ಉರಿಯುವ ಬೆಂಕಿಯೆದುರು
- ಆಲೋಚನೆ
- Mar 27, 2022
- 1 min read
ನಿಮ್ಮ ಬೆಂಕಿಯುಂಡೆಗಳಿಗೆ ಬೋರಲು ಬಿದ್ದ
ನೆರಳಹೆತ್ತ ಈ ಮರ
ಕತ್ತರಿಸಿದ ರೆಂಬೆ ಹಸಿ ಚಿಗುರೆಲೆ
ಅಟ್ಟಹಾಸದ ಕಾದ ಬಾಣಲಿಯೊಂದಿಗೆ ಸೆಣಸಾಡಲು
ದಯೆಯೆಂಬುದು ನಿಮ್ಮ ಪರಿಮಿತಿಯಲ್ಲಿಲ್ಲ
ಕುದಿವ ಕೆನ್ನೀರ ತೊರೆಯೆದುರು
ಮಿಸುಕಾಡದೆ ರಚ್ಚೆಹಿಡಿದು
ಈಜಿ ದಡ ಸೇರಲು
ನಮ್ಮ ಕಂಬನಿಗಳು ಈಜು ಕಲಿತಿಲ್ಲ
ಘರ್ಜಿಸುವ ನಿಮ್ಮ ಹುಲಿ ಸಿಂಹಗಳ
ಬೇಟೆಯ ಮುಷ್ಟಿಯಿಂದ
ನುಣುಚಿಕೊಳ್ಳಲು
ನಮ್ಮ ಹಸು ಎಳೆಗರುಗಳಿಗೆ
ಪರಚುವ ಉಗುರುಗಳ ಬಲವಿಲ್ಲ
ನಮ್ಮ ಮನೆಹೊಸಿಲಲ್ಲಿ ಅಂಬೆಗಾಲಿಕ್ಕುವ
ಬೊಚ್ಚು ಬಾಯ ಹಸುಳೆಗೆ
ದಯೆಯ ಪೊರೆ ಕಳಚಿಕೊಂಡ
ನಿಮ್ಮ ವಿಷದ ಸರ್ಪಗಳ ಹಲ್ಲಿನರಿವಿಲ್ಲ
ನೀವಿನ್ನೂ
ನೆತ್ತರ ದಾಹದಲ್ಲಿ
ಅಲ್ಲಲ್ಲಿ ತಲೆಯೆತ್ತಿದ ಜೋಪಡಿಯ
ಜೋಗುಳದ ಲಾಲಿಗೆ ತಲೆದೂಗುವ
ತೂಗುತೊಟ್ಟಿಲ ಧ್ವನಿ
ಕ್ಷೀಣಿಸಿ.. ಕ್ಷೀಣಿಸಿ..ಕ್ಷೀಣಿಸಿ...
ಲಾಲಿಹಾಡಿನ ಮೇಲೆ
ಬಿರುಗಾಳಿಯ ಚೈತ್ರಯಾತ್ರೆ
ನಿಮ್ಮೀ
ಬೆಂಕಿಚೆಂಡುಗಳ ದಟ್ಟ ಹೊಗೆಯೊಳಗೆ
ನಮ್ಮೀ ಕಂಬನಿಗಳ ನೀರಾವಿ
ಮೋಡಕಟ್ಟುತ್ತಿವೆ
ಬೆಂಕಿಯ ದಾಹದೆದುರು
ಎದೆಗುಂದಿದೆ ಮಳೆ
ಹುಣ್ಣಿಮೆಯ ರಾತ್ರಿಯಲ್ಲೇ
ಬೆಳದಿಂಗಳ ಕಗ್ಗೊಲೆ
ಈಗ
ಉರಿಯುವ ಬೆಂಕಿಯೆದುರು
ಮೌನದ್ದೇ ಕಾರುಬಾರು
ಮಂಜುನಾಥ ನಾಯ್ಕ ಯಲ್ವಡಿಕವೂರ
Comments