ಏನೋ ತಪ್ಪಾಗಿದೆ
ಬಾಗಿಲು ಹಾಕುವಾಗ
ಸೆರಗು ಅಥವಾ ಬೆರಳು
ತಗಲಿ ಹಾಕಿಕೊಂಡಿದೆ ಸಂದಿಯಲ್ಲಿ
ಅಲ್ಲಿ ಕಾಣಿಸುತ್ತಿರುವುದು ಸೆರಗಿನ ತುದಿಯೋ
ಬೆರಳಿನಿಂದ ಜಿನುಗಿದ ರಕ್ತವೋ
ಗೊತ್ತಾಗುತ್ತಿಲ್ಲ ತುಸು ಕೆಂಪಾಗಿ
ಸಣ್ಣಗೆ ನರಳುವ ಶಬ್ದ
ಪಿಸುಮಾತು ಇರಬಹುದೇ
ಅಥವಾ ಉಮ್ಮಳಿಸುವ ಕೆಮ್ಮು
ಹಿಂದೆಲ್ಲ ಹೀಗಾಗುತ್ತಿರಲಿಲ್ಲ
ಬಾಗಿಲು ಹಾಕಿ ಹೋಗುವಾಗ
ಸುಲಭವಾಗುತ್ತಿತ್ತು ಚಿಲಕ ಹಾಕುವ ಕೆಲಸ
ಈಗಂತು ಚಿಲಕ ಹಾಕುವ ಪ್ರಮೇಯವೇ ಇಲ್ಲ
ತಳ್ಳಿ ಬಿಟ್ಟರಾಯಿತು, ಭಾರದ ಬಾಗಿಲು
ಅದಾಗಿ ಮುಚ್ಚಿಕೊಳ್ಳುತ್ತದೆ ಮೆತ್ತಗೆ
ಎಳೆದರಾಯಿತು ತೆಗೆಯಲು
ಕೆಲವು ಕಡೆ ಬಾಗಿಲುಗಳೇ ಇಲ್ಲ
ಚಾವಡಿ ಅಡುಗೆಮನೆ ಉದ್ದಕ್ಕೂ ಒಂದೇ ಜಗಲಿ
ಅಲ್ಲಲ್ಲಿ ವಿನ್ಯಾಸ ತುಸು ಬದಲಿ
ಚಾವಡಿಯಿಂದಲೇ ಕಾಣುವ ತೆರೆದ ವಾಸ್ತು
ಒಂದೇ ಒಂದು ಮೊಳೆ ಇರುವುದಿಲ್ಲ
ಕ್ಯಾಲೆಂಡರ್ ತೂಗಲು
ಗಡಿಯಾರ ನೋಡಲು
ಒಂದು ಬಾಗಿಲು ಕೂಡ ಎಂತಹ ಸಮಸ್ಯೆಗೆ ಹಾದಿ
ಹಾಕುವುದು ಮತ್ತು ತೆಗೆಯುವುದು
ಸುಲಭ ಮಾಡಬೇಕು ಸಲೀಸಾಗಿ
ಬಾಗಿಲು ಭದ್ರವಾಗಿಲ್ಲದಿದ್ದರೆ ದೊರೆಗಳಿಗೆ ಕಷ್ಟ
ಪ್ರಜೆಗಳಿಗೂ
ಒಳಗೆ ಹೋದವರೀಗ ಏನು ಮಾಡಬೇಕು
ಏಟಾಗಿರಬಹುದು ಅಲ್ಪಸ್ವಲ್ಪ
ಕೋಣೆಗಂತೂ ಬಾಗಿಲು ಬೇಕೇ ಬೇಕು
ಇರಬಹುದು ಕದವಿಲ್ಲದ ಊರು
ಆದರೆ ಮನೆಗೆ ಇರದಿದ್ದರೆ ಹೇಗೆ
ಮುಚ್ಚಿಕೊಳ್ಳಲಿಕ್ಕಾದರೂ
ಎಳೆದುಕೊಂಡು ಹೋಗಿದ್ದಾರೆ ಒಳಗೆ
ಅಚಾತುರ್ಯ ಮಡುಗಟ್ಟಿದೆ
ಕಾಯಲೇಬೇಕು ಬಾಗಿಲು ತೆಗೆಯುವ ವರೆಗೆ!
-ಡಾ. ವಸಂತಕುಮಾರ ಪೆರ್ಲ.
Comentários