top of page

ಎಚ್.ಎಸ್.ದೊರೆಸ್ವಾಮಿ

ಸತ್ಯಸಂಧರೂ ಗಾಂಧಿವಾದಿಗಳು ಸ್ವಾತಂತ್ರ್ಯ ಹೋರಾಟಗಾರರು ಆದ ಎಚ್.ಎಸ್.ದೊರೆಸ್ವಾಮಿ ಅವರು ಕನ್ನಡ ನಾಡಿನ ಮನಸ್ಸಾಕ್ಷಿಯಂತೆ ಬದುಕಿದವರು."ನುಡಿದಂತೆ ನಡೆ ಇದೆ ಜನ್ಮ ಕಡೆ" ಎಂಬ ಬಸವಣ್ಣನ ವಚನಕ್ಕೆ ಜೀವಂತ ನಿದರ್ಶನವಾಗಿದ್ದರು.

೧೯೮೫ ಅಥವಾ ೮೬ ಸರಿಯಾಗಿ ನೆನಪಾಗುತ್ತಿಲ್ಲ. ಅಂಕೋಲೆಯ ಜಿ.ಸಿ.ಕಾಲೇಜಿಗೆ ಎಚ್.ಎಸ್.ದೊರೆಸ್ವಾಮಿ,

ಮಾಧವ ಗಾಡ್ಗೀಳ,ವ್ಯಾಸರಾವ್ ನಿಂಜೂರ ಹಾಗು ನಾಗೇಶ ಹೆಗಡೆ ಬಕ್ಕೆಮನೆ ಅವರು ಬಂದಿದ್ದರು.ಅವರ ಆತಿಥ್ಯದ ಹೊಣೆಯನ್ನು ಪ್ರಿ.ಕೆ.ಜಿ.ನಾಯಕ ಅವರು ನನಗೆ ವಹಿಸಿದ್ದರು.ಅದರಿಂದ ಇಡಿ ದಿನ ಅವರನ್ನೆಲ್ಲಾ ಒಡನಾಡುವ ಅವಕಾಶ ಪ್ರಾಪ್ತವಾಯಿತು.ಕಾಲೇಜು ಕ್ಯಾಂಟಿನ್ನಿನ ಗೋಪಿ ಎಂದಿನಂತೆ ರುಚಿಕಟ್ಟಾಗಿ ಅಡಿಗೆ ಮಾಡಿದ್ದರು.ಆ ದಿನ ದೊರೆಸ್ವಾಮಿ ಮತ್ತು ಮಾಧವ ಗಾಡ್ಗೀಳ ಅವರ ಜೊತೆ ಹೆಚ್ಚು ಹೊತ್ತು ಸಂಭಾಷಣೆ ನಡೆಸಿದೆ. ದೊರೆಸ್ವಾಮಿ ತಮ್ಮ ಸಹಜತೆಯಿಂದ ನನ್ನೊಳಗಿನ ಆಪ್ತರಾಗಿ ಬಿಟ್ಟರು. ಆಮೇಲೆ ದಿನಕರ ದೇಸಾಯಿ ಶತಮಾನೋತ್ಸವಕ್ಕೆ ಅವರು ಬಂದಿದ್ದರು.ಅವರಿಗೆ ನಮಿಸಿ ಬಂದಿದ್ದೆ. ಆ ಸಂದರ್ಭದಲ್ಲಿ ನಾನು ನನ್ನ ಗೆಳೆಯರು ಎಂದು ಬಲವಾಗಿ ನಂಬಿಕೊಂಡಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಗಳಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರು ದಿನಕರ ದೇಸಾಯಿ ಅವರ ಕುರಿತ ನನ್ನ ಕೃತಿಯನ್ನು ಅಕಾಡೆಮಿ ವತಿಯಿಂದ ಪ್ರಕಟಿಸುವ ಭರವಸೆ ನೀಡಿ ಕೊನೆಗೆ ಒದಗಿ ಬಂದ ಕೆಲವು ಅಂಗಭೋಗ ರಂಗಭೋಗಾದಿ ಸೇವೆಗಳಿಂದ ನಿರ್ಧಾರ ಬದಲಿಸಿ ನನಗೆ ನಾಚ್ ವಾಲಿಯಾಗಿ ಕಂಡಿದ್ದರಿಂದ ನನ್ನ ಪ್ರಬಂಧ ಮಂಡಿಸಿದ ಬಳಿಕ ಅವರ ಮುಸುಡು ನೋಡಲು ಬೇಸರವಾಗಿ ಹೊನ್ನಾವರಕ್ಕೆ ಮರಳಿ ಬಂದಿದ್ದೆ.ಹಾಗಾಗಿ ದೊರೆಸ್ವಾಮಿ ಅವರ ಜೊತೆ ಕೆಲಹೊತ್ತು ಕುಳಿತು ಮಾತನಾಡಲು ಸಾಧ್ಯವಾಗಲಿಲ್ಲ

ಎಂಬ ಹಳಹಳಿ ಹಾಗೆ ಉಳಿದುಕೊಂಡಿದೆ.

ನಮ್ಮ ಸಾಹಿತ್ಯ ಪ್ರಪಂಚದ ಪಕ್ಷಪಾತ,ಬಾಲಬಡಕತನ,

ಕಾರ್ಯವಾಸಿ ಕತ್ತೆಕಾಲು ಹಿಡಿಯುವವರಿಗಿಂತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪ್ರಜ್ಞಾವಂತ ಹಿರಿಯರಾದ ಎಚ್.ಎಸ್.ದೊರೆಸ್ವಾಮಿ ಅವರ ನಿಧನ ನಿಜಕ್ಕೂ ನಮ್ಮ ನಾಡಿಗೆ,ನಮ್ಮ ದೇಶಕ್ಕೆ ತುಂಬಿ ಬಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.


- ಡಾ.ಶ್ರೀಪಾದ ಶೆಟ್ಟಿ.
8 views0 comments

Comentarios


bottom of page