ನಿನ್ನಿಷ್ಟದ ಶ್ಯಾವಿಗೆಯ
ಸಾಲ ತಂದು
ನನ್ನೊಲವಿನ ಒಗ್ಗರಣೆ
ಹಾಕಿ ಉಪ್ಪಿಟ್ಟು
ಮಾಡುವುದೆಂದರ ಅದೊಂದು
ಮಹಾ ತಪಸ್ಸು ಭಗವಂತಾ
ಹುರಿದ ಈರುಳ್ಳಿಯ ಘಮ
ಊದಿನಕಡ್ಡಿ ಕರ್ಪೂರಕ್ಕಿಂತ
ಇಂಚಿಂಚೇ ಗುಂಗೇರಿಸಬೆಕು
ತುಪ್ಪದ ದೀಪ ಹಚ್ಚದಿದ್ದರೂ ಕಡಾಯಿಯಂಚಲ್ಲಿ
ಎಣ್ಣೆಯಿಳಿವ ಸಂಭ್ರಮಕ್ಕೆ
ಮತ್ತೇರದ ದೇವರಾರು
ಶ್ಯಾವಿಗೆ ಉಪ್ಪಿಟ್ಟೆಂದರೆ
ಹೊಟ್ಟೆ ಬಾಕಿ ನಾನು
ನಿನಗೂ
ಅಷ್ಟಷ್ಟೇ ಬಟ್ಟಲು ತುಂಬಿ
ಸಂಜೆಯ ಹಾದಿಯೊಳಗೆ
ನೈವೇದ್ಯಕ್ಕಿಡುತ್ತಿದ್ದೇನೆ
ಒಣಮೆಣಸಿನಕಾಯಿಯ
ಘಾಟಿಗೆ ನಿನ್ನ
ಕಣ್ಣೊಳಗೆ ನೀರಿಳಿಯದಿದ್ದರೆ
ಸಾಕು ದೇವರೇ
ಎಣ್ಣೆಯೊಳಗಿತ್ತ
ಉದ್ದಿನ ಬೇಳೆಯ ರುಚಿಗೆ
ಕೇಳಿದ್ದಕ್ಕೆಲ್ಲ ತಥಾಸ್ತು
ಅನ್ನಬೇಕಿದೆ ನೀನು
ಸಂಧ್ಯಾ ವಿ. ನಾಯ್ಕ ಅಘನಾಶಿನಿ
Comments