ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂದು ದಾಸರು ಹೇಳಿದರು. ಇಂದಿನ ಸಾಹಿತ್ಯ ಲೋಕವನ್ನು ನೋಡಿದರೆ ಉತ್ತಮ ಸಾಹಿತ್ಯವೆಂಬುದು ಲೊಳಲೊಟ್ಟೆ ಎಂದು ನಾವೂ ಹೇಳಬೇಕಾಗಿದೆ. ಯಾಕೆಂದರೆ ಯಾವತ್ತೂ ಸಾಹಿತ್ಯ ಮುಂದೆ ನಿಂತು ಮಾತಾಡಬೇಕು; ಸಾಹಿತಿಗಳು ತಾವೇ ಮಾತಾಡುವಂತಾಗಬಾರದು. ಬಿಂಬಕ್ಕೆ ಪ್ರಾಣಪ್ರತಿಷ್ಠೆ ಮಾಡಿದ ಮೇಲೆ ಮುಂದಿನದನ್ನು ದೇವರು ನೋಡಿಕೊಳ್ಳುತ್ತಾನೆ. ನಾವು 'ನಡೆ'ಯಲ್ಲಿ ದೇವರಿಗೆ ಅಡ್ಡ ನಿಲ್ಲಬಾರದು.
ಇಂದು ಸಾಹಿತಿಗಳು ಮಾತಾಡುತ್ತಿದ್ದಾರಲ್ಲದೆ ಸಾಹಿತ್ಯ ಮಾತಾಡುವುದು ಕಾಣುವುದಿಲ್ಲ. ಸಮಾಜವನ್ನು ಪ್ರತಿನಿಧಿಸುವ ಉತ್ತಮ ಸಾಹಿತ್ಯ ನಿರ್ಮಿತಿಯೇ ಸಾಹಿತಿಯ ಪರಮ ಗಂತವ್ಯ. ಮಂತ್ರವಿಲ್ಲದೆ ಬರೇ ಉಗುಳು ಹಾರಿಸಿ ಪ್ರಯೋಜನವೇನು? ಒಬ್ಬ ಅತ್ಯುತ್ತಮ ಶಿಲ್ಪಿ ತನ್ನ ಶಿಲ್ಪಕೃತಿಯ ಮೂಲಕ ಅಥವಾ ಒಬ್ಬ ಒಳ್ಳೆಯ ಎಂಜಿನಿಯರ್ ತನ್ನ ತಂತ್ರನೈಪುಣ್ಯದ ನಿರ್ಮಿತಿಯ ಮೂಲಕ ಸಮಾಜದಲ್ಲಿ ನಾಲ್ಕು ಕಾಲ ನಿಲ್ಲುವ ಹಾಗೆ, ಒಬ್ಬ ಒಳ್ಳೆಯ ಸಾಹಿತಿ ತನ್ನ ಶ್ರೇಷ್ಠ ಸಾಹಿತ್ಯಕೃತಿಯ ಮೂಲಕ ಸಹೃದಯರ ಎದೆಯಲ್ಲಿ ನಿಲ್ಲಬೇಕು. ಸಾಹಿತ್ಯ ನಿರ್ಮಾಣ ಮಾಡದೆ ಬರಿದೇ ಲೊಳಲೊಟ್ಟೆ ಮಾತುಗಳಿಂದ ಪ್ರಯೋಜನವೇನು? ನಾಲ್ಕು ಮಂದಿ ಓದಿ ನಾಳೆ ರದ್ದಿಗೆ ಹೋಗುವ ಪತ್ರಿಕಾ ಸುದ್ದಿಗಳಿಂದ ಅಥವಾ ಮೇಲ್ ಸ್ತರದ ಪತ್ರಿಕಾ ಲೇಖನಗಳಿಂದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತೋಚಿದ್ದನ್ನೆಲ್ಲ ಗೀಚಿ ಪರಿಸರ ಮಾಲಿನ್ಯ ಮಾಡುವುದರಿಂದ ಸಾಹಿತ್ಯಕ್ಷೇತ್ರಕ್ಕೆ ಯಾವ ಪ್ರಯೋಜನವೂ ಇಲ್ಲ. ಹೂವಿಗಿಂತ ದಾರ ಶ್ರೇಷ್ಠವಾಗಲು ಸಾಧ್ಯವೇ?
ಇವತ್ತು ನಿರ್ಮಾಣವಾಗುತ್ತಿರುವ ಸಾಹಿತ್ಯವನ್ನು ನೋಡಿದರೆ ಸಾಹಿತ್ಯಕ್ಷೇತ್ರದಲ್ಲಿ ನಿಜವಾಗಿ ದುಡಿಯುತ್ತಿರುವವರಿಗೆ ದುಃಖವಾಗದೆ ಇರದು. ಸಾಮಾಜಿಕ ಮಾಧ್ಯಮಗಳನ್ನು ಗಮನಿಸಿದರಂತೂ ಬೆಳೆಗಿಂತ ಕಳೆಯೇ ಅಧಿಕ ಎಂಬಂತಾಗಿದೆ. ಬೀದಿಯ ಕಸದ ತೊಟ್ಟಿಯಂತಾಗಿರುವ ಸಾಮಾಜಿಕ ಮಾಧ್ಯಮಗಳನ್ನು ಕಣ್ಣು ಮೂಗು ಮುಚ್ಚಿ ಪ್ರವೇಶಿಸುವಂತಾಗಿದೆ. ಮಾನವಂತರು ಅತ್ತ ತಲೆಹಾಕದಿರುವುದೇ ಕ್ಷೇಮ!
ಯಾಕೆ ಹೀಗೆ? ಹೊಸ ತಲೆಮಾರಿನಲ್ಲಿ ಓದು ಕಡಿಮೆಯಾಗಿದೆಯೇ? ಅವರು ಪುಸ್ತಕಗಳನ್ನು ಓದುವುದಿಲ್ಲವೇ? ಸಮಾಜದಲ್ಲಿರುವ ಮಾದರಿಗಳನ್ನು ನೋಡುವುದಿಲ್ಲವೇ? ಅಥವಾ ಮಾನವಿಕ ಜ್ಞಾನಗಳಿಗಿಂತ ವಿಜ್ಞಾನ ತಂತ್ರಜ್ಞಾನವೇ ದೊಡ್ಡದು ಎಂಬ ಭ್ರಮೆ ತಲೆಗೆ ಹತ್ತಿದೆಯೇ? ಎಲ್ಲಕ್ಕಿಂತ ಹೆಚ್ಚಾಗಿ - ಮೇಜಿನ ಮೇಲಿನ ಎಕ್ಸರ್'ಸೈಜ್ ಪುಸ್ತಕದಂತೆ - ಅನಿಸಿದ್ದನ್ನೆಲ್ಲ ಗೀಚಲು ಸಾಮಾಜಿಕ ಮಾಧ್ಯಮಗಳು ಕೈಯಳತೆಯಲ್ಲಿ ಬಂದು ನಿಂತಿವೆ ಎಂಬ ಅಹಂಕಾರವೇ? ಅನಿಸಿದ್ದನ್ನೆಲ್ಲ ಬರೆದು ಹಾಕುವ ಮುನ್ನ ಅವುಗಳನ್ನು ಗಾಳಿಸಬೇಕು, ಸೋಸಬೇಕು, ಕಾಳನ್ನು ಮಾತ್ರ ಹಾಕಬೇಕು ಎಂಬ ಪರಿಜ್ಞಾನವಾದರೂ ಬೇಡವೇ?
ಬಹುತೇಕ ಸಾಹಿತಿಗಳು ಯುದ್ಧತ್ರಸ್ತ ಸೈನಿಕರಂತೆ ಹಿತಾಸಕ್ತಿಗಳ ಹಿಂದೆ ಸಾಗಿರುವಂತೆ ತೋರುತ್ತಿದೆ. ಇಂತಹ ಸನ್ನಿವೇಶದಲ್ಲಿ ಉತ್ತಮ ಸಾಹಿತ್ಯ ಲೊಳಲೊಟ್ಟೆ ಅನ್ನದೆ ವಿಧಿಯಿಲ್ಲ.
ಯಾಕೆ ಹೀಗಾಗಿದೆ? ಮಾಧ್ಯಮಸ್ಫೋಟದಿಂದಾಗಿ ಜಗತ್ತು ಕಿರಿದಾಗಿರುವುದು ಇದಕ್ಕೆ ಮುಖ್ಯ ಕಾರಣ. ಎಲ್ಲ ಕಡೆಯಿಂದ ಎಲ್ಲವೂ ಹರಿದು ಬರುತ್ತಿದೆ. ಆದರೆ ಎಲ್ಲವೂ ನಮಗೆ ಬೇಕೇ? ನಮಗೆ ಬೇಕಾದ್ದನ್ನು ಮಾತ್ರ ಆಯ್ದುಕೊಳ್ಳುವ ಎಚ್ಚರ ಮತ್ತು ಜಾಗೃತಿ ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ.
ನಾಡಿನ ಸಾಕ್ಷಿಪ್ರಜ್ಞೆಯಂತೆ ಸದಾ ಜಾಗೃತರಿರಬೇಕಾದ ಸಾಹಿತಿಗಳೂ ಈ ಒಯ್ಲಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾರೆ. ಸದ್ಯದ ಲಾಭಬಡುಕತನ ಬಿಟ್ಟು ತುಸು ಧ್ಯಾನಸ್ಥರಾಗಿ ಅಂತರ್ ಲೋಕವನ್ನು ಗಮನಿಸುವ ಏಕಾಗ್ರತೆ ಬಂದರೆ ಮಾತ್ರ ನಮ್ಮ ಪರಂಪರೆಯ ಸಾತತ್ಯ ಉಳಿಸಿಕೊಳ್ಳಲು ಸಾಧ್ಯ.
- ಡಾ. ವಸಂತಕುಮಾರ ಪೆರ್ಲ
Comments