ಎಲ್ಲಾ ಮಬ್ಬು...ಮಬ್ಬು

ಕಿಟಕಿಯಾಚೆಗೂ ಜಗವಿಹುದಂತೆ

ಗೋಡೆಯಾಚೆಗೆ ಗೋಡೆ ಇಲ್ಲವಂತೆ

ಗೋಡೆ ಮಧ್ಯದಲಿರುವದು ಬಾಗಿಲಂತೆ

ಗಾಳಿ ಎನ್ನುವದು ಸ್ಥಿರವಲ್ಲ:ಚರವಂತೆ

ನಾನಿರುವ ಜಾಗದ ಹೆಸರು ಜೈಲಲ್ಲವಂತೆ

ನನ್ನ ತುಟಿಗಳಲಿರುವುದು ಹೊಲಿಗೆಯಲ್ಲವಂತೆ

ಪ್ರತಿ ರಾತ್ರಿ ಕಳೆಯುವದು ನರಕದಲ್ಲಿ

..... ಅಲ್ಲವಂತೆ

ಈ ಅಂತೆಗಳ ಸಂತೆ ಸೇರದಿದ್ದರೆ

ಮನಕೆ ಕೊಂಚವಾದರೂ ನೀರು

ಚಿಮುಕಿಸಿ ಹಸಿಯಾಗಿಡುತ್ತಿದ್ದೆ

ಮಗುವನು ಅಷ್ಟು ಬೇಗ

ಬೆಳೆಯಲು ಬಿಡುತ್ತಿರಲಿಲ್ಲ

ಇನ್ನೊಂದೆರಡು ಹೆತ್ತು

ಬಾಲ್ಯ ಲೀಲೆಗಳ ಕೂತು ನೋಡುತ್ತಿದ್ದೆ

ಕಾಲನ ಕೈ ಹಿಡಿದು ಓಡಿದಷ್ಟೇ

ಜೋರಾಗಿ ನಡೆಯುತ್ತಿರಲಿಲ್ಲ

ಎರಡು ಉಸಿರುಗಳ ಕೈಗೆ

ಚಿಕ್ಕ ನಿಟ್ಟುಸಿರ ಕೊಡುತ್ತಿದ್ದೆ

ಸದಾ ಚುಚ್ಚುತ್ತಿದ್ದ

ವಾಚಿನ ಮುಳ್ಳನ್ನು ಕಾಲಿಂದ

ಕಿತ್ತು ಬಿಸಾಡುತ್ತಿದ್ದೆ

ಅಯ್ಯೋ ಯಾರಾದ್ರೂ

ಪ್ಲೀಸ್ ಹುಡುಕಿ ಕೊಡ್ತೀರಾ

ಜಡೆಗಟ್ಟಿದ ಮನದ ಸಿಕ್ಕು

ಬಿಡಿಸುವ ಬಾಚಣಿಗೆಯನ್ನು

ಎಲ್ಲಿಟ್ಟೆನೋ ಹಾಳು ಮರೆವು!

ಜಗದ ಮಬ್ಬು ಮನಕೆ ಹರಿದು

ಮನದ ಮಬ್ಬು ಜಗಕೆ ಕವಿದು

ಎಲ್ಲಾ ಅಯೋಮಯ!

- ಸುಚಿತ್ರಾ ಹೆಗಡೆ


84 views0 comments