top of page

ಇಂದು ಜನ್ಮದಿನದ ಸ್ಮರಣೆ

ಕನ್ನಡ ರಂಗಭೂಮಿಗೆ ವೈಭವ ತಂದ ಸಾಹಸಿ

ಗುಬ್ಬಿ ವೀರಣ್ಣನವರು

************

ಕರ್ನಾಟಕದ ವೃತ್ತಿ ರಂಗಭೂಮಿಯಲ್ಲಿ ನಾಟಕ ಕಂಪನಿಗಳನ್ನು ಕಟ್ಟಿ ಬೆಳೆಸಿದವರು, ಕಷ್ಟ ನಷ್ಟ ಅನುಭವಿಸಿದವರು ಹಲವರಿದ್ದಾರೆ. ಆದರೆ ಈ ವೃತ್ತಿ ರಂಗಭೂಮಿಗೆ ಇನ್ನಿಲ್ಲದ ವೈಭವವನ್ನು ತಂದುಕೊಟ್ಟು , ನೂರಾರು ಕಲಾವಿದರಿಗೆ ಆಶ್ರಯದಾತರಾಗಿ ಅವರನ್ನು ಬೆಳೆಸಿದ ಗುಬ್ಬಿ ವೀರಣ್ಣನವರಂತಹ ಸಾಹಸಿ ಮಾತ್ರ ಇನ್ನೊಬ್ಬರಿಲ್ಲ. ಅವರದು ರಂಗಭೂಮಿಯ ಉಚ್ಛ್ರಾಯ ಕಾಲ. ಗುಬ್ಬಿ ಕಂಪನಿ ನಾಟಕ ರಂಗಕ್ಕಷ್ಟೇ ಅಲ್ಲ, ಚಲನಚಿತ್ರರಂಗಕ್ಕೂ ಹಲವು ಉತ್ತಮ ಕಲಾವಿದರನ್ನು ನೀಡಿದೆ. ಡಾ. ರಾಜಕುಮಾರ, ಬಿ. ಜಯಮ್ಮ , ನರಸಿಂಹರಾಜು, ಬಿ. ವಿ. ಕಾರಂತ, ಬಾಲಕೃಷ್ಣ, ಜಿ. ವಿ. ಅಯ್ಯರ್, ಸ್ವರ್ಣಮ್ಮ, ಮಾಲತಮ್ಮ, ಮಾಸ್ಟರ್ ಹಿರಣ್ಣಯ್ಯ, ಎಚ್. ಎಲ್. ಎನ್ ಸಿಂಹ, ಇನ್ನೂ ಹಲವರು ಗುಬ್ಬಿ ಕಂಪನಿಯಲ್ಲಿ ಪಳಗಿ ಹೊರಬಂದವರೆ.

ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ೧೮೮೪ ರಲ್ಲಿ ಚಂದ್ರಣ್ಣ ಮತ್ತು ಅಬ್ದುಲ್ ಅಜಿಜ ಸಾಹೇಬ ರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಗುಬ್ಬಿ ವೀರಣ್ಣನವರು ೧೯೧೭ ರಲ್ಲಿ ಅದರ ಮಾಲಕರಾದರು. ಅಲ್ಲಿಂದ ಅರ್ಧ ಶತಮಾನ ಕಾಲ ಗುಬ್ಬಿ ಕಂಪನಿ ಕನ್ನಡ ರಂಗಭೂಮಿಯನ್ನಾಳಿತು. ಹಂಪಣ್ಣ - ರುದ್ರಾಂಬೆಯರ ಮಗ ವೀರಣ್ಣ ೧೮೯೦ ರಲ್ಲಿ ಗುಬ್ಬಿಯಲ್ಲಿ ಜನಿಸಿ ಆರನೇ ವಯಸ್ಸಿಗೇ ರಂಗಭೂಮಿಗೆ ಕಾಲಿಟ್ಟರು. ಬಾಲಪಾತ್ರ, ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸುತ್ತ ಸಂಗಡ ಪಿಟೀಲು, ತಬಲಾ ಹಾರ್ಮೋನಿಯಂ ವಾದನಗಳನ್ನೆಲ್ಲ ಕಲಿತು ೧೯೧೭ ರಿಂದ ತಮ್ಮ ಮಂಡಳಿಯ ನಾಟಕಗಳ ನಿರ್ದೇಶನ ಆರಂಭಿಸಿದರು. ಅವರ ಕಂಪನಿಯ ಸದಾರಮೆ, ಕುರುಕ್ಷೇತ್ರ, ದಶಾವತಾರ, ಕಬೀರ, ಲವಕುಶ, ಸಣ್ಣ ತಮ್ಮ, ಗುಲೆಬಕಾವಲಿ, ಜೀವನ ನಾಟಕ ಮೊದಲಾದವುಗಳೆಲ್ಲ ಅಭೂತಪೂರ್ವ ಯಶಸ್ಸು ಕಂಡವು. ಅನೇಕ ಪ್ರಪ್ರಥಮಗಳಿಗೆ ಅವರು‌ ಕಾರಣರಾದರು.

೧೯೨೬ ರಲ್ಲಿ ನಾಟಕಗಳಿಗೆ ವಿದ್ಯುದ್ದೀಪ ಬಳಸಲಾರಂಭಿಸಿದ ವೀರಣ್ಣನವರು ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ನಿರ್ವಹಿಸುವ ಪದ್ಧತಿ ಜಾರಿಗೆ ತಂದರು. ಕುರುಕ್ಷೇತ್ರ ನಾಟಕದಲ್ಲಿ ಆನೆ ಕುದುರೆಗಳೆಲ್ಲ ರಂಗಕ್ಕೆ ತಂದು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ ವೀರಣ್ಣನವರ ನಾಟಕ ಮಂಡಳಿಯಲ್ಲಿ ಸುಮಾರು ನೂರೈವತ್ತು ಮೇರಿ ಕಲಾವಿದರು ಮತ್ತು ಇತರ ಕೆಲಸಗಾರರು‌ ಇದ್ದರು. ಎಲ್ಲರಿಗೂ ಅತ್ಯಂತ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು. ಕಲಾವಿದರ ಪ್ರತಿಭೆಯನ್ನು ಸರಿಯಾಗಿ ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು. ೧೪ ವರ್ಷದೊಳಗಿನ ಮಕ್ಕಳಿಗೆ ರಂಗ ತರಬೇತಿ ನೀಡಲು ಬಾಲ ವಿವರ್ಧಿನಿ ಕಲಾಸಂಘವನ್ನು ಸ್ಥಾಪಿಸಿದ್ದರು.

೧೯೨೬ ರಲ್ಲಿ ಗುಬ್ಬಿ ಪ್ರೊಡಕ್ಷನ್ ಆರಂಭಿಸಿ ದೇವುಡು ನರಸಿಂಹ ಶಾಸ್ತ್ರಿಗಳೊಂದಿಗೆ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದರು. ಹರಿಮಾಯೆ, ಕಳ್ಳರ ಕೂಟ, ಹಿಸ್ ಲವ್ ಅಫೇರ್ ಮೊದಲಾದ ಸಿನಿಮಾಗಳನ್ನು ತಯಾರಿಸಿದರು. ಮುಂದೆ ಸದಾರಮೆ, ಗುಣಸಾಗರಿ, ಜೀವನ ನಾಟಕ ಸುಭದ್ರಾ, ಬೇಡರ ಕಣ್ಣಪ್ಪ ಮೊದಲಾದ ಸಿನಿಮಾಗಳು ಬಂದವು. ತಮಿಳಿನಲ್ಲೂ ಚಿತ್ರ ನಿರ್ಮಿಸಿದರು. ತಮ್ಮ ಜೀವನಾವಧಿಯಲ್ಲಿ ಗುಬ್ಬಿ ವೀರಣ್ಣನವರು ಬೆಂಗಳೂರು ಮೈಸೂರು ತಿಪಟೂರು, ದಾವಣಗೆರೆ ಮತ್ತಿತರ ಕಡೆಗಳಲ್ಲಿ ರಂಗ ಮಂದಿರ, ಸಿನೆಮಾ ಥಿಯೇಟರುಗಳನ್ನು ನಿರ್ಮಿಸಿದರು. ಶಿವಾನಂದ, ಗೀತಾ, ಸಾಗರ, ಧನಲಕ್ಷ್ಮಿ ಅಶೋಕ ಮೊದಲಾದವನ್ನಿದಕ್ಕೆ ಉದಾಹರಿಸಬಹುದು.

‌‌‌‌‌‌ ‌ ಹೈದರಾಬಾದ ನಿಜಾಮ ಇವರ ಕುರುಕ್ಷೇತ್ರ ನಾಟಕದ ಪ್ರಸಿದ್ಧಿ ಕೇಳಿ ಅದನ್ನು ನೋಡಬಯಸಿದಾಗ ಅವನನ್ನೇ ಅದ್ದೂರಿಯಾಗಿ‌ಆಮಂತ್ರಿಸಿ ನಾಟಕ ತೋರಿಸಿದರಂತೆ ಮತ್ತು ನಿಜಾಮ ಮೆಚ್ಚಿ ಅವರಿಗೆ "ಕರ್ನಾಟಕಾಂಧ್ರ ನಾಟಕ ಸಾರ್ವಭೌಮ" ಎಂಬ ಬಿರುದು ಕೊಟ್ಟು ಗೌರವಿಸಿದನಂತೆ. ಮೈಸೂರರಸರು ಅವರಿಗೆ ನಾಟಕ ರತ್ನ ಎಂಬ ಬಿರುದನ್ನಿತ್ತರು. ಕೇಂದ್ರ ಸರಕಾರ ಪದ್ಮಶ್ರೀ ಗೌರವ ನೀಡಿತು. ಮೈಸೂರು ವಿ. ವಿ. ಗೌರವ ಡಾಕ್ಟರೇಟ್ ನೀಡಿತು. ಕರ್ನಾಟಕ ಸರಕಾರ ಅವರ ಹೆಸರಲ್ಲಿ ರಂಗಪ್ರಶಸ್ತಿ ಸ್ಥಾಪಿಸಿತು.

ಗುಬ್ಬಿ ವೀರಣ್ಣನವರ ಮೊದಲ ಪತ್ನಿ ಸುಂದರಮ್ಮ. ಅವರ ಮಕ್ಕಳು ಜಿ ವಿ ಸ್ವರ್ಣಮ್ಮ, ಮಾಲತಮ್ಮ, ಶಿವಾನಂದ. ಎರಡನೆಯ ಪತ್ನಿ ಭದ್ರಮ್ಮ. ಮೂರನೆಯ ಪತ್ನಿ ಖ್ಯಾತ ತ್ರಿಭಾಷಾ ತಾರೆ, ರಂಗ ನಟಿ ಬಿ. ಜಯಮ್ಮನವರು. ಮಾಲತಮ್ಮನವರ ಮಗಳು ಈಗಲೂ ನಮ್ಮ ನಡುವೆ ಇರುವ ಖ್ಯಾತ ಕಲಾವಿದೆ ಬಿ. ಜಯಶ್ರೀ ಅವರು. ಬಿ. ಪದ್ಮಶ್ರೀ ಇನ್ನೊಬ್ಬಳು ಮಗಳು. ಭದ್ರಮ್ಮನ ಮಗಳು ಗಿರಿಜಮ್ಮ ಖ್ಯಾತ ನೃತ್ಯ ಕಲಾವಿದೆ ವೈಜಯಂತಿ ಕಾಶಿ ಅವರ ತಾಯಿ. ಹೀಗೆ ಗುಬ್ಬಿ ಕುಟುಂಬದ ಪರಂಪರೆ ಮುಂದುವರಿದುಕೊಂಡು ಬಂದಿದೆ. .

ತಮ್ಮ ೮೨ ವರ್ಷಗಳ ಜೀವನಾವಧಿಯಲ್ಲಿ ಗುಬ್ಬಿ ವೀರಣ್ಣನವರು ಮಾಡಿದ ಕೆಲಸ ಅಗಾಧವಾದದ್ದು. ಅವರ ಸಾಹಸಕ್ಕೆ, ಅವರ ಕೊಡುಗೆಗೆ ನಾವು ಕೃತಜ್ಞರಾಗಿರಲೇಬೇಕಾಗಿದೆ.



- ಎಲ್. ಎಸ್. ಶಾಸ್ತ್ರಿ




3 views0 comments

Comments


bottom of page