top of page

ಎದ್ದೇಳು ಮಂಜುನಾಥಾ ! [ಪ್ರಬಂಧ ]

‘ ಎದ್ದೇಳು ಮಂಜುನಾಥಾ s s s ಎದ್ದೇಳು s s s s ಬೆಳಗಾ s s s ಯಿತು.’ ಎನ್ನುವ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೇಲೆ ರಚಿತವಾಗಿರುವ ಸುಪ್ರಭಾತ ಗೀತೆ ಬಾಲ್ಯದಿಂದಲೂ ನನ್ನ ಅತ್ಯಂತ ಪ್ರೀತಿಯ ಹಾಡುಗಳಲ್ಲೊಂದು. ಹಿನ್ನೆಲೆ ಗಾಯಕ ಶ್ರೀ ಪಿ.ಬಿ.ಶ್ರೀನಿವಾಸರ ಕಂಠಸಿರಿಯಲ್ಲ್ಲಿ ಹೊರಹೊಮ್ಮಿದ ಆ ಹಾಡು ನಿಜವಾಗಿಯೂ ಒಂದು ಭಾವುಕ ಪ್ರಪಂಚವನ್ನೇ ಸೃಷ್ಟಿಸುತ್ತದೆಯೆಂದು ನನ್ನ ಅನಿಸಿಕೆ. ಈ ಹಾಡನ್ನು ಕೇಳಿದ ಧರ್ಮಸ್ಥಳದ ಧರ್ಮದೇವತೆಯಾದ ಮಂಜುನಾಥನು ಏಳುತ್ತಾನೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆದರೆ ಆ ಹಾಡು ಬಂದಾಗಲೆಲ್ಲ ನಾನಂತೂ ಎಚ್ಚೆತ್ತು ಅದನ್ನು ಕೇಳಿಯೇ ಕೇಳುತ್ತೇನೆ. ಎಪ್ಪತ್ತರ ದಶಕದಲ್ಲಿ ರಾತ್ರಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸಹ ಈ ಹಾಡನ್ನು ಹಾಕುತ್ತಿದ್ದುದು ಈ ಸುಪ್ರಭಾತದ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.!


ಈ ಹಾಡು ಕೇಳುವಾಗಲೆಲ್ಲ ನನ್ನಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ’24 x 7’ ಎಂದು ಹಣೆಪಟ್ಟ್ಟಿ ಹಚ್ಚಿಕೊಂಡು ಎಡಬಿಡದೇ ಪ್ರಸಾರಕ್ಕಿಳಿಯುವ ಇಂದಿನ ಟಿ.ವಿ.ಚಾನೆಲ್‍ಗಳಂತೆ ಹಗಲಿರುಳೆನ್ನದೇ ಸದಾ ತನ್ನ ಭಕ್ತರನ್ನು ಪೊರೆಯುವ ಆ ಮಹಾಮಹಿಮನನ್ನು ಎಬ್ಬಿಸಲು ಸುಪ್ರಭಾತದ ಅವಶ್ಯಕತೆ ಇದೆಯೇ? ಒಮ್ಮೆ ಹೌದೆಂದಾರೆ ಆತ ಮಲಗುತ್ತಾನೆಂದು ಅರ್ಥವಾಗಿ ಹಗಲಿರುಳೆನ್ನದೇ ಆತ ಭಕ್ತರನ್ನು ಪೊರೆಯುತ್ತಾನೆಂಬ ಮಾತು ಸುಳ್ಳಾಗುವದಿಲ್ಲವೇ? ಹೀಗೆಲ್ಲಾ ಪ್ರಶ್ನಿಸಿದರೆ ಇವನೊಬ್ಬ ನಿರೀಶ್ವರವಾದಿಯೆಂಬ ಹಣೆಪಟ್ಟಿಯನ್ನು ನನಗೆ ಕಟ್ಟುತ್ತೀರಿ ಎಂದು ನಾನು ಬಲ್ಲೆ. ಆದರೆ ಖಂಡಿತವಾಗಿಯೂ ನಾನು ನಾಸ್ತಿಕನಲ್ಲ. ದೈವತ್ವದಲ್ಲಿ ನನಗೆ ಖಂಡಿತ ನಂಬುಗೆಯಿದೆ. ಆದರೆ ನನ್ನ ಪ್ರಶ್ನೆ ಅದಲ್ಲ. ಮಂಜುನಾಥನಂತಹ ಶಕ್ತಿಶಾಲಿ ದೇವರು ಎಚ್ಚೆತ್ತು ಕೊಳ್ಳುವದಕ್ಕೆ ಮಾನವರ ಮುಖದಿಂದ ಹೊರಡುವ ಸುಪ್ರಭಾತದ ಅವಶ್ಯಕತೆಯಿದೆಯೆ ?

ನನ್ನ ಬಹುದಿನಗಳ ಚಿಂತನೆಯ ನಂತರ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ. ಮಂಜುನಾಥನನ್ನು ಎಬ್ಬಿಸಲು ಸುಪ್ರಭಾತ ಹುಟ್ಟಿರಲಿಕ್ಕಿಲ್ಲ. ಆದರೆ ಸದಾ ಭೌತಿಕ ಪ್ರಪಂಚದಲ್ಲಿ ಮುಳುಗಿ ಹಗಲು-ರಾತ್ರಿಗಳನ್ನು ಒಂದಾಗಿಸಿರುವ ನಮ್ಮಂತಹವರನ್ನು ಎಬ್ಬಿಸಲು ಪರೋಕ್ಷವಾಗಿ ಇಂತಹ ಸುಪ್ರಭಾvಗಳು ರಚಿತವಾಗಿರಬೇಕು. ಅದೂ ಇಂದಿನ ತಾಂತ್ರಿಕ ಬದುಕಿನ ಚಕ್ರದಲ್ಲಿ ಸಿಲುಕಿರುವ ನಮ್ಮ ಯುವಜನಾಂಗವನ್ನು ಹಾಸಿಗೆಯಿಂದ ಎಬ್ಬಿಸಲು ಇದಕ್ಕಿಂತ ಮಜಬೂತಾದ ಸುಪ್ರಭಾತ ಇದ್ದರೆ ಒಳ್ಳೆಯದೆಂಬುದು ನನ್ನ ಅಭಿಪ್ರಾಯ.


ಶಾಲೆಗೆ ಹೋಗುವ ಮಕ್ಕಳಿರುವ ಯಾವುದೇ ಮನೆಗೆ ಹೋಗಿ ನೋಡಿ. ಎಲ್ಲ ತಂದೆ-ತಾಯಿಗಳದ್ದು ಒಂದೇ ಪರಿಪಾಟಲು - ನಮ್ಮ ಮಕ್ಕಳು ಬೆಳಿಗ್ಗೆ ಎಂಟು ಗಂಟೆಯಾದರೂ ಹಾಸಿಗೆ ಬಿಟ್ಟು ಕದಲುವುದಿಲ್ಲ. ಬೆಳಿಗ್ಗೆ ಎಂಟೂವರೆಗೆ ಅವರನ್ನು ಕೂಗಿ ಎಬ್ಬಿಸುವದರೊಳಗೆ ನಮಗೆ ಸಾಕು ಸಾಕಾಗಿ ಹೋಗುತ್ತದೆ. ರಾತ್ರಿ ಪೂರ್ತಿ ಅದ್ಯಾವುದೋ ಟಿ.ವಿ.ಚಾನೆಲ್ ಅಥವಾ ಇಂಟರನೆಟ್ ಹಾಕಿಕೊಂಡು ಕೂತಿರುತ್ತಾರೆ. ಹೀಗಿರುವಾಗ ಮುಂಜಾನೆ ಹೇಗೆ ಬೇಗ ಏಳಲು ಸಾಧ್ಯ ಹೇಳಿ? ಇದು ಇಂದಿನ ತಂದೆ-ತಾಯಿಗಳಿಗೆ ಭೂತದಂತೆ ಕಾಡುತ್ತಿರುವ ಪ್ರಶ್ನೆಯಾಗಿದೆ.


ನಿಜವಾಗಿಯೂ ಇಂದಿನ ಯುವ ಜನತೆಗೆ ಪ್ರಾತಃಕಾಲದ ಸುಂದರ ಅನುಭವಗಳು ಕನಸುಗಳೇ ಆಗಿವೆಯೆಂದರೆ ತಪ್ಪಾಗಲಾರದು. ಹಿಂದೊಂದು ಕಾಲ ಇತ್ತು. ಬೇಗ ಮಲಗಿ ಬೇಗ ಏಳು – ಎಂದು ಎಚ್ಚರಿಸಲಾಗುತ್ತಿತ್ತು.. ನಾವು ಚಿಕ್ಕವರಿರುವಾಗ ರಾತ್ರಿ ಎಂಟುಗಂಟೆಗೆ ಊಟ ಬಡಿಸುತ್ತಿದ್ದರು. ಅಷ್ಟರೊಳಗೆ ನಾವು ನಮ್ಮ ಓದು-ಬರೆಹಗಳನ್ನು ಮುಗಿಸಬೇಕಾಗಿತ್ತು. ರಾತ್ರಿ ಊಟ ಮುಗಿಸಿದ ತರುವಾಯ ಒಂಬತ್ತು ಒಂಬತ್ತುವರೆಯೊಳಗೆ ನಾವು ನಿದ್ರಾದೇವಿಯ ಸೆರಗಿಗೆ ಜಾರಿಕೊಳ್ಳಬೇಕಾಗಿತ್ತು. ಅದೇ ರೀತಿ ಬೆಳಿಗ್ಗೆ 5.30 ಕ್ಕೆ ಎದ್ದು ಮುಖಮಾರ್ಜನ ಮಾಡಿ ಮತ್ತೆ ಅಭ್ಯಾಸಕ್ಕೆ ಕುಳಿತುಕೊಳ್ಳಬೇಕಾಗಿತ್ತು. ಒಮ್ಮೆ ಓದು-ಬರೆಹ ಇಲ್ಲದಿದ್ದರೆ ಬೆಳಕು ಹರಿಯುತ್ತಿದ್ದಂತೆ ತೋಟಕ್ಕೆ ಹೋಗಿ ಹೂವು ಕಿತ್ತು ತರುವದು ಇಲ್ಲವೆ ಅಡಿಕೆ ಹೆಕ್ಕಿ ತರುವ ಕಾಯಕ ಕೈಗೊಳ್ಳಲೇಬೇಕಿತ್ತು. ಅದೊಂದು ಕಾಲ - ಬೆಳಿಗ್ಗೆ ಮುಂಚೆ ಏಳುವದೇ ಒಂದು ಹಿರಿಮೆಯ ಮಾತಾಗಿತ್ತು. ಯಾರಾದರೂ ತಡವಾಗಿ ಎದ್ದರೆ ಅವನಿಗೆ ‘ಸೂರ್ಯವಂಶಿ’ಯೆಂದು ನಾಮಕರಣ ಮಾಡಿ ಶಾಲೆಗಳಲ್ಲಿ ಛೀಮಾರಿ ಹಾಕುತ್ತಿದ್ದರು. ತಡವಾಗಿ ಏಳುವವರು ಸೋಮಾರಿಗಳು; ನಿರುಪಯೋಗಿಗಳು; ದಂಡಪಿಂಡಗಳು - ಎಂದೆಲ್ಲ ಬಿರುದು ಬಾವಲಿ ಭೂಷಿತರಾಗುತ್ತಿದ್ದರು.

ಹೀಗೆಂದ ಮಾತ್ರಕ್ಕೆ ಬೇರೆಯವರ ಒತ್ತಡಕ್ಕೆ ಮಣಿದು ನಾವು ಮುಂಜಾನೆ ಬೇಗ ಏಳುತ್ತಿದ್ದವೆಂದು ಯಾರೂ ಪರಿಭಾವಿಸಬಾರದು. ಬೇಗ ಏಳುತ್ತಿದ್ದುದರಲ್ಲಿ ನಮ್ಮ ಸಂತೋಷ ಮತ್ತು ಹಿತಾಸಕ್ತಿಗಳಿಗೆ ಸಂಬಂಧಿಸಿದ ಕೆಲವು ಅಂಶಗಳು ಇರುತ್ತಿದ್ದವು. ಅದರಲ್ಲಿ ಅತಿಮುಖ್ಯವಾದುದು ಸೀಸನ್ನುಗಳಲ್ಲಿ ಮಾವಿನ ಹಣ್ಣು ಹೆಕ್ಕುವದು. ಕರಾವಳಿಯ ಪ್ರದೇಶಗಳಲ್ಲಿ ತೋಟಪಟ್ಟಿಗಳ ಮಧ್ಯೆ ಮಾವಿನ ಮರಗಳು ಸಾಮಾನ್ಯ. ಇವುಗಳಲ್ಲಿ ಹೆಚ್ಚಿನವು ಕಾಗೆಯೋ, ಮಂಗವೋ ಮತ್ತು ಅಳಿಲೋ ಕಚ್ಚಿ ಬಿಸಾಕಿದ ಮಾವಿನ ಹಣ್ಣಿನ ಗೊರಟೆ [ಬೀಜ] ಯು ಸೃಷ್ಟಿಯ ಕೃಪೆಯಿಂದ ಮೊಳಕೆಯೊಡೆದು ಗಿಡವಾಗಿ, ಮರವಾಗಿ, ಅಷ್ಟೇಅಲ್ಲಾ ಹೆಮ್ಮರವಾಗಿ ಬೆಳದು ನಿಂತವುಗಳು. ಇಂತಹ ಮರಗಳಿಂದ ಉದುರುವ ಹಣ್ಣುಗಳು, ತೋಟದ ಮಾಲಿಕನ ತಕರಾರು ಇಲ್ಲದಿದ್ದರೆ , ಸಾರ್ವಜನಿಕ ಸೊತ್ತಾಗಿ ಬಿಡುತ್ತಿದ್ದವು. ಈ ಮರಗಳ ಹಣ್ಣುಗಳು ಎಲ್ಲವೂ ಒಂದೆ ಗುಣಮಟ್ಟದವುಗಳಲ್ಲ. ಕೆಲವು ತುಂಬಾ ಸಿಹಿ ಇದ್ದರೆ ಕೆಲವಂತೂ ಅತಿ ಹುಳಿಯಾಗಿರುತ್ತಿದ್ದವು. ಬೇಸಿಗೆ ಕಾಲದಲ್ಲಿ ಹಣ್ಣು ಬಿಡುವ ಹೊತ್ತಿನಲ್ಲಿ ಈ ಮರಗಳಿಂದ ರಾತ್ರಿಯಲ್ಲಿ ಉದುರುವ ಹಣ್ಣುಗಳನ್ನು ಮುಂಜಾನೆ ಬೇಗ ಎದ್ದು ಹೆಕ್ಕಿ ತರುವದು ಹುಡುಗರಾಗಿದ್ದ ನಮಗೆಲ್ಲ ಅಚ್ಚುಮೆಚ್ಚಿನ ಕೆಲಸವಾಗಿತ್ತು. ತಂದ ಹಣ್ಣುಗಳಲ್ಲಿ ರುಚಿ ಇರುವದನ್ನು ತಿಂದು ಉಳಿದ ಹಣ್ಣುಗಳಿಂದ ಮಾವಿನ ಹಣ್ಣಿನ ಹಪ್ಪಳ ಮಾಡುತ್ತಿದ್ದೆವು. ಸೀಸನ್ನಿನ ಕೊನೆಯಲ್ಲಿ ನಾವು ಎಷ್ಟು ಹೆಚ್ಚು ಹಣ್ಣಿನ ಹಪ್ಪಳಗಳನ್ನು ಹೊಂದಿದ್ದೇವೆಯೋ ಅಷ್ಟು ನಾವು ಸಂಪದ್ಭರಿತರೆಂದು ಭಾವಿಸುತ್ತಿದ್ದೆವು.

ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಹಾಸಿಗೆಯಿಂದ ಮುಂಚೆ ಎದ್ದರೆ ಹೆಚ್ಚು ಹಣ್ಣುಗಳು ನಮಗೆ ಲಭ್ಯವಾಗುತ್ತಿದ್ದವು. ಅದಕ್ಕಾಗಿಯೇ ಬೇಗ ಏಳಬೇಕೆಂಬ ಛಲ ಆಗ ನಮ್ಮಲ್ಲಿ ತನ್ನಿಂದತಾನೇ ಉಂಟಾಗುತ್ತಿದ್ದು ಬೇಗ ಏಳಲು ಅಲಾರಾಂ ಸಹಾಯವನ್ನೋ, ತಂದೆ-ತಾಯಿಗಳ ಸಹಾಯವನ್ನೋ ಪಡೆಯುತ್ತಿದ್ದೆವು. ಒಮ್ಮೆ ಬೇಗ ಏಳುವದಕ್ಕೆ ವ್ಯತ್ಯಯವಾಗಿ ಹಣ್ಣುಗಳು ದೊರಕದೆ ಇದ್ದಾಗ ಬೇಗ ಎಬ್ಬಿಸದೇ ಇದ್ದುದಕ್ಕಾಗಿ ತಂದೆ-ತಾಯಿಗಳ ಮೇಲೆ ನಾವು ಸಿಟ್ಟಾಗುತ್ತಿದ್ದೆವು. ಜೊತೆಗೆ ನಮ್ಮನ್ನು ನಾವೇ ಹಳಿದುಕೊಳ್ಳುತ್ತಿದ್ದೆವು. ಇಂತಹ ಸಂದರ್ಭಗಳಲೆಲ್ಲಾ ನನಗೆ ಸಂತ ಕಬೀರರ ‘ ಜೋ ಸೋವತ ಹೈ ವೋ ಖೋವತ ಹೈ; ವೋ ಜಾವ


ತ ಹೈ ವೋ ಪಾವತ ಹೈ’ ಎಂಬ ದೋಹಾ ನೆನಪಾಗುತ್ತಿತ್ತು. ಇದರರ್ಥ – ಯಾವನು ಮಲಗಿರುತ್ತಾನೋ ಅವನು ಕಳೆದುಕೊಳ್ಳುತ್ತಾನೆ; ಯಾವನು ಎಚ್ಚೆತ್ತಿರುತ್ತಾನೊ ಅವನು ಪಡೆಯುತ್ತಾನೆ. ಕಬೀರರ ಈ ಮಾತನ್ನು ನಮ್ಮ ಬಾಲ್ಯದ ಮಾವಿನ ಹಣ್ಣು ಹೆಕ್ಕುವ ಕಾಯಕದಲ್ಲಂತೂ ನಾವು ನೂರಕ್ಕೆ ನೂರರಷ್ಟು ಪರಿಪಾಲಿಸುತ್ತಿದ್ದೆವೆಂದರೆ ಅತಿಶಯೋಕ್ತಿಯೇನೂ ಇಲ್ಲಾ.


ಬೆಳಿಗ್ಗೆ ಮುಂಚೆ ಏಳುವದಕ್ಕೆ ನಮಗೆ ಇನ್ನೊಂದು ಕಾರಣ ಇರುತ್ತಿತ್ತು. ಬೇಗ ಏಳುವದರಿಂದ ಬೇಗ ಸ್ಕೂಲಿಗೆ ಹೋಗಿ ಮೊದಲ ಬೆಂಚಿ£ಲ್ಲ್ಲಿ ಕುಳಿತುಕೊಳ್ಳಬಹುದಾಗಿತ್ತು. ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುವದು ನಿಜವಾಗಿಯೂ ಪ್ರತಿಷ್ಠೆಯ ವಿಚಾರವಾಗಿತ್ತು. ಸದಾ ತಡವಾಗಿ ಬರುವ ವಿದ್ಯಾರ್ಥಿಗಳು ‘ ಹಿಂದಿನ ಸಾಲಿನ ಮಕ್ಕಳು ನಾವು’ ಎಂಬ ಹಾಡಿನಂತೆ ಅವಗಣನೆಗೆ ಒಳಗಾಗುತ್ತಿದ್ದರು. ಮುಂಜಾನೆ ಬೇಗ ಏಳುವದರಿಂದ ದಿನದ ಹೆಚ್ಚಿನ ಅವಧಿ ನಮಗೆ ಲಭ್ಯವಾಗುವಂತಾಗಿ ದೈನಂದಿನ ಚಟುವಟಿಕೆಗಳನ್ನು ಗಡಿಬಿಡಿಯಿಲ್ಲದೇ ನಿಭಾಯಿಸಲು ಹೆಚ್ಚು ಸಮಯ ದೊರಕುತ್ತದೆಂಬ ಅಂಶ ನಮಗೆ ಆಗಲೇ ಮನದಟ್ಟಾಗಿತ್ತು.


ಮುಂಜಾನೆ ಬೇಗ ಎದ್ದು ತೋಟಗಳಿಗೆ ಹೋಗುವದು, ಹೊಸ ಹೂವುಗಳನ್ನು ಆಯ್ಕೆ ಮಾಡಿ ದೇವರ ಪೂಜೆಗೆ ಒಪ್ಪಿಸುವದು - ಇಂತಹ ಕೆಲಸಗಳಲ್ಲಿ ನಮಗಂತೂ ಅಪಾರ ಮುದವಿರುತ್ತಿತ್ತು. ಬೇಗ ಎದ್ದು ತೋಟಕ್ಕೆ ಹೋದರೆ ಮಾತ್ರ ನಮಗೆ ಉತ್ತಮ ಹೂವುಗಳು ಸಿಗುತ್ತಿದ್ದವು. ಇವುಗಳ ಹೊರತಾಗಿಯೂ ಬೇಗ ಎದ್ದು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವದರಿಂದ ನಮ್ಮಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹಗಳು ಇಮ್ಮಡಿಗೊಳ್ಳುತ್ತಿದ್ದವು. ಮಾನಸಿಕವಾಗಿಯೂ, ದೈಹಿಕವಾಗಿಯೂ ನಮ್ಮ ಬಲವೃದ್ಧಿಯಾದಂತಾಗಿ ಸಮಾಜದಲ್ಲಿ ಆತ್ಮಗೌರವ ಹೆಚ್ಚಾದಂತೆ ಭಾಸವಾಗುತ್ತಿತ್ತು. ಅಷ್ಟೇ ಅಲ್ಲಾ ಇಂದೂ ಸಹ ದೈನಂದಿನ ಚಟುವಟಿಕೆಗಳಲ್ಲಿ ಶಿಸ್ತಿನಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿದ್ದುದು ಅಂದು ನಾವು ಬೇಗ ಏಳುತ್ತಿದ್ದುದರಿಂದ ಎಂಬುದು ನಮಗೀಗ ಅರ್ಥವಾಗುತ್ತಿದೆ. ಕುಟುಂಬದ ಎಲ್ಲ ಸದಸ್ಯರು ಬೇಗ ಎದ್ದು ಮುಖ ಮಾರ್ಜನಮಾಡಿ ದೇವರಿಗೆ ನಮಸ್ಕರಿಸಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುವ ರೀತಿಯ ಹಿಂದೆ ಕೌಟುಂಬಿಕ ಬದುಕಿಗೆ ಅವಶ್ಯವಾದ ತಾದಾತ್ಮ್ಯ ಭಾವವೊಂದು ಅಂದು ಕೆಲಸಮಾಡುತ್ತಿತ್ತೆಂದು ನನ್ನ ಅನಿಸಿಕೆ.

ಆದರೆ ಇಂದು ಕಾಲ ಬದಲಾಗಿದೆ. ದೂರದರ್ಶನ, ಅಂತರ್‍ಜಾಲ, ನೈಟ್ ಕ್ಲಬ್‍ಗಳು, ಅಷ್ಟೇ ಅಲ್ಲಾ ರಾತ್ರಿ ಪಾಳಿಯಲ್ಲಿ ದುಡಿಯುವದು, ರಾತ್ರಿಯಾದ ಮೇಲೆ ಪಯಣಿಸುವದು, ರಾತ್ರಿಯಲ್ಲಿಯೂ ಮಲಗದ ಬೆಂಗಳೂರಿನಂತಹ ನಗರದಲ್ಲಿ ವಾಸಿಸುತ್ತಿರುವ ನಾಗರಿಕರ ವಿಚಿತ್ರ ತೆವಲುಗಳು - ಹೀಗೆ ಹಲವು ಹತ್ತು ಕಾರಣಗಳಿಂದ ಮೂರಾಬಟ್ಟೆಯಾಗಿರುವ ಇಂದಿನ ಯುವಜನತೆಯ ಬದುಕಿನಲ್ಲಿ ಮುಂಜಾನೆಯ ಅದ್ಭುತ ಚಣಗಳು ಕಾಣೆಯಾಗಿವೆಯೆಂದೇ ನನ್ನ ಅಭಿಪ್ರಾಯ. ಜೊತೆಗೆ ಕೌಟಂಬಿಕ ಬದುಕಿನ ಸರಿಗಮವೇ ತಾಳತಪ್ಪಿದೆಯೆಂದು ನನ್ನ ಭಾವನೆ.


ಬೆಂಗಳೂರಿನಲ್ಲಿ ಕೆಲವು ಕಾಲದಿಂದ ವಾಸವಾಗಿದ್ದ ನನ್ನ ಮಿತ್ರರೊಬ್ಬರು ಮೊನ್ನೆ ಸಿಕ್ಕಾಗ ಹೇಳಿದ ಮಾತು ಆಧುನಿಕ ಬದುಕಿನ ಅನಿಮಿಯತೆ, ಯಾಂತ್ರಿಕತೆ ಹಾಗೂ ಧಾವಂತದ ಕ್ಷಣಗಳಿಗೆ ಹಿಡಿದ ಕನ್ನಡಿ. ಅವರೊಬ್ಬ ಸರಕಾರಿ ಕ್ಷೇತ್ರದಲ್ಲಿ ಕೆಲಸಮಾಡುವ ಉದ್ಯೋಗಿ. ಬೆಳಿಗ್ಗೆ 6.00 ಕ್ಕೆ ಎದ್ದು ಮಿಲ್ಕ ಬೂತ್‍ನಿಂದ ಹಾಲು ತಂದಿಟ್ಟ ಅವರು, ವಾಕಿಂಗ್ ಮುಗಿಸಿ ಮನೆಗೆ 7.00 ಗಂಟೆಗೆ ತಿರುಗಿ ಬರುತ್ತಾರಂತೆ. ಸ್ನಾನ ಮುಗಿಸಿ, ದೇವರಿಗೆ ಚಿಕ್ಕದಾಗಿ ಸೆಲ್ಯೂಟ್ ಹೊಡೆದು ತಿಂಡಿ ತಿಂದು ಬಿ.ಎಮ್.ಟಿ.ಸಿ. ಬಸ್ಸು ಹಿಡಿದು 9.30 ರೊಳಗೆ ಕಛೇರಿ ತಲುಪುತ್ತಾರಂತೆ. ಇನ್ನು ಸಂಜೆ 6.00 ಗಂಟೆಗೆ ಮನೆಗೆ ಬಂದು ಟೀ ಕುಡಿದು, ಸ್ವಲ್ಪ ಹೊತ್ತು ಪೇಪರ್ ಓದಿ ಜೊತೆಗೆ ಟಿ.ವಿ.ವೀಕ್ಷಿಸಿ 9.30 ಕ್ಕೆ ಊಟ ಮಾಡಿ ರಾತ್ರಿ 10.30 ಕ್ಕೆ ಮಲಗುತ್ತಾರಂತೆ. ಮತ್ತೆ ಮರುದಿನ ಬೆಳಿಗ್ಗೆ 6.00 ಗಂಟೆಗೆ ಎದ್ದರೆ ಪುನಃ ಹೊಸ ದಿನದ ಅವರ ದಿನಚರಿ ಅನಾವರಣಗೊಳ್ಳುತ್ತದಂತೆ. ಆದರೆ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಎಮ್.ಎನ್.ಸಿ.ಗಳಲ್ಲಿ ಕೆಲಸ ಮಾಡುವ ಅವರ ಮಕ್ಕಳದ್ದು. ಅವರು ಹಾಸಿಗೆಯಿಂದ ಏಳುವದು ಇವರು ಕಛೇರಿಗೆ ಹೋದ ಮೇಲೆಯೇ. ಇನ್ನು ಮನೆಗೆ ಬರುವದು ಇವರು ಮಲಗಿದ ಮೇಲೆಯೇ. ಹೀಗಿರುವಾಗ ತಂದೆ ಮಕ್ಕಳ ಪರಸ್ಪರ ಮಿಲನ ವಾರದಲ್ಲಿ ಒಂದು ದಿನ ಮಾತ್ರ - ಅದು ರವಿವಾರ. ಅದೂ ಅ ರವಿವಾರ ಬೇರೆ ಕೆಲಸ ಇದೆಯೆಂದು ಮಕ್ಕಳು ಹೊರಗೆ ಹೋದರೆ ಮನೆಗೆ ಬರುವದು ಮಧ್ಯೆ ರಾತ್ರಿಯ ನಂತರವೇ. ಹೀಗಿರುವಾಗ ಬದಲಾದ ಬದುಕಿನ ಜರೂರಿಗೆ ಒಳಗಾಗಿರುವ ಇಂದಿನ ಯುವಜನಾಂಗವು ಕೇವಲ ಪ್ರಾತಃ ಬದುಕಿನ ಉಲ್ಲಾಸವನ್ನಷ್ಟೇ ಅಲ್ಲಾ ಅವಿಭಕ್ತ ಕುಟುಂಬದ ಅಂತಃಸ್ಪೂರ್ತಿಯ ಸೆಲೆಯಿಂದಲೇ ವಂಚಿತರಾಗಿರುವದು ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು.

ಹಾಗೆಂದ ಮಾತ್ರಕ್ಕೆ ಇಂದಿನ ಯುವ ಜನತೆ ಮುಂಜಾನೆ ಬೇಗ ಏಳುವದಿಲ್ಲವೆಂದೇನೂ ಇಲ್ಲ . ನಾನು ಬೆಳಿಗ್ಗೆ ವಾಕಿಂಗ್‍ಗೆಂದು ಪಾರ್ಕಿಗೆ ಹೋದಾಗ ಕೆಲವು ಯುವಕರು ಪಾರ್ಕಿನಲ್ಲಿ ಓಡುವುದು, ವ್ಯಾಯಾಮ ಮಾಡುವುದು, ಯೋಗಾಭ್ಯಾಸ ಮಾಡುವುದು ಮುಂತಾದ ಪ್ರಕ್ರಿಯೆಗಳಲ್ಲಿ ತೊಡಗಿರುವುದನ್ನು ಹಲವುಬಾರಿ ಕಂಡಿದ್ದೇನೆ. ಆದರೆ ಇವರಾರೂ ಬೆಳಗಿನ ಸೊಬಗನ್ನಾಗಲಿ, ಬಾನಾಡಿಗಳ ಚಿಲಿಪಿಲಿಯನ್ನಾಗಲಿ ಸವಿಯುವ ಮನಸ್ಥಿತಿಯಿಂದ ಬಂದವರಂತೆ ತೋರುವುದಿಲ್ಲ. ಇವರೆಲ್ಲ ಕೆಲಸದ ಒತ್ತಡದಿಂದ ಉಂಟಾಗುವ ವಿಕೃತಿಗಳಿಂದ ಪಾರುಮಾಡಿಕೊಳ್ಳುವದಕ್ಕೋ ಅಥವಾ ಯಮಧರ್ಮರಾಜನ ಸಹೋದರನ ಆದೇಶಕ್ಕೆ ತಲೆಬಾಗಿ ‘ವಾಕಿಂಗ್’ ಎಂಬ ಅನಿವಾರ್ಯತೆಗೆ ಒಳಗಾಗಿರುವ ಬಂಧಿಗಳಂತೆ ನನಗೆ ಕಾಣುತ್ತಾರೆ.


ತಡವಾಗಿ ಹಾಸಿಗೆಯಿಂದ ಏಳುವದು ಇಂದು ಎಷ್ಟು ಗಂಭೀರ ವಿಷಯವಾಗಿದೆಯೆಂದರೆ ಕೆಲವು ದಿನಗಳ ಹಿಂದೆ ಒಮ್ಮೆ ಒಂದು ರೇಡಿಯೋ ಚಾನಲ್‍ನಲ್ಲ್ಲಿ ಈ ಕುರಿತು ಒಂದು ದೊಡ್ಡ ಚರ್ಚೆ ಪ್ರಸಾರವಾಗಿದ್ದನ್ನು ನಾನು ಕೇಳಿದ್ದೇನೆ. ಅಷ್ಟೇ ಅಲ್ಲಾ ಇತ್ತೀಚಿನ ದಿನಗಳಲ್ಲಿ ಅಂತರಜಾಲಗಳಲ್ಲೂ ಈ ಅಂಶವು ಬಹುಚರ್ಚಿತ ವಿಷಯವಾಗಿ ಪರಿಣಮಿಸಿದೆ. ಹಲವು ಫಿಟ್‍ನೆಸ್ ತಜ್ಞರು, ಯೋಗ ಗುರುಗಳು ಹಾಗೂ ಸಾರ್ವಜನಿಕರು ಮುಂಜಾನೆ ಬೇಗ ಏಳುವದರಲ್ಲಿ ದೊರಕುವ ಲಾಭವನ್ನು ತಮ್ಮ ಅನುಭವ ಹಾಗೂ ಅಭ್ಯಾಸದಿಂದ ವಿಸ್ತರವಾಗಿ ಚರ್ಚಿಸಿ ಹಲವು ವಿಚಾರಗಳನ್ನು ಅಂತರ್ ಜಾಲದಲ್ಲಿ ಹರಿಬಿಟ್ಟಿದ್ದಾರೆ. ಬೇಗ ಏಳುವದಕ್ಕೆ ಅನುಕೂಲವಾದ ಹಲವು ಮಾರ್ಗದರ್ಶಿಗಳನ್ನು ಸಹ ಅವರು ತೆರೆದಿಟ್ಟಿದ್ದಾರೆ. ಈ ಚರ್ಚೆಗಳನ್ನು ನೋಡಿದಾಗ ಇಡಿ ದೇಶವೇ ಇಂದು ಬೆಳಗಿನ ಸಮಯದಲ್ಲಿ ಸೂರ್ಯ ನೆತ್ತಿಗೇರಿದರೂ ಧರಾಶಾಯಿಯಾಗಿ ಉಳಿಯುವ ಯುವ ಜನತೆಯ ಕುರಿತು ಅಪಾರ ಕಳವಳಕ್ಕೊಳಗಾಗಿದೆಯೆಂಬುದು ಹೆಚ್ಚು ಸ್ಪಷ್ಟ.


ಒಂದು ಬಾರಿ ಅಂತರಜಾಲವನ್ನೆಲ್ಲಾ ಜಾಲಾಡಿದಾಗ ನಿದ್ದೆಯ ವಿಚಾರದಲ್ಲಿ ಹಲವು ಸಿದ್ಧಾಂತಗಳು ಹೊರಹೊಮ್ಮಿದ್ದು ಕಂಡುಬಂತು. ಅವುಗಳಲ್ಲಿ ನಿದ್ದೆಗೆ ಯಾವಾಗ ಮೊರೆ ಹೋಗಬೇಕು ಮತ್ತು ಹಾಸಿಗೆಯಿಂದ ಯಾವಾಗ ಏಳಬೇಕು – ಈ ಎರಡು ಅಂಶಗಳ ಸುತ್ತವೇ ಚರ್ಚೆ ಕೇಂದ್ರೀಕೃ ತವಾಗಿತ್ತು. ಮೊದಲನೆಯ ಅಂಶ ಅಂದರೆ ನಿದ್ದೆಯ ಸಮಯದ ಬಗ್ಗೆ ಅಲ್ಲಿ ಒಮ್ಮತವಿರದಿದ್ದರೂ ಎರಡನೆಯ ಅಂಶ, ಅಂದರೆ ಬೆಳಿಗ್ಗೆ ಹಾಸಿಗೆಯಿಂದ ಏಳುವ ಸಮಯದ ವಿಚಾರದಲ್ಲಿ, ಮಾತ್ರ ಎಲ್ಲಾ ಪಂಗಡಗಳಲ್ಲಿ ಒಮ್ಮತ ಮೂಡಿರುವದು ಸ್ಪಷ್ಟವಾಗಿತ್ತು. ಬೇಗ ಮಲಗಿ ಅಥವಾ ತಡವಾಗಿ ಮಲಗಿ ಆದರೆ ಏಳುವದು ಮಾತ್ರ ಬೇಗ ಇರಲಿ; ನಿಗದಿತ ಸಮಯಕ್ಕಿರಲಿ - ಎಂಬುದು ಚರ್ಚೆಗಳ ಅಂತಿಮ ನಿರ್ಣಯ. ಬೇಗ ಏಳುವವ ಯೋಗಿ; ತಡವಾಗಿ ಮಲಗುವವ ಭೋಗಿ; ಮಲಗಿಯೇ ಇರುವವನನ್ನು ಎತ್ತಿಕೊಂಡು ಹೋಗಿ – ಎಂಬುದು ಅದರ ಸಂದೇಶ.

ಅದಕ್ಕಾಗಿಯೇ , ‘ಎದ್ದೇಳು ಮಂಜುನಾಥಾ s s s’ ಎಂದು ಆಗ್ರಹಪೂರ್ವಕ ಧ್ವನಿಯಲ್ಲಿ ಹಿರಿಯರು ಸುಪ್ರಭಾತದ ಮುಖೇನ ಆಧುನಿಕ ಬದುಕಿನ ವಿಸ್ಮೃತಿಗಳಿಗೆ ಬಲಿಯಾಗುತ್ತಿರುವ ಜನತೆಯನ್ನು ಎಬ್ಬಿಸಬೇಕಾದ ಜರೂರು ಇಂದು ಎಂದಿನಕ್ಕಿಂತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕವಿ ವಾಣಿಯೊಂದು ಅರ್ಥಪೂರ್ಣ.


ಮೂರು ಸಾಗರ, ನೂರು ಮಂದಿರ, ದೈವ ಸಾಸಿರ ಇದ್ದರೆ;

ಗಂಗೆ ಇದ್ದರೆ, ಸಿಂಧು ಇದ್ದರೆ, ಗಿರಿ ಹಿಮಾಲಯವಿದ್ದರೆ:

ವೇದ ಇದ್ದರೆ, ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ

ಏನು ಸಾರ್ಥಕ ಮನೆಯ ಜನರೇ ಮಲಗಿ ನಿದ್ರಿಸುತ್ತಿದ್ದರೆ !

-0-
-ಶ್ರೀಪಾದ ಹೆಗಡೆ, ಸಾಲಕೋಡ


102 views0 comments
bottom of page