ಒಡೆದ ಮಡಕೆ
- ಆಲೋಚನೆ
- Nov 16, 2020
- 1 min read
ಹಲವು ಬಾರಿ ಕುಟ್ಟಿ
ಖಂಡಿತ ಗಟ್ಟಿ
ಎಂಬ ಖಾತ್ರಿಯಲಿ ಕೂಂಡದ್ದು
ಈ ಅನ್ನದ ಮಡಕೆ!
ಆದರೀಗಿದು ಒಡೆದ ಮಡಕೆ...
ಯಾರು ಯಾವಾಗ ಹೊಡೆದದ್ದು
ಮತ್ತು ಯಾವ ಕಾರಣಕ್ಕೆ
ಮಡಕೆ ಎದೆಯನ್ನೇ ಗುರಿಯಿಟ್ಟು!
ಅಥವಾ ತಾಳಲಾರದ ತಾಪದ
ಬಿರುಕೋ...
ಅಂತೂ ಈಗ
ಒಡೆದ ಮಡಕೆ...
ಇನ್ನೂ ಸಂಪೂರ್ಣ ಆಗಿಲ್ಲ
ಮಡಕೆಯ ಒಡಕು
ಆದರೆ ಒಂದೇ ಒಂದು ಹನಿ ನೀರೂ
ನಿಲ್ಲದ ಒಡಕು...
ಏನ ತುಂಬುವಿರಿ
ಹೇಗೆ ತುಂಬಿಸುವಿರಿ
ಒಡೆದು ಹೋದ ಈ ಮಡಕೆಗೆ
ನಿಂತೀತೆ ಏನಾದರೂ ಒಳಗೆ!
ತಡವಿಲ್ಲದೆ ಜಾರಿಹೋಗದೆ ಹೊರಗೆ-
ಯಾವ ಗಳಿಗೆಯಲ್ಲೂ...
ಬಿಟ್ಟುಬಿಡಿ ಉಸಾಬರಿ
ಮತ್ತು ಮೆತ್ತುವುದ ಮಡಕೆ ಒಡಕಿಗೆ-
ಒಡೆದು ಹೋಗಲಿ ಪೂರ್ಣ ತಂತಾನೇ
ಚೂರು ಚೂರಾಗಿ
ಉದುರಿ ಹೋಗಲಿ
ಎಲ್ಲ ಚೂರು ಗುಡಿಸುವ ಹಾಗೆ...
ನಂತರ ಆಗಬಹುದು
ಒಟ್ಟುಗೂಡಿಸಿ ವಿನಿಯೋಗ -
ಅಂಥದೇ ಮಣ್ಣೊಳಗೋ
ಇನ್ನೆಲ್ಲೋ...
ಮತ್ತೆ ಬೇಕಾದರೆ ಮಡಕೆ
ಇದ್ದೇ ಇರುವನಲ್ಲ ನಮ್ಮ
ಕುಂಬಾರ...
ಡಾ. ಅರಕಲಗೂಡು ನೀಲಕಂಠ ಮೂರ್ತಿ.
Extraordinary poem