top of page

ಈಜುತಿಹ ಮೀನು

ಈಜುತಿದೆ ನವ ಮೀನಿಂದು

ಈಜುತಿದೆ ಶರಧಿಯಲಿ ಮಿಂದು//


ಜಲರಾಶಿಯೆಲ್ಲ ತನ್ನದೆಂದು

ಮೂಲ ಬಿಂದುವೂ ನನದೆಂದು

ಆಳಗಲವೂ ನನ್ನದೆಂದು

ಈಜುತಿದೆ ಯವ್ವನದ ಮೀನಿಂದು//


ಬಾಲ್ಯದಲಿ ತಾಯ ಹಿಂದಿದ್ದು

ಯವ್ವನದಲಿ ಕೆಳೆಯರ ಹೊಂದಿ

ಮುಪ್ಪಿನ ಹೊತ್ತನರಿಯದಿಂದು

ಈಜುತಿದೆ ಹುಮ್ಮಸ್ಸಿನ ಮೀನಿಂದು//


ಅಲೆಗಳಿಗೆ ಎದುರಾಗಿ ನಿಂದು

ಭಯವೆಂಬ ತಿರುಳ ತೊರೆದು

ಬಿಸಿ ರಕ್ತದ ಶಕ್ತಿಯ ಹೊದ್ದು

ಈಜುತಿದೆ ಕೊಬ್ಬಿದ ಮೀನಿಂದು//


ಭೋರ್ಗರೆತಕೂ ಸೋಲೆನೆಂದು

ಭವಸಾಗರವ ಗೆಲುವೆನೆಂದು

ಹೆಜ್ಜೆಗುರುತ ಹಿಡಿಯಿರೆಂದು

ಈಜುತಿದೆ ಉತ್ಸಾಹದ ಮೀನಿಂದು//


ಜಗವೇ ತನ್ನ‌ ಮುಷ್ಠಿಯೊಳೆಂದು

ತನಗಾರು ಇದಿರಿಲ್ಲವೆಂದು

ಮರೆತು‌ಕಾಲ ಕ್ಷಣಿಕವೆಂಬುದು

ಈಜುತಿದೆ ಉಲ್ಲಾಸದ ಮೀನಿಂದು//


ಆಳದ ಅಲೆಗಳ ಅಡಗಿಸುವೆನೆಂದು

ಮುತ್ತುಗಳ ಹೆಕ್ಕಿ ತರುವೆನೆಂದು

ಸುನಾಮಿಯ ತಲ್ಲಣಿಸುವೆನೆಂದು

ಈಜುತಿದೆ ಚೈತನ್ಯದ ಮೀನಿಂದು//


- ಭವಾನಿ ಗೌಡ

0 views0 comments

Commentaires


bottom of page