top of page

ಇಂದು‌ ಜನ್ಮದಿನದ ಸ್ಮರಣೆ

ಸಾಹಿತ್ಯಲೋಕದ ಪೂರ್ಣಚಂದ್ರ- ತೇಜಸ್ವಿ

************

"ಮಹಾಕವಿ ಕುವೆಂಪು ಅವರ ಮಗ"ನೆಂಬ ಛಾಯೆಯಿಂದ ಹೊರಬಂದು ತಮ್ಮದೇ ಆದ ಹೊಸದಾರಿ ನಿರ್ಮಿಸಿಕೊಂಡು ಬದುಕಿದ, ತಮ್ಮದೇ ಆದ ವಿಶಿಷ್ಟ ಸಾಹಿತ್ಯರಚನೆಯಿಂದ ಹೆಸರಾದ, " ಪೂಚಂತೇ" ಕಾವ್ಯನಾಮದ ಪೂರ್ಣಚಂದ್ರ ತೇಜಸ್ವಿ ಹುಟ್ಟಿದ್ದು ದಟ್ಟ ಮಲೆನಾಡಿನ ಕುಪ್ಪಳಿಯಲ್ಲಿ. ಕುವೆಂಪು ಅವರಿಗೆ ಪ್ರಿಯವಾದ ಕುಪ್ಪಳಿ. ೧೯೩೮ ಸೆಪ್ಟೆಂಬರ್ ೮ ರಂದು ಜನಿಸಿದ ಪೂರ್ಣಚಂದ್ರ ತೇಜಸ್ವಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ ಪಡೆದ ನಂತರ ಪ್ರಾಧ್ಯಾಪಕ ಜೀವನದ ಸುಖ ಅನುಭವಿಸುವ ಮನಸ್ಸಿಲ್ಲದೆ ಮೂಡಿಗೆರೆಯ ಕಾಡಿನ ನಡುವೆ ಬದುಕುವ ನಿರ್ಧಾರ ಮಾಡಿದ್ದು ಅವರ ಬದುಕಿನ ಬಹು ದೊಡ್ಡ ತಿರುವು. ಕಾಫಿತೋಟದ ವ್ಯವಸಾಯ, ಕಾಡಿನ ಪಶು ಪಕ್ಷಿಗಳ ಪ್ರಪಂಚದಲ್ಲಿ ವಿಹರಿಸುತ್ತ ತಮ್ಮ ಸಾಹಿತ್ಯ ರಚನೆಗೆ ತೊಡಗಿದ ಅವರಿಂದ ಕನ್ನಡಕ್ಕೆ ದೊರಕಿದ ಕೃತಿಗಳು ಓದುಗರೆದುರು ಒಂದು ಹೊಸ ಲೋಕವನ್ನೇ ತೆರೆದಿಟ್ಟವು.

ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕಾಡು ಮತ್ತು ಕ್ರೌರ್ಯ, ಮಾಯಾಲೋಕ ಮೊದಲಾದ ಕಾದಂಬರಿಗಳು , ಹುಲಿಯೂರಿನ ಸರಹದ್ದು, ಕಿರಿಯೂರಿನ ಗಯ್ಯಾಳಿಗಳು, ಅಬಚೂರಿನ ಪೋಸ್ಟಾಫೀಸು, ಕುಬಿ ಮತ್ತು ಇಯಾಲ ಮೊದಲಾದ ಕತೆಗಳು , ಅನೇಕ ಪ್ರವಾಸ ಕಥನಗಳು, ಪರಿಸರ ಕಥೆಗಳು, ಕಾಡಿನ ಕತೆಗಳು, ಪಕ್ಷಿ ಲೋಕದ ಕಥನ , ಅನುವಾದಗಳು, ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಗಳಾಗಿ ಸಂದವು. ಕನ್ನಡ ನಾಡಿನ ಹಕ್ಕಿಗಳು -೨ ಭಾಗ, ಕಾಡಿನ ಕಥೆಗಳು- ೪ ಭಾಗ, ಮಿಲೇನಿಯಂ ಕೃತಿಗಳು-೧೬ ಭಾಗ ಫ್ಲೈಯಿಂಗ್ ಸಾಸರ್ -೨ ಭಾಗ, ವಿಸ್ಮಯ -೩ ಭಾಗ, ಮೂರು ವಿಮರ್ಶಾ ಕೃತಿಗಳು, ಒಂದು ನಾಟಕ,( ಯಮಳ ಪ್ರಶ್ನೆ), ಒಂದು ಕವನ ಸಂಕಲನ , ಮಾಯೆಯ ಮುಖಗಳು ಎಂಬ ಚಿತ್ರ ಸಂಕಲನ, ಸಹಜ ಕೃಷಿ , ಪರಿಸರದ ಕತೆ, ಇತ್ಯಾದಿ ಅವರ ಅಗಾಧ ಸಾಹಿತ್ಯ ಸೃಷ್ಟಿಯಾದದ್ದು ಮಲೆನಾಡಿನ ದಟ್ಟ ಕಾಡಿನ ನಡುವೆಯೆ. ಪಶುಪಕ್ಷಿ ಕ್ರಿಮಿಕೀಟಗಳ ಕುರಿತು ವಿಶೇಷ ಆಸಕ್ತಿ. ಸ್ವತಃ ಉತ್ತಮ ಛಾಯಾಗ್ರಾಹಕರು. ಪೂಚಂತೇ ಪ್ರಪಂಚವೇ ಬೇರೆ!

ತಮ್ಮ ಮೊದಲ ಕೃತಿ " ಲಿಂಗ ಬಂದ" ಕ್ಕೇ ಪ್ರಶಸ್ತಿ ಪಡೆದ ಪೂಚಂತೇ ಅವರ ಅಬಚೂರಿನ ಪೋಸ್ಟಾಫೀಸು, ಕುಬಿ ಮತ್ತು ಇಯಾಲ , ಕಿರಿಯೂರಿನ ಗಯ್ಯಾಳಿಗಳು ಮೊದಲಾದವು ಚಲನಚಿತ್ರಗಳಾಗಿಯೂ ಹಲವು ರಾಜ್ಯ/ ರಾಷ್ಪ್ರಪ್ರಶಸ್ತಿ ಪಡೆದವು. ಅವರು ಮಾನವೀಯ ಕಾಳಜಿಯುಳ್ಳ ಮನುಷ್ಯ. ರೈತ ಚಳವಳಿಗಳಲ್ಲಿಯೂ ಭಾಗವಹಿಸಿದರು. ಕಾಡಿನ ಬಗ್ಗೆ ವಿಶೇಷ ಕುತೂಹಲ. ಬೇಟೆಯಲ್ಲೂ ಆಸಕ್ತಿ.

ಪತ್ನಿ ರಾಜೇಶ್ವರಿ. ಇಬ್ಬರು ಹೆಣ್ಣುಮಕ್ಕಳು. ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಮರೆಯಲಾಗದ ಹಾದಿ ನಿರ್ಮಿಸಿದ ಪೂಚಂತೇ ೨೦೦೭ ಎಪ್ರಿಲ್ ೫ ರಂದು ನಿಧನರಾದರು. ಪೂಚಂತೇ ಪ್ರತಿಷ್ಠಾನ ಅವರ ಸಾಹಿತ್ಯದ ಸಂಸ್ಮರಣೆಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

- ಎಲ್. ಎಸ್. ಶಾಸ್ತ್ರಿ




 
 
 

Comentarios


©Alochane.com 

bottom of page