top of page

ಎಲೆ ಮರೆಯ ಕಾಯಿ : ರವೀಂದ್ರ ಎನ್. ಶೆಟ್ಟಿ.

[ ಹೆಸರನ್ನು ಬಯಸದೆ ಮರೆಯಲ್ಲಿ ನಿಂತು ಸಮಾಜಮುಖಿಯಾಗಿ ಕಾರ್ಯಮಾಡುವ ಜನರು ಅಂದು ಇದ್ದರು, ಇಂದು ಇದ್ದಾರೆ , ಮುಂದೆಯೂ ಇರುತ್ತಾರೆ. ಆದರೆ ಅವರ ಸಂಖ್ಯೆ ಬೆರಳೆಣಿಕೆಯ ಗಣಿತ. ಅಂತಹ ಅಪರೂಪದ ವ್ಯಕ್ತಿತ್ವ ಹೊಂದಿದವರು ಶ್ರೀ ರವೀಂದ್ರ ಎನ್ ಶೆಟ್ಟಿ, ಅಂಕೋಲಾ. ಶ್ರೀಯುತರಿಗೆ ಇತ್ತೀಚೆಗೆ ‘ ಕರ್ಮವೀರ ಸಮ್ಮಾನ್-2020’ ಲಭಿಸಿದೆ. ಇಂತಹ ಅಪರೂಪದ ವ್ಯಕ್ತಿಯನ್ನು ಪರಿಚಯಿಸುವ ಈ ಲೇಖನ ಹುಬ್ಬಳ್ಳಿಯ ‘ನಾಗಸುಧೆ’ ವೇದಿಕೆಯ ಪ್ರಸ್ತುತಿಯಾಗಿದೆ. -ಸಂಪಾದಕ]

ರವೀಂದ್ರ ಶೆಟ್ಟಿ ಮೂಲತಃ ನಮ್ಮ ಅಂಕೋಲಾದ ಕಡಮೆಯವರೇ. ಅವರ ತಂದೆ ನಾರಾಯಣ ಮಾಸ್ತರರು ಕೇಣಿ ಐಸ್ ಪ್ಯಾಕ್ಟರಿಯ ಸನಿಹ ಇರುವ ಮನೆಯಲ್ಲಿಯೇ ತಮ್ಮ ಜೀವಿತದ ಬಹುಪಾಲು ಅವಧಿ ಕಳೆದ ಸೀದಾ-ಸಾದಾ, ಆದರೆ ಅಷ್ಟೇ ತತ್ವ ನಿಷ್ಠ ಶಿಕ್ಷಕರು. ನನ್ನ ಸಮವಯಸ್ಕನಾದ ರವಿಯದು ಮೊದಲಿನಿಂದಲೂ ಹೋರಾಟದ ಬದುಕೇ. ಮಾಸ್ತರರ ಮಗ ಎಂಬ ಕಾರಣಕ್ಕೆ ಅಂದು ಸ್ಟೈಪಂಡರಿ ಯೋಜನೆಯಿಂದಲೂ ವಂಚಿತನಾಗಿ ಅದೂ ಇದೂ ಕೆಲಸಾ ಮಾಡಿಕೊಂಡು ಎಲ್ಲಿಯೂ ಹೇಳಿಕೊಳ್ಳುವಂತಹ ತೃಪ್ತಿ ಸಿಗದೇ ಕೊನೆಗೆ 1988 ರ ಮೇ ತಿಂಗಳಲ್ಲಿ , ಖ್ಯಾತ ಪರಿಸರ ಹೋರಾಟಗಾರ್ತಿ ಡಾ.ಕುಸುಮಾ ಸೊರಬರ " ಸ್ನೇಹ ಕುಂಜ " ಸಂಸ್ಥೆಯಲ್ಲಿ ಹೊನ್ನಾವರದ ಕಾಸರಕೋಡಿನಲ್ಲಿ ಕಾರ್ಯಕ್ರಮ ಸಂಯೋಜಕನಾಗಿ ಸೇರಿ 2017 ರ ಮಾರ್ಚಿನ ವರೆಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ತನ್ನ ಜೀವಿತಾವಧಿಯ ಬಹುಮುಖ್ಯ ಕಾಲವನ್ನು ಸ್ನೇಹ ಕುಂಜದಲ್ಲೇ ರವೀಂದ್ರ ಕಳೆದಿದ್ದಾರೆ. ಹೀಗಾಗಿ ರವೀಂದ್ರ ನಮಗೆಲ್ಲ " ರವಿ ಕುಂಜ’ ನೆಂದೇ ಆತ್ಮೀಯ !


ಈ ಅವಧಿಯಲ್ಲಿ ರವಿ ದೇಶದ ವಿವಿಧೆಡೆ ಸಂಚರಿಸಿ ಹಲವಾರು ರಚನಾತ್ಮಕ ಕೆಲಸಗಳಿಗೆ ತೊಡಗಿಸಿ ಕೊಂಡವರು. ಇವುಗಳಲ್ಲಿ ಅತೀ ಮುಖ್ಯವಾದವು ಪರಿಸರ ಕಾಳಜಿಯ ಕೆಲಸಗಳು. ಪರಿಸರ ರಕ್ಷಣೆಯ ಕುರಿತು ಉಪನ್ಯಾಸ , ಗಿಡನೆಡುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಭೂಮಿಗೆ ಹಸಿರಿನ ಮೆರಗು ಕೊಡುವ ಅನನ್ಯ ಕೆಲಸ ಮಾಡಿದ್ದಾರೆ. ಕುಸುಮಕ್ಕನ ಜೊತೆಗೂಡಿ ಪರಿಸರ ಹೋರಾಟದಲ್ಲಿ ಭಾಗಿಯಾಗಿ ಕೈಗಾ , ಶರಾವತಿ ಯೋಜನೆಗಳ ವಿರುದ್ಧ ಹೋರಾಟಕ್ಕಿಳಿದಿದ್ದ ಇವರು ಮುಂದೆ ಸಾರಾಯಿ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡು ಆ ಕುರಿತು ನೂರಾರು ಬೀದಿ ನಾಟಕಗಳಲ್ಲಿ ಭಾಗಿಯಾಗಿದ್ದಾರೆ. ಅದೇ ಸಂದರ್ಭದಲ್ಲಿ ಪರಿಸರ ಹೋರಾಟ ಮೇಧಾ ಪಾಟ್ಕರ್ ಅವರ ಹೋರಾಟದಲ್ಲೂ ಪಾಲ್ಗೊಂಡಿದ್ದು ರವೀಂದ್ರರ ಹೆಗ್ಗಳಿಕೆ.


ಕುಸುಮಕ್ಕನ ನಿಧನದ ನಂತರ ಜಿಲ್ಲೆಯ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿಯ ನಿರ್ವಹಣೆಯ ಹೊಣೆ ಇವರ ಹೆಗಲಿಗೆ ಬಂತು. .ಈಗಲೂ ಭಾರತೀಯ ವಿಕಾಸ ಟ್ರಸ್ಟ , ಮಣಿಪಾಲ ದ ಉ.ಕ.ಜಿಲ್ಲಾ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೆಳೆಯರ ಬಳಗದೊಂದಿಗೆ "ಸಂಗಮ ಸೇವಾ ಸಂಸ್ಥೆ" ಎಂಬ ಸಂಸ್ಥೆ ರಚಿಸಿ ಜನಪರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾಮಾಣಿಕತೆ, ತತ್ವನಿಷ್ಠೆ, ಮಂದಸ್ಮಿತ ನಡೆ , ಎಲ್ಲರೊಂದಿಗೂ ಹೊಂದಾಣಿಕೆಯ ಮನೋಭಾವವೇ ಇವರ ಅಂತಃಶಕ್ತಿ. ಇದರಿಂದಲೇ ಇಂತಹ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಸಾಧ್ಯವಾಗಿದೆಯೆಂದರೆ ತಪ್ಪಾಗಲಾರದು ಮಡದಿ ಶ್ರೀಮತಿ ಗೀತಾ ಬೆನ್ನೆಲುಬಾಗಿ ನಿಂತು ಕುಟುಂಬದ ಜವಾಬ್ದಾರಿ ನಿರ್ವಹಿಸಿದ್ದರಿಂದಲೇ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯ ಎನ್ನುವ ರವಿ ನಮ್ಮ ನಿಮ್ಮೆಲ್ಲರ ಮಧ್ಯೆ ಒಬ್ಬ ಅಪರೂಪಿ ಚೇತನ. ಪ್ರಸ್ತುತದಲ್ಲಿ ಅಂಕೋಲೆಯ ಬಾಳೆಗುಳಿಯಲ್ಲಿ ಹೆಂಡತಿ , ಮಕ್ಕಳಾದ ರೋಹನ್ & ಚಂದನ್ ರೊಂದಿಗೆ ವಾಸವಾಗಿದ್ದಾರೆ. ರೋಹನ್ ಎಂಎಸ್ಸಿ ಬಿಎಡ್ ಆಗಿ ಉಪಸ್ಯಾಸಕ, ಚಂದನ್ ಪುಣೆಯ ಟಿ.ಸಿ.ಎಸ್ ನಲಿ ಇಂಜನೀಯರ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.


ಈ ಮಧ್ಯೆ, ಇವರ ಸಮಾಜ ಸೇವೆಯನ್ನು ಗುರುತಿಸಿ ಉತ್ತರ ಪ್ರದೇಶದ ಅಖಿಲ ಭಾರತೀಯ ಸರ್ವ ವೈಶ್ಯ ಏಕತಾ ಮಹಾಸಭಾ ಟ್ರಸ್ಟ ಈ ವರ್ಷದ " ಕರ್ಮವೀರ ಸನ್ಮಾನ್ 2020 " ಎಂಬ ಪ್ರಶಸ್ತಿ ಗೌರವಿಸಿದೆ.


ಪ್ರಶಸ್ತಿ , ಪುರಸ್ಕಾರಗಳಿಗೆ ಬೆಂಬಿಡದೆ ಕಾಡಿ ಬೇಡಿ ಸನ್ಮಾನಿಸಿಕೊಳ್ಳುವ ಪ್ರವೃತ್ತಿ ಕೆಲವೆಡೆ ಕಣ್ಣಿಗೆ ಬೀಳುವ ಈ ಹೊತ್ತಿನಲ್ಲಿ ಸೇವೆಯೆಂಬ ಯಜ್ಞದಲ್ಲಿ ತನ್ನನ್ನು ತೊಡಗಿಸಿಕೊಂಡ ರವೀಂದ್ರ ಒಂದು ಅಪರೂಪದ ವ್ಕಕ್ತಿಯಾಗಿ ನಮ್ಮೆಲ್ಲರ ಮಧ್ಯೆ ಇದ್ದಾರೆ.


ಪ್ರೀತಿಯ " ರವಿಕುಂಜ " ನಿಮ್ಮ ನಗುಮೊಗದ ಸಮಾಜ ಸೇವೆಗೆ ನಾಗಸುಧೆಯಿಂದ ಶುಭಕೋರಿ ಅಭಿನಂದಿಸುವೆ .


ಪ್ರಕಾಶ ಕಡಮೆ

‘ ನಾಗಸುಧೆ’ ವೇದಿಕೆ, ಹುಬ್ಬಳ್ಳಿ

120 views2 comments
bottom of page