top of page

ಉದಯಕುಮಾರ್ ಹಬ್ಬು ಅವರ ಕಾದಂಬರಿ- ದಾರಾ ಶುಕೋಹ್ ನ ಕನಸುಗಳು

ಅಧಿಕಾರ ಮೋಹ, ಸಾಮ್ರಾಜ್ಯ ವಿಸ್ತರಣಾದಾಹ, ಆಕ್ರಮಣಶೀಲತೆ, ಕ್ರೌರ್ಯ, ಹಿಂಸೆ ಇವೆಲ್ಲ ದೇಶವಾಳುವ ದೊರೆಗಳ ಬದುಕಿನ ಅವಿಭಾಜ್ಯ ಅಂಶಗಳು. ಭಾರತ ಅಂತಹ ಹಲವು ದೇಶೀಯ ದೊರೆಗಳ ಆಳ್ವಿಕೆಯನ್ನೂ ಕಂಡಿದೆ. ಪರಕೀಯರ ಆಕ್ರಮಣ ಮತ್ತು ಆಧಿಪತ್ಯದ ಬಿಸಿಯನ್ನೂ ಅನುಭವಿಸಿದೆ. ತಮ್ಮ ಅಧಿಕಾರದ ರಕ್ಷಣೆಯ ಪ್ರಶ್ನೆ ಬಂದಾಗ ನಮ್ಮವರು ತಮ್ಮವರು ಎಂಬ ಯಾವ ಭಾವನೆಯನ್ನೂ ಇರಿಸಿಕೊಳ್ಳದೆ ಅವರನ್ನು ಹತ್ತಿಕ್ಕಿದವರ ಕತೆಗಳು ಸಾಕಷ್ಟಿವೆ.

ಅಕಬರ, ಹುಮಾಯೂನ್, ಜಹಾಂಗೀರ್, ಶಾಹಜಹಾನ್, ಔರಂಗಜೇಬ ಮೊದಲಾದವರ ಆಳ್ವಿಕೆಯ ನಡುವೆ ನುಸುಳಿಹೋಗುವ ದಾರಾ ಶುಕೋಹನ ಬದುಕು ಉಳಿದೆಲ್ಲರಿಗಿಂತ ಭಿನ್ನವಾದದ್ದು. ಮೊಘಲ್ ಸಾಮ್ರಾಜ್ಯದ ಇತಿಹಾಸದಲ್ಲಿ ದಾರಾ ಒಂದು "ಪ್ರತ್ಯೇಕ ದ್ವೀಪ" ವಾಗಿಯೇ ಕಾಣಿಸಿಕೊಳ್ಳುತ್ತಾನೆ. ಅದಕ್ಕೆ ಕಾರಣ ಇತರರಿಗಿಂತ ಭಿನ್ನವಾಗಿ ಯೋಚಿಸುವ ಅವನ ಸ್ವಭಾವ, ಅವನ ಅಭಿರುಚಿ , ವಿಶೇಷವಾಗಿ ಭಾರತೀಯ ಧರ್ಮತತ್ವ, ಉಪನಿಷತ್ತು ರಾಮಾಯಣ, , ಭಗವದ್ಗೀತೆ, ಹಾಗೆಯೇ , ಸೂಫೀತತ್ವಗಳ ಕುರಿತಾದ ಒಲವು. ಅಧಿಕಾರ ಕಣ್ಣೆದುರಿಗೇ ಇದ್ದರೂ ಅದನ್ನು ದಕ್ಕಿಸಿಕೊಳ್ಳಲಾಗದೇ ತನ್ನ ಸಹೋದರ ಔರಂಗಜೇಬನ ಕೈಯಿಂದಲೇ ದಾರುಣ ಸಾವಿಗೀಡಾಗುವ ದಾರಾನ ದುರಂತ ಬದುಕು ಈ ಕಾದಂಬರಿಯ ವಸ್ತುವಾಗಿದೆ.

ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ಉತ್ತಮ ಪರಂಪರೆಯೇ ಇದೆ. ಮೊದಲು ಬಂಗಾಲಿ ಭಾಷೆಯಿಂದ ಅನುವಾದಿತ ಕೃತಿಗಳು ಬಂದವು. ಗಳಗನಾಥರು, ಬೆಟಗೇರಿ ಕೃಷ್ಣ ಶರ್ಮ, ಅನಕೃ, ಕೊರಟಿ ಶ್ರೀನಿವಾಸರಾಯರು, ವೀರಕೇಸರಿ ಸೀತಾರಾಮ ಶಾಸ್ತ್ರಿ, ತರಾಸು ಮೊದಲಾದವರೆಲ್ಲ ನಮ್ಮೆದುರು ಇತಿಹಾಸದ ಪುಟಗಳನ್ನು ತೆರೆದಿಟ್ಟರು. ಐತಿಹಾಸಿಕವಾದ ಅಂಶಗಳನ್ನು ಆಧರಿಸಿಕೊಂಡೇ ತಮ್ಮ ರಮ್ಯ ಶೈಲಿಯಲ್ಲಿ ಕಾದಂಬರಿಗಳನ್ನು ಬರೆದರು. ವಿಜಯನಗರದ ಅರಸರು, ಚಿತ್ರದುರ್ಗದ ಅರಸರು, ಮತ್ತಿತರ ಹಲವು ರಾಜವಂಶಗಳಿಗೆ ಸಂಬಂಧಿಸಿದ ಚರಿತ್ರೆಯಲ್ಲಿ ನಮ್ಮ ಆಸಕ್ತಿಯನ್ನು ಕೆರಳಿಸಿದವರೇ ಈ ಕಾದಂಬರಿಕಾರರು. ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಸಾಕಷ್ಟು ಆಳವಾದ ಅಧ್ಯಯನದ ಅನಿವಾರ್ಯತೆಯೂ ಇರುತ್ತದೆ. ಸಂಗಡ ಆ ಅಧ್ಯಯನದ ಅಂಶಗಳನ್ನು ಕೆಲವು ಕಾಲ್ಪನಿಕ ವಿಚಾರಗಳೊಂದಿಗೆ ಸುಂದರ ಕಾದಂಬರಿಶಿಲ್ಪವಾಗಿ ಕಟೆದು ನಿಲ್ಲಿಸುವ ಕಲೆಗಾರಿಕೆಯೂ ಬಹಳ ಮುಖ್ಯ.

ಉದಯಕುಮಾರ್ ಹಬ್ಬು ಅವರ ಈ ಕಾದಂಬರಿಯ ಹಿಂದೆ ಆಳವಾದ ಅಧ್ಯಯನವಂತೂ ಇದ್ದೇಇದೆ. ಈ ಮೊದಲೇ ಕೆಲವು ಕಾದಂಬರಿಗಳನ್ನು ಬರೆದವರಾದ್ದರಿಂದ ಬರವಣಿಗೆಯಲ್ಲಿ ಹಿಡಿತವೂ ಸಹಜವಾಗಿಯೇ ಬಂದಿದೆ. ಈ ಕಾದಂಬರಿಯನ್ನೋದಿದಾಗ ದಾರಾನ ವ್ಯಕ್ತಿತ್ವ ಅವರ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಬೀರಿರುವಂತೆಯೂ ಭಾಸವಾಗದಿರದು. ಈ ಅತಿಯಾದ ವ್ಯಾಮೋಹವೂ ಕೆಲವು ದೃಷ್ಟಿಯಲ್ಲಿ ಅಪಾಯಕಾರಿಯಾದುದೇ. ಏಕೆಂದರೆ ಬರೆಯುವಾಗ ನಾವು ಆ ಭಾವುಕತೆಯಿಂದ ಹೊರಗೆ ನಿಂತೇ ವಿಕ್ಷಿಪ್ತವಾಗಿ ಬರೆಯಬೇಕಾಗುತ್ತದೆ.

ಈ ಕಾದಂಬರಿ ಮೊಘಲ್ ಸಾಮ್ರಾಜ್ಯ ತನ್ನ ಉತ್ತರಾರ್ಧದ ಇಳಿಜಾರಿನತ್ತ ಸಾಗಿದ ಕಾಲದ ಕತೆಯಾಗಿದೆ. ರಸಿಕತೆಯೊಡನೆ ಅತಿಕಾಮುಕತನ ಮತ್ತು ತನ್ನ ಮಕ್ಕಳಲ್ಲೇ ದಾರಾನ ಮೇಲೆ ಅತಿಯಾದ ಪಕ್ಷಪಾತತನವೆನ್ನುವಷ್ಟು ವ್ಯಾಮೋಹವನ್ನು ಇರಿಸಿಕೊಂಡ ಷಹಾಜಹಾನ್ ಆ ಮೂಲಕ ಇನ್ನೊಬ್ಬ ಮಗ ಔರಂಗಜೇಬನನ್ನು ಕೆರಳಿಸಿ ದಾರಾನಿಗೆ ತಾನೇ ಪರೋಕ್ಷವಾಗಿ ಅನ್ಯಾಯವನ್ನು ಮಾಡುವುದೊಂದು ವಿಪರ್ಯಾಸ. ಷಹಾಜಹಾನನ ಹೆಣ್ಣುಮಕ್ಜಳಲ್ಲಿ ಹಿರಿಯವಳಾದ ಜಹಾನಾರಾ ದಾರಾನ ಮೇಕೆ ಹೆಚ್ಚು ಒಲವು ಇರಿಸಿಕೊಂಡಿದ್ದರೆ , ಇನ್ನೊಬ್ಬಳು ರೋಶನಾರಾ ಔರಂಗಜೇಬನ ಪರವಾಗಿರುತ್ತಾಳೆ.

ದಾರಾ ಬಾಲ್ಯದಿಂದಲೇ ಉಪನಿಷತ್ತು , ಯೋಗವಾಸಿಷ್ಠ, ರಾಮಾಯಣ , ಭಗವದ್ಗೀತೆ ಮೊದಲಾದವುಗಳತ್ತ ಆಕರ್ಷಿತನಾಗುವದರೊಂದಿಗೆ ಅಧಿಕಾರದ ಮೇಲಿನ ಆಕರ್ಷಣೆಯಿಂದ ವಿಮುಖನಾಗುತ್ತಾನೆ. ತನ್ನ ಹೆಚ್ಚಿನ ಸಮಯವನ್ನು ಆತ ವಿವಿಧ ಧರ್ಮಗಳ ಅಧ್ಯಯನ ಮತ್ತು ಧರ್ಮ ಗ್ರಂಥಗಳ ಅನುವಾದದಲ್ಲಿ ಕಳೆಯತೊಡಗುತ್ತಾನೆ. ಆದರೂ ಷಹಾಜಹಾನ್ ಅವನಿಗೆ ಪಟ್ಟ ಕಟ್ಟಲು ನಿರ್ಧರಿಸಿದಾಗ ಔರಂಗಜೇಬ ಸಹನೆ ಕಳೆದುಕೊಂಡು ಷಡ್ಯಂತ್ರ ಮಾಡಿ ದಾರಾನನ್ನು ಅವನ ಮಗನೊಂದಿಗೆ ಬಂಧಿಸಿ ಅಮಾನುಷವಾಗಿ ಹಿಂಸಿಸಿ ಕೊಂದುಹಾಕುತ್ತಾನೆ. ತಾನು ಪಟ್ಟಕ್ಕೇರಿ ಮೊಘಲ್ ಸಾಮ್ರಾಜ್ಯದ ರಕ್ತಸಿಕ್ತ ಅಧ್ಯಾಯವನ್ನು ಆರಂಭಿಸುತ್ತಾನೆ. ಇಸ್ಲಾಂ ಧರ್ಮವೊಂದೇ ಜಗತ್ತಿನಲ್ಲಿರಬೇಕೆಂಬಷ್ಟು ಕಟ್ಟಾ ಧರ್ಮಾಂಧನಾಗಿದ್ದ ಔರಂಗಜೇಬ ಇಸ್ಲಾಂ ಶರಿಯತ್ ರಾಜ್ಯವನ್ನು ಘೋಷಿಸಿದ. ಹಿಂದೂ ದೇವಾಲಯಗಳನ್ನು ನಾಶಪಡಿಸಿದ. ಅಲ್ಲಿ ಮಸೀದೆಗಳನ್ನು ನಿರ್ಮಿಸಿದ. ಬಲಾತ್ಕಾರದ ಮತಾಂತರಗಳನ್ನು ಮಾಡಿದ. ಹಿಂದೂ ಮತ್ತಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಅವನತಿಗೆ ಕಾರಣನಾದ. ಅಲ್ಲಿಗೆ ದಾರಾ ಕಂಡ ಕನಸುಗಳೆಲ್ಲ ಮಣ್ಣುಗೂಡಿಹೋದವು.

ಕಾದಂಬರಿಯ ಪೂರ್ವಾರ್ಧ ಬಹುಭಾಗ ದಾರಾನ ಅಧ್ಯಯನಾಸಕ್ತಿ, ಸಂವಾದ, ಬರವಣಿಗೆ, ಮೊದಲಾದ ವಿಚಾರಗಳಿಂದ ಕೂಡಿದ್ದು ಉತ್ತರಾರ್ಧದಲ್ಲಿ ದಾರಾನ ವಿರುದ್ಧದ ಒಳಸಂಚು, ದಾರಾ ಮತ್ತು ಔರಂಗಜೇಬನ ನಡುವಿನ ಸಂಘರ್ಷ , ದಾರಾನ ಬಂಧನ , ವಿಚಾರಣೆಯ ಪ್ರಹಸನ, ಕ್ರೂರ ಹತ್ಯೆ ಮೊದಲಾದ ಅಂಶಗಳು ಕಾಣಿಸಿಕೊಳ್ಳುತ್ತವೆ. ಧರ್ಮ ಜಿಜ್ಞಾಸೆ, ಆಧ್ಯಾತ್ಮಿಕ ಸಂವಾದ ಮೊದಲಾದವುಗಳಲ್ಲಿ ಆಸಕ್ತಿಯುಳ್ಳ ಓದುಗನಿಗೆ ಪೂರ್ವಾರ್ಧ ಇಷ್ಟವಾಗಬಹುದು. ಕೇವಲ ಕಾದಂಬರಿ ಎನ್ನುವ ದೃಷ್ಟಿಯಿಂದ ಓದುವವರಿಗೆ ಉತ್ತರಾರ್ಧ ಹಿಡಿಸಬಹುದು. ಆದರೆ ಇದೊಂದು ಐತಿಹಾಸಿಕ ಕಾದಂಬರಿಯಾಗಿರುವದರಿಂದ ಮತ್ತು ದಾರಾನಂತಹ ವಿಶಿಷ್ಟ/ ಅಪರೂಪದ ವ್ಯಕ್ತಿತ್ವ ಹೊಂದಿದವನ ಕತೆಯಾಗಿರುವದರಿಂದ ಕಾದಂಬರಿಯ ಸ್ವರೂಪ‌ ಇದಕ್ಕಿಂತ ಭಿನ್ನವಾಗುವದು ಕಷ್ಟ. ದಾರಾ ಇರುವದೇ ಹಾಗೆ. ಒಂದು ವೇಳೆ ಅವನು ಪಟ್ಟಕ್ಕೇರಿ ಆಡಳಿತ ನಡೆಸಿದ್ದರೆ "ಸಾಂಸ್ಕೃತಿಕ/ ಆಧ್ಯಾತ್ಮಿಕ ಭಾರತವೊಂದನ್ನು ನಾವು ಕಾಣಬಹುದಿತ್ತೇನೋ ಎಂಬ ಕಾದಂಬರಿಕಾರರ ಆಶಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಇತಿಹಾಸದ ಒಂದು ವಿಶಿಷ್ಟ ತಿರುವಿಗೆ ಕಾರಣವಾಗಬಹುದಾಗಿದ್ದ ಈ ಸಂದರ್ಭ ನಾವು ಅಪೇಕ್ಷಿಸದ ಇನ್ನೊಂದು ಮಗ್ಗುಲಿಗೆ ತಿರುಗಿಕೊಂಡಿದ್ದು ಮಾತ್ರ ಸತ್ಯ.

ಹಬ್ಬು ಅವರು ಈ ಕಾದಂಬರಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದು ಎದ್ದು ಕಾಣುತ್ತದೆ. ಅವರ ಅಧ್ಯಯನದ ಆಳ ಅಗಲಗಳನ್ನು ಇಲ್ಲಿ ಗುರುತಿಸಲು ಸಾಧ್ಯ. ದಾರಾನ ಕುರಿತು ಈ ಮೊದಲು‌ ಬಂದಿರುವ ಎಲ್ಲ ಕೃತಿಗಳಿಗಿಂತಲೂ ಭಿನ್ನವಾದ ಒಳನೋಟ ಇಲ್ಲಿ ಕಾಣಸಿಗುತ್ತದೆ ಮತ್ತು ದಾರಾ ವ್ಯಕ್ತಿತ್ವದ ಪರಿಪೂರ್ಣ ಚಿತ್ರಣವನ್ನಿಲ್ಲಿ ಕಾಣಬಹುದು. ಒಟ್ಟಿನಲ್ಲಿ ಕನ್ನಡಕ್ಕೆ ಇದೊಂದು ಈ ವರ್ಷದ ಉತ್ತಮ ಕೊಡುಗೆಯಾಗಿ ಸಂದಿದೆ. ಅದಕ್ಕಾಗಿ ಹಬ್ಬು ಅವರನ್ನು ಅಭಿನಂದಿಸುತ್ತಿದ್ದೇನೆ.

( ನಾನೊಬ್ಬ ಸಾಮಾನ್ಯ ಓದುಗನಾಗಿ ಈ ಕೃತಿಯನ್ನು ಸರಳವಾಗಿ ವಿಶ್ಲೇಷಿಸಿದ್ದೇನೆ ಹೊರತು ವಿದ್ವಾಂಸನಾಗಿ ಅಲ್ಲ. ಜನಸಾಮಾನ್ಯ ಓದುಗರು ಇದನ್ನು ಓದಬೇಕೆಂಬ ಅಪೇಕ್ಷೆ ನನ್ನದು.)

- ಎಲ್. ಎಸ್. ಶಾಸ್ತ್ರಿ
19 views0 comments

Comments


bottom of page