ಏನು ಹೇಳಬೇಕೆಂದು ತಿಳಿಯುತ್ತಿಲ್ಲ ನನಗೆ.....

Updated: Jun 18, 2020

ಅಂದು ಕೊಂಡಿದ್ದೆ

ನೀನು ಸಿಗುವ ಹೊತ್ತು

ಇನ್ನೇನು ರಾತ್ರಿ ಕಳೆದು

ಬೆಳಗಾಗುವುದರೊಳಗೆ

ಬಂದು ಬಿಡಬಹುದು ಎಂದು

ಸೀತೆಗೆ ಅಗ್ನಿ ಪರೀಕ್ಷೆ

ಬರೆಯುವ ಪ್ರಮೇಯವೇ

ಇಲ್ಲವೆಂದು


ಕಳೆದ ಎರಡು ವಸಂತಗಳಿಂದ

ನನ್ನ ನೋಡುತ್ತ

ಖೋ ಕೊಡುತ್ತ

ಎಬ್ಬಿಸಿ ಓಡಿಸಿ ಕುಳ್ಳಿಸಿಬಿಡುವ

ಒಳ್ಳೆ ಆಟಗಾರ

ಜೊತೆಗಿರುವ ಹಠದ ಬಾಕಿ ತೀರಿಸಿ

ಹಬ್ಬದ ಮುಂಗಡವೆಂದೆ

ಸಿಗುವ ಮಾತಾಡಿದ್ದೆ


ಮಹಾನಗರದ ಮನಸುಗಳೇ ಹಾಗಿರಬೇಕು

ಬೇಕಾದಾಗ ಬಂದು ತಾವೆ ಹುಡುಕಿದ ಕಳ್ಳ ಕಿಂಡಿಯ ಖಾಲಿ ಖೋಲಿ ನೋಡಿ

ಪ್ಲ್ಯೆ ಓವರ್ ಕನಸು ಕಟ್ಟಿ

ನಗು ನಗುತ್ತ ವಾಸ್ತುವಿನ

ನೆಪವೊಡ್ಡಿ ಬೆನ್ನು ಹಾಕಿ

ಒಂಟಿಮನೆಯಾಗಿಸಿದವರು.


ಮಾಯಾವಿ ಮನಸು

ಬೇಗ ನಂಬಿಬಿಡುತ್ತದೆ

ಮುಂದೆ ಭೇಟಿಯಾಗುವೆ

ಎಂಬುದನ್ನೂ ಕೂಡ


ಓಡುವ ಕಾಲದಲ್ಲಿ

ಬದಲಾದ ವಯಸ್ಸು

ನಿನಗಿಂತ ಹತ್ತು ವರ್ಷ ಮುಂದೆ ಹೋಗಿ

ಸೀಟಿ ಊದಿ ನಿಲ್ಲಿಸುವುದು

ವಿಳಾಸವಿಲ್ಲದ ನಿಲುಗಡೆಯಲ್ಲಿ

ಆಗ ಭೇಟಿಯಾದರೂ ಕೂಡ

ಹೆಸರಿಗಷ್ಟೇ

ಆರಾಮವಾಗಿ ಇರು

ಎಂದೇ ಕಾಡಲ್ಲಿ

ಬಿಟ್ಟು ಎದ್ದೊಡುವ ರೂಢಿ


ಈಗ ಮೌನದ ಮನೆಯೊಳಗೆ ಏನೇ ಸದ್ದಾದರೂ

ನೀನೆ ಬಂದಂತೆ ನಕ್ಕಂತೆ ಮಾತಾಡಿದಂತೆ

ಎಲ್ಲಾ ಸತ್ಯ ಅಂದುಕೊಂಡರೂ

ಎಲೆಗಳ ಸದ್ದು ಬಿದ್ದು ಹೋಗುವ

ಮಾತುಗಳನ್ನೆ ಆಡುತ್ತಿವೆ

ಅಕ್ಷತಾ ಕೃಷ್ಣಮೂರ್ತಿ

199 views8 comments