆ‌. ಎಲ್‌. ಇ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಯಕ್ಷಗಾನ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದಾನೆ.ನುಡಿಜೇನು ದಿನಪತ್ರಿಕೆಯಲ್ಲಿ "ಕೈಗನ್ನಡಿ" ಎನ್ನುವ ಅಂಕಣ ಬರೆಯುತ್ತಿದ್ದಾರೆ. ಭಾಷಣ, ಬರವಣಿಗೆ ಹಾಗೂ ಫೋಟೋಗ್ರಾಫಿ ಇವರ ಹವ್ಯಾಸ. -ಸಂಪಾದಕ


323 views0 comments

Comments


bottom of page