top of page

ಈ ಸಂಜೆಯೊಳಗೆ

ಈ ಸಂಜೆಯೊಳಗೆ

ಗರಿಗೆದರುತ್ತವೆ ಮೌನದಲ್ಲೆ

ಗರಬಡಿದ ಮಾತುಗಳು

ಹೊಸ ಬಟ್ಟೆಯ ತೊಟ್ಟ ಮಗುವಂತೆ

ಸಮುದ್ರದ ದಂಡೆಯಲಿ

ದೂರ ಉಳಿದ ಭಾವಗಳು

ಅಲೆಗಳಾಗಿ ಬಂದು ಪಾದಮುಟ್ಟಿ

ತಮಾಷೆ ಮಾಡುತ್ತವೆ ಆಪ್ತ ಗೆಳೆಯನಂತೆ

ಗೂಡಿಗೆ ಹೊರಟ ಹಕ್ಕಿಗಳು

ತಿರುಗಿ ನೋಡಿವೆ

ಬರುವಾಗ ಏನೋ ತಂದಿದ್ದು

ಮರೆತು ಬಂದನೋ ಎಂಬಂತೆ

ಅಪ್ಪನಿಲ್ಲದ ಮಕ್ಕಳು

ಕೂಲಿಗೆ ಹೋದ ತಾಯಿಯ ದಾರಿಯ

ಕಣ್ಣು ಮಿಟುಕಿಸದೇ ನೋಡುತಿವೆ

ಅರ್ಧದಲೇ ಮರೆತ ಮಗ್ಗಿಯಂತೆ

ಸಂಜೆಯ ಚಾ ಮೆಲ್ಲುತ್ತಾ ಅಂಗಡಿಗಳಲ್ಲಿ

ಒಂದು ವಾರ್ತೆಯ ಚಾನೆಲ್ ಸೃಷ್ಟಿಯಾಗಿದೆ

ದೂರದಲ್ಲೆ ತೂರುತ್ತಾ ಬರುವವನೆ ಜಾಹಿರಾತಿನಂತೆ

ಬೆಳಕಿನ ಗೋಣಿಚೀಲದ

ಬಾಯಿಯ ದಾರ ಸಡಿಲವಾಗಿದೆ

ಸೋರಿದ ಕತ್ತಲು ಬೆಳಕನ್ನೆ ನುಂಗಿದರೂ

ಬೀದಿ ದೀಪಗಳು ಮಾತ್ರ

ಕತ್ತಲು ಸೋರುವ ತೂತಿನ

ಬಾಯಿಯ ಹೊಲಿಯುವಂತೆ...


- ಮೋಹನ್ ಗೌಡ, ಹೆಗ್ರೆ


ಮೋಹನ್ ಗೌಡ, ಹೆಗ್ರೆ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹೆಗ್ರೆ ಗ್ರಾಮದವರು. ವೃತ್ತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಇವರು ಓದು-ಬರಹಗಳಲ್ಲಿ ಅಪಾರ ಆಸಕ್ತಿ ಹೊಂದಿದವರು. ಈಗಾಗಲೇ ಅವರ ಕವನಗಳು ಮತ್ತು ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಮಾಜ ಮುಖಿಯಾಗಿ ಚಿಂತಿಸುವ ಇವರ ಬರವಣಿಗೆಯ ದಾಟಿ ಹೊಸ ಭರವಸೆಯನ್ನು ಹುಟ್ಟಿಸುತ್ತದೆ. - ಸಂಪಾದಕ

223 views1 comment

1 Comment


akshata.anasi
akshata.anasi
Jul 07, 2020

ಕವಿತೆ ಇಷ್ಟವಾಯಿತು.

Like
bottom of page