ಒಂದು ಅಬ್ಸರ್ಡ್ ಕವನ

ಕಳೆದುಹೋಗಿದ್ದೇನೆ

ನಾನು

ಹುಡುಕಿಕೊಡಿ,


ನಿನ್ನೆ

ಇದ್ದ ನೆನಪು;

ಬೆಳಿಗ್ಗೆಯೆಂದರೆ

ಕಾಣಿಸಲಿಲ್ಲ

ನನಗೆ ನಾನೇ...‌


ಅತ್ತಿತ್ತ ತಡಕಾಡಿದೆ

ಸುತ್ತಮುತ್ತ ಹುಡುಕಾಡಿದೆ

ಊಂಹೂಂ....

ಎಲ್ಲಿಯೂ ಇದ್ದ

ಅನುಭವ ಬರಲಿಲ್ಲ,

ಅವರಿವರ ಕೇಳಬೇಕೆಂದರೆ

ಒಬ್ಬರೂ ನನ್ನ

ಮಾತು ಕೇಳಿಸಿಕೊಳ್ಳಲಿಲ್ಲ,

ನೋಡಿದಂತೆನಿಸಿದರೂ

ನೋಡಲಿಲ್ಲ;


ಮೈ ಮುಟ್ಟಿ ನೋಡಿಕೊಂಡೆ

ದೇಹಸ್ಪರ್ಶವಾದಂತೆನಿಸಲಿಲ್ಲ

ಕನ್ನಡಿಯ ಮುಂದೆ ನಿಂತು

ನನ್ನ ನಾ

ನೋಡಬಯಸಿದೆ

ಕನ್ನಡಿಯಲ್ಲಿಯೂ

ನಾನಿರಲಿಲ್ಲ


ಹಾಗಿದ್ದರೆ ನಾ

ನಿಜವಾಗಿಯೂ

ಹೋದುದೆಲ್ಲಿಗೆ?

ಯಾರನ್ನು ಕೇಳಬೇಕು?

ಹೇಗೆ ಕೇಳಬೇಕು?


ಕೊನೆಗೆ ನಿಶ್ಚಯಿಸಿದೆ

ನನ್ನನ್ನು ನಾನೇ

ಹುಡುಕಿಕೊಳ್ಳಬೇಕು,

ನನ್ನೊಳಗೆಲ್ಲೋ

"ನಾನು"

ಅಡಗಿರಬಹುದು.

ಮೊದಲು

ಆ " ನಾನು " ಯಾರು

ಎಂದು ಕಂಡುಕೊಳ್ಳಬೇಕು.

ಸಿಗಬಹುದೇ?

ಗೊತ್ತಿಲ್ಲ.



‌‌‌- ಎಲ್. ಎಸ್. ಶಾಸ್ತ್ರಿ

2 views0 comments