"ಎಲ್ಲಿಯ ಇಂಡೋನೇಷ್ಯಾ, ಎಲ್ಲಿಯ ಕರ್ನಾಟಕ, ಎತ್ತಣಿಂದೆತ್ತಣ ಸಂಬಂಧವಯ್ಯ?" ಎಂದು ಕೇಳುವ ಸಂಭವವಿದೆ. ಅದನ್ನೇ ಹೇಳಲು ಹೊರಟಿದ್ದೇನೆ.
ಇಂಡೋನೇಷ್ಯಾ ಈ ಜಗತ್ತಿನ ಅತಿದೊಡ್ಡ ದ್ವೀಪರಾಷ್ಟ್ರ. ಸುಮಾರು ೧೭೦೦ ಕ್ಕೂ ಹೆಚ್ಚು ದ್ವೀಪಗಳಿಂದ ಕೂಡಿದ ಈ ಅಚ್ಚರಿಯ ರಾಷ್ಟ್ರದ ಸದ್ಯದ ರಾಜಧಾನಿ ಜಕಾರ್ತಾ. ಇದು ಜಾವಾ ಎಂಬ ದ್ವೀಪದಲ್ಲಿದೆ. ೧೯೪೯ ರಲ್ಲಿ ಈ ಸ್ವತಂತ್ರ ರಾಷ್ಟ್ರ ಅಸ್ತಿತ್ವಕ್ಕೆ ಬಂತು.
೭೨ ವರ್ಷಗಳ ನಂತರ ಈಗ ಆ ರಾಷ್ಟ್ರದ ರಾಜಧಾನಿಯನ್ನು ಜಾವಾ ದ್ವೀಪದಿಂದ ಬೋರ್ನಿಯೋ ಎಂಬ ದ್ವೀಪಕ್ಕೆ ಬದಲಾಯಿಸಲಾಗುತ್ತಿದೆ. ಅಲ್ಲಿಯ ಸಂಸತ್ತು ಇದಕ್ಕೆ ಅನುಮೋದನೆ ನೀಡಿದೆ.
ಹಾಗಿದ್ದರೆ ಈ ಬದಲಾವಣೆಗೆ ಕಾರಣಗಳೇನು ಎಂಬ ಪ್ರಶ್ನೆ ಸಹಜ. ಜಾವಾ ದ್ವೀಪ ೬೬೧.೦೫ ಚದುರು ಕಿ. ಮೀ. ಗಳ ವಿಸ್ತೀರ್ಣ ಹೊಂದಿದೆ. ಈಗ ಇದು ಅತಿಯಾದ ಜನದಟ್ಟಣೆಯಿಂದ ಕೂಡಿದ್ದು ಅವ್ಯವಸ್ಥಿತ ಬೆಳವಣಿಗೆಗೆ ಕಾರಣವಾಗಿದೆ. ನಾಗರಿಕ ಸಮಸ್ಯೆಗಳು ಹೆಚ್ಚುತ್ತಿವೆ. ಜಗತ್ತಿನ ಅತ್ಯಂತ ಕಲುಷಿತ ನಗರವೆಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಹಲವು ನದಿಗಳಿಂದ , ಸಮುದ್ರದಿಂದ ಆವೃತವಾಗಿ ಕ್ರಮೇಣ ಪೂರ್ತಿ ಮುಳುಗುವ ಅಪಾಯವೂ ಹೆಚ್ಚಾಗಿದೆ.
ಈ ಎಲ್ಲ ಕಾರಣಗಳಿಂದ ಈಗ ಬೋರ್ನಿಯೋ ದ್ವೀಪದ ಕಾಲಿಮಂಟನ್ ಭಾಗದಲ್ಲಿ ಹೊಸ ರಾಜಧಾನಿ ರೂಪುಗೊಳ್ಳಲಿದ್ದು ಇದು ಸುಮಾರು ೧೨೭೩೪೬ ಚದುರು ಕಿ. ಮೀ. ವ್ಯಾಪ್ತಿ ಹೊಂದಿದೆ. ಅಂದರೆ ಜಾವಾ ದ್ವೀಪದ ದುಪ್ಪಟ್ಟು ಪ್ರದೇಶ.
ಈ ಹೊಸ ರಾಜಧಾನಿಯ ಹೆಸರು "ನುಸಂತಾರಾ" - ಅಂದರೆ ಅದರ ಅರ್ಥವೂ ದ್ವೀಪಸಮೂಹ ಎಂದೇ ಆಗುತ್ತದೆ. ಇಂಡೋನೇಷ್ಯಾ ದ ಒಟ್ಟು ಜನಸಂಖ್ಯೆ ೨೭.೩೫ ಕೋಟಿಯಷ್ಟು. ಜಗತ್ತಿನ ೧೪ ನೇ ಅತಿದೊಡ್ಡ ರಾಷ್ಟ್ರ. ಅತಿ ಹೆಚ್ಚು ಮುಸ್ಲಿಂ ಜನಸಮುದಾಯವುಳ್ಳ ದೇಶ.
*
ಸದ್ಯ ಕರ್ನಾಟಕದ ರಾಜಧಾನಿ ಬೆಂಗಳೂರು ಸಹ ಅತಿಯಾದ ಜನಸಂಖ್ಯೆ , ವಾಹನ ಸಂಖ್ಯೆ, ಅಸ್ತವ್ಯಸ್ತ ಬೆಳವಣಿಗೆ, ಪರಿಸರ ಮಾಲಿನ್ಯ, ಇತರ ನಾಗರಿಕ ಸಮಸ್ಯೆಗಳ ಒತ್ತಡಕ್ಕೆ ಒಳಗಾಗಿದೆ. ಈ ಒತ್ತಡಗಳಿಂದ ಅದು ಹೊರಬರಬೇಕಾದರೆ ಅದರ ಅತಿ ವೇಗದ ಮತ್ತು ಅನುಚಿತ ಬೆಳವಣಿಗೆಯನ್ನು ತಡೆಗಟ್ಟಬೇಕು. ಬೆಂಗಳೂರು ಕರ್ನಾಟಕದ ಮಧ್ಯವರ್ತಿ ಸ್ಥಳವಲ್ಲ. ಪಾಟೀಲ ಪುಟ್ಟಪ್ಪನವರು ಹೇಳಿದಂತೆ ದಾವಣಗೆರೆ ಮಧ್ಯವರ್ತಿ ಸ್ಥಳ. ವಾಸ್ತವವಾಗಿ ರಾಜಧಾನಿ ಅಲ್ಲಿ ಆಗಬೇಕಿತ್ತು.
ಅದೇನೇ ಇರಲಿ, ಬೆಂಗಳೂರಿನ ಅಸ್ತವ್ಯಸ್ತ ಬೆಳವಣಿಗೆ ತಡೆಗೆ ಇನ್ನೊಂದು ಉಪಾಯ ಇದೆ. ಅದೆಂದರೆ ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಿ ಉತ್ತರ/ ಹೈದರಾಬಾದ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಆಡಳಿತ ಬೆಳಗಾವಿಗೆ ಶಿಫ್ಟ್ ಆಗುವಂತೆ ಮಾಡಬೇಕು. ಇದರಿಂದ ಬೆಂಗಳೂರಿನ ಮೇಲೆ ಆಗುವ ಒತ್ತಡ ಅರ್ಧದಷ್ಟು ಕಡಿಮೆಯಾಗಲು ಸಾಧ್ಯ. ಅಲ್ಲದೇ ರಾಜ್ಯದ ಉತ್ತರ ಭಾಗ ಬಲಗೊಳ್ಳಲು ಅನುಕೂಲ. ಅಷ್ಟೇ ಅಲ್ಲ, ಈ ಭಾಗದ ಜನರ ಹಣ, ಸಮಯ ಮತ್ತು ಶ್ರಮದ ಉಳಿತಾಯವಾಗುತ್ತದೆ.
ಆಳುವ ನಾಯಕರಲ್ಲಿ ಇಂತಹ ಯಾವ ವಿಶನ್ / ದೂರದೃಷ್ಟಿ ಇಲ್ಲ. ಇದ್ದಿದ್ದರೆ ಅವರು ಇಂತಹ ವಿಚಾರ ಮಾಡುತ್ತಿದ್ದರು. ನಮ್ಮ ಭಾಗದ ಜನಪ್ರತಿನಿಧಿಗಳೆಲ್ಲ ನಿಷ್ಪ್ರಯೋಜಕರು ಮತ್ತು ನಿಷ್ಕ್ರಿಯರು. ಇಂಥವರಿಂದ ಏನು ತಾನೇ ನಿರೀಕ್ಷಿಸಲು ಸಾಧ್ಯ?
ಎಲ್. ಎಸ್. ಶಾಸ್ತ್ರಿ
ನಿಮ್ಮ ಮಾತು ಅಕ್ಷರಶಃ ಸತ್ಯ. ಕರ್ನಾಟಕಕ್ಕೆ ನಮ್ಮ ಬೆಳಗಾವಿ ರಾಜಧಾನಿ ಆಗುವುದು. ನನಗೂ ಕೂಡ ಸೂಕ್ತವೆನಿಸುತ್ತದೆ.