top of page

ಐಶ್ವರ್ಯ

ನಾವು ’ಹಣ’ ಮತ್ತು ’ಐಶ್ವರ್ಯ’ ಎಂಬ ಶಬ್ದಗಳನ್ನು ಆಗಾಗ ಬಳಸುತ್ತಿರುತ್ತೇವೆ. ಸ್ಪಷ್ಟತೆ ಇರದೆ, ಮಾತಿನ ನಡುವೆ ಅವುಗಳ ಅರ್ಥ ಅದಲು ಬದಲಾಗುವುದೂ ಉಂಟು. ಮೇಲ್ನೋಟಕ್ಕೆ ಒಂದೇ ಎಂದು ಭಾಸವಾದರೂ ಈ ಎರಡು ಶಬ್ದಗಳ ನಡುವೆ ಅಗಾಧ ವ್ಯತ್ಯಾಸ ಇದೆ. ’ಹಣ’ ಎಂದರೆ ಐಶ್ವರ್ಯವಲ್ಲ ಮತ್ತು ಐಶ್ವರ್ಯ ಎಂಬುದರಲ್ಲಿ ’ಹಣ’ವೊಂದೇ ಸೇರಿರುವುದಲ್ಲ.


ಐಶ್ವರ್ಯವನ್ನು ಸಂಪತ್ತು ಎಂದೂ ಕರೆಯಲಾಗಿದೆ. ಹಣ ಎಂದರೆ ಚಲಾವಣೆಯ ಮೌಲ್ಯ ಮತ್ತು ಮೊತ್ತ ನಿರ್ಧಾರವಾಗಿರುವ ಐಶ್ವರ್ಯದ ಒಂದು ಭಾಗ ಮಾತ್ರ. ಐಶ್ವರ್ಯ ಎಂಬುದರಲ್ಲಿ ಹಣ ಮಾತ್ರ ಅಡಕವಾಗಿರುವುದಲ್ಲ ಅಥವಾ ಹಣವೇ ಐಶ್ವರ್ಯ ಅಲ್ಲ. ಹಣವುಳ್ಳವನನ್ನು ಧನಿಕ ಅನ್ನಬಹುದು, ಶ್ರೀಮಂತ ಅನ್ನಬಹುದು. ಆದರೆ ’ಐಶ್ವರ್ಯವುಳ್ಳ ಭಾಗ್ಯವಂತ’ ಅನ್ನಲಾರೆವು! ಅದನ್ನು ತಿಳಿದೇ ಕೆಲವರು ಹೇಳುವುದುಂಟು: ’ನಿಮ್ಮ ತನು ಮನ ಧನಗಳ ಸಹಕಾರವಿರಲಿ’ ಎಂದು. ಹಾಗಾಗಿ ’ಐಶ್ವರ್ಯ’ ಶಬ್ದದ ಅರ್ಥವ್ಯಾಪ್ತಿ ಬಹು ದೊಡ್ಡದು. ಯಾವುಯಾವುದು ನಮ್ಮ ಐಹಿಕ ಸುಖೋಪಭೋಗಗಳನ್ನು ವೃದ್ಧಿಸಿ ಪಾರಮಾರ್ಥಿಕಕ್ಕೆ ಹಾದಿ ಮಾಡಿಕೊಡಬಲ್ಲುದೋ ಅವೆಲ್ಲವೂ ಐಶ್ವರ್ಯದ ವ್ಯಾಪ್ತಿಯಲ್ಲಿ ಬರುತ್ತವೆ; ಹಣದ ವ್ಯಾಪ್ತಿಯಲ್ಲಿ ಬರುವುದಿಲ್ಲ.


ಐಶ್ವರ್ಯಗಳನ್ನು ಎಂಟು ವಿಧ ಎಂದು ಹಿಂದಿನವರು ಕರೆದಿದ್ದಾರೆ. ಆ ಅಷ್ಟ ವಿಧ ಐಶ್ವರ್ಯಗಳು ಯಾವುವು? ೧). ದಾಸೀಜನರು. ಕೆಲಸಕ್ಕೆ ಆಳುಕಾಳುಗಳು. ೨). ಭೃತ್ಯವರ್ಗ; ಸಹೋದರರು; ಒಡಹುಟ್ಟುಗಳು. ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸಕಾರ್ಯಾದಿಗಳನ್ನು ನಿರ್ವಹಿಸತಕ್ಕ ಅಣ್ಣತಮ್ಮಂದಿರು. ೩). ಪುತ್ರರು, ಎಂದರೆ ಪುತ್ರಿಯರೂ ಸೇರಿದಂತೆ ಮಕ್ಕಳು. ’ಮಕ್ಕಳಿರಲವ್ವ ಮನೆತುಂಬ’ ಎಂದು ಜನಪದರು ಹಾಡಿದ್ದಾರೆ. ಮಕ್ಕಳಿದ್ದರೆ ಮನೆಗೆ ಭೂಷಣ. ಕೆಲಸಕಾರ್ಯಗಳನ್ನು ವಿಶ್ವಾಸಾರ್ಹವಾಗಿ ಮಾಡಿ ಮುಗಿಸಲು ಮಕ್ಕಳೇ ಆಗಬೇಕು. ೪). ಬಂಧುವರ್ಗ: ನಮ್ಮ ಕಷ್ಟಕಾಲಕ್ಕೆ ಒದಗುವವರು ಬಂಧುಗಳು. ಬಂಧುಗಳ ಸಂಖ್ಯೆಯ ಆಧಾರದಲ್ಲಿ ನಮ್ಮ ಬಲ ನಿಂತಿದೆ. ಬಂಧುಗಳು ಎಂದರೆ ನಮ್ಮ ನೆಂಟರು ಎಂಬುದಷ್ಟೇ ಅರ್ಥವಲ್ಲ. ಇಷ್ಟಮಿತ್ರರು ಕೂಡ ಸೇರುತ್ತಾರೆ. ಮಿತ್ರರು ಎಂದರೆ ಸ್ನೇಹಿತರು, friends. ಇಷ್ಟರು ಎಂದರೆ ನಮ್ಮ ಪ್ರೀತಿಪಾತ್ರರಾದವರು ಎಂದು ಅರ್ಥ. ಹೃದಯನಿಷ್ಠರು; ನಮ್ಮ ಹೃದಯಕ್ಕೆ ಹತ್ತಿರಾದವರು. ನಮ್ಮ ನಂಬಿಕಸ್ಥ ಜನರು ಎಂದು ಅರ್ಥ. ತೀರಾ ಸಂಕಷ್ಟ ಕಾಲದಲ್ಲಿ ನಮ್ಮನ್ನು ರಕ್ಷಿಸುವವರು ಇಷ್ಟರು. ಯಾವುದೇ ಫಲಾಪೇಕ್ಷೆ ಇಲ್ಲದೆ ನಾವು ಅವರನ್ನು, ಅವರು ನಮ್ಮನ್ನು ಪ್ರೀತಿಸುತ್ತಾರೆ. ಯಾವುದೋ ಜನ್ಮದ ಋಣಾನುಬಂಧ ಎಂಬಂತೆ; ಅಂಥವರು ಇಷ್ಟರು. ೫). ವಸ್ತ್ರನಿಚಯ: ಬಟ್ಟೆಬರೆ, ಉಡುಗೆತೊಡುಗೆ ಇತ್ಯಾದಿಗಳು. ೬). ವಾಹನಗಳು: ಹಿಂದಿನ ಕಾಲದಲ್ಲಿ ಎತ್ತಿನಬಂಡಿ, ಕುದುರೆ, ರಥ, ಆನೆ ಇತ್ಯಾದಿಗಳಾದರೆ ಇಂದಿನ ದಿನಗಳಲ್ಲಿ ವಾಹನಗಳು. ೭). ಧನ: ನಗದುರೂಪದ ಹಣ. ೮). ಧಾನ್ಯಸಂಗ್ರಹ: ಮನೆಯಲ್ಲಿ ದಾಸ್ತಾನು ಮಾಡಿರುವ ಆಹಾರ ಪದಾರ್ಥಗಳು.


ಇಷ್ಟೇ ಅಲ್ಲ; ಐಶ್ವರ್ಯದ ವ್ಯಾಪ್ತಿಯಲ್ಲಿ ಇನ್ನೂ ಎರಡಿವೆ: ಯವ್ವನ ಮತ್ತು ಆರೋಗ್ಯ. ಯವ್ವನ ಎಂಬುದು ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ದೇಹ – ಮನಸ್ಸು ಎರಡಕ್ಕೂ ಯವ್ವನ ಬೇಕು. ವೃದ್ಧರಂತೆ ತೋರುವ ಜವ್ವನಿಗರಾದರೆ ಪ್ರಯೋಜನವಿಲ್ಲ! ವೃದ್ಧಾಪ್ಯದಲ್ಲೂ ಯವ್ವನವನ್ನು ತೋರ್ಪಡಿಸಬಲ್ಲ ಮನೋಬಲವಿದ್ದಾಗ ಅದೇ ಯವ್ವನ ಮತ್ತು ಆರೋಗ್ಯ! ಅದಕ್ಕೆ ಬೇಕಾದುದು ಸಕಾರಾತ್ಮಕ ಚಿಂತನೆ. ಸಕಾರಾತ್ಮಕ ಚಿಂತನೆಯೇ ಆರೋಗ್ಯ ಮತ್ತು ಸಂಪತ್ತಿನ ರಹಸ್ಯ.


ಇಂತಹ ಸಂಪತ್ತು ಮತ್ತು ಆರೋಗ್ಯ ನಮಗಿಂದು ಬೇಕಾಗಿರುವುದು!


-ಡಾ. ವಸಂತಕುಮಾರ ಪೆರ್ಲ

237 views1 comment

1 Comment


shivaleelahunasgi
shivaleelahunasgi
Oct 24, 2020

ಸತ್ಯವಾದ ಮಾತು..ಹಣ,ಐಶ್ವರ್ಯ ದ ಅರ್ಥ ಚೆನ್ನಾಗಿದೆ...

Like
bottom of page