top of page

" ಒಡಲಾಳದ ಸಂಕಟದ ಸಾಲುಗಳು "
ಒಡಲ ಗೀತ ( ಕವಿತೆಗಳು ) - ಶಾಂತಾರಾಮ ನಾಯಕ ಹಿಚ್ಕಡ


'ಒಡಲ ಗೀತ' ಇದು ಉತ್ತರ ಕನ್ನಡ ಜಿಲ್ಲೆಯ ಹಿರಿಯ ಕವಿ ಶಾಂತಾರಾಮ ನಾಯಕ, ಹಿಚ್ಕಡ ಇವರ ಎಂಟನೆಯ ಕವನ ಸಂಕಲನ. ತಮ್ಮ 80 ರ ಹರಯದಲ್ಲೂ ಶಾಂತಣ್ಣನ ಬದುಕು ಮತ್ತು ಬರಹ ಉತ್ಸಾಹದ ಕಾರಂಜಿಯ ಚಿಲುಮೆ ; ಅದೇ ನಯ ವಿನಯ . ಕವಿತೆ ,ಕಥೆ, ಚರಿತ್ರೆ, ಜೀವನ ಚರಿತ್ರೆ, ಪ್ರಬಂಧ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುವ ನಾಯಕರಿಗೆ ಅವರದೇ ಆದ ಶೈಲಿಯಿದೆ ಮತ್ತು ಓದುಗರಿದ್ದಾರೆ. ನಾಡಿನ ಸಾಮಾಜಿಕ , ಶೈಕ್ಷಣಿಕ , ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರಕ್ಕೆ ಸರ್ ದ್ದು ವಿಶಿಷ್ಟವಾದ ಕೊಡುಗೆ. ಮೈ ಮನಗಳಲ್ಲಿ ಸದಾ ಜೀವನ ಪ್ರೀತಿ ತುಂಬಿಕೊಂಡಿರುವ ಇವರ ಕವಿತೆಗಳು ಕಡಲೊಡಲ ಗೀತೆಗಳಾಗಿವೆ .


92 ಪುಟಗಳ ಈ ' ಒಡಲ ಗೀತ ' ವನ್ನು ಹೊನ್ನಾವರದ ಬಂಡಾಯ ಪ್ರಕಾಶನ ಪ್ರಕಟಿಸಿದ್ದು ಇದರಲ್ಲಿ 31 ಜನಪರ ನಿಲುವಿನ ಕವಿತೆಗಳಿವೆ .


ಮರೆತು ಮೇಲು ಕೀಳು

ಜಾತಿ ಮತ ಪಂಥ ದ್ವೇಷ

ಮನುಸ್ಮ್ರತಿಯ ಹರಿದು ಸುಟ್ಟು

ಮನದ ಮೈಲಿಗೆ ತೊಳೆದು

ಕಟ್ಟಳೆಯ ಬೇಲಿ ಒದ್ದು ಕೆಡುಹಿ

' ಇವ ನಮ್ಮವ, ಇವ ನಮ್ಮವ' ಎಂದು

ಎದೆ ಬಾಗಿಲು ತೆರೆದು ಆದರದಿ ಬರಮಾಡಿಕೊಳ್ಳಿ

ಹಂಚಿ ಸವಿಯೋಣ ಪ್ರೀತಿ, ಬನ್ನಿ !


ಎಂದು ' ಪ್ರೀತಿ ಪದಗಳ ಪಯಣಕೆ ಒಂದಾಗಿ ಬನ್ನಿ' ! ಕವಿತೆಯಲ್ಲಿ ಮನುಷ್ಯತ್ವ, ಮಾನವೀಯತೆಯ ಕುರಿತಾಗಿ ಮನದ ತುಂಬಾ ಹಾಡಿ ಹರಿಸಿರುವರು. ಬುದ್ಧ, ಬಸವ , ಗಾಂಧಿ, ಅಂಬೇಡ್ಕರ್ ರ ಈ ನೆಲದಲ್ಲಿ ದಿನದಿನವೂ ಜಾತಿಯ ಹೆಸರಲಿ ಅವಮಾನ, ದೌರ್ಜನ್ಯ, ಶೋಷಣೆ. ಸಮಾನತೆ, ಸಾಮರಸ್ಯದ ಬೀಜ ಮೊಳಕೆಯೊಡೆಯಲೇ ಇಲ್ಲ. ವಿಷದ ಕಳೆಯು ಮಾತ್ರ ಹುಲುಸಾಗಿ ಬೆಳೆದಿದೆ. ಇವೆಲ್ಲವನು ಮರೆತು ನಾವು ಇನ್ನುಮೇಲಾದರೂ ಮನುಷ್ಯರಾಗಿ ಬದುಕುವಾ. ಮನದ ಮೈಲಿಗೆಯ ಬೇಲಿ ಒದ್ದು ಎದೆಯ ಬಾಗಿಲು ತೆರೆಸಿ ಪ್ರೀತಿಯ ಹಂಚಿ ಉಣ್ಣುವಾ. ಪ್ರೀತಿಯ ಪದಗಳಲಿ ಮಾನವೀಯತೆಯ ಸಾಕ್ಷಾತ್ಕಾರದ ಬೆಳಕಿನಲಿ

ಮುನ್ನೆಡೆಯುವಾ ಎಂದು ಕವಿ ಹಾರೈಸಿರುವರು.


' 79 ನಾಟ್ ಔಟ್ ' ಕವಿತೆಯಲ್ಲಿ


ಬಿತ್ತಿದ್ದು ಬೆಳೆಯಲಿಲ್ಲ , ಬೆಳೆದದ್ದು ಕೈಗೆ ಬರಲಿಲ್ಲ

ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ

ಇಂದು ನಮ್ಮನ್ನಾಳುತ್ತಿರುವುದು ಬರಿ ಘೋಷಣೆ

ಇನ್ನೂ ನಿಲ್ಲದ ರೈತರ ಬಡವರ ಶೋಷಣೆ!

ಅನ್ನ, ನೀರು ಒಳ್ಳೆಯ ಮಾತಿಗೂ ತೀರ ಬರ

ಗ್ರಾಮರಾಜ್ಯದ ಕನಸು ನುಚ್ಚುನೂರು !


ಎನ್ನುತ್ತಾ ದೇಶದ ಇಂದಿನ ಪರಿಸ್ಥಿತಿಗೆ ಮರುಗಿ , ದೀಪ ಹಚ್ಚುವ ಕೈಗಳೇ ದೀಪ ಆರಿಸುವ ಕೈಗಳಾಗಿವೆ. ಬೆಳಕಿನಿಂದ ಕತ್ತಲೆಯ ಕಡೆ ನಾವು ವಾಲುತಿದ್ದೇವೆ ಎಂದು ಮರುಕ ವ್ಯಕ್ತಪಡಿಸಿರುವರು.ಎಲ್ಲವೂ ಬರೀ ಘೋಷಣೆ ಗಳಾಗಿವೆ.ರೈತರು, ಬಡವರು , ಕೂಲಿಕಾರರು ಶೋಷಣೆಯ ಜಾಲದ ದವಡೆಯಲ್ಲಿ ಸಿಕ್ಕಿ ನರಳುತ್ತಿರುವರು. ಅನ್ನ, ನೀರು ಅಷ್ಟೇ ಏಕೆ ಒಳ್ಳೆಯ ಮಾತಿಗೂ ಇಲ್ಲೀಗ ತೀವ್ರ ಬರ. ಅಧಿಕಾರ ಅಂತಸ್ತು ಗಳಿಗಾಗಿಂದು ನಮ್ಮನ್ನು ನಾವೇ ಮಾರಿಕೊಳ್ಳುತಿದ್ದೇವೆ. ಇಷ್ಟೆಲ್ಲಾ 'ಔಟ್' ಗಳ ನಡುವೆಯೂ ನಾವು " ಜಯ ಹೋ ಭಾರತ "! ದ ಅಮಲಿನಲ್ಲಿದ್ದೇವೆ ಎಂಬ ವಸ್ತುಸ್ಥಿತಿಗೆ ಕೈಗನ್ನಡಿಯಾಗಿವೆ ಈ ಕವನದ ಸಾಲುಗಳು .


ಈ ಕವಿತೆಗಳಿಗೆ ಮುನ್ನುಡಿಯ ಕಲಶವಿಟ್ಟ ನಾಡಿನ ಮಹತ್ವದ ನಾಟಕಕಾರರಾದ ವ್ಯಾಸ ದೇಶಪಾಂಡೆ , " ಒಡಲಾಳದಲ್ಲಿರುವ ಸಂಕಟವೇ ಇಲ್ಲಿ ಕಾವ್ಯ ವಸ್ತು. ಸಮಾಜದಲ್ಲಿನ ಸಾರ್ವತ್ರಿಕ ನೈತಿಕ ಅಧಃಪತನವೇ ಸಂಕಟಕ್ಕೆ ಕಾರಣ. ಈ ಸಂಕಟವನ್ನೆಲ್ಲಾ ಹೊರ ಹಾಕುವದಕ್ಕಾಗಿ ಕವಿ ಕಾವ್ಯ ಮಾಧ್ಯಮವನ್ನು ಬಳಸಿ ಕೊಂಡಿದ್ದಾರೆ. ಉಪದೇಶದಿಂದ ಸಮಾಜ ಬದಲಾಗದೆಂಬ ಸತ್ಯ ಕವಿಗೂ ಗೊತ್ತಿದೆ. ಆದರೆ ಕಾವ್ಯ ಇಲ್ಲಿ ಉಪದೇಶವಾಗಿ ಅಲ್ಲ, ಕ್ಯಾಥಾರ್ಸಿಸ್ಸಾಗಿ ಕೆಲಸ ಮಾಡುತ್ತದೆ. ಇದನ್ನು ಪ್ರತಿಕ್ರಿಯಾತ್ಮಕ ಕಾವ್ಯ ಎನ್ನಬಹುದು. ಕಾವ್ಯ ಇಲ್ಲಿ ಕವಿಯ ಒಡಲ ಸಂಕಟದ ಮಾತಾಗಿದೆ. ಮಾತಿಗೆ ಕವನದ ಬೆಡಗು ಬೇಕಿಲ್ಲ. ಕೇಳುವವನ ಅಂಗೀಕಾರ ಒಂದೇ ಸಾಕು. ಒಡಲಗೀತ ಕಾವ್ಯದ ಶೈಲಿ ಮುಕ್ತ ಮಾತಿನ ಶೈಲಿ. ಕಾವ್ಯಕ್ಕಿಲ್ಲದಿರುವ ಸ್ವಾತಂತ್ರ್ಯ ಮಾತಿಗಿದೆ " ಎಂದಿರುವರು.


ನ್ಯಾಯ ಮಂದಿರದಲ್ಲಿ ಅನ್ಯಾಯದ ಭುಗಿಲು

ತ್ಯಾಗ ಮಂದಿರದಲ್ಲಿ ಭೋಗದ ವೈಭೋಗ

ವಿದ್ಯಾಮಂದಿರ ಆಸ್ಪತ್ರೆಗಳು ಸುಲಿಗೆಯ ತಾಣಗಳು

ಪ್ರಸಿದ್ಧಿ ಪ್ರಶಸ್ತಿಗಾಗಿ ಸಮಾಜಸೇವೆ,

ನರಳುತ್ತಿದೆ ಮಾನವೀಯತೆ !


ಎನ್ನುತ್ತಾ ತಮ್ಮ ಒಡಲಿನ ಸಂಕಟವನ್ನು " ಒಡಲಗೀತೆ" ಎಂಬ ದೀರ್ಘ ಕವಿತೆಯ ಮೂಲಕ ಹೊರಹಾಕಿದ್ದಾರೆ. ದೇವಾಲಯದಲ್ಲೇ ಕಳವು , ಸತ್ತವರಿಗೂ ಪಿಂಚಣಿ, ಇಂದಿಲ್ಲಿ ಹದಗೆಟ್ಟಿದೆ ಪ್ರೀತಿ - ಸ್ನೇಹ. ಕುರುಡು ಶಾಸಕರು, ಕಿವುಡು ನೌಕರಿ ಶಾಹಿಗಳು, ಮೂಕ ಪ್ರಜೆಗಳಿಂದ ಪ್ರಜಾಪ್ರಭುತ್ವದ ಅಣಕ ನಾಟಕ ನಡೆಯುತ್ತಿದೆ. ಯಾರದೋ ಹಿತಕ್ಕೆ ನಮ್ಮ ಬಡರೈತನ ಬಲಿ. ಕೋಟಿ ವಂಚಕರೂ ಜೈಲಿನಲ್ಲಿದ್ದೇ ಗೆಲ್ಲುವರು. ಧರ್ಮದ ಹೆಸರಿನಲಿ ನಿತ್ಯ ಹೋರಾಟ, ಶೌಚಾಲಯಕಿಂತ ಇಲ್ಲಿ ದೇವಾಲಯಗಳೇ ಮೊಳಗುತ್ತಿವೆ, ನ್ಯಾಯ ಮಂದಿರದಲ್ಲೇ ಅನ್ಯಾಯದಾಟ, ತ್ಯಾಗ ಮಂದಿರದಲ್ಲಿ ಸನ್ಯಾಸಿಗಳ ಕಾಮ - ಭೋಗದಾಟ , ಸಮಾಜ ಸೇವೆಯ ಹೆಸರಲ್ಲಿ ಪ್ರಶಸ್ತಿಗಾಗಿ ಹೋರಾಟ- ಹಾರಾಟ ಎನ್ನುತ್ತಾ ಕವಿ , ಇಲ್ಲಿ ಮಾನವೀಯತೆ ನರಳುತ್ತಿದೆ ಎಂದು ತಮ್ಮ ಸಂಕಟವನ್ನು ತೋಡಿಕೊಂಡಿರುವರು.


" ಅವ್ವ " ಕವಿತೆಯಲ್ಲಿ


ಎಲ್ಲರೊಡನೆ ಪ್ರೀತಿಯ ಕ್ಯಾಶ್ ಲೆಸ್

ವ್ಯವಹಾರ ಜಾರಿಯಲಿ ತಂದು

ಥ್ಯಾಂಕಲೆಸ್ ಸೇವೆ ಸಲ್ಲಿಸಿದ

ಮೊದಲ ಮಹಿಳೆ ನನ್ನವ್ವ !


ಎಂದು ತಾಯಿಯ ಮಮತೆಯ ತ್ಯಾಗ ಕೊಂಡಾಡಿರುವರು. ಅವ್ವ ಸ್ವರ್ಗ ಸೇರಿದ ಸಂಗತಿ ಹಳೆತಾದರೂ ಆ ನೆನಪು ಹಳತಾಗದೆ ಸದಾ ಹಚ್ಚ ಹಸಿರು. ನಿತ್ಯ ದಾಸೋಹದ ತಮ್ಮ ಮನೆಯಲಿ ಬಡಿಸಿದ ಅವಳ ಕೈ ಎಂದೂ ದಣಿಯಲಿಲ್ಲ ; ಅವಳ ಕೈ ಅಡುಗೆಯ ಕೋಳಿ ಪಳದಿಯ ರುಚಿಯು ಅಮೃತ ಸಮಾನ. ದುಃಖದಲ್ಲೂ ಸುಖ ಅನುಭವಿಸಿದ ಅವ್ವ ಒಂದೇ ಒಂದು ಕವಿತೆ ಬರೆಯದಿದ್ದರೂ ಕವಿತೆಯ ಸಾಲಿನಂತೆ ಬದುಕಿದಳು. ಕ್ಯಾಶ್ ಲೆಸ್ ಪ್ರೀತಿಯ ಥ್ಯಾಂಕ್ ಲೆಸ್ ಸೇವೆ ಸಲ್ಲಿಸಿದ ಅವ್ವನಿಗಾಗಿ ನಾವೇನೂ ಮಾಡಲೇ ಇಲ್ಲ ಎಂದು ಕವಿ ಹಳಹಳಿಸಿ ಆವಳಿಲ್ಲದ ಇಂದು ಎದೆಯಲಿ ಅನಾಥಪ್ರಜ್ಞೆ ಕಾಡುತಿದೆ ಎಂದು ಮನದಲಿ ಬಿಕ್ಕಳಿಸುವರು.


" ನನ್ನ ನುಡಿ " ಎಂಬ ತಮ್ಮ ಮಾತಲ್ಲಿ ಕವಿ ಶಾಂತಾರಾಮ ನಾಯಕ, ಹಿಚ್ಕಡ "ನನ್ನ ಮೊದಲ ಕವನ ಸಂಕಲನದ (ಕಾಡಹೆಣ್ಣು) 'ನನ್ನ ಮಾತಿನಲ್ಲಿ' ಈ ಕವನ ಸಂಕಲನ ನನ್ನ ಮೊದಲನೆಯ ಹಾಗೂ ಕೊನೆಯ ಸಂಗ್ರಹವೂ ಆಗಬಹುದೇನೋ, ಎಂದು ಬರೆದುಕೊಂಡಿದ್ದೆ. ಆದರೆ ಕಾವ್ಯ ಪ್ರಿಯರ ಅಭಿಮಾನಿ ಗೆಳೆಯರ ಹಿರಿಯರ ಪ್ರೋತ್ಸಾಹ ಮೆಚ್ಚುಗೆಯ ನುಡಿಗಳಿಂದಾಗಿ ನನ್ನ ಕಾವ್ಯ ಪಯಣ ಮುಂದುವರಿದಿದೆ. ಬದುಕೊಂದು ಕಾವ್ಯ ಎಂದು ಭಾವಿಸಿರುವ ನಾನು ಕಾವ್ಯವನ್ನು ಬಿಡಲಾರದೇ ಕಾವ್ಯದ ಪ್ರೀತಿ ಪದಗಳ ಪಯಣ ಸಾಗಿ ಬಂದಿದೆ. ನನ್ನನ್ನು ನಾನು ಅರಿತು ಕೊಳ್ಳಲು ನನ್ನ ಅನುಭವದ ಪಯಣದಲ್ಲಿ ಮೂಡಿಬಂದ ಕವಿತೆಗಳು.ನನ್ನೊಡಲ ನೋವನ್ನು ನಲಿವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸಿ, ನಿಮ್ಮ ಮುಂದೆ ಇಟ್ಟಿದ್ದೇನೆ" ಎಂದಿರುವರು.


ಗಿಡಗಳ ಕಡಿವುದಂದ್ರೆ

ನಿಮ್ಮ ಮಕ್ಕಳ ಕಡಿದಂಗೆ

ಪುನ್ನರಕವೇ ಗತಿ ನಮ್ಗೆ !

ಕೆಟ್ಟ ಮಕ್ಕಳ ಪಡೆಯುವದಕಿಂತ

ಗಿಡಗಳ ನೆಟ್ಟು ಬೆಳೆಸುವದೇ ಮೇಲು

ಈ ಗಿಡಗಳು ಕೊಡುವ ಸುಖ ನೆಮ್ಮದಿ

ಕೊಡಲಾರರೋ ನಮ್ಮ ಮಕ್ಕಳು !


ಎಂದು ಅತ್ಯಂತ ಪ್ರಾಮಾಣಿಕವಾಗಿ ಎಲ್ಲರಿಗೂ ಅರ್ಥ ವಾಗುವ ಶಬ್ದಗಳಿಂದ " ಗಿಡಗಳ ಕಡೀ ಬ್ಯಾಡ್ರೋ " ಕವಿತೆಯಲ್ಲಿ ಮಕ್ಕಳಿಗಿಂತ ಗಿಡಗಳೇ ಮೇಲು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವರು. ಈಗ ಕಾಲ ಬದಲಾಗಿದೆ. ಬದಲಾವಣೆಯ ಹೆಸರಿನಲಿ ಏನೆಲ್ಲಾ ಘಟಿಸಿದರೂ ಬಿರುಕು ಬಿಟ್ಟ ನೆಲದ ಆ ಊರು ಮಾತ್ರ ಹಾಗೇ ನರಳುತ್ತಿದೆ ಎಂದು " ಆ ಊರು " ಕವಿತೆಯಲಿ,


ಪರದೇಶಿಯಂತೆ ನಿಂತ ನಿಲುವು

ಬೆಳೆಯಿಲ್ಲದ ನೀರಿಲ್ಲದ ಊರಿಗೆ

ಬರಲೊಪ್ಪಲಿಲ್ಲ ರಸ್ತೆಗಳು !

ಆದರೆ ನಿತ್ಯ ಹಾದು ಹೋಗುತ್ತಲಿವೆ

ವಿಮಾನುಗಳು ಊರ ಮೇಲಿಂದ!

ಹಾರುತ್ತವೆ ಕಾಗೆ ರಣಹದ್ದುಗಳು

ವಿಮಾನಗಳ ಜೊತೆ ಜೊತೆಯಾಗಿ !


ಎನ್ನುತ್ತಾ ಇಂದಿನ ಬದುಕಿನ ದುರಂತದ ಚಿತ್ರಗಳನ್ನು ಬಿಚ್ಚಿಟ್ಟಿರುವರು.


ಊರಿಗೆ ಸಂಚಾರಕ್ಕೇ ರಸ್ತೆ

ಇಲ್ಲದಿದ್ದರೂ , ಊರಮೇಲಿಂದ ಮಾತ್ರ ಸದಾ

ವಿಮಾನ ಹಾರಾಡುತ್ತಲೇ ಇದೆ ; ಅದರೊಡನೆ ಕಾಗೆ

ರಣ ಹದ್ದುಗಳೂ ಸಹ !!!


ಸಾಯುವ ಮೊದಲು ಬದುಕಲು

ಕಲಿಯೋ ತಮ್ಮಾ !

ನಾಳೆ ಬರಬಹುದು

ಬಾರದೇ ಇರಬಹುದು !

ನಾಳೆ ಮಾಡುವದನ್ನು

ಇಂದೇ ಮಾಡಿ ಮುಗಿಸು

ಅದರಲ್ಲೇ ಅಡಗಿದೆ

ಬದುಕಿನ ಸೊಗಸು !......


ಎಂದು ಯುವಜನತೆಗೆ ಕಿವಿಮಾತು ಹೇಳುತ್ತಿರುವ ಶಾಂತಾರಾಮ ನಾಯಕ, ಹಿಚ್ಕಡರವರ ಕವಿತೆಯ ಸಾಲುಗಳು ಜನಸಾಮಾನ್ಯರ ಒಡಲಾಳದ ಸಂಕಟದ ಸಾಲುಗಳಾಗಿವೆ. ಇವರ ಕವಿತೆಯಲ್ಲಿ , ನೋವಿದೆ - ನಲಿವಿದೆ ನಿತ್ಯ ಬದುಕಿನ ದುರಂತ ಚಿತ್ರಗಳಿವೆ. ಸ್ವಾತಂತ್ರ್ಯ ಚಳುವಳಿ ,ರೈತ ಚಳುವಳಿ, ಬಂಡಾಯ ಚಳುವಳಿ ಹೀಗೇ ಜಿಲ್ಲೆಯ ಹಲವು ಚಳುವಳಿ- ಸಂಘಟನೆಯ ಹೋರಾಟಕ್ಕೆ ಪ್ರತ್ಯಕ್ಷವಾಗಿ, ಇಲ್ಲವೇ ನೈತಿಕವಾಗಿ ಬೆಂಬಲವಾಗಿ ನಿಂತ ಅವರಿಗೆ ಶುಭ ಕೋರುತ್ತಾ, ಮುಂದಿನ ದಿನಗಳಲ್ಲೂ ಇನ್ನಷ್ಟು ಜೀವನಾನುಭವದ ಹೊಸ ಹೊಸ ಕವಿತೆಗಳು ಹೊರಬರಲಿ ಎಂದು ಹಾರೈಸಿ ಅಭಿನಂದಿಸುವೆನು.ಪ್ರಕಾಶ ಕಡಮೆ

ನಾಗಸುಧೆ , ಹುಬ್ಬಳ್ಳಿ .

192 views0 comments

Комментарии


bottom of page