ಏನು ಮಾಡಲಿ ಹೇಳು! [ಕವನ]

[ಚಿತ್ರಾಲೋಚನೆ ಎಂಬ ನಮ್ಮ ಹೊಸ ಅಂಕಣಕ್ಕೆ ಮೊದಲ ಸ್ಪಂದನವಾಗಿ ಲೇಖಕ ಶ್ರೀ ಸುರೇಶ ಹೆಗಡೆ, ಹುಬ್ಬಳ್ಳಿ ಅವರು ಪ್ರೀತಿಯಿಂದ ಬರೆದು ಕಳುಹಿಸಿದ ಕವನವನ್ನು ಪ್ರಕಟಿಸಿ ತಮ್ಮ ಮುಂದಿಡಲು ಹರ್ಷಿಸುತ್ತೇವೆ - ಸಂಪಾದಕ]ಏನು ಮಾಡಲಿ ಹೇಳು

ಇಳಿದು ಬಿಟ್ಟಿದ್ದೇನೆ

ಈ ಇಳೆಗೆ ಗಾಳಿಯೋ, ಪಕ್ಷಿಯೋ

ತಂದುರುಳಿಸಿದ ನನ್ನ ಜೀವಕಣ

ನುಸುಳಿಕೊಂಡುರುಳಿತು ಬಿರುಕು ಸಂದಿಯ ಒಳಗೆ ಬಿಚ್ಚಬೇಕಲ್ಲ ಕೋಶ ಇದ್ದ, ಬಿದ್ದ ನೀರ ಪಸೆ ಮತ್ತೆ ಸುತ್ತಣ ಮಣ್ಣ ಕಣ ಅರಸುತ್ತ ಫಲಿಸಿ, ಬೆಳೆಯಿತಲ್ಲ ಬ್ರೂಣ ಅದು ಸ್ರಷ್ಟಿಯ ನಿಯಮ ಸಂದಿ ಗೊಂದಲದಲ್ಲಿ ಬೆಳೆದೆ ಬೆಳಕ ಕಿಂಡಿಯ ಹುಡುಕಿ ಆಹಾ !! ಏನಿದು ! ಜಗದ ತುಂಬೆಲ್ಲ ಬೆಳಕೇ ಬೆಳಕು!

ಖುಷಿಗೊಂಡೆ. ತುಂಬಿತು ಶಕ್ತಿ ತೋಳುಗಳಲ್ಲಿ ಕೊನರಿತು ತಿಳಿ ಕಂದು ಹಸುಳೆ ಎಲೆ ಬಲಿತು ಹಸಿ ಮಯ್ಯ ಹಸಿರಾದೆ ಈಗ ಬಿದ್ದೆ ನಿಮ್ಮೆಲ್ಲರ ಕಣ್ಣ ಸೂರೆಗೆ ಏನು ಬೇಡಲಿ ಹೇಳು ಕಟ್ಟೆ ಕಟ್ಟುವುದು ಬೇಡ;

ಮುಂಜಿ ಮಾಡುವೂದೂ ಬೇಡ ; ಬೂಟುಗಾಲಲಿ ತುಳಿದು ಒಹೋ ಪುಣ್ಯದ ಗಿಡವೆಂದು ಹಣೆ ಮುಟ್ಟುವದು ಬೇಡ ಹೋಗಲಿ ಬಿಡು

ನಿಷ್ಪಾಪ ಸಂಕುಲವೆಂದಾದರೂ ಉಳಿಸುವೆಯೋ ಅಥವಾ

ಅಳಿವಿನಂಚಿನ ನನ್ನ ಹಿರಿಯರಿಗೆ ಬೀಸಿದ ಕೊಡಲಿ ಹರಿತವ ನನ್ನ ಬುಡಕ್ಕೆ ತಾಗಿಸುವಿಯೋ !

ನಿನ್ನ ಚಿತ್ತಕೆ ಬಿಟ್ಟು ತೆಪ್ಪಗಿರುವುದ ಬಿಟ್ಟು

ನಾನೇನು ಮಾಡಲಿ ಹೇಳು!- ಸುರೇಶ ಹೆಗಡೆ, ಹುಬ್ಬಳ್ಳಿ

30 views0 comments