ಈ ಸಂಜೆ ಯಾಕೊ ತಣ್ಣಗಿತ್ತು
ಬಿಸಿ ಚಹದ ಹಬೆಯಲಿ
ಬಿಸಿಲು ಕರಗಿ ಇಳಿಯುತ್ತಿತ್ತು
ಗಾಳಿಗೊಡೆದ ತರಗೆಲೆಗಳು
ತಂಗಾಳಿಯಲಿ ಅಲೆಯುತ್ತಿತ್ತು
ಸುಳಿಯುತಿತ್ತು ತೇಲುತ್ತಿತ್ತು
ಭಾವದೆದೆ ಹರಿದ ಬಾನಾಗಿತ್ತು
ಹರಿವ ನದಿ ಹೊಸ ಹಾಡೊಂದ
ಹೊಸೆದು ಗುನುಗುತ್ತಿತ್ತು
ಹೊಳೆಸಾಲ ಬದಿಗೆ ಇಣುಕಿ
ರವಿಕಿರಣ ಮಿಂಚುತ್ತಿತ್ತು
ಗಾಯನದ ತರಂಗಲೀಲೆಗೆ
ಕೊಳಲು ಖುಷಿಯಲಿ ಕುಣಿಯುತ್ತಿತ್ತು
ನಾದಾಮೃತದ ಹಾಯಿದೋಣಿಗೆ
ಎದೆ ಹಾಡ ಹರಿಗೋಲಾಗಿತ್ತು
ನಾಟ್ಯ ಚತುರ ನಟರಾಜನ ಗೆಜ್ಜೆಗೆ
ಕಲ್ಲುಗಳೆದ್ದು ಕುಣಿಯುತ್ತಿತ್ತು
ಗೀತಸಾರದ ಮುರಾರಿಯ ಕೊಳಲಿಗೆ
ಶ್ರೋತೃಗಳ ಕಿವಿ ಮಿಡಿಯುತ್ತಿತ್ತು
ದುಷ್ಯಂತನಾಗಮನಕೆ ಸಂಜೆಯ ದನಿ
ಶಕುಂತಲೆಯ ನಡಿಗೆಗೆ ದೀಪವಾಗಿತ್ತು
ಪರ್ಣ ಕುಟೀರದ ಶ್ವೇತ ಶುಭ್ರ ವಟುವಿಗೆ
ಮೌನಮಾರುತ ಎದ್ದು ಹಾಯುವಂತಿತ್ತು
ಗಂಧಗಾಳಿಯ ಸುರುಳಿ ಹನುಮಗೆ
ರಾಮ ಕಥೆಯ ಹೇಳುತ್ತಿತ್ತು
ಕೋದಂಡಪಾಣಿಯ ವೀರ ನಡೆಗೆ
ದಂಡಕಾರಣ್ಯವೇ ನಲುಗುತ್ತಿತ್ತು
ಪಾರ್ಥನ ಚರಣದಡಿ ಶರ ಮುರಿದು
ವೈರಿಯ ಹೆಡೆಮುರಿ ಕಟ್ಟುತ್ತಿತ್ತು
ಗೀತ ವಸಂತದ ಗಾಳಿ ತೂಗಿ
ಕೆಂದಾವರೆ ನೀರೆಯಂತೆ ಬಳುಕುತ್ತಿತ್ತು
ಬೆಳಕು ಮಿಡಿದು ಮಾಯುತ್ತಿತ್ತು
ಕೋಲ್ಮಿಂಚು ತಣ್ಣಗೆ ಸೊರಗುತ್ತಿತ್ತು
ಭುವಿಯ ಹೆಬ್ಬಾಗಿಲಲಿ ಕತ್ತಲು ಕಪ್ಪಗೆ
ಅಂಧಕಾರದ ಕದ ತಟ್ಟುತ್ತಿತ್ತು
ಈ ಸಂಜೆ ಯಾಕೋ ತಣ್ಣಗಿತ್ತು
ಮೈಚೆಲ್ಲಿದ ಸಂಧ್ಯೆಯ ಮೇಲೆ
ಕತ್ತಲ ಕರಾಮತ್ತು ನಡೆದಿತ್ತು
ಮಂಜುನಾಥ ನಾಯ್ಕ ಯಲ್ವಡಿಕವೂರ