top of page

ಇಂದು ಜನ್ಮದಿನ

ಉತ್ತರ ಕನ್ನಡದ ಹೆಮ್ಮೆಯ ಪುತ್ರ

ದಿನಕರ ದೇಸಾಯಿಯವರು

*********

ಚುಟುಕು ಎಂದ ತಕ್ಷಣ ನೆನಪಾಗುವದು‌ ದಿನಕರ ದೇಸಾಯಿ ಅವರ ಹೆಸರು. ಚುಟುಕು ಬ್ರಹ್ಮ ಎಂದೇ ಹೆಸರಾದ ಅವರ ಪ್ರತಿಭೆ ಸಾಮರ್ಥ್ಯ ಅದಕ್ಕಷ್ಟೇ ಸೀಮಿತವಾದದ್ದಲ್ಲ. ಸಮಾಜ ಸೇವಕ, ರಾಜಕಾರಣಿ, ಕವಿ, ಶಿಕ್ಷಣ ಪ್ರೇಮಿ, ಪತ್ರಕರ್ತ, ಹೋರಾಟಗಾರ ಏನೆಲ್ಲವೂ ಆಗಿದ್ದ ಅವರ ಅಗಾಧ ವ್ಯಕ್ತಿತ್ವವನ್ನು ನಾವು ಸ್ವಲ್ಪದರಲ್ಲಿ ಸೆರೆಹಿಡಿಯುವದು ಕಷ್ಟ.

ದಿನಕರರಿಗೆ ಉತ್ತರ ಕನ್ನಡ ಜಿಲ್ಲೆಯ ಮೇಲೆ ಅಪಾರ ಪ್ರೇಮ, ಅಭಿಮಾನ. ಅದನ್ನು ಅವರು ತಮ್ಮ ಅನೇಕ ಚೌಪದಿಗಳ ಮೂಲಕವೂ ವ್ಯಕ್ತಪಡಿಸಿದ್ದಾರೆ.

ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು

ನಡುಮಧ್ಯದಲಿ ಅಡಕೆ ತೆಂಗುಗಳ ಮಡಲು

ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ

ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ

ಜಿಲ್ಲೆಯನ್ನು ಸೊಗಸಾಗಿ ಬಣ್ಣಿಸುತ್ತಲೇ ಪಂಪನಂತೆ ಮತ್ತೆ ಇಲ್ಲೇ ಹುಟ್ಟುವ ಆಸೆ ವ್ಯಕ್ತಪಡಿಸುವ ದಿನಕರರು ಜಿಲ್ಲೆಗಾಗಿ ಸಾಕಷ್ಟು ಉಪಯುಕ್ತ ಕೆಲಸ ಮಾಡಿದವರೂ ಹೌದು. ಅವರ ಜನಸೇವಕ ವಾರಪತ್ರಿಕೆ ಜಿಲ್ಲೆಯ ಮತ್ತು ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ೨೦ ವರ್ಷ ಬಾಳಿತು. ಅದರ ಮೊದಲ ಪುಟ ದಲ್ಲೇ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧ ಪಟ್ಟ ಲೇಖನ ಪ್ರಕಟವಾಗುತ್ತಿತ್ತು. ಮೂರನೇ ಪುಟ ಗೌರೀಶ ಕಾಯ್ಕಿಣಿಯವರಿಗೆ ಮೀಸಲಾಗಿತ್ತು.

೧೯೦೯ ರ ಸೆಪ್ಟೆಂಬರ್ ೧೦ ರಂದು ಜನಿಸಿದ ದಿನಕರರು ಎಂಎ. ಎಲ್.ಎಲ್.ಬಿ. ಪಿಎಚ್ಡಿ ಪದವೀಧರರಾಗಿ ಮುಂಬಯಿಯ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಮುಖ್ಯಸ್ಥರಾಗಿ ಅಲ್ಲಿಯೇ ಹಚ್ಚು ಕಾಲ ಉಳಿದರೂ ಜಿಲ್ಲೆಯನ್ನು ಅವರೆಂದೂ ಅಲಕ್ಷಿಸಲಿಲ್ಲ. ಜಿಲ್ಲೆಯಿಂದ ಒಮ್ಮೆ ಲೋಕಸಭೆಗೂ ಹೋದರು. ಆದರೆ ಅದರ ಪ್ರಯೋಜನ ಪಡೆಯಲಾಗಲಿಲ್ಲವೆಂಬ ವಿಷಾದವನ್ನೂ ಅವರೇ ತಮ್ಮ ಚೌಪದಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಮೂಲತಃ ಹೋರಾಟ ಪ್ರವೃತ್ತಿಯವರಾದ ಅವರು ಉತ್ತರ ಕನ್ನಡದಲ್ಲಿ ಉಳುವವನೇ ಹೊಲದೊಡೆಯ ಎಂಬ ರೈತ ಜನಾಂದೋಲನ ರೂಪಿಸಿ ಉಗ್ರ ಹೋರಾಟ ನಡೆಸಿದವರು. ಅದಕ್ಕಾಗಿ ಗಡೀಪಾರು ಶಿಕ್ಷೆಗೊಳಗಾದವರು. ಮುಂಬಯಿಯಲ್ಲಿ ಉಗಿಹಡಗು ಕೆಲಸಗಾರರ ಸಂಘ ಸ್ಥಾಪಿಸಿ ಅವರ ಪರವಾಗಿ ಹೋರಾಡಿದರು. ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. ಮುಂಬಯಿ ಮಹಾನಗರಸಭೆ ಸದಸ್ಯರೂ‌ ಆಗಿದ್ದರು.

ತಮ್ಮ ೭೩ ವರ್ಷಗಳ ಜೀವನಾವಧಿಯಲ್ಲಿ ದಿನಕರರು ಮಾಡಿದ ಕೆಲಸ ಅಗಾಧವಾದದ್ದು. ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯ ಅವರಿಂದ ಪಡೆದದ್ದು ಬಹಳ. ಅದನ್ನು ನಾವು ನೆನಪಿಸಿಕೊಳ್ಳಲೇಬೇಕು.

ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಬಡ ಮಕ್ಕಳಿಗೆ ಶಿಕ್ಷಣ ಪಡೆಯುವಲ್ಲಿ ಆಗುತ್ತಿದ್ದ ಕಷ್ಟ ಅರಿತು ೧೯೫೩ ರಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಸ್ಥಾಪಿಸಿ ಅನೇಕ ಶಾಲೆಕಾಲೇಜುಗಳನ್ನು ತೆರೆದರು.

ಇವೆಲ್ಲವುಗಳ ನಡುವೆಯೂ ಅವರು ತಮ್ಮ ಕಾವ್ಯಕೃಷಿಯನ್ನು ನಡೆಸಿದರು. ಚೌಪದಿಗಳಿಗಿಂತ ಮೊದಲು ಅವರು ಬರೆದ ಕವನಗಳು, ಶಿಶುಗೀತೆಗಳು ಅವರ ಅದ್ಭುತ ಕಾವ್ಯಶಕ್ತಿಗೆ ನಿದರ್ಶನವಾಗಿವೆ.

" ಹರಿಗೆ ಎಂದು ಗುಡಿಯನೊಂದು ಕಟ್ಟುತಿರುವೆಯಾ?" , ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ, ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ" ( ನೆಹರೂ ಸತ್ತಾಗ), ಇತ್ಯಾದಿ ಕವನಗಳನ್ನಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹಾಗೆಯೇ ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ ಎಂಬಂತಹ ಮಕ್ಕಳ ಹಾಡುಗಳು ಸಹ.

ದಿನಕರರು ಸುಮಾರು ಹತ್ತು ಸಾವಿರದಷ್ಟು ಚೌಪದಿಗಳನ್ನು ಬರೆದಿದ್ದು ಜನಸೇವಕ ವಾರಪತ್ರಿಕೆಯಲ್ಲಿ ಪ್ರತಿವಾರ ಪ್ರಕಟವಾಗುತ್ತಿದ್ದ ಅವನ್ನು ಓದಲೆಂದೇ ಓದುಗರು ಕಾಯುತ್ತಿದ್ದರು. ಅವರ ಒಟ್ಟು ೨೩-೨೪ ಕೃತಿಗಳು ಪ್ರಕಟವಾಗಿದ್ದು ನಾ ಕಂಡ ಪಡುವಣ ಎಂಬ ಪ್ರವಾಸ ಕಥನ, , ಪ್ರಪಂಚದ ಕೆಲಸಗಾರರು, ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಇವೆಲ್ಲ ಅವರ ಮಹತ್ವದ ಕೃತಿಗಳೆನಿಸಿವೆ.

12 views0 comments
bottom of page