ಇವಳು ಬಂದಳು...
ಮೇ ಹೂಗಳ ತುಂಬು ಬಸಿರು
ಹೊತ್ತು ಚಲುವಾದಂತೆ
ಮೈಸೂರು
ಮತ್ತು ನಕ್ಕಳು...
ಹಾದಿಬೀದಿಗಳಲೆಲ್ಲ ತುಳುಕಿದ
'ಕೆಂಪು' ಬ್ರಾಂದಿಯ
ಹ್ಯಾಂಗ್ ಓವರ್
ಕೊಂಬೆರೆಂಬೆಗಳಲೆಲ್ಲ
ಓಲಾಡಿ ನೇತಾಡಿದಂತೆ;
ಹೋಗಿಯೇ ಬಿಟ್ಟಳು -
ಬಸಿರಿಳಿದ ಕಿಬ್ಬೊಟ್ಟೆ ಮೇಲೆ
ಸಿಡುಬಿನಂಥ ಕಪ್ಪು ಕಲೆ
ಯಥೇಚ್ಛ ಬಿತ್ತಿ ...
ಇವಳು ಬಂದಳು...
ತೆವಲು ತಿವಿದಾಗ
ಅಟ್ಟ ಹತ್ತಿ ಬೀಡಿಹಚ್ಚಿ
ಎದೆ ತುಂಬ ದಟ್ಟ ಹೊಗೆ
ತುಂಬಿಕೊಂಡಂತೆ;
ಮಾತಾಡಿದಳು
ಮಾದಕ ಹೊಗೆ
ಮೆದುಳ ಕಚ್ಚಿ
ಸಣ್ಣಗೆ ತಲೆ ಸುತ್ತಿಸಿದಂತೆ
ಮತ್ತು ನರಗಳಿಗೆ
ಕರಂಟು ಹರಿಸಿದಂತೆ;
ಹೋಗಿಬಿಟ್ಟಳು...
ಪುಪ್ಫಸದ ಜಮೀನಿಗೆಲ್ಲ
ಏಡಿ ಹುಣ್ಣಿನ ಹೈಬ್ರಿಡ್
ಬೀಜ ಯಥೇಚ್ಛ ಬಿತ್ತಿ
ತಿಪ್ಪೆಯ ಗೊಬ್ಬರ ಹರಡಿ...
ಇವಳು ಬಂದಾಗ...
ಕೈಹಿಡಿದು ನೆಲಮಾಳಿಗೆಗೆ
ನೇರ ಇಳಿಸಿಕೊಂಡು
ಎರಡೂ ತೋಳು
ಉದ್ದುದ್ದ ಬಾಚಿದೆ
ಅಲ್ಲೆ ನೆಲೆಸುವ ಸನ್ನೆ ಮಾಡಿದೆ
ವಿಫುಲ ಭಂಗಿಗಳಲಿ
ಅಮಲೇರಿಸುವ ಒಯ್ಯಾರದ
ಅಸಂಖ್ಯ ಶೈಲಿಗಳಲಿ
ಕೂತಳು ನಿಂತಳು ನಲಿದಳು
ನಾನೋ...ಉನ್ಮತ್ತನಾಗಿ
ಒಳಗೆಲ್ಲ ಇವಳ ಬಹುರೂಪ
ಚಿತ್ತಾರ ಕೆತ್ತಿ
ನಯನಮನೋಹರ ಗ್ಯಾಲರಿಯಲ್ಲಿ
ಭಿತ್ತಿಗಳ ಎಲ್ಲ ವಿಸ್ತಾರಗಳಲ್ಲಿ
ಒಳಾಂಗಣ ಭ್ರಮೆ ನಿರ್ಮಿಸಿದೆ...
ಆದರೂ,
ಅವಳು ಹೊರಟೇ ಹೋದಾಗ...
ಮಾಳಿಗೆ ಮೇಲಿನ ಮುಚ್ಚಳ ಮುಚ್ಚಿ
ಮತ್ತೆ ತೆಗೆಯಲಾರದ ಹಾಗೆ
ಒಳಗೆ ಸೊಂಟ ಮುರಿದು
ಕತ್ತಲೆ ಹೆತ್ತ ಮಗುವಾದೆ...
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಚೆನ್ನಾಗಿದೆ ಮೂರ್ತಿ. ಪ್ರಸನ್ನ ಹೇಳಿದ ಹಾಗೆ ಚೆನ್ನಾಗಿದೆ ಆದರೆ ಅರ್ಥ ಆಗಿಲ್ಲ.
ಪ್ರತಿಮೆ ಗಳ ಉಪಯೋಗ ಬಹಳವಾಗಿ ಮೂಲ ವಸ್ತು ಕಳೆದು ಹೋಯಿತಾ ಅನ್ನಿಸುತ್ತೆ.! ನನ್ನ ಈ ಅನಿಸಿಕೆ ನಿಮ್ಮ ಕವಿತಾ ರಚನಾ ಸಾಮರ್ಥ್ಯವನ್ನು ಕಡಿಮೆ ಮಾಡಿಲ್ಲ ಅಂದು ಕೊಳ್ಳುತ್ತೇನೆ(ವಿ. ಸೂ. ವಿಷಯ ಚೆನ್ನಾಗಿದೆ😀)
---ಡೋನಾ ವೆಂ
Excellent poem....but a bit difficult to understand for me